ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಬಾಂಡ್: ಪಿಐಎಲ್‌ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

Published 12 ಜುಲೈ 2024, 13:00 IST
Last Updated 12 ಜುಲೈ 2024, 13:00 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಬಾಂಡ್‌ ಯೋಜನೆ ಸಂಬಂಧ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆಗೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಸಮ್ಮತಿಸಿದೆ.

ಕಾಮನ್‌ ಕಾಸ್‌ ಮತ್ತು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್‌) ಎಂಬ ಸ್ವಯಂಸೇವಾ ಸಂಸ್ಥೆಗಳು ಈ ಸಂಬಂಧ ಪಿಐಎಲ್‌ ಸಲ್ಲಿಸಿದ್ದವು. ರಾಜಕೀಯ ಪಕ್ಷಗಳು, ಕಾರ್ಪೊರೇಟ್‌ ಕಂ‍ಪನಿಗಳು ಮತ್ತು ತನಿಖಾ ಸಂಸ್ಥೆಗಳು ‘ಕೊಡು ಕೊಳ್ಳುವಿಕೆ’ಯಲ್ಲಿ ತೊಡಗಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠವು ಎನ್‌ಜಿಒ ಪರ ವಕೀಲರಾದ ಪ್ರಶಾಂತ್‌ ಭೂಷಣ್‌ ಅವರ ವಾದವನ್ನು ಆಲಿಸಿದ ಬಳಿಕ ಅರ್ಜಿಯ ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ.

‘ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿ ಇ–ಮೇಲ್‌ ಕಳುಹಿಸಿ’ ಎಂದು ಸಿಜೆಐ ತಿಳಿಸಿದರು. ಅದಕ್ಕೆ ಭೂಷಣ್, ‘ಈಗಾಗಲೇ ಇ–ಮೇಲ್‌ ಕಳುಹಿಸಲಾಗಿದೆ’ ಎಂದರು. ‘ಮತ್ತೊಮ್ಮೆ ಇ–ಮೇಲ್ ಕಳುಹಿಸಿ, ಅರ್ಜಿಯನ್ನು ಪಟ್ಟಿಗೆ ಸೇರಿಸಲಾಗುವುದು’ ಎಂದು ಸಿಜೆಐ ಹೇಳಿದರು.

ಚುನಾವಣಾ ಬಾಂಡ್ ಯೋಜನೆಯನ್ನು ‘ಹಗರಣ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ‘ಶೆಲ್ ಕಂಪನಿಗಳು ಮತ್ತು ನಷ್ಟದಲ್ಲಿರುವ ಕಂಪನಿಗಳು‘ ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆಯ ಮೂಲವನ್ನು ಪತ್ತೆಹಚ್ಚಲು ತನಿಖೆ ನಡೆಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು ಎಂದು ಕೋರಲಾಗಿದೆ.

‘ಕೊಡು ಕೊಳ್ಳುವಿಕೆ’ ವ್ಯವಸ್ಥೆಯ ಭಾಗವಾಗಿ ಕಂಪನಿಗಳು ದೇಣಿಗೆ ನೀಡಿರುವ ಹಣವನ್ನು ಹಿಂಪಡೆಯಲು ನಿರ್ದೇಶನ ನೀಡುವಂತೆಯೂ ಮನವಿ ಮಾಡಲಾಗಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠವು ಫೆ.15ರಂದು ರದ್ದುಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT