ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ:ಹಂಪ ನಾಗರಾಜಯ್ಯ ಬೇಸರ

Published 20 ಆಗಸ್ಟ್ 2024, 9:43 IST
Last Updated 20 ಆಗಸ್ಟ್ 2024, 9:43 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದು ಹಿರಿಯ ಸಂಶೋಧಕ ಹಂಪ ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿರುವ ‘ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರಿಗೆ ಎರಡು ದಿನಗಳ ಕಾರ್ಯಾಗಾರ’ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾನ್ಯ ಕನ್ನಡಿಗರು ಮಾತನಾಡುವುದನ್ನು ಗಮನಿಸಿ. ಅವರ ಮಾತಿನಲ್ಲಿ ಬಹುತೇಕ ಇಂಗ್ಲಿಷ್ ಪದಗಳೇ ಇರುತ್ತವೆ. ಅವರು ಕಂಗ್ಲಿಷ್‌ ಮಾತನಾಡುತ್ತಿರುತ್ತಾರೆ. ಇಂತಹ ಸ್ಥಿತಿಗೆ ನಾವು ಬಂದಿದ್ದೇವೆ. ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ’ ಎಂದರು.

ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ಸರೋಜಿನಿ ಮಹಿಷಿ ವರದಿ ಜಾರಿಗೆ ತರಲು ಸಾಧ್ಯವಿಲ್ಲ. ಅದನ್ನು ಸುಪ್ರೀಂ ಕೋರ್ಟ್‌ ಒಪ್ಪುವುದೂ ಇಲ್ಲ. ದೇಶದ ಯಾವುದೇ ರಾಜ್ಯದ ಜನರು ಯಾವುದೇ ರಾಜ್ಯಕ್ಕೆ ಹೋಗಿ ಉದ್ಯೋಗ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿಬಿಟ್ಟಿದೆ. ಹೊರಗಿನವರಿಗೇ ಅವಕಾಶ ಕೊಡುತ್ತಾ ಹೋದರೆ ಕನ್ನಡದ ಅಸ್ಮಿತೆ ಏನಾಗಬೇಕು. ಒಕ್ಕೂಟ ವ್ಯವಸ್ಥೆ ಎಂಬುದು ಎಲ್ಲ ರಾಜ್ಯಗಳ, ಭಾಷೆಗಳ ಅಸ್ಮಿತೆಯನ್ನು ಉಳಿಸಿಕೊಂಡು ಹೋಗುವುದು. ಆದರೆ ಕನ್ನಡದ ವಿಚಾರದಲ್ಲಿ ಹಾಗಾಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಗೃಹ ಸಚಿವಾಲಯದ ಅಡಿಯಲ್ಲಿ ಹಿಂದಿ ಅಭಿವೃದ್ಧಿ ಸಮಿತಿ ಇದೆ. ಹಿಂದಿಯನ್ನು ಆಡಳಿತದಲ್ಲಿ ಹೇಗೆಲ್ಲಾ ಅನುಷ್ಠಾನಕ್ಕೆ ತರಬೇಕು ಎಂಬುದನ್ನು ಆ ಸಮಿತಿ ನಿರ್ಧರಿಸುತ್ತದೆ. ಹೀಗಾಗಿಯೇ ಹಿಂದಿ ಭಾಷಿಕರ ಬೆಳವಣಿಗೆ ದರ ಶೇ 66ರಷ್ಟಿದೆ. ಕನ್ನಡ ಭಾಷಿಕರ ಬೆಳವಣಿಗೆ ದರ ಶೇ 3ರಷ್ಟು ಮಾತ್ರ. ನಮ್ಮ ಮನೆಗಳಲ್ಲಿ, ಮಾರುಕಟ್ಟೆಗಳಲ್ಲಿ, ಶಾಲೆಗಳಲ್ಲಿ ಕನ್ನಡ ಬೇಡವಾಗಿದೆ. ಹೀಗಾಗಿಯೇ ಕನ್ನಡ ಬೆಳೆಯುತ್ತಿಲ್ಲ.   ಕನ್ನಡಿಗರಿಗೆ ಮತ್ತು ಕನ್ನಡೇತರರಿಗೂ ಕನ್ನಡ ಕಲಿಸುವುದರಿಂದ ಮಾತ್ರ ಭಾಷೆ ಉಳಿಸಬಹುದು’ ಎಂದರು.

ಕನ್ನಡದ ಮಕ್ಕಳಿಗಾಗಿ 100 ಪುಸ್ತಕ: ‘ಕನ್ನಡ ಸಂಸ್ಕೃತಿ, ಐತಿಹ್ಯ, ಭಾಷೆಯನ್ನು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಸರಳ ಭಾಷೆಯಲ್ಲಿ 100 ಕಿರು ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ರೂಪಿಸಿದ್ದೇವೆ’ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.

‘ಪುಸ್ತಕಗಳ ರಚನೆಗಾಗಿ ಈಗಾಗಲೇ ಹಲವು ಮಂದಿ ಲೇಖಕರನ್ನು ಸಂಪರ್ಕಿಸಲಾಗಿದೆ. ಹಲವರು ಒಪ್ಪಿಗೆ ಸೂಚಿಸಿದ್ದಾರೆ. ಪುಸ್ತಕ ರಚನೆ ಕೆಲಸವೂ ಆರಂಭವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT