ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾಮೀನು ನೀಡದೇ ಇರುವ ಪ್ರವೃತ್ತಿ ಹೆಚ್ಚಳ: ಸಿಜೆಐ ಚಂದ್ರಚೂಡ್ ಕಳವಳ

ಹೊಣೆಗಾರಿಕೆ ದಾಟಿಸುವ ನ್ಯಾಯಾಧೀಶರು: ಸಿಜೆಐ ಚಂದ್ರಚೂಡ್
Published : 29 ಜುಲೈ 2024, 0:09 IST
Last Updated : 29 ಜುಲೈ 2024, 0:09 IST
ಫಾಲೋ ಮಾಡಿ
Comments

ಬೆಂಗಳೂರು: ‘ಅಪರಾಧ ಪ್ರಕರಣಗಳಲ್ಲಿ ಜಾಮೀನು ನೀಡಬಹುದಾಗಿದ್ದರೂ ನೀಡದೆ, ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ಹೊಣೆಗಾರಿಕೆಯನ್ನು ಉನ್ನತ ನ್ಯಾಯಾಲಯಗಳಿಗೆ ದಾಟಿಸುವುದು ಈಚೆಗೆ ಹೆಚ್ಚಾಗುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಕಳವಳ ವ್ಯಕ್ತಪಡಿಸಿದರು. 

ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್‌ ಹ್ಯೂಮನ್‌ ರೈಟ್ಸ್‌ ಹಬ್‌ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಬರ್ಕ್ಲಿ ಸೆಂಟರ್‌ ಫಾರ್‌ ಕಂಪೇರಿಟಿವ್‌ ಈಕ್ವಲಿಟಿ ಮತ್ತು ಆ್ಯಂಟಿ ಡಿಸ್‌ಕ್ರಿಮಿನೇಷನ್‌’ನ 11ನೇ ವಾರ್ಷಿಕ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 

ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮತ್ತು ವಿರೋಧ ಪಕ್ಷಗಳ ನಾಯಕರು– ಮುಖ್ಯಮಂತ್ರಿಯನ್ನೂ ರಾಜಕೀಯ ಪ್ರೇರಿತವಾಗಿ ಬಂಧಿಸುವ ಕೆಲಸ ನಡೆಯುತ್ತಿದೆ. ಕಾನೂನುಬಾಹಿರವಾಗಿ ಅವರನ್ನು ಬಂಧನದಲ್ಲಿ ಇರಿಸಲಾಗುತ್ತಿದೆ ಎಂದು ಸಭಿಕರೊಬ್ಬರು ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಚೂಡ್‌, ‘ಜಾಮೀನು ನೀಡುವಲ್ಲಿ ನ್ಯಾಯಾಧೀಶರು ಪ್ರತಿ ಪ್ರಕರಣದ ಆಳ– ಅಗಲವನ್ನು ಪರಿಶೀಲಿಸಿ, ವಿವೇಚನೆಯನ್ನು ಬಳಸಬೇಕು’ ಎಂದರು.

‘ವಿಚಾರಣಾ ನ್ಯಾಯಾಲಯ ಮತ್ತು ಕೆಳ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಜಾಮೀನು ನೀಡಿದರೆ, ಅವರ ನಿರ್ಧಾರವನ್ನು ಅನುಮಾನದಿಂದ ನೋಡಲಾಗುತ್ತಿದೆ. ಇದು ಅತ್ಯಂತ ದೊಡ್ಡ ಸಮಸ್ಯೆ. ಈ ಕಾರಣದಿಂದಲೇ ನ್ಯಾಯಾಧೀಶರು ಹೊಣೆಗಾರಿಕೆಯನ್ನು ಉನ್ನತ ನ್ಯಾಯಾಲಯಗಳಿಗೆ ದಾಟಿಸುತ್ತಿದ್ದಾರೆ. ನ್ಯಾಯಾಧೀಶರ ಮೇಲೆ ನಂಬಿಕೆ ಇರಿಸುವ ಕೆಲಸವನ್ನು ನಾವೂ ಮಾಡಬೇಕು’ ಎಂದರು.

‘ವಿಚಾರಣಾ ನ್ಯಾಯಾಲಯಗಳಲ್ಲೇ ಜಾಮೀನು ಸಿಗಬೇಕಾದವರಿಗೆ ಅಲ್ಲಿ ಜಾಮೀನು ಸಿಗುತ್ತಿಲ್ಲ. ಅಂತಹವರು ಹೈಕೋರ್ಟ್‌ಗಳಿಗೆ ಹೋಗುತ್ತಿದ್ದಾರೆ. ಹೈಕೋರ್ಟ್‌ಗಳಲ್ಲೇ ಜಾಮೀನು ಸಿಗಬೇಕಾದವರಿಗೆ ಅಲ್ಲಿ ಜಾಮೀನು ಸಿಗುತ್ತಿಲ್ಲ. ಅಂತಹವರು ಸುಪ್ರಿಂ ಕೋರ್ಟ್‌ಗೆ ಬರುತ್ತಿದ್ದಾರೆ. ಪರಿಣಾಮವಾಗಿ, ಅಕ್ರಮವಾಗಿ ಅಥವಾ ಅನಗತ್ಯವಾಗಿ ಬಂಧನದಲ್ಲಿ ಇರುವವರು ಮತ್ತಷ್ಟು ದಿನ ಬಂಧನದಲ್ಲೇ ಇರುವಂತೆ ಆಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸುಪ್ರೀಂ ಕೋರ್ಟ್‌ಗೆ ಹೀಗೆ ಬರುವ ಜಾಮೀನು ಅರ್ಜಿಗಳಿಗೇ ನಾವು ಆದ್ಯತೆ ನೀಡುತ್ತಿದ್ದೇವೆ. ನ್ಯಾಯಾಂಗ ವ್ಯವಸ್ಥೆಯ ಆರಂಭಿಕ ಹಂತದಲ್ಲಿ ಇರುವವರೂ ತಮ್ಮ ನಿರ್ಧಾರಕ ಅಧಿಕಾರದ ಕರ್ತವ್ಯವನ್ನು ನಿರ್ವಹಿಸಬೇಕು ಎಂಬ ಸಂದೇಶ ಹೋಗಬೇಕು ಎಂದೇ ಹೀಗೆ ಮಾಡುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT