ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರಶೇಖರ್ ವಿರುದ್ಧ ಕ್ರಮ: ಸಿಎಸ್‌ಗೆ ಜೆಡಿಎಸ್‌ ದೂರು

Published : 30 ಸೆಪ್ಟೆಂಬರ್ 2024, 15:27 IST
Last Updated : 30 ಸೆಪ್ಟೆಂಬರ್ 2024, 15:27 IST
ಫಾಲೋ ಮಾಡಿ
Comments

ಬೆಂಗಳೂರು: ‘ಲೋಕಾಯುಕ್ತ ವಿಶೇಷ ತನಿಖಾ ದಳದ (ಎಸ್ಐಟಿ) ಮುಖ್ಯಸ್ಥ ಎಡಿಜಿಪಿ ಎಂ. ಚಂದ್ರಶೇಖರ್ ಅವರನ್ನು ತಕ್ಷಣ ಅಮಾನತು ಮಾಡಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ನೇತೃತ್ವದ ನಿಯೋಗ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಒತ್ತಾಯಿಸಿದೆ.

‘ಎಂ. ಚಂದ್ರಶೇಖರ್ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳು, ಕೋರ್ಟ್ ಪ್ರಕರಣಗಳು ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ದ ಅವಹೇಳನಕಾರಿ ಪದಬಳಸಿ ‌ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಕಾರಣ ಅವರನ್ನು ಕರ್ತವ್ಯದಿಂದ ತಕ್ಷಣ ಅಮಾನತುಗೊಳಿಸಬೇಕು. ಅಲ್ಲದೆ, ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಲು ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವವನ್ನು ರಾಜ್ಯ ಸರ್ಕಾರದ ಶಿಫಾರಸಿನೊಂದಿಗೆ ಕಳುಹಿಸಬೇಕು’ ಎಂದು ಶಾಲಿನಿ ಅವರನ್ನು ಸೋಮವಾರ ಭೇಟಿ ಮಾಡಿದ್ದ ನಿಯೋಗ ಆಗ್ರಹಿಸಿದೆ.

‘ಹಿಮಾಚಲ ಪ್ರದೇಶ ಐಪಿಎಸ್‌ ಕೇಡರ್‌ಗೆ ಸೇರಿದ ಚಂದ್ರಶೇಖರ್, ತಮ್ಮ ಪತ್ನಿಯ ಅನಾರೋಗ್ಯ ಮತ್ತು ಹಿಮಾಚಲ ಪ್ರದೇಶದ ವಾತಾವರಣ ಮತ್ತು ಹವಾಗುಣ ಹೊಂದುವುದಿಲ್ಲ ಎನ್ನುವ ನೆಪ ಹೇಳಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮತ್ತು ರಾಜಕೀಯ ಪ್ರಭಾವ ಬೀರಿ ಕರ್ನಾಟಕಕ್ಕೆ ವರ್ಗಾವಣೆಗೊಂಡಿದ್ದಾರೆ. ಬಳಿಕ ಇಲ್ಲಿನ ಐಪಿಎಸ್‌ ಕೇಡರ್‌ನಲ್ಲಿ ವಿಲೀನಗೊಂಡಿದ್ದಾರೆ’ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಸುದ್ದಿಗಾರರ ಜೊತೆ ಮಾತನಾಡಿದ ಸುರೇಶ್ ಬಾಬು, ‘ಐಪಿಎಸ್ ಅಧಿಕಾರಿ ಲಂಗುಲಗಾಮಿಲ್ಲದೆ ನಾಲಿಗೆ ಹರಿಬಿಟ್ಟಿದ್ದಾರೆ. ಅವರ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದೇವೆ. ಸರ್ಕಾರಿ ಅಧಿಕಾರಿಯೊಬ್ಬರು ಕೇಂದ್ರ ಸಚಿವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ತನಿಖೆ ಮಾಡುತ್ತೇನೆಂಬ ಉದ್ಧಟತನ‌ ಮೆರೆದಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘2009ರಿಂದಲೂ ದುಷ್ಟ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಲೇ ಬಂದಿರುವ ಚಂದ್ರಶೇಖರ್‌ ಒಬ್ಬ ಬ್ಲ್ಯಾಕ್‌ಮೇಲರ್‌. ಅವರ ವಿರುದ್ಧ ಕೇಂದ್ರ ಗೃಹ ಇಲಾಖೆಗೂ ದೂರು ನೀಡುತ್ತೇವೆ. ಇಂಥ ಅಧಿಕಾರಿಗಳು ರಾಜ್ಯದಲ್ಲಿ ಇರಲು ನಾಲಾಯಕ್. ಅವರನ್ನು ರಾಜ್ಯದಿಂದ ಓಡಿಸಬೇಕು’ ಎಂದೂ ಆಗ್ರಹಿಸಿದರು. ಶಾಸಕರಾದ ಕರೆಮ್ಮ ನಾಯಕ್, ಶಾರದಾ ಪೂರ್ಯಾನಾಯ್ಕ್, ವೆಂಕಟಶಿವಾರೆಡ್ಡಿ ಮತ್ತಿತರರು ಇದ್ದರು.

ಅಧಿಕಾರಿ ವಿರುದ್ಧ ಕ್ರಮಕ್ಕೆ ಅಶೋಕ ಆಗ್ರಹ ಎಚ್‌.ಡಿ.ಕುಮಾರಸ್ವಾಮಿಯವರನ್ನು ನಿಂದಿಸಿರುವ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದ್ದಾರೆ. ‘ಕಾನೂನಿನಿಂದ ನುಣುಚಿಕೊಳ್ಳಲು ನೇರವಾಗಿ ಪತ್ರ ಬರೆಯದೆ ಕೆಳಹಂತದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಧಿಕಾರಿ ತನ್ನ ಮಿತಿ ಮೀರಿ ವರ್ತಿಸಿರುವುದು ಖಂಡನೀಯ. ಸರ್ಕಾರದ ಮುಖ್ಯಕಾರ್ಯದರ್ಶಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಕ್ರಮಕ್ಕೆ ಒಕ್ಕಲಿಗರ ಸಂಘ ಆಗ್ರಹ ‘ಕುಮಾರಸ್ವಾಮಿ ಅವರ ವಿರುದ್ಧ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವಹೇಳನಕಾರಿ ಪದಗಳನ್ನು ಬಳಸಿದ್ದು ಅವರ ವಿರುದ್ಧ ಸರ್ಕಾರ ತಕ್ಷಣವೇ ಕ್ರಮಕೈಗೊಳ್ಳಬೇಕು’ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್‌.ಬಾಲಕೃಷ್ಣ ಆಗ್ರಹಿಸಿದ್ದಾರೆ. ‘ಚುನಾಯಿತ ಪ್ರತಿನಿಧಿಯೊಬ್ಬರು ಸರ್ಕಾರದ ವಿರುದ್ಧ ಆರೋಪ ಮಾಡಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸಚಿವರು ಇರುತ್ತಾರೆ. ಆದರೆ ಕಾರ್ಯಾಂಗದ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳ ವಿರುದ್ಧ ಪ್ರತಿಕ್ರಿಯಿಸುವ ಅಧಿಕಾರವನ್ನು ಈ ಐಪಿಎಸ್ ಅಧಿಕಾರಿಗೆ ಯಾರು ಕೊಟ್ಟಿದ್ದಾರೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT