ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

MUDA Scam | ದಲಿತರ ಮೀಸಲಿಟ್ಟ ನಿವೇಶನ ಬೇಕಾಬಿಟ್ಟಿ ಹಂಚಿಕೆ: ವಿಜಯೇಂದ್ರ ಆರೋಪ

ಸಿಎಂ ಪತ್ನಿಯಿಂದ ಮುಡಾ ಜಮೀನು ಖರೀದಿ?
Published 10 ಜುಲೈ 2024, 11:21 IST
Last Updated 10 ಜುಲೈ 2024, 11:21 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಉಲ್ಲಂಘಿಸಿರುವುದು ಮಾತ್ರವಲ್ಲದೇ, ತಪ್ಪು ಮಾಹಿತಿ ನೀಡಿ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಅದಕ್ಕೆ ಪೂರಕ ದಾಖಲೆಗಳನ್ನೂ ಬಿಡುಗಡೆ ಮಾಡಿದರು. ‘ಬಡವರು, ದಲಿತರು, ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ನಿವೇಶನಗಳನ್ನು ತಮಗೆ ಬೇಕಾದಂತೆ ಹಂಚಿದ್ದಾರೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

1992ರಲ್ಲಿ ಭೂಸ್ವಾದೀನ ಆರಂಭವಾಗಿತ್ತು. ಆದರೆ, 2004ರಲ್ಲಿ ಮುಖ್ಯಮಂತ್ರಿಯವರ ಪತ್ನಿ ಪಾರ್ವತಮ್ಮ ಅವರ ಅಣ್ಣ ಮಲ್ಲಿಕಾರ್ಜುಸ್ವಾಮಿ ಜಮೀನು ಖರೀದಿ ಮಾಡಿದ್ದಾರೆ. ಮುಡಾ ಸ್ವಾಧೀನದಲ್ಲಿದ್ದ ಜಾಗವನ್ನೇ ಅವರು ಖರೀದಿ ಮಾಡಿದ್ದು ಹೇಗೆ? 2009–10 ರಲ್ಲಿ ದಾನ ಪತ್ರ (ಗಿಫ್ಟ್‌ ಡೀಡ್‌) ನೀಡಿದಾಗಲೂ ಈ ಜಾಗವು ಮುಡಾ ಪಹಣಿ (ಆರ್‌ಟಿಸಿ)ಯಲ್ಲಿ ನಮೂದಾಗಿತ್ತು. ಭೂಮಿ ಖರೀದಿ ಆಗಿ ಭೂಪರಿವರ್ತನೆಯೂ ಆಗಿಲ್ಲ. ದಾನಪತ್ರ ಎಂದು ಮಾಹಿತಿ ಕೊಡುವ ಸಂದರ್ಭದಲ್ಲೂ ಕೃಷಿ ಭೂಮಿ ಆಗಿರಲಿಲ್ಲ. ಆದರೆ, ಸಿದ್ದರಾಮಯ್ಯ ಈ ಕುರಿತು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

2ರ ಬದಲು 14 ನಿವೇಶನ ಹಂಚಿಕೆ?:

‘2022ರ ಜನವರಿ 12ರಂದು ಕ್ರಯ ಪತ್ರ ಆಗಿದೆ. ಗಮನಿಸಬೇಕಾದ ಅಂಶವೆಂದರೆ ಮುಡಾ ಪ್ರೋತ್ಸಾಹದಾಯಕ ಯೋಜನೆಯಡಿ ನಿಯಮ 1991ರ ಮೇರೆಗೆ ಎಂದು ಉಲ್ಲೇಖಿಸಿ 14 ನಿವೇಶನಗಳನ್ನು ಕೊಟ್ಟಿದ್ದಾರೆ. ಇದು ಕ್ರಯಪತ್ರದಲ್ಲಿ ಉಲ್ಲೇಖವಾಗಿದೆ. ಆದರೆ, 1991ರ ಕಾನೂನು ಪ್ರಕಾರ 1 ಎಕರೆ ಮೀರಿದ ಜಮೀನಿಗೆ 40x60ರ ಒಂದೇ ನಿವೇಶನ ಕೊಡಬೇಕಿತ್ತು. ಆ ಪ್ರಕಾರ ಮುಖ್ಯಮಂತ್ರಿ ಪತ್ನಿಗೆ ಎರಡು ನಿವೇಶನ ಮಾತ್ರ ಕೊಡಬೇಕಿತ್ತು. ಆದರೆ, ಎರಡರ ಬದಲಿಗೆ 14 ನಿವೇಶನಗಳನ್ನು ನೀಡಿರುವುದು ಕಾನೂನು ಬಾಹಿರ’ ಎಂದು ವಿಜಯೇಂದ್ರ ಹೇಳಿದರು.

ತಮ್ಮ ಅವಧಿಯಲ್ಲೇ ಅವ್ಯವಹಾರ ನಡೆಸಿ, ತಾವೇ ಪರಿಹಾರ ಕೇಳಿರುವ ಮೊದಲ ಮುಖ್ಯಮಂತ್ರಿ ಇವರು. ಮೈಸೂರಿನ ಕೆಸರೇ ಗ್ರಾಮದ 3.16 ಎಕರೆ ಜಮೀನಿಗೆ ಬದಲಾಗಿ ತಮ್ಮ ಪತ್ನಿಗೆ 14 ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ, ಮುಖ್ಯಮಂತ್ರಿಯವರು 2013 ರ ಚುನಾವಣಾ ಪ್ರಮಾಣಪತ್ರದಲ್ಲಿ 3.16 ಎಕರೆ ಭೂಮಿಯನ್ನು ಉಲ್ಲೇಖಿಸಿಲ್ಲ. ಇದು ಚುನಾವಣಾ ನಿಯಮಗಳ ಉಲ್ಲಂಘನೆ. ಇದೆಲ್ಲವನ್ನೂ ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗುವುದು ಎಂದರು.

ಈ ಹಗರಣವನ್ನು ಮುಚ್ಚಿ ಹಾಕಲು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತರಾತುರಿಯಲ್ಲಿ ಓಡಿ ಹೋಗಿ ಮುಡಾ ಅಧಿಕಾರಿಗಳ ಸಭೆ ಮಾಡಿ, ಸಭೆಯಲ್ಲಿ ಎಲ್ಲ ಅಧಿಕಾರಿಗಳನ್ನು ಏಕಾಏಕಿ ವರ್ಗಾವಣೆ ಮಾಡಿದ್ದಾರೆ ಎಂದರು.

₹5 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ. ಹಗರಣದಲ್ಲಿ ಒಳಗೊಂಡವರನ್ನು ಶಿಕ್ಷಿಸುವುದನ್ನು ತಪ್ಪಿಸಲು ಮತ್ತು ರಕ್ಷಿಸಲು ಭೈರತಿ ಸುರೇಶ್‌ ಮುಂದಾಗಿದ್ದಾರೆ. ಮುಡಾ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿ ವರದಿ ಕೊಟ್ಟ ಜಿಲ್ಲಾಧಿಕಾರಿಯನ್ನೂ ತರಾತುರಿಯಲ್ಲಿ ವರ್ಗಾವಣೆ ಮಾಡಿದ್ದಾರೆ ಎಂದು ವಿಜಯೇಂದ್ರ ಆಕ್ಷೇಪಿಸಿದರು.

ಈ ಹಗರಣವನ್ನು ಮುಚ್ಚಿ ಹಾಕುವ ಉದ್ದೇಶದಿಂದ ಎಲ್ಲ ಕಡತಗಳನ್ನೂ ಭೈರತಿ ಸುರೇಶ್‌ ಬೆಂಗಳೂರಿಗೆ ತಂದಿದ್ದಾರೆ. ಮೈಸೂರಿನ ದೇವನೂರು ಜಮೀನಿನ ಬೆಲೆ ಬಗ್ಗೆ ಮುಖ್ಯಮಂತ್ರಿ ಮಾತನಾಡುತ್ತಾರೆ. ಅಲ್ಲಿನ ಮಾರ್ಗಸೂಚಿ ದರ ₹1300 ಇದ್ದರೆ, ಮಾರುಕಟ್ಟೆ ಮೌಲ್ಯ ₹9000 ಇದೆ. ಮುಖ್ಯಮಂತ್ರಿ ಎರಡು ನಿವೇಶನಗಳಿಗೆ ಮಾತ್ರ ಅರ್ಹರಾಗಿದ್ದರು ಎಂದು ಅವರು ಹೇಳಿದರು.

ಈಗಾಗಲೇ ನಡೆದ ನಿವೇಶನ ಹಂಚಿಕೆಯನ್ನು ರದ್ದು ಮಾಡಬೇಕು. ಮುಖ್ಯಮಂತ್ರಿ ಮತ್ತು ಅವರ ಪತ್ನಿ ಮೇಲೆ ಆರೋಪ ಇರುವ ಕಾರಣ ಮತ್ತೊಂದು ಎಸ್‌ಐಟಿ ಮಾಡಿ ನಡೆಸುವುದು ಸೂಕ್ತವಲ್ಲ. ಈ ಹಗರಣದ ತನಿಖೆಯನ್ನು ತಕ್ಷಣವೇ ಸಿಬಿಐ ಕೊಡಬೇಕು ಎಂದು ಆಗ್ರಹಿಸಿದರು.

ಮುಡಾ ನಿವೇಶನ ಹಗರಣವನ್ನು ವಿರೋಧಿಸಿ ಇದೇ 12 ರಂದು ಬಿಜೆಪಿ ವತಿಯಿಂದ ಮೈಸೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ವಿಜಯೇಂದ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT