ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಕೊಲೆ ಮಾಡುತ್ತಿದ್ದ ಸರಣಿ ಹಂತಕ ಬಂಧನ

ಕುಲ್‌ದೀಪ್‌ ಮದುವೆಯಾದ ತಕ್ಷಣವೇ ಅವನ ಪತ್ನಿ ಬಿಟ್ಟು ದೂರವಾಗಿದ್ದರು. ಅಲ್ಲಿಂದ ಅವರ ವರ್ತನೆಯಲ್ಲಿ ಬದಲಾವಣೆಯಾಗಿತ್ತು
Published : 9 ಆಗಸ್ಟ್ 2024, 15:54 IST
Last Updated : 10 ಆಗಸ್ಟ್ 2024, 5:48 IST
ಫಾಲೋ ಮಾಡಿ
Comments

ಲಖನೌ:  ಉತ್ತರ ಪ್ರದೇಶ ಬರೇಲಿ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ 9 ಮಂದಿ ಮಹಿಳೆಯರನ್ನು ಹತೈಗೈದಿದ್ದಾನೆ ಎನ್ನಲಾದ ಸರಣಿ ಹಂತಕನೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಕುಲ್‌ದೀಪ್‌ ಗಂಗ್ವಾರ್‌ ಎಂದು ಗುರುತಿಸಲಾಗಿದ್ದು, ಜಿಲ್ಲೆಯ ನವಾಬ್‌ಗಂಜ್‌ ಪ್ರದೇಶದ ನಿವಾಸಿ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಹಂತದ ತನಿಖೆಗೆ ಒಳಪಡಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

‘ಕಳೆದ 9 ತಿಂಗಳಲ್ಲಿ ಆರು ಮಹಿಳೆಯರನ್ನು ಕೊಲೆಗೈದಿರುವುದಾಗಿ ಕುಲ್‌ದೀಪ್‌ ಒಪ್ಪಿಕೊಂಡಿದ್ದಾನೆ’ ಎಂದು ಬರೇಲಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

‘ಕುಲ್‌ದೀಪ್‌  ಮದುವೆಯಾದ ತಕ್ಷಣವೇ ಅವನ ಪತ್ನಿ ಬಿಟ್ಟು ದೂರವಾಗಿದ್ದರು. ಅಲ್ಲಿಂದ ಅವರ ವರ್ತನೆಯಲ್ಲಿ ಬದಲಾವಣೆಯಾಗಿತ್ತು.  ನಂತರ ಮಹಿಳೆಯರನ್ನು ಇಷ್ಟಪಡುತ್ತಿರಲಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

‘ಮಹಿಳೆಯರ ಮೃತದೇಹಗಳನ್ನು ವಶಪಡಿಸಿಕೊಂಡ ಸ್ಥಳಗಳಿಗೆ ಆರೋಪಿಯನ್ನು ಕರೆದೊಯ್ಯಲಾಯಿತು.  ಅವನ ವಿಚಾರಣೆ ಮುಂದುವರಿಸಲಾಗಿದ್ದು, ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ’ ಎಂದು ವಿವರಿಸಿದ್ದಾರೆ. 

‘ಗ್ರಾಮೀಣ ಭಾಗದಲ್ಲಿ ಮಹಿಳೆಯರನ್ನು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿಯು, ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ಅದಕ್ಕೆ ಪ್ರತಿಭಟಿಸಿದ ಮಹಿಳೆಯರನ್ನು ಹತೈಗೈದಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

ಆಪರೇಷನ್‌ ತಲಾಷ್‌: ಜಿಲ್ಲೆಯಲ್ಲಿ ಮಹಿಳೆಯರ ಸರಣಿ ಹತ್ಯೆಗಳು ಹೆಚ್ಚಾದ ಬಳಿಕ ಆರೋಪಿಯನ್ನು ಸೆರೆಹಿಡಿಯಲು ’ವಾರ್‌ ರೂಂ‘ ಸಿದ್ಧಪಡಿಸಿ, ‘ಆಪರೇಷನ್‌ ತಲಾಷ್‌‘ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು. 22 ತಂಡಗಳಲ್ಲಿ,  ಜಿಲ್ಲೆಯ ವಿವಿಧೆಡೆ 1,500 ಸಿ.ಸಿ.ಟಿ.ವಿ ದೃಶ್ಯಗಳನ್ನು ಪರಿಶೀಲನೆ ಒಳಪಡಿಸಲಾಗಿತ್ತು ಎಂದು ಬರೇಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುರಾಗ್‌ ಆರ್ಯ ಮಾಹಿತಿ ನೀಡಿದ್ದಾರೆ.

ಆರೋಪಿಯು ಓಡಾಡಿದ್ದ ಜಾಗದಲ್ಲಿ ‍ರೈತರಂತೆ ವೇಷ ಬದಲಿಸಿ ಪೊಲೀಸರು, ಹುಡುಕಾಟ ನಡೆಸಿದ್ದರು. ಈ ವೇಳೆ ಜನರು ನೀಡಿದ ಮಾಹಿತಿ ಆಧರಿಸಿ, ಜಿಲ್ಲಾ ಪೊಲೀಸರು ಗುರುವಾರ ಮೂರು ರೇಖಾಚಿತ್ರ ಬಿಡುಗಡೆಗೊಳಿಸಿದ್ದರು. 

ಸಂಜೆ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ 45ರಿಂದ 65 ವರ್ಷದ ಮಹಿಳೆಯರನ್ನು ಅಡ್ಡಗಟ್ಟುತ್ತಿದ್ದ ಆರೋಪಿಯು ಕಬ್ಬಿನ ಗದ್ದೆಗಳಿಗೆ ಎಳೆದೊಯ್ದು ನಂತರ ಸೀರೆ ಅಥವಾ ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಕೊಲೆಗೈಯುತ್ತಿದ್ದರು. ಮೃತದೇಹವನ್ನು ಸನಿಹದ ಹೊಲದಲ್ಲಿ ಎಸೆದು ಅಲ್ಲಿಂದ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT