ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ: ಶತಮಾನಗಳ ಕನಸು ನನಸು- ರಾಷ್ಟ್ರಪತಿ ಮುರ್ಮು

ಬಜೆಟ್‌ ಅಧಿವೇಶನ: ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ
Published 31 ಜನವರಿ 2024, 15:55 IST
Last Updated 31 ಜನವರಿ 2024, 15:55 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದೆ. ಅದರಲ್ಲೂ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕು ಎಂಬ ದೇಶದ ಜನರ ಶತಮಾನಗಳ ಬಯಕೆ ಈಡೇರಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಹೇಳಿದರು.

‘ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೊಂಡ ನಂತರದ ಐದು ದಿನಗಳ ಅವಧಿಯಲ್ಲಿ 13 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಜ.22ರಂದು ನೆರವೇರಿದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಹೊಸ ಯುಗ ಆರಂಭಗೊಂಡ ಕ್ಷಣ’ ಎಂದು ಬಣ್ಣಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ರಾಷ್ಟ್ರಪತಿಗಳು ತಮ್ಮ ಭಾಷಣ ಪ್ರಸ್ತಾಪಿಸುತ್ತಿದ್ದಂತೆಯೇ, ಸದನದಲ್ಲಿ ಸದಸ್ಯರ ಕರತಾಡನ ಮಾರ್ದನಿಸಿತು. ಉಭಯ ಸದನಗಳ ಸದಸ್ಯರು ಮೇಜುಗಳನ್ನು ತಟ್ಟುವ ಮೂಲಕ ಸಂಭ್ರಮ–ಸಂತೋಷ ವ್ಯಕ್ತಪಡಿಸಿದರು.

ನೂತನ ಸಂಸತ್‌ ಭವನದಲ್ಲಿ ಆರಂಭವಾದ ಬಜೆಟ್‌ ಅಧಿವೇಶನದ ಮೊದಲ ದಿನ ಅವರು, ಎರಡೂ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

‘ಮುಂದಿನ ಶತಮಾನಗಳಿಗಾಗಿ ಭಾರತವು ಹೊಸ ಹಾದಿ ತುಳಿಯಬೇಕಾದ ಸಮಯವಿದು. ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಭವ್ಯ ಪರಂಪರೆಯನ್ನು ನಮಗೆ ಬಿಟ್ಟು ಹೋಗಿದ್ದಾರೆ. ನಮ್ಮ ಪೂರ್ವಿಕರ ಅಸಾಧಾರಣ ಸಾಧನೆಗಳನ್ನು ಇಂದಿಗೂ ನಾವು ಮೆಲುಕು ಹಾಕುತ್ತೇವೆ. ಇವುಗಳ ಆಧಾರದ ಮೇಲೆ ನಮ್ಮ ಇಂದಿನ ಪೀಳಿಗೆಗಳು ಮುಂಬರುವ ದಿನಗಳಲ್ಲಿ ಯಾರೂ ಮರೆಯಲಾಗದಂತಹ ಪರಂಪರೆಯನ್ನು ನಿರ್ಮಿಸಬೇಕು’ ಎಂದು ಮುರ್ಮು ಪ್ರತಿಪಾದಿಸಿದರು.

75 ನಿಮಿಷಗಳ ತಮ್ಮ ಭಾಷಣದಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಅವರು, ಭಯೋತ್ಪಾದನೆ ಮತ್ತು ಕೆಲ ದೇಶಗಳ ವಿಸ್ತರಣಾ ವಾದಕ್ಕೆ ಸಶಸ್ತ್ರ ಪಡೆಗಳು ತಕ್ಕ ಉತ್ತರ ನೀಡಿವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ಚಾಟಿ ಬೀಸಿದರು.

ಆರ್ಥಿಕ ಸುಧಾರಣೆಗಳು, ಜಿ–20 ಶೃಂಗಸಭೆ ಆತಿಥ್ಯ ಸೇರಿದಂತೆ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

‘ದೇಶದ ಹಿತಾಸಕ್ತಿ ರಕ್ಷಣೆಗಾಗಿ ಕಳೆದ 10 ವರ್ಷಗಳಲ್ಲಿ ಸರ್ಕಾರವು ಹಲವಾರು ಮಹತ್ವದ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಸಂವಿಧಾನದ 370ನೇ ವಿಧಿಯಡಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಕುರಿತು ಸಂಶಯಗಳು ಮನೆ ಮಾಡಿದ್ದವು. ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿರುವುದು ಈಗ ಇತಿಹಾಸ. ತ್ರಿವಳಿ ತಲಾಖ್‌ ವಿರುದ್ಧ ಕಠಿಣ ಕಾಯ್ದೆಯನ್ನೂ ಜಾರಿಗೊಳಿಸಲಾಗಿದೆ’ ಎಂದು ಅವರು ಹೇಳಿದರು.

ತಕ್ಕ ಉತ್ತರ: ‘ಭಯೋತ್ಪಾದನೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರತ ಧ್ವನಿ ಎತ್ತಿದೆ. ಭಯೋತ್ಪಾದನೆ ಮತ್ತು ಕೆಲ ದೇಶಗಳ ವಿಸ್ತರಣಾ ವಾದಗಳಿಗೆ ನಮ್ಮ ಪಡೆಗಳು ಪ್ರತ್ಯುತ್ತರ ನೀಡಿವೆ’ ಎಂದೂ ಹೇಳಿದರು.

ರಾಷ್ಟ್ರಪತಿ ಮುರ್ಮು ಭಾಷಣದ ಪ್ರಮುಖ ಅಂಶಗಳು

* ದೇಶದ ಹಲವೆಡೆ ಕಂಡುಬಂದ ದಂಗೆಯನ್ನು ಹತ್ತಿಕ್ಕಲಾಗಿದೆ‌

* ಹಣದುಬ್ಬರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ

* ಗಡಿಯುದ್ದಕ್ಕೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಕ್ರಮ. ಇದನ್ನು ಬಹು ವರ್ಷಗಳ ಹಿಂದೆಯೇ ಆದ್ಯತೆ ಮೇಲೆ ಮಾಡಬೇಕಿತ್ತು

* ಜಮ್ಮು–ಕಾಶ್ಮೀರ ಜನರಲ್ಲಿ ಸುರಕ್ಷಿತ ಭಾವನೆ ನೆಲೆಸಿದೆ. ದಾಳಿ, ಬಾಂಬ್‌ ಸ್ಫೋಟಗಳ ಭೀತಿಯಿಂದಾಗಿ ಈ ಹಿಂದೆ ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸೇರುತ್ತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ

* ದೇಶದ ಈಶಾನ್ಯ ರಾಜ್ಯಗಳಲ್ಲಿ ಪ್ರತ್ಯೇಕತಾವಾದ ತಗ್ಗಿದೆ. ಬಂಡುಕೋರರು ಶರಣಾಗತರಾಗಿದ್ದು, ಶಾಂತಿ ಸ್ಥಾಪನೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ

* ನಕ್ಸಲರ ಅಟ್ಟಹಾಸವನ್ನು ಗಣನೀಯವಾಗಿ ತಗ್ಗಿಸಲಾಗಿದೆ

* ಯುವ ಸಮುದಾಯ, ಮಹಿಳೆ, ರೈತರು ಹಾಗೂ ಬಡವರ ಈ ದೇಶದ ಆಧಾರ ಸ್ತಂಭಗಳು. ಇವರ ಅಭ್ಯುದಯವೇ ದೇಶದ ಅಭಿವೃದ್ಧಿ ಎಂದು ಸರ್ಕಾರ ನಂಬಿದೆ

* ಚಂದ್ರನ ಅಂಗಳದಲ್ಲಿ ಗಗನನೌಕೆಯನ್ನು ಇಳಿಸಲಾಗಿದೆ

* ಏಷ್ಯನ್‌ ಕ್ರೀಡಾಕೂಟದಲ್ಲಿಯೂ ಭಾರತ ಅಮೋಘ ಸಾಧನೆ ದಾಖಲಿಸಿದೆ

* ‘ಆತ್ಮ ನಿರ್ಭರ ಭಾರತ’ದಿಂದ ಅಭಿವೃದ್ಧಿಗೆ ವೇಗ ಸಿಕ್ಕಿದ್ದರೆ, ‘ಮೇಕ್‌ ಇನ್‌ ಇಂಡಿಯಾ’ ಉಪಕ್ರಮದಿಂದ ರಕ್ಷಣಾ ಉತ್ಪಾದನೆ ₹ 1 ಲಕ್ಷ ಕೋಟಿ ಗಡಿ ದಾಟಿದೆ

ಬಡತನ ನಿರ್ಮೂಲನೆ: ಗಮನಾರ್ಹ ಸಾಧನೆ’

ಬಡತನ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಪ್ರಸ್ತಾಪಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ನಾವು ಚಿಕ್ಕವರಾಗಿದ್ದಾಗ ಗರೀಬಿ ಹಟಾವೋ ಎಂಬ ಘೋಷಣೆಗಳನ್ನು ಕೇಳುತ್ತಿದ್ದೆವು. ಆದರೆ ಇದೇ ಮೊದಲ ಬಾರಿಗೆ ನಮ್ಮ ಜೀವಿತಾವಧಿಯಲ್ಲಿ ಬಡತನವನ್ನು ಗಣನೀಯ ಪ್ರಮಾಣದಲ್ಲಿ ನಿರ್ಮೂಲನೆ ಮಾಡಿರುವುದನ್ನು ಕಾಣುತ್ತಿದ್ದೇವೆ’ ಎಂದರು. ‘ನೀತಿ ಆಯೋಗದ ಅಂಕಿ–ಅಂಶಗಳ ಪ್ರಕಾರ ಕಳೆದ 10 ವರ್ಷಗಳ ಅವಧಿಯಲ್ಲಿ ನನ್ನ ಸರ್ಕಾರವು 25 ಕೋಟಿಯಷ್ಟು ಜನರು ಬಡತನದಿಂದ ಹೊರಬರುವಂತೆ ಮಾಡಿದೆ’ ಎಂದೂ ಹೇಳಿದರು.

ಹಿರಿಯ ಮಾರ್ಷಲ್‌ ರಾಜೀವ್‌ ಶರ್ಮ ಅವರು ‘ಸೆಂಗೋಲ್‌’(ರಾಜದಂಡ) ಹಿಡಿದು ನೇತೃತ್ವ ವಹಿಸಿದ್ದ ಮೆರವಣಿಗೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ನೂತನ ಸಂಸತ್‌ ಭವನ ಪ್ರವೇಶಿಸಿದರು

ಹಿರಿಯ ಮಾರ್ಷಲ್‌ ರಾಜೀವ್‌ ಶರ್ಮ ಅವರು ‘ಸೆಂಗೋಲ್‌’(ರಾಜದಂಡ) ಹಿಡಿದು ನೇತೃತ್ವ ವಹಿಸಿದ್ದ ಮೆರವಣಿಗೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ನೂತನ ಸಂಸತ್‌ ಭವನ ಪ್ರವೇಶಿಸಿದರು

–ಪಿಟಿಐ ಚಿತ್ರ

ಸೆಂಗೋಲ್
ಸೆಂಗೋಲ್

‘ಸೆಂಗೋಲ್‌’ ಜೊತೆ ಮೆರವಣಿಗೆ; ಹೊಸ ಸಂಪ್ರದಾಯಕ್ಕೆ ನಾಂದಿ

ನವದೆಹಲಿ: ಶಿರವಸ್ತ್ರ ಪೇಟ ಸೇರಿದಂತೆ ಸಾಂಪ್ರದಾಯಿಕ  ವಸ್ತ್ರಧಾರಿಯಾಗಿದ್ದ ಲೋಕಸಭೆಯ ಹಿರಿಯ ಮಾರ್ಷಲ್‌ ರಾಜೀವ್‌ ಶರ್ಮ ಅವರು ‘ಸೆಂಗೋಲ್‌’(ರಾಜದಂಡ) ಹಿಡಿದು ಮೆರವಣಿಗೆಯ ನೇತೃತ್ವ ವಹಿಸಿದ್ದರು. 

ಮೆರವಣಿಗೆ ಸಂಸತ್‌ನ ಗಜ ದ್ವಾರದ ಬಳಿ ಬಂದಾಗ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್ ಹಾಗೂ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಿದರು.  ಇದರೊಂದಿಗೆ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು. 

‘ಸೆಂಗೋಲ್‌’ ಅನ್ನು ಸರ್ಕಾರದ ಸಾಂಸ್ಕೃತಿಕ ಸಂಕೇತವೆಂದೇ ಸ್ವೀಕರಿಸಲಾಗಿದೆ. ರಾಷ್ಟ್ರಪತಿ ಅವರು ಲೋಕಸಭೆ ಸಭಾಂಗಣವನ್ನು ಪ್ರವೇಶಿಸಿದ ಸಂದರ್ಭದಲ್ಲಿ ವಾದ್ಯಗಳು ಮೊಳಗಿದರೆ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಜೋರಾದ ಚೆಪ್ಪಾಳೆಯೊಂದಿಗೆ ಸ್ವಾಗತ ಕೋರಿದರು.

‘ಭಾರತ್ ಮಾತಾ ಕಿ ಜೈ’ ‘ಜೈ ಜೈ ಶ್ರೀರಾಮ್’ ‘ಜೈ ಸಿಯಾರಾಮ್’ ಮತ್ತು ‘ಜೈ ಜಗನ್ನಾಥ’ ಎಂಬ ಘೋಷಣೆಗಳು ಸದನದಲ್ಲಿ ಅನುರಣಿಸಿದವು. ನಂತರ ರಾಷ್ಟ್ರಪತಿಗಳು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡುವವರೆಗೂ ಸೆಂಗೋಲ್‌ ಅನ್ನು ಅವರ ಪೀಠದಲ್ಲಿಯೇ ಇರಿಸಲಾಗಿತ್ತು. ಭಾಷಣ ಮುಗಿಸಿ ಮುರ್ಮು ಅವರು ನಿರ್ಗಮಿಸಿದ ನಂತರ ಸ್ವರ್ಣಲೇಪಿತ ಸೆಂಗೋಲ್‌ ಅನ್ನು ಸ್ಪೀಕರ್‌ ಪೀಠದ ಪಕ್ಕದಲ್ಲಿ ಇಡಲಾಯಿತು.

ಮೆರವಣಿಗೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಲೋಕಸಭೆಯ ಮಹಾಕಾರ್ಯದರ್ಶಿ ಉತ್ಪಲ್‌ ಕುಮಾರ್‌ ರಾಜ್ಯಸಭೆ ಮಹಾಕಾರ್ಯದರ್ಶಿ ಪಿ.ಸಿ.ಮೋಡಿ ಅವರೂ ಇದ್ದರು. ಇದಕ್ಕೂ ಮುನ್ನ ರಾಷ್ಟ್ರಪತಿ ಮುರ್ಮು ಅವರು ಆರು ಕುದುರೆಗಳ ಸಾರೋಟದಲ್ಲಿ ನೂತನ ಸಂಸತ್‌ ಭವನಕ್ಕೆ ಆಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT