ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಾ ಮಕ್ಕಳ ಬ್ಯಾಗ್‌ ಇನ್ನಷ್ಟು ಹಗುರ: ನೋಟ್‌ ಪುಸ್ತಕಗಳ ಭಾರ ಇಳಿಸಲು ಕ್ರಮ

Published : 1 ಆಗಸ್ಟ್ 2024, 15:55 IST
Last Updated : 1 ಆಗಸ್ಟ್ 2024, 15:55 IST
ಫಾಲೋ ಮಾಡಿ
Comments

ಬೆಂಗಳೂರು: ಮಕ್ಕಳ ಬ್ಯಾಗ್‌ ಹೊರೆ ತಗ್ಗಿಸಲು ಪ್ರತಿ ವಿಷಯದ ಪಠ್ಯಪುಸ್ತಕವನ್ನು ಎರಡು ಭಾಗವಾಗಿ ಮುದ್ರಿಸಿ, ಸೆಮಿಸ್ಟರ್‌ ರೀತಿ ಬಳಕೆ ಮಾಡಲು ಕ್ರಮ ಕೈಗೊಂಡಿದ್ದ ಶಾಲಾ ಶಿಕ್ಷಣ ಇಲಾಖೆ, ಈಗ ನೋಟ್‌ ಪುಸ್ತಕಗಳ ಸಂಖ್ಯೆಯನ್ನೂ ಕಡಿಮೆ ಮಾಡಲು ಚಿಂತನೆ ನಡೆಸಿದೆ.

ಒಂದೇ ನೋಟ್‌ ಪುಸ್ತಕದಲ್ಲಿ ಹಲವು ವಿಷಯಗಳನ್ನು ಬರೆದುಕೊಳ್ಳಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲು ನೋಟ್‌ ಪುಸ್ತಕ ಮುದ್ರಕರ ಜೊತೆ ಮಾತುಕತೆ ನಡೆಸುತ್ತಿದೆ. ಶಾಲೆಯಲ್ಲಿ ಶಿಕ್ಷಕರು ಹೇಳುವ ಪ್ರತಿ ವಿಷಯದ ಬರವಣಿಗೆಯನ್ನು ಆಯಾ ವಿಭಾಗಗಳಲ್ಲಿ ಬರೆದುಕೊಳ್ಳಬಹುದು. ಒಂದು ನೋಟ್‌ಪುಸ್ತಕದ ಹಾಳೆಗಳನ್ನು ಸುಲಭವಾಗಿ ಬೇರ್ಪಡಿಸಲು ಅನುಕೂಲವಾಗುವಂತೆ ಸಾಮಾನ್ಯ ಹಾಳೆಗಳು, ಬೈಂಡಿಂಗ್ ಹಾಗೂ ಸ್ಟೀಲ್‌ ಕ್ಲಿಪ್‌ಗಳನ್ನು ಬಳಸಿ ವಿನ್ಯಾಸಗೊಳಿಸಲಾಗುತ್ತದೆ. ಮಕ್ಕಳು ಮನೆಗೆ ತೆರಳಿದ ನಂತರ ಆಯಾ ವಿಷಯದ ನೋಟ್‌ಪುಸಕ್ತಕ್ಕೆ ಈಗಾಗಲೇ ಬರೆದುಕೊಂಡ ಹಾಳೆಗಳನ್ನು ಕ್ರಮಬದ್ಧವಾಗಿ ಜೋಡಿಸಿಕೊಳ್ಳಬಹುದು.

ಪರೀಕ್ಷೆಯ ವೇಳೆಯಲ್ಲಿ ಪ್ರತ್ಯೇಕವಾಗಿ ಸಿದ್ಧವಾದ ಆಯಾ ವಿಷಯದ ನೋಟ್‌ಪುಸ್ತಕ ಬಳಸಬಹುದು ಒಂದೇ ನೋಟ್‌ಪುಸ್ತಕವನ್ನು ಮಕ್ಕಳು ಪ್ರತಿದಿನ ಶಾಲೆಗೆ ತೆಗೆದುಕೊಂಡು ಹೋಗುವುದರಿಂದ ಶಾಲಾಬ್ಯಾಗ್ ಹೊರೆ ಶೇ 50ರಷ್ಟು ಕಡಿಮೆಯಾಗುತ್ತದೆ.  

ಪ್ರತಿ ಮೂರನೇ ಶನಿವಾರ ‘ನೋ ಬ್ಯಾಗ್ ಡೇ’ ಆಚರಣೆಯನ್ನು ಇಲಾಖೆ ಈಗಾಗಲೇ ಕಡ್ಡಾಯಗೊಳಿಸಿದೆ. ಮಕ್ಕಳು ಅಂದು ಬ್ಯಾಗ್‌ಗಳನ್ನು ಮನೆಯಲ್ಲೇ ಬಿಟ್ಟು ಶಾಲೆಗೆ ಬರಬೇಕು. ಈ ನಿಯಮವನ್ನು ಖಾಸಗಿ ಶಾಲೆಗಳಿಗೂ ಅನ್ವಯಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಸದ್ಯ ಹಾಳೆ ಬಳಸಲು ಕ್ರಮ: 

ನೋಟ್‌ ಪುಸ್ತಕಗಳು ಸಿದ್ಧವಾಗುವವರೆಗೂ ಮಕ್ಕಳು ಆಯಾ ವಿಷಯದ ಟಿಪ್ಪಣಿ, ವಿವರಗಳನ್ನು ಪ್ರತ್ಯೇಕ ಹಾಳೆಗಳಲ್ಲಿ ಬರೆದುಕೊಂಡು ಮನೆಯಲ್ಲಿ ಒಂದು ಕಡೆ ಜೋಡಿಸಿಟ್ಟುಕೊಳ್ಳುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.

‘ಮಕ್ಕಳು ಅಧಿಕ ಭಾರ ಹೊರುತ್ತಿರುವುದರಿಂದ ಎಳೆಯ ವಯಸ್ಸಿನಲ್ಲೇ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಅಧ್ಯಯನಗಳು, ಸಂಶೋಧನೆಗಳಿಂದಲೂ ಇದು ಸಾಬೀತಾಗಿದೆ. ಮಕ್ಕಳು ಆಡುತ್ತಾ, ನಲಿಯುತ್ತಾ ಕಲಿಯಬೇಕು. ಆಗ ಕಲಿಕೆ ಪರಿಣಾಮಕಾರಿಯಾಗಿರುತ್ತದೆ ಎಂದು ಹಲವು ಶಿಕ್ಷಣ ತಜ್ಞರು ಶಿಫಾರಸು ಮಾಡಿದ್ದಾರೆ. ಅದಕ್ಕಾಗಿ ಬ್ಯಾಗ್‌ ಭಾರ ಕಡಿತಗೊಳಿಸುವ, ಬ್ಯಾಗ್‌ ರಹಿತ ದಿನದ ಆದೇಶಗಳನ್ನು ಹೊರಡಿಸಲಾಗಿದೆ. ಇಂತಹ ಮಾರ್ಗಸೂಚಿ ಪಾಲಿಸದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT