ಚಿತ್ರದುರ್ಗ: ‘ಜಾತಿ, ಧರ್ಮ ಹಾಗೂ ಏಕಪಕ್ಷ ಪರವಾದ ಮನಸುಗಳು ಭಾರತವನ್ನು ಭಾವೋದ್ರೇಕೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿವೆ. ಸಂವಾದದ ದನಿ ಅಡಗಿಸುವ ಇಂತಹ ಸಂಘಟನಾತ್ಮಕ ಪ್ರಯತ್ನಕ್ಕೆ ಉತ್ತರ ನೀಡಲು ಬಂಡಾಯ ಶಕ್ತಿಯನ್ನು ಮತ್ತೆ ಪುನರೋದಯಗೊಳಿಸೋಣ' ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕರೆ ನೀಡಿದರು.

ಬಂಡಾಯ ಸಾಹಿತ್ಯ ಸಂಘಟನೆಗೆ ನಾಲ್ಕು ದಶಕ ತುಂಬಿರುವ ಹಿನ್ನೆಲೆಯಲ್ಲಿ ಆಯೋಜಿಸಿದ ಎರಡು ದಿನಗಳ ‘ಸಾಹಿತ್ಯ ಸಂವಾದ’ಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಧರ್ಮ, ದೇಶಭಕ್ತಿ, ಸಂಸ್ಕೃತಿಯ ಹೆಸರಿನಲ್ಲಿ ಯುವ ಸಮೂಹವನ್ನು ಭಾವೋದ್ರೇಕಗೊಳಿಸಲಾಗುತ್ತಿದೆ. ದೇಶಭಕ್ತಿಯ ಪರಿಕಲ್ಪನೆ ಕೂಡ ಪಲ್ಲಟಗೊಳ್ಳುತ್ತಿದೆ. ಇವು ಸಮೂಹ ಸನ್ನಿ ಸೃಷ್ಟಿಸುವ ಸಾಧನಗಳಾಗಿ ಬಳಕೆಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘21ನೇ ಶತಮಾನದಲ್ಲಿ ಭಾರತ ಬಲಿಷ್ಠವಾಗುತ್ತಿದೆ ಎಂಬ ಭ್ರಮೆ ಬಿತ್ತುವ ಕೆಲಸ ನಡೆಯುತ್ತಿದೆ. ಆರ್ಥಿಕ ಅಭಿವೃದ್ಧಿಯ ಪ್ರಚಾರವು ಸುಧಾರಣೆಯ ಪರಿಭಾಷೆಯನ್ನು ಬದಲಾಯಿಸಿಬಿಟ್ಟಿದೆ. ಬಂಡವಾಳಶಾಹಿ ಪರವಾದ ಆರ್ಥಿಕ ನೀತಿಯೇ ಸುಧಾರಣೆ ಎಂದು ನಂಬಿಸಲಾಗುತ್ತಿದೆ’ ಎಂದರು.

ಕೇಂದ್ರ ಸಚಿವ ಅನಂತಕುಮಾರ್ ಅವರನ್ನು ‘ಬಾಯಿ ಬಾಂಬಿಗ’ ಎಂದು ಜರೆದರು. ದೇವರು, ಧರ್ಮ ಹಾಗೂ ಸಂಸ್ಕೃತಿಯ ಕುರಿತು ಮಾತನಾಡುವ ನೈತಿಕ ಹಕ್ಕು ಅವರಿಗೆ ಇಲ್ಲ ಎಂದು ಪ್ರತಿಪಾದಿಸಿದರು.

‘ವಿವೇಕಾನಂದರ ವಿಚಾರಗಳನ್ನು ಓದಿಕೊಳ್ಳದ ಅವಿವೇಕಾನಂದರು ಹಾಗೂ ವಿಕಾರಾನಂದರು ಹಿಂದೂ ಧರ್ಮದ ನಿಷ್ಠರಾಗಿದ್ದಾರೆ. ಭಿನ್ನಾಭಿಪ್ರಾಯ ಇರುವವರನ್ನು ದೇಶಬಿಟ್ಟು ಓಡಿಸಲು ಹಾಗೂ ನೇಣಿಗೇರಿಸಲು ಇವರು ಸಜ್ಜಾಗಿದ್ದಾರೆ. ಇಂತಹ ಮೊಂಡುವಾದದ ತುಂಡು ತಂಡಗಳ ತುರಿಕೆ ದೇಶದಲ್ಲಿ ಹೆಚ್ಚಾಗಿದೆ’ ಎಂದರು.

‘ರಾಜಕೀಯ ಪಕ್ಷಗಳು ಕೋಮುವಾದಿಗಳೇ ಅಥವಾ ಅದರ ವಿರೋಧಿಗಳೇ ಎಂಬುದನ್ನು ಹೇಳುವುದು ಕಷ್ಟವಾಗಿದೆ. ಕಾಲದ ಅಗತ್ಯಕ್ಕೆ ತಕ್ಕಂತೆ ವಿವಿಧ ಬಣ್ಣಗಳಲ್ಲಿ ಅವರು ಪ್ರಕಟಗೊಳ್ಳುತ್ತಾರೆ. ರಾಜಕೀಯ ಪಕ್ಷಗಳ ಎದುರು ನಿಂತು ಕಾಲು ಕೆರೆದು ಕಾಲ ವ್ಯಯ ಮಾಡಿಕೊಳ್ಳುವುದನ್ನು ಬಿಡಬೇಕಿದೆ. ಜನರ ಮನಸು ಮುಟ್ಟುವ ಹಾಗೂ ಕಟ್ಟುವ ಸಾಂಸ್ಕೃತಿಕ ಜವಾಬ್ದಾರಿ ಸಾಹಿತಿಗಳ ಮೇಲಿದೆ’ ಎಂದು ಹೇಳಿದರು.

‘ಸ್ವಚ್ಛ ಭಾರತವೇ ವ್ಯಂಗ್ಯ’

ಸರ್ಕಾರಿ ದಾಖಲೆಗಳ ಪ್ರಕಾರ ದೇಶದ 1.78 ಕೋಟಿ ಜನರು ಕೈಯಲ್ಲಿ ಮಲ ಎತ್ತುತ್ತಿದ್ದಾರೆ. 8.82 ಕೋಟಿ ಜನ ಈಗಲೂ ತಲೆ ಮೇಲೆ ಮಲ ಹೊತ್ತು ಊರಿನ ಹೊರಗೆ ಸಾಗಿಸುತ್ತಿದ್ದಾರೆ. ಇದು ಅತಿ ಪ್ರಚಾರಿತ ಸ್ವಚ್ಛ ಭಾರತದ ದೊಡ್ಡ ವ್ಯಂಗ್ಯ ಎಂದು ಬರಗೂರು ವಿಶ್ಲೇಷಣೆ ಮಾಡಿದರು.

ಶ್ರೀಮಂತರು, ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲೇ ದೇಶದ ಶೇ 22ರಷ್ಟು ಜನರು ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ. 2007ರಲ್ಲಿ ಅರ್ಜುನ್ ಸೇನ್ ಅವರು ನೀಡಿದ ವರದಿ ಪ್ರಕಾರ ದೇಶದ ಅಸಂಘಟಿತ ಜನರ ಪ್ರತಿ ದಿನದ ತಲಾ ಆದಾಯ ಕೇವಲ ₹ 22 ಎಂದು ಹೇಳಿದರು.

‘ಇಕ್ಕದ, ಒದೆಯದ ಬಂಡಾಯಗಾರ’

ದಲಿತ ಚಳವಳಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಸಾಹಿತಿಯೊಬ್ಬರು (ಸಿದ್ದಲಿಂಗಯ್ಯ) ‘ಇಕ್ರಲಾ ಒದಿರ್ಲಾ...’ ಎಂಬ ಸಾಹಿತ್ಯ ಬರೆದಿದ್ದರು. ಇಕ್ರಿ, ಒದಿರಿ ಎಂದು ಬೇರೆಯವರಿಗೆ ಹೇಳಿದರೇ ಹೊರತು, ಅವರು ಯಾವತ್ತೂ ಮಾಡಲಿಲ್ಲ..’ ಎಂದು ಚಿಂತಕ ಜಿ.ರಾಮಕೃಷ್ಣ ಹೇಳಿದಾಗ ಸಭೆಯಲ್ಲಿ ನಗೆಯ ಅಲೆ ಉಕ್ಕಿತು.

‘ಇದು ಬೇಜವಾಬ್ದಾರಿ ಸಾಹಿತ್ಯ ಎಂಬುದನ್ನು ಬಿ.ಕೃಷ್ಣಪ್ಪ ಹಿಂದೆಯೇ ಎಚ್ಚರಿಸಿದ್ದರು. ಇಂಥ ಬಂಡಾಯಗಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಮನೆಗೆ ಕೆರೆಸಿಕೊಂಡರು. ಬಂಡಾಯ ಚಳವಳಿಯಲ್ಲಿ ಇಂತಹ ತಪ್ಪುಗಳು ಆಗಬಾರದು. ಬೌದ್ಧಿಕ ಅಸ್ತ್ರಗಳನ್ನು ಅಂತರ್ಗತ ಮಾಡಿಕೊಂಡು ಕ್ರಿಯಾಶೀಲರಾಗೋಣ’ ಎಂದರು.

* ಕಳ್ಳರೆಂದು ಅಮಾಯಕರನ್ನು ಹತ್ಯೆ ಮಾಡಲಾಗುತ್ತಿದೆ. ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇದನ್ನು ಪ್ರಶ್ನಿಸುವವರಿಗೆ ‘ನಗರ ನಕ್ಸಲ್’ ಎಂಬ ಹಣೆಪಟ್ಟಿ ಅಂಟಿಸಲಾಗುತ್ತಿದೆ.

-ಬಾನು ಮುಷ್ತಾಕ್, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.