ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಟರಾಯನಪುರ | ಭೂಮಿ ಕಬಳಿಕೆ: ತನಿಖೆಗೆ ಯತ್ನಾಳ ಒತ್ತಾಯ

Published 21 ಜೂನ್ 2024, 15:50 IST
Last Updated 21 ಜೂನ್ 2024, 15:50 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಾಲ ಹೋಬಳಿ ಕಟ್ಟಿಗೇನಹಳ್ಳಿ ಸರ್ವೇ ನಂ 28ರಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಕಂದಾಯ ಇಲಾಖೆ ಅಧಿಕಾರಿಗಳ ಜತೆ ಸೇರಿ 13 ಎಕರೆ ಕಂದಾಯ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಆನಂದಯ್ಯ ಎಂಬುವರಿಗೆ ಹಸ್ತಾಂತರಿಸಿರುವ ಪ್ರಕರಣದ ಕುರಿತು ಎಫ್‌ಐಆರ್‌ ದಾಖಲಿಸಿ, ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ರ ಬರೆದಿದ್ದಾರೆ.

ಈ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಮೀಸಲಿಡಲಾಗಿತ್ತು. ಕರ್ನಾಟಕ ಭೂಕಂದಾಯ ಕಾಯ್ದೆ 17(1) ರ ಅನ್ವಯ 13 ಎಕರೆ 7 ಗುಂಟೆ ಭೂಮಿಯನ್ನು ಸರ್ಕಾರಿ ಆಸ್ಪತ್ರೆ, ಶಾಲೆ, ಸ್ಮಶಾನ, ಆಟದ ಮೈದಾನ ಇತ್ಯಾದಿಗಳಿಗೆ ಬಳಸಬೇಕಾಗಿತ್ತು ಎಂದು ಹೇಳಿದ್ದಾರೆ.

2023 ರ ಜನವರಿ 21ರಂದು ಅಂದಿನ ಪ್ರಾದೇಶಿಕ ಆಯುಕ್ತರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಈ ಸಂಬಂಧ ವಿಸ್ತೃತ  ವರದಿಯೊಂದನ್ನು ಸಲ್ಲಿಸಿ, ಭೂಕಬಳಿಕೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದರು. ವರದಿಯನ್ನು ಆಧರಿಸಿ ಕಂದಾಯ ಇಲಾಖೆಯ ಪ್ರಧಾನಿ ಕಾರ್ಯದರ್ಶಿಯವರು ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದರ ಜತೆಗೆ ಶಿಸ್ತು ಕ್ರಮವನ್ನೂ ತೆಗೆದುಕೊಳ್ಳಬೇಕು ಎಂದು ಟಿಪ್ಪಣಿ ಬರೆದಿದ್ದರು ಎಂದು ಪಾಟೀಲ ಹೇಳಿದ್ದಾರೆ.

ಕಂದಾಯ ಇಲಾಖೆ ಪ್ರಧಾನಕಾರ್ಯದರ್ಶಿ 2024ರ ಜನವರಿಯಲ್ಲಿ ಬೆಂಗಳೂರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಕಂದಾಯ ಇಲಾಖೆಯ 15 ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿ ಕಳೆದ 6 ತಿಂಗಳಿಂದ ಯಾವುದೇ ಕ್ರಮ ತೆಗೆದುಕೊಳ್ಳದೇ ಸುಮ್ಮನೆ ಕೂತಿದ್ದಾರೆ. ರಾಜಕೀಯ ಒತ್ತಡದ ಕಾರಣಕ್ಕಾಗಿ ಜಿಲ್ಲಾಧಿಕಾರಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸುವುದರ ಜತೆಗೆ ಖಾಸಗಿ ವ್ಯಕ್ತಿ ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಲೋಕಾಯುಕ್ತರನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT