ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಸೇರಿ 15 ಜಿಲ್ಲೆಗಳಿಗೆ ಹವಾಮಾನ ಬದಲಾವಣೆ ಸಂಕಷ್ಟ

ಅಗ್ರ ಸ್ಥಾನದಲ್ಲಿ ಬಾಗಲಕೋಟೆ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳು
ಜಿರಂಜೀವಿ ಕುಲಕರ್ಣಿ
Published : 11 ಅಕ್ಟೋಬರ್ 2024, 0:30 IST
Last Updated : 11 ಅಕ್ಟೋಬರ್ 2024, 0:30 IST
ಫಾಲೋ ಮಾಡಿ
Comments

ಬೆಂಗಳೂರು: ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವಲ್ಲಿ ಕರ್ನಾಟಕದ 15 ಜಿಲ್ಲೆಗಳು ದುರ್ಬಲವಾಗಿದ್ದು, ಬಾಗಲಕೋಟೆ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.

ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿರುವ ಪ್ರಮುಖ ಎಂಟು ಜಿಲ್ಲೆಗಳಲ್ಲಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳು ಸಹ ಹವಾಮಾನ ವೈಪರೀತ್ಯದ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ (ಐಸೆಕ್‌) ನಡೆಸಿದ ಅಧ್ಯಯನ ವರದಿ ಹೇಳಿದೆ.

ಹವಾಮಾನ ಬದಲಾವಣೆಯಿಂದ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಗುಂಪುಗಳ ಮೇಲೆ ಬೀರುವ ಪರಿಣಾಮ, ವ್ಯತ್ಯಾಸಗಳ ಬಗ್ಗೆ ಅವಿಭಜಿತ ಬಳ್ಳಾರಿ ಸೇರಿದಂತೆ ರಾಜ್ಯದ 30 ಜಿಲ್ಲೆಗಳಲ್ಲಿ ಐಸೆಕ್‌ನ ಸಂಶೋಧಕರಾದ ಕರ್ಣಿಕಾ .ಎ ಮತ್ತು ಕೃಷ್ಣರಾಜ್ ಅವರು ಅಧ್ಯಯನ ನಡೆಸಿದ್ದಾರೆ. ಹಲವು ದಶಕಗಳ ಮಳೆಯ ದತ್ತಾಂಶ, ಅತಿವೃಷ್ಟಿ, ಪ್ರವಾಹ–ಬರ ಪರಿಸ್ಥಿತಿಗಳ ಆಧಾರದಲ್ಲಿ ಸಾಮಾಜಿಕ–ಆರ್ಥಿಕ, ಜನಸಂಖ್ಯೆ, ತಲಾ ಆದಾಯ ಮುಂತಾದವುಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ

ಸಾಮಾನ್ಯವಾಗಿ ಹವಾಮಾನ ಬದಲಾವಣೆಯ ಅಧ್ಯಯನಗಳಲ್ಲಿ ಭೌತಿಕ ಅಂಶಗಳನ್ನು ಪರಿಗಣಿಸಲಾಗುತ್ತದೆ. ಈ ಅಧ್ಯಯನದಲ್ಲಿ ಹವಾಮಾನ ವೈಪರೀತ್ಯದ ತೀವ್ರತೆಯನ್ನು ಸಮೂಹವಾಗಿ ಪರೀಕ್ಷಿಸಿ, ಜನರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಜನರ ಸೂಕ್ಷ್ಮತೆ ಮತ್ತು ಹೊಂದಿಕೊಳ್ಳುವಿಕೆಯ ಪರಿಸ್ಥಿತಿಯ ಕುರಿತೂ ಅಧ್ಯಯನ ನಡೆಸಿ, ಸೂಚ್ಯಂಕವನ್ನು ನಿಗದಿ ಮಾಡಲಾಗಿದೆ.

ಕೆಲ ಜಿಲ್ಲೆಗಳು ಪ್ರವಾಹ, ಬರಗಾಲದಂತಹ ಹವಾಮಾನ ವೈಪರೀತ್ಯಗಳನ್ನು ಎದುರಿಸುತ್ತಿವೆ. ಅಂತಹ ಜಿಲ್ಲೆಗಳಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದೆ. ನಂತರ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಯಾದಗಿರಿ ಜಿಲ್ಲೆಗಳಿವೆ. ಘಟ್ಟ ಪ್ರದೇಶದ ಜಿಲ್ಲೆಗಳಲ್ಲಿ ವರ್ಷಕ್ಕೆ ಸರಾಸರಿ ನಾಲ್ಕು ಸಾವಿರ ಮಿ.ಮೀ ಮಳೆಯಾಗುತ್ತಿದೆ. ಅಂತಹ ಜಿಲ್ಲೆಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತವೆ. ಯಾದಗಿರಿಯಂತಹ ಜಿಲ್ಲೆಗಳು ಬರದ ಅಪಾಯವನ್ನು ಹೊಂದಿದೆ.

ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು ಸಂವೇದನಾ ಸೂಚ್ಯಂಕದಲ್ಲಿವೆ. ಹವಾಮಾನ ಬದಲಾವಣೆಯ ಅತಂತ್ರ ಸ್ಥಿತಿಯನ್ನು ಕೇವಲ ಸೂಚ್ಯಂಕದ ಆಧಾರದಲ್ಲಿ ಗುರುತಿಸಲು ಸಾಧ್ಯವಿಲ್ಲ. ಒಂದು ವ್ಯವಸ್ಥೆಯ ಸಾಮರ್ಥ್ಯ, ಹವಾಮಾನ ವ್ಯತ್ಯಾಸಗಳ ನಂತರ ಒಂದು ಪ್ರದೇಶ ಎಷ್ಟು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಸ್ಥಿತಿಯನ್ನು ಮೆಟ್ಟಿನಿಂತು ಪುನರ್‌ರೂಪುಗೊಳ್ಳುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಾಗಿರುವ ಜಿಲ್ಲೆಗಳಲ್ಲೂ ಹಲವು ಸಮಸ್ಯೆಗಳನ್ನು ಗುರುತಿಸಲಾಗಿದೆ.  ಬೀದರ್‌ ಜಿಲ್ಲೆಯ ಉದಾಹರಣೆಯನ್ನು ತೆಗೆದುಕೊಂಡರೆ, ಅಲ್ಲಿ ಹೊಂದಾಣಿಕೆ ಸಾಮರ್ಥ್ಯ ಸಮತೋಲಿತವಾಗಿದೆ. ಆದರೆ, ಹೆಚ್ಚಿನ ಅತಂತ್ರ ಸ್ಥಿತಿ ಇದೆ ಎಂದು ಅಧ್ಯಯನ ವಿವರಿಸಿದೆ. 

ಕೃಷಿ, ತೋಟಗಾರಿಕೆ ಮತ್ತು ಇತರ ಕ್ಷೇತ್ರಗಳಲ್ಲಿ ಹವಾಮಾನ ಬದಲಾವಣೆಗಳಿಂದ ಆಗುವ ಸವಾಲುಗಳನ್ನು ಎದುರಿಸಲು ದೀರ್ಘಕಾಲಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮತ್ತು ಅದಕ್ಕೆ ಪೂರಕವಾದ ನೀತಿಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಅಧ್ಯಯನ ವರದಿ ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT