ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರೂಣ ಹತ್ಯೆ: ಮಾಹಿತಿ ಕೊಡದ ಔಷಧ ಏಜೆನ್ಸಿ

20 ಸಾವಿರ ಕಿಟ್‌ ಮಾರಾಟವಾಗಿರುವ ಶಂಕೆ, ಆರೋಗ್ಯ ಇಲಾಖೆಯ ತನಿಖೆಗೆ ಅಡ್ಡಿ
Published 1 ಮೇ 2024, 23:07 IST
Last Updated 1 ಮೇ 2024, 23:07 IST
ಅಕ್ಷರ ಗಾತ್ರ

ಮಂಡ್ಯ: ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಸಂಬಂಧ ಜಿಲ್ಲೆಯ ಸಗಟು ಔಷಧ ಮಾರಾಟಗಾರರು ಎಂಟಿಪಿ ಕಿಟ್‌ ಮಾರಾಟ ಕುರಿತಂತೆ ಕಳೆದ 6 ತಿಂಗಳಿಂದಲೂ ಸಮರ್ಪಕ ಮಾಹಿತಿ ನೀಡಿಲ್ಲ. ಹೀಗಾಗಿ ಪ್ರಕರಣದಲ್ಲಿ ಡ್ರಗ್‌ ಏಜೆನ್ಸಿ ಮಾಲೀಕರ ಪಾತ್ರ ಇರುವ ಬಗ್ಗೆಯೂ ಅನುಮಾನ ಮೂಡಿದೆ.

ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಜಿಲ್ಲೆಗಳಲ್ಲಿ ಅವ್ಯಾಹತವಾಗಿ ಹೆಣ್ಣುಭ್ರೂಣ ಹತ್ಯೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಕಾರಣ ರಾಜ್ಯ ಸರ್ಕಾರ ಕಳೆದ ವರ್ಷವೇ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು. ತನಿಖೆ ಪೂರ್ಣಗೊಂಡಿದ್ದು, ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಅದರ ಜೊತೆಗೆ ಪ್ರಕರಣದಲ್ಲಿ ಔಷಧ ಮಾರಾಟ ಏಜೆನ್ಸಿಗಳು ಕೂಡ ಭಾಗಿಯಾಗಿರುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದರು.

ಭ್ರೂಣ ಹತ್ಯೆಗೆ ಬಳಸುವ ಎಂಟಿಪಿ (ಮೆಡಿಕಲ್‌ ಟರ್ಮಿನೇಷನ್‌ ಆಫ್‌ ಪ್ರೆಗ್ನೆನ್ಸಿ) ಕಿಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗಿವೆ ಎಂಬ ಆರೋಪ ಕೇಳಿಬಂದ ಕಾರಣ ಅದರ ಸಂಪೂರ್ಣ ಲೆಕ್ಕ ಕೊಡುವಂತೆ ಔಷಧ ಮಾರಾಟ ಏಜೆನ್ಸಿಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿ, ಸಹಾಯಕ ಔಷಧ ನಿಯಂತ್ರಣಾಧಿಕಾರಿ ಕೋರಿದ್ದರು.

ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಸಗಟು ಔಷಧ ಮಾರಾಟ ಮಳಿಗೆಗಳಿದ್ದು, ಅವುಗಳಲ್ಲಿ ಕೇವಲ 12 ಮಾರಾಟಗಾರರಷ್ಟೇ ಮಾಹಿತಿ ನೀಡಿದ್ದಾರೆ. ಇನ್ನುಳಿದ 18ಕ್ಕೂ ಏಜೆನ್ಸಿಗಳು ಮಾಹಿತಿ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ಅವರು 3 ಬಾರಿ ಸೂಚನೆ ಕೊಟ್ಟರೂ ಅವರು ಮಾಹಿತಿ ನೀಡಿಲ್ಲ. 

‘ಔಷಧ ಏಜೆನ್ಸಿ ಮಾಲೀಕರು ವೈದ್ಯರ ಸಲಹಾ ಚೀಟಿ ಇಲ್ಲದೇ ಕೇಳಿದವರಿಗೆಲ್ಲಾ 10 ಪಟ್ಟು ಹೆಚ್ಚು ಬೆಲೆಗೆ ಎಂಟಿಪಿ ಕಿಟ್‌ ಮಾರಿದ್ದಾರೆ. ಮಾರಾಟದ ಬಗ್ಗೆ ರಶೀತಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಮಾಹಿತಿ ನೀಡದ ಔಷಧ ಏಜೆನ್ಸಿ ಮಾಲೀಕರನ್ನೂ ಪ್ರಕರಣದಲ್ಲಿ ಹೊಣೆಗಾರರನ್ನಾಗಿ ಮಾಡಬೇಕು’ ಎಂದು ವೈದ್ಯರೊಬ್ಬರು ಒತ್ತಾಯಿಸಿದರು.

6,626 ಕಿಟ್‌ ಮಾರಾಟ: ಎಂಟಿಪಿ ಕಿಟ್‌ನಲ್ಲಿ ಮಿಫೆಪ್ರಿಸ್ಟಾನ್‌, ಮಿಸೋಪ್ರೋಸ್ಟ್‌ ಮಾತ್ರೆಗಳಿದ್ದು ತಾಯಿಯ ಜೀವ ಉಳಿಸುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಲಾಗುತ್ತದೆ. ಆದರೆ ಔಷಧಿ ಮಾರಾಟಗಾರರು ಹೆಣ್ಣುಭ್ರೂಣ ಹತ್ಯೆಗೂ ಇವುಗಳನ್ನು ಮಾರಾಟ ಮಾಡಿದ್ದಾರೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಔಷಧ ಏಜೆನ್ಸಿಗಳು ಮಾಹಿತಿ ನೀಡದಿರುವ ಕುರಿತು ಪರಿಶೀಲಿಸಲಾಗುವುದು. ಈ ಕುರಿತು ಡಿಎಚ್‌ಒ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಜೊತೆ ಮಾತನಾಡುತ್ತೇನೆ
ಕುಮಾರ ಜಿಲ್ಲಾಧಿಕಾರಿ

100ಕ್ಕೂ ಹೆಚ್ಚು ಪುಟಗಳ ವರದಿ

ಹೆಣ್ಣು ಭ್ರೂಣ ಹತ್ಯೆ ಸಂಬಂಧ ಸಿಐಡಿ ಅಧಿಕಾರಿಗಳು 100ಕ್ಕೂ ಹೆಚ್ಚು ಪುಟಗಳ ಸಮಗ್ರ ವರದಿ ಸಲ್ಲಿಸಿದ್ದಾರೆ. ಆರೋಪಿಗಳ ವಿರುದ್ಧ ನ್ಯಾಯಾಲಯಲ್ಲಿ ಖಾಸಗಿ ದೂರು ಸಲ್ಲಿಸುವಂತೆ ಸಿಐಡಿ ಅಧಿಕಾರಿಗಳು ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಸಿಐಡಿ ವರದಿ ಕೈಸೇರಿದ್ದು 17 ಆರೋಪಿಗಳ ವಿರುದ್ಧ ಪಿಸಿಆರ್‌ ಸಲ್ಲಿಸಲಾಗುವುದು. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಕಾನೂನು ಹೋರಾಟ ಮುಂದುವರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT