ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಜೆಐ ಮನೆಗೆ ಮೋದಿ: ವಿವಾದದ ಕಿಡಿ

ಕೆಟ್ಟ ಸಂದೇಶ – ಪ್ರತಿಪಕ್ಷ ಟೀಕೆ | ಅಪರಾಧವಲ್ಲ – ಬಿಜೆಪಿ ಸಮರ್ಥನೆ
Published : 12 ಸೆಪ್ಟೆಂಬರ್ 2024, 16:01 IST
Last Updated : 12 ಸೆಪ್ಟೆಂಬರ್ 2024, 16:01 IST
ಫಾಲೋ ಮಾಡಿ
Comments

ನವದೆಹಲಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮನೆಯಲ್ಲಿ ನಡೆದ ಗಣಪತಿ ಹಬ್ಬದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡದ್ದು ರಾಜಕೀಯ ವಲಯದಲ್ಲಿ ವಿವಾದ ಭುಗಿಲೇಳುವಂತೆ ಮಾಡಿದೆ.

ಪ್ರಧಾನಿ ನಡೆಯನ್ನು ಟೀಕಿಸಿರುವ ಪ್ರತಿಪಕ್ಷಗಳು, ಇದು ‘ಕೆಟ್ಟ ಸಂದೇಶ’ ರವಾನಿಸುತ್ತದೆ ಎಂದು ದೂರಿವೆ. ‘ಗಣೇಶ ಹಬ್ಬದಲ್ಲಿ ಪಾಲ್ಗೊಳ್ಳುವುದು ಅಪರಾಧವಲ್ಲ’ ಎನ್ನುವ ಮೂಲಕ ಬಿಜೆಪಿ ಮತ್ತು ಮಿತ್ರಪಕ್ಷಗಳು, ವಿರೋಧಿಗಳ ಟೀಕೆಗೆ ತಿರುಗೇಟು ಕೊಟ್ಟಿವೆ.

ಸಿಜೆಐ ಮನೆಯಲ್ಲಿ ಬುಧವಾರ ನಡೆದ ಪೂಜೆಯಲ್ಲಿ ಪ್ರಧಾನಿ ಭಾಗವಹಿಸಿದ ಫೋಟೊ ಮತ್ತು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಚಂದ್ರಚೂಡ್ ಮತ್ತು ಅವರ ಪತ್ನಿ ಕಲ್ಪನಾ ದಾಸ್‌, ಪ್ರಧಾನಿ ಅವರನ್ನು ಮನೆಗೆ ಬರಮಾಡಿಕೊಂಡ ದೃಶ್ಯವೂ ವಿಡಿಯೊದಲ್ಲಿದೆ.

‘ಸಿಜೆಐ ನಿವಾಸದಲ್ಲಿ ನಡೆದ ಗಣೇಶ ಪೂಜೆಯಲ್ಲಿ ಪಾಲ್ಗೊಂಡೆ. ಭಗವಾನ್‌ ಗಣೇಶ ನಮ್ಮೆಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ನೀಡಲಿ’ ಎಂಬ ಸಂದೇಶ ಹಾಗೂ ಪೂಜೆಯ ಫೋಟೊವನ್ನು ಪ್ರಧಾನಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ವಿರೋಧ ಪಕ್ಷಗಳ ಹಲವು ನಾಯಕರು ಹಾಗೂ ಪ್ರಶಾಂತ್‌ ಭೂಷಣ್‌ ಮತ್ತು ಇಂದಿರಾ ಜೈಸಿಂಗ್‌ ಸೇರಿದಂತೆ ಸುಪ್ರೀಂ ಕೋರ್ಟ್‌ನ ಕೆಲವು ವಕೀಲರು ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 

‘ಸಿಜೆಐ ಅವರು ಕಾರ್ಯಾಂಗ ಮತ್ತು ನ್ಯಾಯಾಂಗದ ಅಧಿಕಾರದ ನಡುವಿನ ವಿಭಜನೆಯನ್ನು ರಾಜಿ ಮಾಡಿಕೊಂಡಿದ್ದಾರೆ’ ಎಂದು ಇಂದಿರಾ ಜೈಸಿಂಗ್‌ ದೂರಿದ್ದಾರೆ. ‘ಮುಖ್ಯ ನ್ಯಾಯಮೂರ್ತಿಯವರ ಸ್ವಾತಂತ್ರ್ಯದ ಬಗ್ಗೆ ಇದ್ದ ಎಲ್ಲ ವಿಶ್ವಾಸವನ್ನೂ ಕಳೆದುಕೊಂಡೆ. ಇದನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಖಂಡಿಸಬೇಕು’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ, ‘ತಮ್ಮನ್ನು ತಾವು ಜಾತ್ಯತೀತವಾದಿಗಳು ಎಂದು ಕರೆಯಿಸಿಕೊಳ್ಳುವ ಕೆಲವು ಮೂರ್ಖರು ಈ ಸೌಜನ್ಯದ ಭೇಟಿಯನ್ನು ವಿರೋಧಿಸುತ್ತಿದ್ದಾರೆ. ಆದರೆ ಇಂತಹ ಅಪಕ್ವ ಟೀಕೆಗಳನ್ನು ಕಡೆಗಣಿಸುವ ಶಕ್ತಿ ನಮ್ಮ ಮಹಾನ್‌ ಪ್ರಜಾಪ್ರಭುತ್ವಕ್ಕೆ ಇದೆ’ ಎಂದಿದ್ದಾರೆ.

ಸಿಜೆಐ ತಮ್ಮ ನಿವಾಸಕ್ಕೆ ಪ್ರಧಾನಿ ಅವರ ಖಾಸಗಿ ಭೇಟಿಗೆ ಅವಕಾಶ ನೀಡಿದ್ದು ನಿಜಕ್ಕೂ ಆಘಾತಕಾರಿ. ಇದು ನ್ಯಾಯಾಂಗದ ಬಗ್ಗೆ ಕೆಟ್ಟ ಸಂದೇಶ ರವಾನಿಸುತ್ತದೆ.
ಪ್ರಶಾಂತ್‌ ಭೂಷಣ್, ಹಿರಿಯ ವಕೀಲ
ವಿಪಕ್ಷಗಳ ಆಕ್ಷೇಪ ಅಚ್ಚರಿ ಉಂಟುಮಾಡಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಅಂದಿನ ಸಿಜೆಐ ಭಾಗವಹಿಸಿಲ್ಲವೇ?.
ಸಂಬಿತ್‌ ಪಾತ್ರ, ಬಿಜೆಪಿ ರಾಷ್ಟ್ರೀಯ ವಕ್ತಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT