ಆಲದಮರ (ಪ್ರಜಾವಾಣಿ ಕ್ಲಬ್ ಹೌಸ್): ಸಂಗೀತ ಅಂದರೆ ಅದೊಂಥರಾ ಅಡುಗೆ ಮಾಡಿದ ಹಾಗೆ. ಅದು ಹಿತ ಆಗಬೇಕು. ಸಂಗೀತ ಪ್ರತಿ ಜೀವರಾಶಿಗೂ ಹಿತ ನೀಡುತ್ತದೆ.

ಹೀಗೆಂದು ಸಂಗೀತದ ಸರಿಗಮದ ಆಯಾಮಗಳನ್ನು ಪ್ರಜಾವಾಣಿ ಕ್ಲಬ್ಹೌಸ್ನ ‘ಆಲದಮರ’ದ ಅಡಿಯಲ್ಲಿ ಭಾನುವಾರ ಹರಡಿದವರು ಸಂಗೀತ ನಿರ್ದೇಶಕ ವಿ. ಮನೋಹರ್.

‘ಆಲದಮರ’ದಡಿ ವಿ.ಮನೋಹರ್ ಅವರ ಸಂಗೀತ, ವ್ಯಂಗ್ಯಚಿತ್ರ ರಚನೆ, ಗೀತೆರಚನೆ, ನಿರ್ದೇಶನ ಇತ್ಯಾದಿ ಹಲವು ಮುಖಗಳು ಬಿಳಲುಗಳಂತೆ ಇಳಿಬಿದ್ದವು. ಆಲದಮರದ ‘ಕಟ್ಟೆ’ಯ ಕೆಳಗೆ ನೂರಾರು ಕೇಳುಗರು ಮನೋಹರ್ ಅವರ ಮಾತಿಗೆ ಕಿವಿಯಾದರು. ಮನೋಹರ್ ಅವರಂತೂ ಪ್ರಶ್ನೆಗಳಿಗೆ ಜಾಣ್ಮೆ ಮತ್ತು ತೂಕದ ಪ್ರತಿಕ್ರಿಯೆ ನೀಡಿದರು.

‘ಅಪ್ಪ ತಂದು ಕೊಡುತ್ತಿದ್ದ ಚಂದಮಾಮ, ಬಾಲಮಿತ್ರ ಓದುವಿಕೆಯ ಹುಚ್ಚು ಹಿಡಿಸಿತು. ಅವರು ತಂದ ಬಣ್ಣದ ಕಡ್ಡಿಗಳಿಂದ ಮನೆ ತುಂಬಾ ಚಿತ್ರ ಬಿಡಿಸುತ್ತಿದ್ದೆ. ಸುಧಾ ಪತ್ರಿಕೆಯಲ್ಲಿ ಜಿ.ಪಿ. ರಾಜರತ್ನಂ ಅವರ ಕವಿತೆಗಳು, ದಿನಕರ ದೇಸಾಯಿ ಅವರ ಚುಟುಕುಗಳನ್ನು ಓದುತ್ತಿದ್ದೆ... ಒಟ್ಟಿನಲ್ಲಿ ಓದು ನಮ್ಮನ್ನು ಪಕ್ವಗೊಳಿಸುತ್ತದೆ’ ಎಂದರು.

‘ಈ ಹಿಂದೆ ರೆಕಾರ್ಡಿಂಗ್ಗೆ ಇದ್ದ ಪರದಾಟವೇ ಬೇರೆ. ಹತ್ತಾರು ಸಂಗೀತ ಉಪಕರಣಗಳು, ಕಡಿಮೆ ಸಂಖ್ಯೆಯ ಮೈಕ್... ಒಂದರ ನಾದವನ್ನು ಇನ್ನೊಂದು ಸದ್ದು ನುಂಗಿಹಾಕದಂತೆ ನೋಡಿಕೊಳ್ಳಬೇಕಾದ ಸವಾಲು ಸಣ್ಣದೇನಲ್ಲ. ಅಂದಿನ ಸಂಗೀತ ನಿರ್ದೇಶಕರು ಚಿತ್ರದ ಹಿನ್ನೆಲೆ ಸಂಗೀತಕ್ಕೆ (ಸಂಭಾಷಣೆಯ ನಡುವೆ ಬರುವ ಸಂಗೀತ) ಹೆಚ್ಚು ಒತ್ತು ಕೊಡುತ್ತಿದ್ದರು...’ ಎಂದು ಅಂದಿನ ತಾಂತ್ರಿಕ ವ್ಯವಸ್ಥೆಯನ್ನು ಸಂಕ್ಷಿಪ್ತವಾಗಿ ತೆರೆದಿಟ್ಟರು.

‘ಈಗ ಹೊಸಬರು ಹೊಸ ಶೈಲಿಯ ಸಂಗೀತ ಅರಸಿ ಬರುತ್ತಾರೆ. ಉದಾಹರಣೆಗೆ ರ್ಯಾಪ್. ಸುಮ್ಮನೆ ಶಬ್ದ ಜೋಡಿಸಿ ಏನೇನೋ ಹೇಳಿದ ಮಾತ್ರಕ್ಕೆ ರ್ಯಾಪ್ ಆಗದು. ಅಲ್ಲೂ ಒಂದು ಗಟ್ಟಿತನ ಬೇಕು’ ಎಂದರು.

ದೇಶದ ಪ್ರಮುಖ ಸಂಗೀತ ನಿರ್ದೇಶಕರ ಪ್ರಯೋಗಶೀಲತೆಯನ್ನು ನೆನಪಿಸಿದ ಮನೋಹರ್, ‘ದೇಶದಲ್ಲಿ ಆರ್.ಡಿ. ಬರ್ಮನ್ ಅವರು ಗಾಜಿನ ಬಾಟಲಿ, ಗ್ಲಾಸ್ನಿಂದಲೂ ಸಂಗೀತ ಹೊರಹೊಮ್ಮಿಸಬಹುದು ಎಂಬುದನ್ನು ಪ್ರಯೋಗಿಸಿದ್ದರು. ಈಗ ಎ.ಆರ್.ರೆಹಮಾನ್ ಅವರು ಸಂಗೀತದ ಡಿಜಿಟಲ್ ಯುಗದಲ್ಲಿ ಸೌಂಡ್ ಟ್ರೆಂಡನ್ನೇ ಬದಲಿಸಿದ್ದಾರೆ’ ಎಂದರು.

ಎಚ್.ಎಸ್.ರೇಣುಕಾರಾಧ್ಯ ಅವರ ಪ್ರಶ್ನೆಗೆ ಉತ್ತರಿಸಿದ ಮನೋಹರ್, ‘ಹೊಸ ತಲೆಮಾರಿನಲ್ಲಿ ಸಾಹಿತ್ಯದ ಭರವಸೆಗಳೇ ಕಾಣುತ್ತಿಲ್ಲ. ಇದಕ್ಕೆ ಆಳವಾದ ಜ್ಞಾನಬೇಕು. ದಾಸರ ಕೀರ್ತನೆ, ವಚನ, ಜನಪದ, ಕವನಗಳು ಇತ್ಯಾದಿ ಎಲ್ಲವನ್ನೂ ಓದಬೇಕು. ಹಂಸಲೇಖ, ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಇಂಥ ಕೆಲವೇ ಕೆಲವರು ಇದ್ದಾರೆ. ಆದರೆ, ಹೊಸಬರಲ್ಲಿ ಓದುವಿಕೆ ಇಲ್ಲವಾಗಿದೆ’ ಎನ್ನುವಲ್ಲಿ ಅವರಲ್ಲೊಂದು ವಿಷಾದ ಕಾಣಿಸಿತು.

‘ಮಹಿಳೆಯರನ್ನು ಸಿನಿಮಾ ಸಾಹಿತ್ಯದಿಂದ ದೂರ ಇಡುವ ಮಾತೇ ಇಲ್ಲ. ಅವರೂ ಬಂದರೆ ಈ ಕ್ಷೇತ್ರ ಇನ್ನಷ್ಟು ಗಟ್ಟಿಯಾಗುತ್ತದೆ’ ಎಂದು ಹೇಳಲು ಮರೆಯಲಿಲ್ಲ.

ಹೀಗೆ ಮಾತು ಮುಂದುವರಿಯುತ್ತಲೇ ಇತ್ತು. ವತ್ಸಲಾ ಮೋಹನ್, ಪಿಚ್ಚಳ್ಳಿ ಶ್ರೀನಿವಾಸ್, ರಮೇಶ್, ಜೋಗಿ, ಜಿ.ಎನ್.ಮೋಹನ್, ಎಚ್.ಎಲ್.ಪುಷ್ಪಾ, ಭಾರತಿ ಹೆಗಡೆ ಸೇರಿದಂತೆ ನೂರಾರು ಕೇಳುಗರು ಭಾಗವಹಿಸಿದ್ದರು. ಪ್ರಜಾವಾಣಿ ಸಹಸಂಪಾದಕ ಬಿ.ಎಂ. ಹನೀಫ್ ಸಂವಾದ ನಡೆಸಿಕೊಟ್ಟರು. ಚಿನ್ಮಯಿ ಅವರ ‘ಕೇಳಯ್ಯಾ ಕ್ವಾಟೆ ಲಿಂಗವೇ...’ ಹಾಡಿನೊಂದಿಗೆ ಗೋಷ್ಠಿಗೆ ತೆರೆ ಬಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.