ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

#MeToo ಪ್ರಕರಣ: 5 ವರ್ಷವಾಯಿತು, ನ್ಯಾಯ ಸಿಗುವುದು ಯಾವಾಗ? –ತನುಶ್ರೀ ದತ್ತಾ

ಮಹಿಳೆಯರಿಗೆ ಕಿರುಕುಳ | ನನಗೆ ನ್ಯಾಯ ಸಿಗುವುದು ಯಾವಾಗ?: ತನುಶ್ರೀ ದತ್ತಾ ಪ್ರಶ್ನೆ
Published : 21 ಆಗಸ್ಟ್ 2024, 14:06 IST
Last Updated : 21 ಆಗಸ್ಟ್ 2024, 14:06 IST
ಫಾಲೋ ಮಾಡಿ
Comments

ಮುಂಬೈ: ಅಧಿಕಾರದಲ್ಲಿ ಇರುವವರು ಎಲ್ಲಿಯವರೆಗೆ ರಕ್ಷಣೆಗೆ ನಿಲ್ಲುವರೋ ಅಲ್ಲಿಯವರೆಗೆ ಕ್ರಿಮಿನಲ್‌ಗಳಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುವುದಿಲ್ಲ ಎಂದು ನಟಿ ತನುಶ್ರೀ ದತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಕಲಾವಿದೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನ್ಯಾ. ಹೇಮಾ ನೇತೃತ್ವದ ಸಮಿತಿಯು ಮಂಗಳವಾರ ವರದಿ ಪ್ರಕಟಿಸಿದ ಬೆನ್ನಲ್ಲೇ ದತ್ತಾ ಈ ರೀತಿಯ ಹೇಳಿಕೆ ನೀಡಿದ್ದಾರೆ.

ನಟ ನಾನಾ ಪಾಟೇಕರ್‌ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು 'ಮೀ ಟೂ' (#MeToo) ಅಭಿಯಾನದ ವೇಳೆ ದತ್ತಾ ಆರೋಪಿಸಿದ್ದರು. ಆದರೆ, ಈ ಆರೋಪಗಳನ್ನು ಪಾಟೇಕರ್‌ ಹಲವು ಸಂದರ್ಭಗಳಲ್ಲಿ ನಿರಾಕರಿಸಿದ್ದಾರೆ.

'ಈಗಲೂ ನ್ಯಾಯಕ್ಕಾಗಿ ಕಾಯುತ್ತಿರುವೆ' ಎಂದಿರುವ ದತ್ತಾ, ಸಿನಿಮಾ ರಂಗದಲ್ಲಿ ತಾವೆದುರಿಸಿದ ದೌರ್ಜನ್ಯಗಳ ಬಗ್ಗೆ ನ್ಯಾ. ಹೇಮಾ ಸಮಿತಿಗೆ ಮಾಹಿತಿ ನೀಡಿರುವ ಮಹಿಳೆಯರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

2017ರಲ್ಲಿ ನಟಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನಟ ದಿಲೀಪ್‌ ಹೆಸರು ಕೇಳಿ ಬಂದಿತ್ತು. ಸಿನಿರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಲೈಂಗಿಕ ದೌರ್ಜನ್ಯ ಮತ್ತು ಲಿಂಗ ಸಮಾನತೆ ಕುರಿತ ಅಧ್ಯಯನಕ್ಕೆ ಕೇರಳ ಸರ್ಕಾರ 2019ರಲ್ಲಿ ಸಮಿತಿ ರಚಿಸಿತ್ತು.

ಸಮಿತಿಯ ವರದಿ ಕುರಿತು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ದತ್ತಾ, 'ಇದೂ #MeToo ಪ್ರಕರಣಗಳಂತೆಯೇ ಕಾಣುತ್ತಿದೆ. ಸಮಾಜದೆದುರು ಸಂಭಾವಿತರಂತೆ ಕಾಣಿಸಿಕೊಳ್ಳುವ ಅವರು (ಆರೋಪಿಗಳು), ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲ. ಇಂತಹ ವರದಿಗಳಿಂದ ಏನೂ ಆಗುವುದಿಲ್ಲ. ಏಕೆಂದರೆ, ಮಹಿಳೆಯರ ಮೇಲಿನ ದಾಳಿ ಮತ್ತು ದೌರ್ಜನ್ಯಗಳು ಈಗಲೂ ಮುಂದುವರಿದಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನೀವು ಮಿಸ್‌ ಇಂಡಿಯಾ ಅಥವಾ ನಟಿ ಇಲ್ಲವೇ ವಿದ್ಯಾವಂತೆ – ಏನೇ ಆಗಿದ್ದರೂ, ಈ ದೇಶದಲ್ಲಿ ಅದು ಮುಖ್ಯವಾಗುವುದಿಲ್ಲ. ಅಧಿಕಾರದಲ್ಲಿ ಇರುವವರು ಎಲ್ಲಿಯವರೆಗೆ ಕ್ರಿಮಿನಲ್‌ಗಳಿಗೆ ರಕ್ಷಣೆ ನೀಡುವರೋ ಅಲ್ಲಿಯವರೆಗೆ ಯಾವ ಚಳವಳಿ ಅಥವಾ ಯಾರೊಬ್ಬರೂ ಇಂತಹ ವಿಚಾರಗಳಲ್ಲಿ ಏನೂ ಮಾಡಲಾಗದು. ಈಗ ಈ ಸಮಿತಿ ವರದಿ, ಆಗ ವಿಶಾಖ ಸಮಿತಿ (ಮಹಿಳೆಯರ ಕುಂದುಕೊರತೆ ಸಮಿತಿ). ಅಷ್ಟೇ ಅಲ್ಲ, ಸಾಕಷ್ಟು ಸಮಿತಿಗಳನ್ನು ರಚಿಸಲಾಗಿದೆ. ಬಹಳಷ್ಟು ವರದಿಗಳು ಬಂದಿವೆ. ಆದರೆ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತುಂಬಿರುವಾಗ ಹಾಗೂ ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ವ್ಯವಸ್ಥೆಯನ್ನೇ ಕೊಂಡುಕೊಳ್ಳುತ್ತಿರುವಾಗ ಅಂತಹ ವ್ಯವಸ್ಥೆಯನ್ನು ಪಾಲಿಸುವುದಾದರೂ ಹೇಗೆ?' ಎಂದು ಪ್ರಶ್ನಿಸಿದ್ದಾರೆ.

1997ರಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿರೂಪಿಸಲ್ಪಟ್ಟ 'ವಿಶಾಖ ಸಮಿತಿ'ಯ ಮಾರ್ಗಸೂಚಿಯನ್ನು, ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರುಗಳ ಇತ್ಯರ್ಥಕ್ಕಾಗಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.

2009ರಲ್ಲಿ 'ಹಾರ್ನ್‌ ಓಕೆ ಪ್ಲೀಸ್‌' ಸಿನಿಮಾ ಚಿತ್ರೀಕರಣದ ವೇಳೆ ಪಾಟೇಕರ್‌ ಅವರು ನೃತ್ಯ ಹೇಳಿಕೊಡುವ ನೆಪದಲ್ಲಿ ಅನುಚಿತವಾಗಿ ವರ್ತಿಸಿ, ಕಿರುಕುಳ ನೀಡಿದ್ದರು ಎಂದು ದತ್ತಾ 2018ರಲ್ಲಿ ಆರೋಪಿಸಿದ್ದರು. ಈ ಸಂಬಂಧ ಪಾಟೇಕರ್‌, ನೃತ್ಯ ನಿರ್ದೇಶಕ ಗಣೇಶ್‌ ಆಚಾರ್ಯ, ಸಿನಿಮಾ ನಿರ್ದೇಶಕ ರಾಕೇಶ್‌ ಸಾರಂಗ್‌ ಮತ್ತು ನಿರ್ಮಾಕರ ವಿರುದ್ಧ ದೂರು ದಾಖಲಿಸಿದ್ದರು.

ತಾವು ಮಾಡಿರುವ ಆರೋಪಕ್ಕೆ ಪೂರಕವಾಗಿ 14 ಸಾಕ್ಷಿಗಳ ಹೆಸರನ್ನು ಉಲ್ಲೇಖಿಸಿರುವುದಾಗಿ ಮತ್ತು ಯಾರೊಬ್ಬರ ಹೇಳಿಕೆಯನ್ನೂ ದಾಖಲಿಸಿಕೊಳ್ಳದ ಪೊಲೀಸರು, ಸಾಕ್ಷ್ಯಗಳ ಕೊರತೆ ನೆಪದಲ್ಲಿ ಬಿ–ರಿಪೋರ್ಟ್‌ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ದತ್ತಾ ಆರೋಪಿಸಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿಯೂ ಹೇಳಿದ್ದಾರೆ.

'ತಮಗೆ ಸಾರ್ವಜನಿಕರಿಂದ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಹಾಗೂ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ತಮ್ಮನ್ನು ಸಂಪರ್ಕಿಸಿಲ್ಲ ಎಂಬುದಾಗಿ ನಾನು ಉಲ್ಲೇಖಸಿರುವ ಸಾಕ್ಷಿದಾರರು ನನಗೆ ಹೇಳಿದ್ದಾರೆ. ಒಬ್ಬ ಸಾಕ್ಷಿದಾರ ಊರನ್ನೇ ತೊರೆದಿದ್ದಾನೆ. ಮತ್ತೊಬ್ಬ ಮಧ್ಯ ಪ್ರಾಚ್ಯಕ್ಕೆ ಓಡಿಹೋಗಿದ್ದಾನೆ. ಸಾಕ್ಷಿಯಾಗಿದ್ದ ಮತ್ತೊಬ್ಬ ಮಹಿಳೆ ಭಯದಿಂದ ಮುಂದೆ ಬರುತ್ತಿಲ್ಲ. ಪ್ರತಿಭಟನಾ ಅರ್ಜಿ ದಾಖಲಿಸಿದ ನಂತರ, ಅದೂ ಐದು ವರ್ಷಗಳ ಬಳಿಕ ನ್ಯಾಯಾಲಯ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ. ನನಗೆ ನ್ಯಾಯ ಸಿಗುವುದು ಯಾವಾಗ?' ಎಂದು ಪ್ರಶ್ನಿಸಿದ್ದಾರೆ.‌

ಕಳೆದ ಮೂರು ವರ್ಷಗಳಿಂದ ಎಲ್ಲಿಗೆ ಹೋದರೂ, ಅಪರಿಚಿತ ವ್ಯಕ್ತಿಗಳ ಗುಂಪು ತಮ್ಮನ್ನು ಹಿಂಬಾಲಿಸುತ್ತಿದೆ ಎಂದು ದತ್ತಾ ಆತಂಕ ವ್ಯಕ್ತಪಡಿಸಿದ್ದಾರೆ.

'2022ರಲ್ಲಿ ಉಜ್ಜಯಿನಿಯಲ್ಲಿ ಅಪಘಾತಕ್ಕೊಳಗಾದೆ. ನಾನು ಪ್ರಯಾಣಿಸುತ್ತಿದ್ದ ಆಟೋರಿಕ್ಷಾದ ಬ್ರೇಕ್‌ ಅನ್ನು ಯಾರೋ ತುಂಡರಿಸಿದ್ದರು. ಕಾಕತಾಳೀಯವೆಂದು ನಿರ್ಲಕ್ಷಿಸಲು, ಆ ರೀತಿ ಆದದ್ದು ಒಮ್ಮೆಯಷ್ಟೇ ಅಲ್ಲ' ಎಂದು ಬಹಿರಂಗಪಡಿಸಿದ್ದಾರೆ.

'ಮಾನಸಿಕ ಮತ್ತು ದೈಹಿಕವಾಗಿಯೂ ಕಿರುಕುಳಕ್ಕೊಳಗಾಗಿದ್ದೇನೆ' ಎಂದು ನೊಂದುಕೊಂಡಿರುವ ಅವರು, 'ನಾನೂ ಇನ್ನೊಬ್ಬರ ಮಗಳು. ನನಗೆ ಬದುಕುವ ಹಕ್ಕಿಲ್ಲವೇ, ಈ ದೇಶದಲ್ಲಿ ಸುರಕ್ಷಿತಳಾಗಿದ್ದೇನೆ ಎಂದು ನನಗೂ ಅನ್ನಿಸಬೇಕಲ್ಲವೇ' ಎಂದು ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT