ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಿನ ಪ್ರಮಾಣ ಏರಿಕೆ: ನದಿ ತೀರದ ಗ್ರಾಮಗಳಲ್ಲಿ ಆತಂಕ

ತುಂಗಭದ್ರಾ: 28 ಕ್ರಸ್ಟ್‌ಗೇಟ್‌ಗಳಿಂದ ನೀರು ಹೊರಕ್ಕೆ
Published 25 ಜುಲೈ 2024, 20:35 IST
Last Updated 26 ಜುಲೈ 2024, 2:43 IST
ಅಕ್ಷರ ಗಾತ್ರ

ಬೆಳಗಾವಿ/ವಿಜಯಪುರ/ಹೊಸಪೇಟೆ (ವಿಜಯನಗರ)/ಬಾಗಲಕೋಟೆ/ಹಾವೇರಿ: ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಆಗುತ್ತಿದೆ. ಇದರಿಂದ ಕೃಷ್ಣಾ ನದಿಗೆ ಗುರುವಾರ ಸಂಜೆಯವರೆಗೆ 1.98 ಲಕ್ಷ ಕ್ಯುಸೆಕ್‌ ನೀರು ಹರಿದಿದೆ. ಶುಕ್ರವಾರ ನಸುಕಿನವರೆಗೆ ಇದರ ಪ್ರಮಾಣ 2.50 ಲಕ್ಷ ಕ್ಯುಸೆಕ್‌ ಏರುವ ಸಾಧ್ಯತೆ ಇದ್ದು, ನದಿ ತೀರದ ಗ್ರಾಮಗಳಲ್ಲಿ ಆತಂಕ ಮೂಡಿದೆ.

‘ಮಹಾರಾಷ್ಟ್ರದಿಂದ 3 ಲಕ್ಷ ಕ್ಯುಸೆಕ್‌ ನೀರು ಹರಿಸಿದರೆ, ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುತ್ತದೆ. ಸದ್ಯಕ್ಕೆ ಆತಂಕವಿಲ್ಲ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಸ್ಪಷ್ಟಪಡಿಸಿದ್ದಾರೆ. ಆದರೆ, 2.50 ಲಕ್ಷ ಕ್ಯುಸೆಕ್‌ ನೀರನ್ನು ರಾತ್ರಿಯಿಂದ ಹರಿಸುವುದಾಗಿ ಮಹಾರಾಷ್ಟ್ರದ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ಗುರುವಾರ ಸಂಜೆಯರೆಗೆ ಕೊಯ್ನಾ ಜಲಾಶಯದಿಂದ 21 ಸಾವಿರ ಕ್ಯುಸೆಕ್‌, ರಾಧಾನಗರಿ ಅಣೆಕಟ್ಟೆಯಿಂದ 7 ಸಾವಿರ ಮತ್ತು ವಾರಣಾದಿಂದ 8 ಸಾವಿರ ಕ್ಯುಸೆಕ್‌ ನೀರು ಬಿಡಲಾಗಿದೆ. ಎಲ್ಲವೂ ರಾಜಾಪುರ ಬ್ಯಾರೇಜ್‌ ಸೇರಿ ಅಲ್ಲಿಂದ 1.62 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ದೂಧಗಂಗಾ ನದಿಯಿಂದ 36,600 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಒಟ್ಟಾರೆ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್‌ನಲ್ಲಿ 1.98 ಲಕ್ಷ ಕ್ಯುಸೆಕ್‌ ನಿರಂತರ ಹರಿಯುತ್ತಿದೆ.

ಬೆಳಗಾವಿ ನಗರವೂ ಸೇರಿ ಚಿಕ್ಕೋಡಿ, ಖಾನಾಪುರ ತಾಲ್ಲೂಕುಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಎರಡು ದಿನಗಳ ಹಿಂದೆ ಮುಳುಗಡೆಯಾದ 24 ಸೇತುವೆಗಳ ಮೇಲೆ ನೀರಿನ ಪ್ರಮಾಣ ಯಥಾಸ್ಥಿತಿ ಇದೆ.

3 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ:

ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಅಪಾರ ಪ್ರಮಾಣದ ನೀರು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರ ಸಂಜೆಯಿಂದ 3 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ.

ಜಲಾಶಯದ ಎಲ್ಲಾ 26 ಗೇಟ್‌ಗಳನ್ನು 1.5 ಮೀಟರ್‌ ಎತ್ತರಿಸಿ ನದಿಗೆ ನೀರು ಹರಿ ಬಿಡಲಾಗುತ್ತಿದೆ. ಸಂಜೆ 6ಕ್ಕೆ ಜಲಾಶಯಕ್ಕೆ 1,98,333 ಕ್ಯುಸೆಕ್ ಒಳಹರಿವು ಇದೆ. 123 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 88 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಹಂಪಿ: ಹಲವು ಮಂಟಪಗಳು ಮುಳುಗಡೆ

ಹಂಪಿಯಲ್ಲಿ ತುಂಗಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಸ್ನಾನಘಟ್ಟದ ಅನುಷ್ಠಾನ ಮಂಟಪ, ಯಜ್ಞೋಪವೀತ ಮಂಟಪ, ತುಂಗಾರತಿ ಮಂಟಪಗಳೆಲ್ಲ ಮುಳುಗಿವೆ. ವಿಜಯವಿಠ್ಠಲ ದೇವಸ್ಥಾನದ ಸಮೀಪದ ಪುರಂದರ ಮಂಟಪ ಸಹ ಬಹುತೇಕ ಮುಳುಗಿದೆ.

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಏರಿಕೆ ಆಗಿರುವುದರಿಂದ ಗುರುವಾರ ರಾತ್ರಿ  ಅಣೆಕಟ್ಟೆಯ 30 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಹರಿಸಲಾಗಿದ್ದು, ಇನ್ನಷ್ಟು ಒಳಹರಿವು ಹೆಚ್ಚಿದಲ್ಲಿ ಎಲ್ಲಾ 33 ಗೇಟ್‌ಗಳನ್ನು ತೆರೆಯುವ ಸಾಧ್ಯತೆಯಿದೆ. ಹೀಗಾಗಿ ನದಿ ಪಾತ್ರದ ಜನ ಎಚ್ಚರದಿಂದ ಇರಬೇಕು ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯ ಇದೀಗ ಬಹುತೇಕ ಭರ್ತಿಯಾಗಿದ್ದು,  105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 102.57 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.ಅಣೆಕಟ್ಟೆ ಭರ್ತಿಗೆ ಅರ್ಧ ಅಡಿಯಷ್ಟೇ ಬಾಕಿ ಇದೆ.

ನಡುಗಡ್ಡೆಯಾದ ಮುತ್ತೂರು ಗ್ರಾಮ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮುತ್ತೂರು ಗ್ರಾಮದ ನಡುಗಡ್ಡೆ ಸುತ್ತಲು ಕೃಷ್ಣಾ ನದಿ ನೀರು ತುಂಬಿದ್ದು ಜನರು ಪರದಾಡುವಂತಾಗಿದೆ. 200 ಎಕರೆಗೂ ಅಧಿಕ ಸ್ಥಳದಲ್ಲಿ 60 ರಿಂದ 70 ಕುಟುಂಬಗಳು ವಾಸ ಇವೆ. ಕೆಲ ಮನೆಗಳಿಗೆ ನೀರು ಹೊಕ್ಕಿದ್ದು, ಜನರು ಜಾನುವಾರುಗಳ ಸಮೇತ ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ‘ಪ್ರತಿ ವರ್ಷದ ಈ ಸಮಸ್ಯೆ ಎದುರಾಗುತ್ತಿದ್ದು ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಮೀನು ಜಲಾವೃತ–ಮನೆಗಳು ಹಾನಿ

ಹಾವೇರಿ ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ ಹಾಗೂ ತುಂಗಭದ್ರಾ ನದಿ ನೀರಿನಿಂದ 4,046 ಹೆಕ್ಟೇರ್‌ ಜಮೀನು ಜಲಾವೃತಗೊಂಡಿದ್ದು, ನಿರಂತರ ಮಳೆಯಿಂದ 730 ಮನೆಗಳಿಗೆ ಹಾನಿಯಾಗಿದೆ.

‘4,339 ರೈತರಿಗೆ ಸೇರಿದ್ದ ಜಮೀನಿನಲ್ಲಿ ನೀರು ನಿಂತಿದೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆ ಜಲಾವೃತಗೊಂಡಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಧರ್ಮಾ ಜಲಾಶಯ:ಪ್ರವಾಸಿಗರಿಗೆ ನಿರ್ಬಂಧ

ಮುಂಡಗೋಡ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಮಳಗಿ ಸಮೀಪದ ಧರ್ಮಾ ಜಲಾಶಯವು ಭರ್ತಿಯಾಗಿ ಕೋಡಿ ಬಿದ್ದಿದೆ. ಸಾರ್ವಜನಿಕರ ಪ್ರವೇಶವನ್ನು ತಾಲ್ಲೂಕು ಆಡಳಿತ ನಿರ್ಬಂಧಿಸಿದೆ.

ಕೊಚ್ಚಿ ಹೋದ ಯುವಕನ ಶವ ಪತ್ತೆ: ಧರ್ಮಾ ಜಲಾಶಯದಲ್ಲಿ ಬುಧವಾರ ನೀರಿನ ಸೆಳೆತಕ್ಕೆ ಸಿಲುಕಿ ಕಾಣೆಯಾಗಿದ್ದ ತಾಲ್ಲೂಕಿನ ಮುಡಸಾಲಿ ಗ್ರಾಮದ ಶ್ರೀನಾಥ ಹರಿಜನ (20) ಅವರ ಮೃತದೇಹವು ಕೋಡಿ ಬಿದ್ದ ಹಿನ್ನೀರಿನ ನೂರಾರು ಮೀಟರ್‌ ಅಂತರದಲ್ಲಿ ಗುರುವಾರ ಪತ್ತೆಯಾಗಿದೆ.

ನದಿಯಿಂದ ನೀರು: ಗಡ್ಡೆಗಳಿಗೆ ಸಂಪರ್ಕ ಕಡಿತ

ಗಂಗಾವತಿ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯದಿಂದ ಗುರುವಾರ 28 ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗಿದ್ದು, ತಾಲ್ಲೂಕಿನ ವಿರೂಪಾಪುರ ಗಡ್ಡೆ ಮತ್ತು ನವವೃಂದಾವನ ಗಡ್ಡೆಗೆ ಸಂಪರ್ಕ ಕಡಿತವಾಗಿದೆ.

ಆನೆಗೊಂದಿ ಗ್ರಾಮದ ಬಳಿ ನದಿಯಲ್ಲಿರುವ ಕೃಷ್ಣದೇವರಾಯರ ಸಮಾಧಿಯ 64 ಸಾಲಿನ ಮಂಟಪ ಮುಳುಗಡೆಯಾಗುವ ಸ್ಥಿತಿ ತಲುಪಿದೆ. ಆದ್ದರಿಂದ ತಾಲ್ಲೂಕು ಆಡಳಿತ ನದಿಪಾತ್ರಕ್ಕೆ ಜನರಿಗೆ ನದಿ ಪ್ರದೇಶಕ್ಕೆ ತೆರಳಬಾರದು ಎಂದು ಕಟ್ಟೆಚ್ಚರ ನೀಡಿದ್ದು, ಪೊಲೀಸ್‌ ಬಂದೋಬಸ್ತ್‌ ಮಾಡಿದೆ. ಆದರೂ ಯುವಕರು ಅಪಾಯ ಲೆಕ್ಕಸದೇ ಸೆಲ್ಫಿ ತೆಗೆದುಕೊಳ್ಳುವಲ್ಲಿ ತಲ್ಲೀನರಾಗಿದ್ದರು. 

ಕೃಷ್ಣಾ ನದಿಗೆ ಪ್ರವಾಹ ಬಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮೂರು ಗ್ರಾಮಗಳು ಜಲಾವೃತಗೊಂಡಿವೆ. ನದಿ ಪಾತ್ರದ ಹೊಲಗಳಿಗೆ ಪ್ರವಾಹದ ನೀರು ನುಗ್ಗಿದೆ.

ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದಗಣಿ ಸಮೀಪದ ಟಣಮಕಲ್ಲು ಸೇತುವೆಗೆ ನೀರು ಬಡಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಮುಳುಗುವ ಭೀತಿ ಎದುರಗಾಗಿದೆ.

ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಮತ್ತಿತರ ನದಿಪಾತ್ರದ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸಂಭವನೀಯ ನೆರೆ ಹಾವಳಿಗೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪರಿಶೀಲಿಸಿದರು.

ಪ್ರವಾಹ ಭೀತಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಆಲಮಟ್ಟಿಯಿಂದ ಒಳಹರಿವು ಹೆಚ್ಚಿದ್ದು, ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಸದ್ಯ 25 ಗೇಟು ತೆಗೆದು 2.50 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಪ್ರಸಿದ್ದ ಯಾತ್ರಾ ಸ್ಥಳ ಛಾಯಾ ಭಗವತಿ ದೇವಸ್ಥಾನದ ಮೆಟ್ಟಿಲು ಬಳಿ ಪ್ರವಾಹದ ನೀರು ಹರಿಯುತ್ತಿದೆ‌.

ಶಹಾಪುರ ತಾಲ್ಲೂಕಿನ ಕೊಳ್ಳೂರು ಎಂ ಗ್ರಾಮದ ಯಾದಗಿರಿ–ರಾಯಚೂರು–ಕಲಬುರಗಿ ಸಂಪರ್ಕ ಸೇತುವೆ ಕಡಿತಗೊಳ್ಳುವ ಸ್ಥಿತಿ ಎದುರಾಗಿದ್ದು, ಸುಮಾರು 90 ಕಿ.ಮೀ ಸುತ್ತುವರಿದು ಸಂಚರಿಸಬೇಕಾಗುತ್ತದೆ. 

ಕೃಷ್ಣಾ ನದಿ ಜೊತೆಗೆ ಭೀಮಾ ನದಿಯಲ್ಲೂ ಒಳಹರಿವು ಹೆಚ್ಚಿದ್ದರಿಂದ ಹೊರ ಹರಿವು ಹೆಚ್ಚಿಸಲಾಗಿದೆ. ಗುರುಸಣಗಿ ಬ್ರಿಜ್ ಕಂ ಬ್ಯಾರೇಜ್‌ನಿಂದ 3 ಸಾವಿರ ಕ್ಯುಸೆಕ್ ನೀರು ಭೀಮಾ ನದಿಗೆ ಹರಿಸಲಾಗುತ್ತಿದೆ.

ಬೀದರ್‌ ಜಿಲ್ಲೆಯಲ್ಲಿ ಸತತ ಆರನೇ ದಿನವೂ ಜಿಟಿಜಿಟಿ ಮಳೆ ಮುಂದುವರಿದಿದ್ದು, ಮಳೆಗೆ ಗುರುವಾರ 13 ಮನೆಗಳಿಗೆ ಹಾನಿಯಾಗಿದೆ. ಕಲಬುರಗಿ ಜಿಲ್ಲೆಯಲ್ಲೂ ದಿನವಿಡೀ ಜಿಟಿ ಜಿಟಿ ಮಳೆ ಸುರಿಯಿತು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಮೀಪದ ಮುತ್ತೂರ ನಡುಗಡ್ಡೆಯಲ್ಲಿನ ರೈತರು ಗುರುವಾರ ಡೇರಿಗೆ ಹಾಲು ಹಾಕಲು  ನದಿಯಲ್ಲೇ ತುಬಚಿ ಗ್ರಾಮಕ್ಕೆ ಹೋಗುತ್ತಿರುವುದು
–ಪ್ರಜಾವಾಣಿ ಚಿತ್ರ/ಆರ್‌.ಎಸ್‌. ಹೊನಗೌಡ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಮೀಪದ ಮುತ್ತೂರ ನಡುಗಡ್ಡೆಯಲ್ಲಿನ ರೈತರು ಗುರುವಾರ ಡೇರಿಗೆ ಹಾಲು ಹಾಕಲು  ನದಿಯಲ್ಲೇ ತುಬಚಿ ಗ್ರಾಮಕ್ಕೆ ಹೋಗುತ್ತಿರುವುದು –ಪ್ರಜಾವಾಣಿ ಚಿತ್ರ/ಆರ್‌.ಎಸ್‌. ಹೊನಗೌಡ
ಹೊಸಪೇಟೆ ಸಮೀಪದ ತುಂಗಭದ್ರಾ ಅಣೆಕಟ್ಟೆಯಿಂದ ಗುರುವಾರ ಸಂಜೆ 28 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ಹೊರಕ್ಕೆ ಬಿಡಲಾಯಿತು –ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆ ಸಮೀಪದ ತುಂಗಭದ್ರಾ ಅಣೆಕಟ್ಟೆಯಿಂದ ಗುರುವಾರ ಸಂಜೆ 28 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ಹೊರಕ್ಕೆ ಬಿಡಲಾಯಿತು –ಪ್ರಜಾವಾಣಿ ಚಿತ್ರ/ ಲವ ಕೆ.
ಬಳ್ಳಾರಿ ಜಿಲ್ಲೆ ಕಂಪ್ಲಿ ಕೋಟೆ ಬಳಿ ಹರಿಯುವ ತುಂಗಭದ್ರಾನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು ಗುರುವಾರ ಸಂಜೆ ಸೇತುವೆಗೆ ಕೆಲವೇ ಅಡಿಗಳ ಅಂತರದಲ್ಲಿ ನೀರು ಹರಿಯುತ್ತಿರುವುದು
–ಪ್ರಜಾವಾಣಿ ಚಿತ್ರ
ಬಳ್ಳಾರಿ ಜಿಲ್ಲೆ ಕಂಪ್ಲಿ ಕೋಟೆ ಬಳಿ ಹರಿಯುವ ತುಂಗಭದ್ರಾನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು ಗುರುವಾರ ಸಂಜೆ ಸೇತುವೆಗೆ ಕೆಲವೇ ಅಡಿಗಳ ಅಂತರದಲ್ಲಿ ನೀರು ಹರಿಯುತ್ತಿರುವುದು –ಪ್ರಜಾವಾಣಿ ಚಿತ್ರ

ವಿಪರೀತ ಮಳೆ ಹಲವೆಡೆ ಸಂಪರ್ಕ ಕಡಿತ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ಭದ್ರಾ ನದಿ ನೀರಿನ ಹರಿವು ಹೆಚ್ಚಾಗಿದ್ದು ಕಳಸ ತಾಲ್ಲೂಕಿನ ಹೆಬ್ಬಾಳೆ ಸೇತುವೆ ನೀರಿನಲ್ಲಿ ಮುಳುಗಿದೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸಂಚಾರ ಬಂದ್ ಮಾಡಿದ್ದಾರೆ. ಕಳಸ–ಹೊರನಾಡು ಸಂಪರ್ಕ ಕಡಿತಗೊಂಡಿದೆ. ಕೊಪ್ಪ ಸಮೀಪದ ನಾರ್ವೆ ಬಳಿ ಕಳೆದ ವಾರ ಭೂಕುಸಿತ ಉಂಟಾಗಿತ್ತು. ಮಳೆಗೆ ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಕೊಪ್ಪ–ಬಾಳೆಹೊನ್ನೂರು ಸಂಚಾರ ಬಂದ್ ಮಾಡಲಾಗಿದೆ. ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗಿದೆ. ವಸ್ತಾರೆ ಮಾವಿನಹಳ್ಳಿ ಬಳಿ ಮರವೊಂದು ರಸ್ತೆಗೆ ಉರುಳಿದ್ದು ಚಿಕ್ಕಮಗಳೂರು– ಮೂಡಿಗೆರೆ ನಡುವಿನ ವಾಹನ ಸಂಚಾರ ಕೆಲಕಾಲ ಬಂದ್ ಆಗಿತ್ತು. ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಯಿತು. ‌ಹಲವೆಡೆ ಮರಗಳು ಉರುಳಿ ಮನೆಗಳಿಗೆ ಹಾನಿಯಾಗಿದೆ. ಬಾಳೆಹೊನ್ನೂರಿನಲ್ಲಿ ಗೋಶಾಲೆ ಮೇಲೆ ತೆಂಗಿನ ಮರ ಬಿದ್ದಿದೆ. ಎನ್.ಆರ್.ಪುರ ತಾಲ್ಲೂಕಿನ ಶೆಟ್ಟಿಕೊಪ್ಪದಿಂದ ನೇರಳೆಕೊಪ್ಪ ಮತ್ತು ಆಲಂದೂರು ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದೆ. ಇದೇ ವ್ಯಾಪ್ತಿಯ ಹಳ್ಳೂರು ಗದ್ದೆ ಸೇತುವೆ ಮಂಜಿನಕೊಪ್ಪ ಗ್ರಾಮದ ಸೇತುವೆಗಳೂ ಜಲಾವೃತಗೊಂಡಿವೆ. ಹಲವೆಡೆ ತೋಟ ಹಾಗೂ ಗದ್ದೆಗಳಿಗೂ ನೀರು ನುಗ್ಗಿದೆ. ಮಳೆ ಜತೆಗೆ ಬಿರುಗಾಳಿಯೂ ಜೋರಾಗಿದ್ದು ಕಾಫಿ ಫಸಲು ಉದುರುತ್ತಿದೆ. ಉಳಿದ ಕಾಫಿಗೂ ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಾದ್ಯಂತ ಗುರುವಾರ ದಿನವಿಡೀ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿದೆ. ಗಾಳಿಯ ಆರ್ಭಟಕ್ಕೆ ಅನೇಕ ಕಡೆ ಮರಗಳು ಅಡಿಕೆ ಮರಗಳು ಹಾಗೂ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಗುರುವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಟ್ರಮೆಯಲ್ಲಿ 12 ಸೆಂ.ಮೀ ಬಳಂಜ ಮತ್ತು ಮುಂಡಾಜೆ ತಲಾ 11 ಅರಸಿನಮಕ್ಕಿ ಮರೋಡಿ ಕಲ್ಮಂಜ ಚೆನ್ನೈತ್ತೋಡಿ ಮೇರಮಜಲು ಬಾಳದಲ್ಲಿ ತಲಾ 10 ಸೆಂ.ಮೀ ಮಳೆಯಾಗಿದೆ.  ಉಡುಪಿ ಜಿಲ್ಲೆಯ ಅಂಪಾರುವಿನಲ್ಲಿ 15 ಆಜ್ರಿ 14 ಕಿರಿಮಂಜೇಶ್ವರ 13 ಹಳ್ಳಿಹೊಳೆ ಚಿತ್ತೂರು ಹೇರೂರು 12 ಮೊಳಹಳ್ಳಿ ಕೋಣಿ ಬಾರ್ಕೂರು ಮತ್ತು ಕಾಲ್ತೋಡಿನಲ್ಲಿ ತಲಾ 11 ಸೆಂ.ಮೀ. ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಕಿರುಗುಂದ ಬೇಗಾರು ಬಣಕಲ್‌ಗಳಲ್ಲಿ ತಲಾ 12 ಬೆಟ್ಟೆಗೆರೆಯಲ್ಲಿ 11  ಕುತ್ತಗೋಡುವಿನಲ್ಲಿ  10 ಸೆಂ.ಮೀ ಮಳೆಯಾಗಿದೆ. ಕರಾವಳಿಯ ದಕ್ಷಿಣ ಕನ್ನಡ ಉಡುಪಿ ಹಾಗೂ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೇ 26 27 ಹಾಗೂ 28ರಂದು ಗುಡುಗು ಹಾಗೂ ಗಾಳಿಯಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ.     ಗೋಡೆ ಕುಸಿದು ಬಾಲಕ ಸಾವು (ಮಂಗಳೂರು ವರದಿ): ನಗರ ಹೊರವಲಯದ ಜೋಕಟ್ಟೆಯಲ್ಲಿ ಗಾಳಿ-ಮಳೆಗೆ ಗುರುವಾರ ಮುಂಜಾನೆ ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಮೂಲ್ಕಿ ಕೊಳ್ನಾಡು ಬಳಿಯ ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಎಂಬ ಬಾಲಕ ಮೃತಪಟ್ಟಿದ್ದಾನೆ. ಬಂಧುವೊಬ್ಬರ ಮನೆಗೆ ಬಂದಿದ್ದ ಬಾಲಕ ಅವರ ಮನೆಯಲ್ಲಿ ಮಲಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಚಕ್ರಾದಲ್ಲಿ 27.5 ಸೆಂ.ಮೀ ಮಳೆ ದಾಖಲು

ಶಿವಮೊಗ್ಗ: ಮಲೆನಾಡಿನಲ್ಲಿ ಎರಡು ದಿನ ಕೊಂಚ ತಗ್ಗಿದ್ದ ಮಳೆಯ ಆರ್ಭಟ ಗುರುವಾರ ಮತ್ತೆ ಜೋರಾಗಿದೆ. ಮಳೆ ಬಿರುಸಾಗಿದ್ದರಿಂದ ತುಂಗಾ ಭದ್ರಾ ಹಾಗೂ ಮಾಣಿ ಜಲಾಶಯಗಳ ಒಳಹರಿವು ಹೆಚ್ಚಿದೆ. ಲಿಂಗನಮಕ್ಕಿಯಲ್ಲಿ ಕೊಂಚ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಬುಧವಾರ ಸರಾಸರಿ 3.60 ಸೆಂ.ಮೀ ಸುರಿದಿದ್ದ ಮಳೆ 24 ಗಂಟೆಗಳಲ್ಲಿ 4.27 ಸೆಂ.ಮೀಗೆ ಏರಿಕೆಯಾಗಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸರಾಸರಿ 8.66 ಸೆಂ.ಮೀ ಮಳೆ ಸುರಿದಿದೆ. ಮಾಣಿ ಜಲಾನಯನ ಪ್ರದೇಶ ಹೊಸನಗರ ತಾಲ್ಲೂಕಿನ ಚಕ್ರಾದಲ್ಲಿ 27.5 ಸೆಂ.ಮೀ ದಾಖಲೆಯ ಮಳೆಯಾಗಿದೆ. ಮಾಣಿಯಲ್ಲಿ 25.30 ಸೆಂ.ಮೀ ಸಾವೇಹಕ್ಲು 23 ಸೆಂ.ಮೀ ಯಡೂರು 20.6 ಹುಲಿಕಲ್‌ 17.6 ಹಾಗೂ ಮಾಸ್ತಿಕಟ್ಟೆಯಲ್ಲಿ 17 ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ 12.2 ಸೆಂ.ಮೀ ಮಳೆ ಸುರಿದಿದೆ. ಇದರಿಂದ ಮಾಣಿ ಜಲಾಶಯಕ್ಕೆ ಒಳಹರಿವು ದುಪ್ಪಟ್ಟು ಆಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿರುವುದರಿಂದ ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯಕ್ಕೂ 24 ಗಂಟೆಗಳಲ್ಲಿ ಒಳಹರಿವು ಹೆಚ್ಚಿದೆ.  ಗಾಜನೂರು ಬಳಿಯ ತುಂಗಾ ಜಲಾಶಯದ ಒಳಹರಿವು ಏರಿಕೆಯಾಗಿದೆ. ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯದಲ್ಲಿ ಬುಧವಾರ 58619 ಕ್ಯುಸೆಕ್ ಇದ್ದ ಒಳಹರಿವು ಕೊಂಚ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT