ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬದ್ಲಾಪುರ ಪ್ರಕರಣ ಮುಚ್ಚಿ ಹಾಕುವ ಯತ್ನ:ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆರೋಪ

Published : 21 ಆಗಸ್ಟ್ 2024, 22:36 IST
Last Updated : 21 ಆಗಸ್ಟ್ 2024, 22:36 IST
ಫಾಲೋ ಮಾಡಿ
Comments

ಮುಂಬೈ: ನರ್ಸರಿಗೆ ಹೋಗುವ ಇಬ್ಬರು ಬಾಲಕಿಯರ ಮೇಲೆ ಶಾಲೆಯ ಸ್ವಚ್ಛತಾ ಕಾರ್ಮಿಕ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣವು ಈಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಎಫ್‌ಐಆರ್‌ ದಾಖಲಿಸಿ
ಕೊಳ್ಳುವಲ್ಲಿ ಪೊಲೀಸರು ವಿಳಂಬ ಮಾಡಿದ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಸುಸೀಬೆನ್‌ ಶಾ ಪ್ರತಿಕ್ರಿಯಿ
ಸಿದ್ದು, ‘ಪೊಲೀಸರು ದೂರು ಸ್ವೀಕರಿಸದೆ, ಪೋಷಕರನ್ನು 11 ಗಂಟೆಗಳವರೆಗೆ ಕಾಯುವಂತೆ ಮಾಡಿರುವುದು ತಪ್ಪು’ ಎಂದರು.

‘ಪೊಲೀಸರಿಗೆ ದೂರು ನೀಡುವಲ್ಲಿ ಸಂತ್ರಸ್ತ ಬಾಲಕಿಯರ ಪೋಷಕರಿಗೆ ಸಹಕರಿಸಬೇಕಿದ್ದ ಶಾಲೆಯು, ಪ್ರಕರಣ ವನ್ನು ಮುಚ್ಚಿ ಹಾಕುವುದರಲ್ಲಿ ತೊಡಗಿತ್ತು. ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಗೊತ್ತಿದ್ದರೂ ಶಾಲೆಯ ಮುಖ್ಯ ಶಿಕ್ಷಕ ಪೊಲೀಸರಿಗೆ ದೂರು ನೀಡದೆ, ಶಾಲೆಯ ಆಡಳಿತ ಮಂಡಳಿಗೆ ವಿಷಯ ತಲುಪಿಸಿದ್ದಾರೆ’ ಎಂದರು.

‘ನಮಗೆ ವಿಷಯ ತಿಳಿದ ತಕ್ಷಣವೇ ನಮ್ಮ ಆಯೋಗದ ಬದ್ಲಾಪುರ ಘಟಕದ ಸದಸ್ಯರು ಸಂತ್ರಸ್ತ ಬಾಲಕಿಯರ ಪೋಷಕರನ್ನು ಕರೆದುಕೊಂಡು ಪೊಲೀಸ್‌ ಠಾಣೆಗೆ ತೆರಳಿದ್ದರು. ಆದರೆ, ಪೊಲೀಸರು ಪೋಷಕರ ದೂರು
ಸ್ವೀಕರಿಸಲಿಲ್ಲ’ ಎಂದರು.

‘ಮಹಾಯುತಿ’–‘ಮಹಾ ವಿಕಾಸ ಆಘಾಡಿ’ ಮಾತಿನ ಸಮರ:

ಮಂಗಳವಾರ 10 ಗಂಟೆಗಳವರೆಗೆ ಸಾರ್ವಜನಿಕರು ಬದ್ಲಾಪುರ ರೈಲು ನಿಲ್ದಾಣದಲ್ಲಿ ರೈಲು ತಡೆ ನಡೆಸಿದ್ದರು. ಆದರೆ, ‘ಇವರೆಲ್ಲರೂ ರಾಜಕೀಯ ಪಕ್ಷಗಳ ಕಾರ್ಯಕರ್ತರು’ ಎಂದು ‘ಮಹಾಯುತಿ’ ಸರ್ಕಾರದ ಶಾಸಕರು, ಸಚಿವರು ಹಾಗೂ ಮುಖ್ಯಮಂತ್ರಿ ಏಕನಾಥ ಶಿಂದೆ ದೂರಿದ್ದಾರೆ.

ಪ್ರತಿಭಟನೆ ವೇಳೆ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.

ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ‘ಪೋಷಕರ ದೂರು ದಾಖಲಿಸಿಕೊಳ್ಳದೆ ಪೊಲೀಸರು ತಪ್ಪು ಮಾಡಿದ್ದಾರೆ. ಇದರ ವಿರುದ್ಧ ಪ್ರತಿಭಟಿಸಿದರೆ, ಜನರ ಮೇಲೆ ಲಾಠಿ ಬೀಸಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕರು ದೂರಿದ್ದಾರೆ. ಆದರೆ, ಲಾಠಿ ಪ್ರಹಾರ ಮಾಡಿದ ಪೊಲೀಸರ ಕ್ರಮವನ್ನು ಸರ್ಕಾರ ಸಮರ್ಥಿಸಿಕೊಂಡಿದೆ.

ಮುಖ್ಯಾಂಶಗಳು

  • ಪ್ರಕರಣದ ಆರೋಪಿ ಸ್ವಚ್ಛತಾ ಕಾರ್ಮಿಕನನ್ನು ಸ್ಥಳೀಯ ನ್ಯಾಯಾಲಯವು ಆಗಸ್ಟ್‌ 26ರವರೆಗೆ ಪೊಲೀಸ್‌ ವಶಕ್ಕೆ ನೀಡಿದೆ

  • ಮಹಿಳೆಯರ ಸುರಕ್ಷತೆ ವಿಷಯದಲ್ಲಿ ‘ಮಹಾಯುತಿ’ ಸರ್ಕಾರ ಸೋತಿದೆ ಎಂದು ಆರೋಪಿಸಿ ಮಹಾ ವಿಕಾಸ ಆಘಾಡಿಯು ಆಗಸ್ಟ್‌ 24ರಂದು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದೆ

  • ಕಲ್ಲು ತೂರಾಟದಲ್ಲಿ 17 ಪೊಲೀಸರು ಹಾಗೂ 8 ಮಂದಿ ರೈಲ್ವೆ ಪೊಲೀಸರು ಗಾಯಗೊಂಡಿದ್ದಾರೆ

  • ಬದ್ಲಾಪುರದಾದ್ಯಂತ ನಡೆದ ‍ಪ್ರತಿಭಟನೆಯ ವೇಳೆ ನಡೆದ ಗಲಾಟೆ ಸಂಬಂಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದು, 72 ಜನರನ್ನು ಬಂಧಿಸಿದ್ದಾರೆ

  • ಬದ್ಲಾಪುರದ ಎಲ್ಲ ಶಾಲೆಗಳು ಬುಧವಾರ ಬಂದ್‌ ಆಗಿದ್ದವು ಹಾಗೂ ನಗರದಾದ್ಯಂತ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು

‘ಶಿವಸೇನಾ ಮುಖಂಡನ ಅಸಭ್ಯ ವರ್ತನೆ’

ಶಿವಸೇನಾ (ಶಿಂದೆ ಬಣ) ಮುಖಂಡ ವಾಮನ್‌ ಮಹಾತ್ರೆ ಅವರು ನನ್ನ ಕುರಿತು ಆಕ್ಷೇಪಾರ್ಹ ಮಾತುಗಳನ್ನಾಡಿ ದ್ದಾರೆ ಹಾಗೂ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಂಗಳವಾರ ರೈಲು ನಿಲ್ದಾಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ ಮರಾಠಿ ಮಾಧ್ಯಮವೊಂದರ ಪತ್ರಕರ್ತೆ ದೂರಿದ್ದಾರೆ.

‘ಅವಳ ಮೇಲೆಯೇ ಅತ್ಯಾಚಾರ ನಡೆದಿದೆ ಎನ್ನುವಂತೆ ಆಕೆ ವರದಿಗಾರಿಕೆ ಮಾಡುತ್ತಿದ್ದಾಳೆ’ ಎಂದು ವಾಮನ್‌ ಹೇಳಿದ್ದಾರೆ’ ಎಂದು ಪತ್ರಕರ್ತೆ ಹೇಳಿದ್ದಾರೆ. ಆದರೆ, ಈ ಆರೋಪವನ್ನು ವಾಮನ್‌ ತಳ್ಳಿ ಹಾಕಿದ್ದಾರೆ. ‘ಪದೇ ಪದೇ ಅತ್ಯಾಚಾರ ಎಂದು ಹೇಳಲಾಗುತ್ತಿತ್ತು. ಅದಕ್ಕಾಗಿ ವಾಸ್ತವಾಂಶ ಇಟ್ಟುಕೊಂಡು ಮಾತನಾಡಿ ಎಂದು ಹೇಳಿದ್ದೆ ಅಷ್ಟೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ’ ಎಂದಿದ್ದಾರೆ.

ಘಟನೆಯನ್ನು ಮುಂಬೈ ಪ್ರೆಸ್‌ ಕ್ಲಬ್‌ ಖಂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT