ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

YSR ಕಾಂಗ್ರೆಸ್ ಪಕ್ಷದ ಕಚೇರಿ ಧ್ವಂಸದ ಬಗ್ಗೆ ಟಿಡಿಪಿ ಹೇಳಿದ್ದೇನು?

Published 22 ಜೂನ್ 2024, 10:29 IST
Last Updated 22 ಜೂನ್ 2024, 10:29 IST
ಅಕ್ಷರ ಗಾತ್ರ

ಅಮರಾವತಿ: ಗುಂಟೂರು ಜಿಲ್ಲೆಯ ತಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ನೆಲಸಮಗೊಳಿಸಿರುವುದರ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಆಡಳಿತಾರೂಢ ಟಿಡಿಪಿ, ‘ನೀರಾವರಿ ಇಲಾಖೆಗೆ ಸೇರಿದ್ದ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ’ ಎಂದಿದೆ.

‘ನೀರಾವರಿ ಇಲಾಖೆಯ ಎರಡು ಎಕರೆ ಜಾಗದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗುತ್ತಿದೆ’ ಎಂದು ಆಂಧ್ರ ಪ್ರದೇಶ ರಾಜಧಾನಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಸಿಆರ್‌ಡಿಎ) ಮತ್ತು ಮಂಗಳಗಿರಿ ತಾಡೆಪಲ್ಲಿ ನಗರ ಪಾಲಿಕೆ (ಎಂಟಿಎಂಸಿ) ಆಯುಕ್ತರಿಗೆ ಟಿಡಿಪಿ ನಾಯಕರೊಬ್ಬರು ದೂರು ನೀಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ದೂರಿನ ಮೇರೆಗೆ ಅಕ್ರಮ ಕಟ್ಟಡವನ್ನು ಎಂಟಿಎಂಸಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನೆಲಸಮಗೊಳಿಸಲಾಗಿದೆ’ ಎಂದು ಹೇಳಿದೆ.

‘ಇಲ್ಲಿನ ಎರಡು ಎಕರೆಯಲ್ಲಿ ಪಕ್ಷದ ಕಚೇರಿ ನಿರ್ಮಿಸಿ ಅಕ್ಕಪಕ್ಕದ 15 ಎಕರೆ ಜಾಗವನ್ನು ವಶಪಡಿಸಿಕೊಳ್ಳಲು ಜಗನ್ ಮೋಹನ್ ರೆಡ್ಡಿ ಯೋಜಿಸಿದ್ದರು. ಈ ಎರಡು ಎಕರೆ ಜಾಗವನ್ನು ವೈಎಸ್‌ಆರ್‌ಸಿಪಿಗೆ ಹಸ್ತಾಂತರಿಸಲು ನೀರಾವರಿ ಇಲಾಖೆ ಅನುಮತಿ ನೀಡಿರಲಿಲ್ಲ’ ಎಂದು ತಿಳಿಸಿದೆ.

ಇಂದು(ಶನಿವಾರ) ಮುಂಜಾನೆ 5.30ರ ಸುಮಾರಿಗೆ ನಿರ್ಮಾಣ ಹಂತದಲ್ಲಿದ್ದ ಕಚೇರಿ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.

ಈ ಕ್ರಮದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ವೈಎಸ್‌ಆರ್ ಕಾಂಗ್ರೆಸ್‌ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತೆಲುಗು ದೇಶಂ ಪಕ್ಷವು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಗುಡುಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT