ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯಾಯಮೂರ್ತಿ ಶ್ರೀಶಾನಂದರ ಹೇಳಿಕೆಯಿಂದ ಭಾವನೆಗಳಿಗೆ ನೋವುಂಟಾಗಿದೆ: ವಕೀಲರ ಸಂಘ

Published : 21 ಸೆಪ್ಟೆಂಬರ್ 2024, 0:16 IST
Last Updated : 21 ಸೆಪ್ಟೆಂಬರ್ 2024, 0:16 IST
ಫಾಲೋ ಮಾಡಿ
Comments

ಬೆಂಗಳೂರು: ‘ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ನ್ಯಾಯಾಲಯದ ತೆರೆದ ಕಲಾಪದಲ್ಲಿ ಕಿರಿಯ ವಕೀಲರನ್ನು ನಿರುತ್ಸಾಹಗೊಳಿಸುವ ಮತ್ತು ಮಹಿಳಾ ವಕೀಲರನ್ನು ಮುಜುಗರಕ್ಕೆ ಈಡು ಮಾಡಿದ ಪ್ರಸಂಗಗಳ ಬಗ್ಗೆ ದೂರುಗಳು ಬರುತ್ತಿವೆ’ ಎಂದು ಬೆಂಗಳೂರು ವಕೀಲರ ಸಂಘ ಆತಂಕ ವ್ಯಕ್ತಪಡಿಸಿದೆ.

ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿ (ಸಿಜೆ) ಎನ್‌.ವಿ. ಅಂಜಾರಿಯಾ ಅವರಿಗೆ ಶುಕ್ರವಾರ ಪತ್ರ ಬರೆದಿರುವ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್‌ ಅವರು, ‘ಕೆಲವು ದಿನಗಳವರೆಗೆ ಹೈಕೋರ್ಟ್‌ ಲೈವ್‌ ಸ್ಟ್ರೀಮಿಂಗ್‌ ಅನ್ನು ನಿರ್ಬಂಧಿಸಬೇಕು’ ಎಂದು ಕೋರಿದ್ದಾರೆ.

ನ್ಯಾಯಮೂರ್ತಿ ಶ್ರೀಶಾನಂದ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಗಂಭೀರ ವಿವಾದ ಸೃಷ್ಟಿಸಿವೆ. ಅವರ ಹೇಳಿಕೆಗಳು ವೈರಲ್‌ ಆಗಿವೆ. ಇದರಿಂದ ವಕೀಲಿ ವೃತ್ತಿಯನ್ನು ಪರಿಶುದ್ಧ ಎಂದು ಪರಿಗಣಿಸಿರುವ ಎಲ್ಲ ವಕೀಲರ ಭಾವನೆಗಳಿಗೆ ನೋವುಂಟಾಗಿದೆ’ ಎಂಬ ಅಂಶವನ್ನು ಪತ್ರದಲ್ಲಿ ಕಾಣಿಸಲಾಗಿದೆ.

‘ನ್ಯಾಯಮೂರ್ತಿ ಶ್ರೀಶಾನಂದ ಅವರು ಕೆಲವು ಸಂದರ್ಭಗಳಲ್ಲಿ ಆ ಕ್ಷಣಕ್ಕೆ ವ್ಯಕ್ತಪಡಿಸಿರುವ ಅಭಿಪ್ರಾಯ ಮತ್ತು ಮೂದಲಿಕೆಗಳು ಅಪ್ರಸ್ತುತ ವಾಗಿವೆ. ಆದರೆ, ಅವರು ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ಉತ್ತಮ ತೀರ್ಪುಗಳನ್ನು ನೀಡಿದ್ದಾರೆ. ಆಕ್ಷೇಪಾರ್ಹ ಹೇಳಿಕೆಗಳಿಂದ ಅವರು ಮಾಡಿರುವ ಉತ್ತಮ ಕೆಲಸಗಳಿಗೆ ಅಪಚಾರ ಉಂಟಾಗುತ್ತಿದೆ’ ಎಂದು ವಿವರಿಸಲಾಗಿದೆ.

‘ನ್ಯಾಯಾಲಯಗಳ ಲೈವ್‌ ಸ್ಟ್ರೀಮಿಂಗ್‌ ಅನ್ನು ಸಂಪೂರ್ಣ ನಿರ್ಬಂಧಿಸದೇ ಹೋದರೆ ಪರಿಸ್ಥಿತಿ ಕೈಮೀರಲಿದೆ. ಸಾರ್ವಜನಿಕರ ಮನಸ್ಸಿನಲ್ಲಿ ನ್ಯಾಯಾಲಯಗಳ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಈ ಕುರಿತು ತಾವು ತುರ್ತು ಕ್ರಮ ಕೈಗೊಳ್ಳುತ್ತೀರಿ ಎಂಬ ಆಶಾಭಾವನೆ ಹೊಂದಿದ್ದೇವೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸ್ವಾಗತ: ‘ಹೈಕೋರ್ಟ್‌ ಕಲಾಪಗಳ ನೇರ ಪ್ರಸಾರದಿಂದ ಆಗುತ್ತಿರುವ ಪರಿಣಾಮಗಳನ್ನು ಅರಿತು ಸುಪ್ರೀಂ ಕೋರ್ಟ್‌ ಈ ದಿಸೆಯಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಮುಂದಾಗಿರುವುದು ಸ್ವಾಗತಾರ್ಹ’ ಎಂದು ಸಂಘವು ಹೇಳಿದೆ.

‘ಅನೇಕ ಯೂ–ಟ್ಯೂಬ್‌ ಚಾನಲ್‌ನವರು ಕಾನೂನು ವ್ಯಾಖ್ಯೆಗಳು, ವಕೀಲರು ಹಾಗೂ ನ್ಯಾಯಮೂರ್ತಿ ಗಳ ವಿವರಣೆಗಳನ್ನು ತಿರುಚಿ ಪ್ರಸಾರ ಮಾಡುತ್ತಿರುವುದರಿಂದ ವಕೀಲರು ಮತ್ತು ನ್ಯಾಯಮೂರ್ತಿಗಳ ಮಧ್ಯೆ ಗಂಭೀರ ಪರಿಣಾಮಕ್ಕೆ ಎಡೆ ಮಾಡಿದೆ. ಆದ್ದರಿಂದ, ವಕೀಲರಿಗಿಂತಲೂ ಹೆಚ್ಚಾಗಿ ನ್ಯಾಯಮೂರ್ತಿಗಳು ತಾವು ಏನು ಹೇಳುತ್ತಿದ್ದೇವೆ ಎಂಬುದರ ಬಗ್ಗೆ ಅತ್ಯಂತ ಜಾಗೃತರಾಗಿರಬೇಕಾಗಿದೆ’ ಎಂದು ಸಂಘವು ಹೇಳಿದೆ.

ವಿಡಿಯೊ ಹಂಚಿಕೆಗೆ ನಿರ್ಬಂಧ

ಹೈಕೋರ್ಟ್‌ನ ತೆರೆದ ಕಲಾಪದ ವಿಡಿಯೊಗಳು ವೈರಲ್‌ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ಪೂರ್ವಾನುಮತಿ ಪಡೆಯದೇ ವಿಡಿಯೊ ರೆಕಾರ್ಡಿಂಗ್‌, ಹಂಚಿಕೆ ಮಾಡದಂತೆ ಎಚ್ಚರಿಸಿ ವೀಕ್ಷಕರಿಗೆ ತಿಳಿವಳಿಕೆ ನೋಟಿಸ್‌ ಹೊರಡಿಸಿದೆ. ‘ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರ ಪ್ರಸಾರ (ಲೈವ್‌ ಸ್ಟ್ರೀಮ್‌), ರೆಕಾರ್ಡಿಂಗ್‌ ನಿಯಮಗಳು–2021’ ಅನ್ನು ಜಾರಿಗೊಳಿಸಿದೆ. ಇದರ ಅನುಸಾರ, ಪೂರ್ವಾನುಮತಿ ಪಡೆಯದೆ ಲೈವ್‌ ಸ್ಟ್ರೀಮಿಂಗ್‌ನ ಮರು ಪ್ರಸಾರ, ವರ್ಗಾವಣೆ, ಅಪ್‌ಲೋಡ್‌ ಮಾಡುವುದು, ಪೋಸ್ಟ್‌ ಮಾಡುವುದು, ಮಾರ್ಪಾಡು ಮಾಡುವುದು, ಪ್ರಸಾರ ಅಥವಾ ಮರು ಪ್ರಸಾರ ಮಾಡುವಂತಿಲ್ಲ.

‘ಅನುಮತಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಯನ್ನು ಹೊರತುಪಡಿಸಿ ಬೇರಾವುದೇ ವ್ಯಕ್ತಿ ಅಥವಾ ಸಂಸ್ಥೆ (ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳು) ಮುಕ್ತ ಕಲಾಪದ ಲೈವ್‌ ಸ್ಟ್ರೀಮಿಂಗ್‌ ಅಥವಾ ಹೈಕೋರ್ಟ್‌ ಯೂ–ಟ್ಯೂಬ್‌ ಚಾನಲ್‌ನಲ್ಲಿನ ವಿಡಿಯೊಗಳನ್ನು ರೆಕಾರ್ಡ್‌ ಅಥವಾ ಹಂಚಿಕೆ ಮಾಡುವಂತಿಲ್ಲ. ಈ ನಿರ್ಬಂಧವು ಎಲ್ಲಾ ಸಂದೇಶ ಮತ್ತು ಅಪ್ಲಿಕೇಶನ್‌ಗಳಿಗೂ ಅನ್ವಯಿಸಲಿದೆ’ ಎಂದು ನೋಟಿಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

‘ನ್ಯಾಯಾಲಯದ ಕಲಾಪಗಳ ರೆಕಾರ್ಡಿಂಗ್‌ ಮತ್ತು ಸಂಗ್ರಹ (ಆರ್ಕ್ವೈವ್‌) ದತ್ತಾಂಶದ ಮೇಲೆ ನ್ಯಾಯಾಲಯಕ್ಕೆ ವಿಶೇಷ ಹಕ್ಕುಸ್ವಾಮ್ಯ ಇದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂತಹ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT