ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಸೆಂಬರ್‌ಗೆ ಹೊಸ ಜವಳಿ ನೀತಿ ಜಾರಿ: ಶಿವಾನಂದ ಪಾಟೀಲ

ಸಕ್ಕರೆ ನೀತಿಯೂ ಅಂತಿಮ ಹಂತಕ್ಕೆ
Published : 6 ಸೆಪ್ಟೆಂಬರ್ 2024, 23:30 IST
Last Updated : 6 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್‌ನಿಂದ ಹೊಸ ಜವಳಿ ನೀತಿ ಜಾರಿಯಾಗಲಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಐದು ವರ್ಷಗಳಿಗೆ ಒಮ್ಮೆ ಜವಳಿ ನೀತಿ ರೂಪಿಸಲಾಗುತ್ತದೆ. ಈಗಿರುವ ನೀತಿಯು ನ. 24 ಕ್ಕೆ ಕೊನೆಯಾಗಲಿದೆ. ಅದಕ್ಕಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಅಕ್ಟೋಬರ್‌ ಒಳಗೆ ಹೊಸ ನೀತಿ ಸಿದ್ಧಪಡಿಸಲಿದೆ. ನಂತರ ನೀತಿಯ ವಿವರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸಕ್ಕರೆ ನೀತಿ ರೂಪಿಸಲು ಹಿಂದಿನ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್‌ ಡಿಸೋಜ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಸ್ತುತ ಜಾರಿಯಲ್ಲಿರುವ ನೀತಿಗಳನ್ನು ಪರಿಶೀಲಿಸಿ, ರಾಜ್ಯಕ್ಕೆ ಅಗತ್ಯವಾದ ನೀತಿ ರೂಪಿಸುತ್ತಿದೆ. ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಅಗತ್ಯವಾದ ನಿಯಮಗಳು, ಕಬ್ಬು ಬಳಕೆ, ದರ ನಿಗದಿ ಮತ್ತಿತರ ವಿವರಗಳನ್ನು ನೀತಿ ಒಳಗೊಂಡಿರುತ್ತದೆ ಎಂದರು. 

ಸಬ್ಸಿಡಿ ಮಿತಿ ರದ್ದು: ರಾಜ್ಯ ಸರ್ಕಾರ ವಿದ್ಯುತ್‌ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳ ವಿದ್ಯುತ್‌ ಸಬ್ಸಿಡಿಗೆ ಇದ್ದ ಮಿತಿಯನ್ನು ರದ್ದುಪಡಿಸಿದೆ. ಇದರಿಂದ ಪ್ರತಿ ನೇಕಾರರಿಗೆ ವಾರ್ಷಿಕ ಕನಿಷ್ಠ ₹40 ಸಾವಿರ ಉಳಿತಾಯವಾಗಲಿದೆ. ಮೊದಲು ಒಂದರಿಂದ 10 ಎಚ್‌.ಪಿವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿತ್ತು. 10 ಎಚ್‌.ಪಿ ನಂತರ ತಿಂಗಳಿಗೆ ಎಷ್ಟೇ ವಿದ್ಯುತ್‌ ಬಳಕೆ ಮಾಡಿದರೂ ಪ್ರತಿ ಯೂನಿಟ್‌ಗೆ ₹1.25 ಮಾತ್ರ ಪಾವತಿಸಬೇಕು. ಸರ್ಕಾರದ ಈ ನಿರ್ಧಾರದಿಂದ ನಾಲ್ಕು ಸಾವಿರ ಘಟಕಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಎಪಿಎಂಸಿ: ₹400 ಕೋಟಿ ಆದಾಯ ನಿರೀಕ್ಷೆ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಗೆ ಹಿಂದಿನ ಸರ್ಕಾರ ತಂದಿದ್ದ ತಿದ್ದುಪಡಿ ರದ್ದು ಮಾಡಿದ ನಂತರ ರಾಜ್ಯದ ಎಲ್ಲ ಎಪಿಎಂಸಿಗಳೂ ಲಾಭದತ್ತ ಸಾಗಿವೆ. ಪ್ರಸಕ್ತ ವರ್ಷ ₹400 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಎಪಿಎಂಸಿ ಕಾಯ್ದೆ ಮರುಸ್ಥಾಪನೆ ನಂತರ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಕಳೆದ ವರ್ಷ ₹77.42 ಕೋಟಿ ಆದಾಯ ಸಂಗ್ರಹವಾಗಿತ್ತು. ಮಾರುಕಟ್ಟೆಗಳು ಮತ್ತೆ ಬಲವರ್ಧನೆಯಾಗುತ್ತಿದ್ದು ಆದಾಯದಲ್ಲೂ ಗಣನೀಯ ಏರಿಕೆಯಾಗುತ್ತಿದೆ ಎಂದರು.

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕಕಾಲಕ್ಕೆ  ಬೆಂಬಲ ಬೆಲೆ ಯೋಜನೆ ಅಡಿ ನಾಲ್ಕು ಬೆಳೆಗಳನ್ನು ಖರೀದಿ ಮಾಡಲಾಗುತ್ತಿದೆ. ಹೆಸರುಕಾಳು ಸೂರ್ಯಕಾಂತಿ ಸೋಯಾಬಿನ್‌ ಮತ್ತು ಉದ್ದಿನಕಾಳನ್ನು ಬೆಂಬಲ ಬೆಲೆ ಯೋಜನೆ ಅಡಿ ಸೆ.5 ರಿಂದಲೇ ಖರೀದಿಸಲು ಆದೇಶ ಹೊರಡಿಸಲಾಗಿದೆ ಎಂದರು.

ಈಗಾಗಲೇ ಹೆಸರುಕಾಳು ಸೂರ್ಯಕಾಂತಿ ಖರೀದಿಗೆ ಏಜನ್ಸಿ ನೇಮಕ ಮಾಡಿದೆ. ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್‌ ಸೂರ್ಯಕಾಂತಿ ಮತ್ತು 10 ಕ್ವಿಂಟಲ್‌ ಹೆಸರುಕಾಳು ಖರೀದಿ ಮಾಡಲಿದೆ. ಹೆಸರುಕಾಳು ಖರೀದಿಗೆ 172 ಖರೀದಿ ಕೇಂದ್ರ ಗುರುತಿಸಲಾಗಿದೆ. 1982 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಸೂರ್ಯಕಾಂತಿ ಖರೀದಿಗೆ 19 ಖರೀದಿ ಕೇಂದ್ರ ಗುರುತಿಸಲಾಗಿದೆ. 461 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು 10 ಲಕ್ಷ ಕ್ವಿಂಟಲ್‌ ಸೋಯಾಬಿನ್‌ ಮತ್ತು ಎರಡು ಲಕ್ಷ ಕ್ವಿಂಟಲ್‌ ಉದ್ದಿನಕಾಳು ಖರೀದಿ ಮಾಡಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT