ಕೋಮುವಾದದ ಹುಟ್ಟಡಗಿಸಲು ಸನ್ನದ್ಧ: ಸಿದ್ದರಾಮಯ್ಯ
‘ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರು ನೀಡಿರುವ ಜನಮತದಲ್ಲಿ ಸಂವಿಧಾನದ ಆಶಯವಾದ ಜಾತ್ಯತೀತ ಸಮಾಜದ ರಕ್ಷಣೆಯ ಸಂದೇಶವೂ ಇದೆ ಎನ್ನುವುದನ್ನು ನಮ್ಮ ಸರ್ಕಾರ ಅರ್ಥ ಮಾಡಿಕೊಂಡಿದೆ. ನಮ್ಮ ಸರ್ಕಾರ ಕೋಮುವಾದಿ ಶಕ್ತಿಗಳ ಹುಟ್ಟಡಗಿಸಲು ಸರ್ವ ಸನ್ನದ್ಧವಾಗಿದೆ’ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗಣರಾಜ್ಯೋತ್ಸವ ಸಂದೇಶ ನೀಡಿರುವ ಅವರು ‘ನಮ್ಮ ನಡೆ ಅಭಿವೃದ್ಧಿ ಕಡೆಗೆ ಸಾಗುತ್ತಿದ್ದರೂ ನಮ್ಮ ಕನಸಿನ ಭಾರತದ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ ಎನ್ನುವುದನ್ನು ವಿಷಾದದಿಂದಲೇ ಒಪ್ಪಬೇಕಾಗಿದೆ. ಅಭಿವೃದ್ಧಿ ದಾರಿಯಲ್ಲಿ ಹೊಸ ಸವಾಲುಗಳು ಎದುರಾಗಿವೆ. ಮುಖ್ಯವಾಗಿ ಇತ್ತೀಚೆಗೆ ಹೆಡೆ ಎತ್ತಿರುವ ಕೋಮುವಾದ ನಮ್ಮ ಜಾತ್ಯತೀತ ಸಮಾಜಕ್ಕೆ ಅಪಾಯವನ್ನುಂಟು ಮಾಡುವ ಆತಂಕವನ್ನು ಅನುಭವಿಸುತ್ತಿದ್ದೇವೆ’ ಎಂದಿದ್ದಾರೆ. ‘ಧಾರ್ಮಿಕ ರಾಷ್ಟ್ರೀಯತೆ ಮೂಲಕ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಧಾರ್ಮಿಕ ರಾಷ್ಟ್ರೀಯತೆಯು ಬಹುಧರ್ಮ ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವಕ್ಕೆ ಮಾರಕವಾದುದು’ ಎಂದು ಹೇಳಿದ್ದಾರೆ. ‘ಸಮಾಜವನ್ನು ಧರ್ಮಗಳ ಆಧಾರದಲ್ಲಿ ವಿಭಜಿಸುವ ಹುನ್ನಾರಕ್ಕೆ ಜನತೆ ಬಲಿಯಾಗಬಾರದು. ಚುನಾಯಿತ ಸರ್ಕಾರ ಇಲ್ಲವೇ ಜನಪ್ರತಿನಿಧಿಗಳು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಜಾತಿ–ಧರ್ಮಗಳಂತಹ ಭಾವನಾತ್ಮಕ ವಿಷಯಗಳನ್ನು ದುರ್ಬಳಕೆ ಮಾಡುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು ಮತ್ತು ಸಂವಿಧಾನಕ್ಕೆ ಬಗೆವ ದ್ರೋಹವಾಗಿದೆ’ ಎಂದಿದ್ದಾರೆ.