ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಅಣೆಕಟ್ಟೆ: ಎಚ್ಚರಿಕೆ ಕಡೆಗಣಿಸಿದ್ದ ಬಿಜೆಪಿ ಸರ್ಕಾರ

ಕ್ರಸ್ಟ್‌ಗೇಟ್‌ಗಳಿಗೆ ಸ್ಟಾಪ್‌ಲಾಗ್‌ ಅಳವಡಿಸಲು 2021ರಲ್ಲೇ ತಜ್ಞರ ಶಿಫಾರಸು
Published : 11 ಸೆಪ್ಟೆಂಬರ್ 2024, 21:33 IST
Last Updated : 11 ಸೆಪ್ಟೆಂಬರ್ 2024, 21:33 IST
ಫಾಲೋ ಮಾಡಿ
Comments

ಬೆಂಗಳೂರು: ‘ತುಂಗಭದ್ರಾ ಅಣೆಕಟ್ಟೆಯ ಎಲ್ಲ 33 ಕ್ರಸ್ಟ್‌ಗೇಟ್‌ಗಳಿಗೂ ಮುನ್ನೆಚ್ಚರಿಕೆ ಕ್ರಮವಾಗಿ ಸ್ಟಾಪ್‌ಲಾಗ್‌ಗಳನ್ನು ಅಳವಡಿಸಬೇಕು’ ಎಂದು ಎ.ಕೆ.ಬಜಾಜ್‌ ನೇತೃತ್ವದ ತಜ್ಞರ ತಂಡವು 2021ರಲ್ಲೇ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಸ್ಟಾಪ್‌ಲಾಗ್‌ಗಳನ್ನು ಅಳವಡಿಸಲು ಅಂದಿನ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಈಚೆಗೆ ಕೊಚ್ಚಿಹೋದ 19ನೇ ಕ್ರಸ್ಟ್‌ಗೇಟ್‌ಗೂ ಸ್ಟಾಪ್‌ಲಾಗ್‌ಗಳನ್ನು ಅಳವಡಿಸಬೇಕು ಎಂದು ಸಮಿತಿ ಸೂಚಿಸಿತ್ತು. ಕ್ರಸ್ಟ್‌ಗೇಟ್‌ ಕೊಚ್ಚಿಹೋದಾಗ ಸ್ಟಾಪ್‌ಲಾಗ್‌ ಇಲ್ಲದೇ ಇದ್ದ ಕಾರಣಕ್ಕೆ 36 ಟಿಎಂಸಿ ಅಡಿಯಷ್ಟು ನೀರು ನಷ್ಟವಾಗಿತ್ತು. ನಂತರ ತುರ್ತು ಕಾರ್ಯಾಚರಣೆ ನಡೆಸಿ, ಇನ್ನಷ್ಟು ನೀರು ನಷ್ಟವಾಗುವುದನ್ನು ತಪ್ಪಿಸಲಾಯಿತು.

ಅಣೆಕಟ್ಟೆಗಳ ಸ್ಥಿತಿಗತಿ ಪರಿಶೀಲನೆಗೆ ರಾಜ್ಯ ಸರ್ಕಾರವು ಎ.ಕೆ.ಬಜಾಜ್‌ ಅವರ ನೇತೃತ್ವದಲ್ಲಿ ‘ಅಣೆಕಟ್ಟೆ ಸುರಕ್ಷತೆ ಪರಿಶೀಲನಾ ಸಮಿತಿ’ಯನ್ನು 2021ರ ಆಗಸ್ಟ್‌ನಲ್ಲಿ ರಚಿಸಿತ್ತು. 2021ರ ಅಕ್ಟೋಬರ್ 8ರಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದ ಸಮಿತಿಯು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ‌ವರದಿ ಸಲ್ಲಿಸಿತ್ತು. 

ಅಣೆಕಟ್ಟೆಯ ಸುರಕ್ಷತೆಗೆ ಸಂಬಂಧಿಸಿದಂತೆ ಸಮಿತಿಯು ಒಟ್ಟು 65 ಶಿಫಾರಸುಗಳನ್ನು ಮಾಡಿತ್ತು. ‘ಕ್ರಸ್ಟ್‌ಗೇಟ್‌ಗಳು ಹಳತಾಗಿದ್ದು, ಅವು ಕೆಲಸ ಮಾಡದೇ ಇರುವ ಸಾಧ್ಯತೆಗಳು ಇವೆ. ಅಂತಹ ಸಂದರ್ಭ ಎದುರಾದರೆ, ಜಲಾಶಯದ ನೀರನ್ನು ಕಾಪಿಟ್ಟುಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ, ಎಲ್ಲ 33 ಕ್ರಸ್ಟ್‌ಗೇಟ್‌ಗಳಿಗೂ ತಲಾ ಮೂರು ಸ್ಟಾಪ್‌ಲಾಗ್‌ಗಳನ್ನು ಅಳವಡಿಸಬೇಕು’ ಎಂದು ಶಿಫಾರಸು ಮಾಡಿತ್ತು.

ಮುಂದುವರಿದು, ‘ಕ್ರಸ್ಟ್‌ಗೇಟ್‌ ಹಿಡಿದಿಟ್ಟುಕೊಳ್ಳುವ ಕಂಬದಂತಹ ರಚನೆಗಳ ಈಗಿನ ವಿನ್ಯಾಸದಲ್ಲಿ ಸ್ಟಾಪ್‌ಲಾಗ್‌ಗಳನ್ನು ಅಳವಡಿಸಲು ಸಾಧ್ಯವಿಲ್ಲ. ಕಂಬಗಳ ವಿನ್ಯಾಸ ಮಾರ್ಪಡಿಸಿ, ಸ್ಟಾಪ್‌ಲಾಗ್‌ ಅಳವಡಿಸಬೇಕು’ ಎಂದು ಸಮಿತಿ ಹೇಳಿತ್ತು.

2021ರಲ್ಲೇ ತುಂಗಭದ್ರಾ ಅಣೆಕಟ್ಟು ಮಂಡಳಿಯ ಮುಂದೆ ಈ ಶಿಫಾರಸು ಬಂದಿತ್ತು. ಇತರ ಹಲವು ಶಿಫಾರಸುಗಳನ್ನು ಕಾರ್ಯರೂಪಕ್ಕೆ ತಂದಿದ್ದ ಮಂಡಳಿಯು, ಸ್ಟಾಪ್‌ಲಾಗ್‌ಗಳನ್ನು ಅಳವಡಿಸುವ ಶಿಫಾರಸನ್ನು ಅನುಷ್ಠಾನಕ್ಕೆ ತರಲಿಲ್ಲ. ಬದಲಿಗೆ ಸಮಿತಿಗೆ ಸಲ್ಲಿಸಿದ ಕಾರ್ಯಪಾಲನಾ ವರದಿಯಲ್ಲಿ, ‘ಈ ಶಿಫಾರಸನ್ನು ಗಮನಿಸಿದ್ದೇವೆ’ ಎಂದಷ್ಟೇ ಉಲ್ಲೇಖಿಸಿತ್ತು.

ಬಿಜೆಪಿ ಸರ್ಕಾರದ ಅವಧಿಯಲ್ಲೇ 2021–22ನೇ ಸಾಲಿನಲ್ಲಿ ಮತ್ತೊಮ್ಮೆ ಈ ಶಿಫಾರಸು ಮಂಡಳಿಯ ಮುಂದೆ ಬಂದಿತ್ತು. ಆಗಲೂ ಸಹ, ‘ಗಮನಿಸಿದ್ದೇವೆ’ ಎಂದು ಉಲ್ಲೇಖಿಸಿ ಶಿಫಾರಸನ್ನು ಕಡೆಗಣಿಸಲಾಗಿತ್ತು. 

‘ಗಂಭೀರವಾಗಿ ಪರಿಗಣಿಸಿರಲಿಲ್ಲ’
‘ಸಮಿತಿಯ ಶಿಫಾರಸನ್ನು ಜಾರಿಗೆ ತರುವ ಮುನ್ನ ಹಣಕಾಸು ಲಭ್ಯತೆ ಮತ್ತು ಕಾರ್ಯಸಾಧ್ಯತಾ ಪರಿಶೀಲನೆಯನ್ನು ನಡೆಸಬೇಕಿತ್ತು. ಹಿಂದಿನ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೇ ಇದ್ದ ಕಾರಣ ಕಾರ್ಯಸಾಧ್ಯತಾ ಪರಿಶೀಲನೆ ಕೆಲಸ ಆಗಿರಲಿಲ್ಲ’ ಎಂದು ತುಂಗಭದ್ರಾ ಅಣೆಕಟ್ಟೆ ಮಂಡಳಿಯ ಸದಸ್ಯರೂ ಆಗಿರುವ ರಾಜ್ಯ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ‘ಈಗ ಒಂದು ಕ್ರಸ್ಟ್‌ಗೇಟ್‌ ಕೊಚ್ಚಿಹೋದ ನಂತರ ಈಗಿನ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ’ ಎಂದೂ ಅವರು ಹೇಳಿದರು. ‘ಈಗ ಎ.ಕೆ.ಬಜಾಜ್‌ ಅವರ ನೇತೃತ್ವದ ತಾಂತ್ರಿಕ ತಜ್ಞರ ತಂಡಕ್ಕೇ ಅಣೆಕಟ್ಟೆಯ ಸುರಕ್ಷತೆ ಪರಿಶೀಲನೆಯ ಹೊಣೆ ನೀಡಲಾಗಿದೆ. ಸ್ಟಾಪ್‌ಲಾಗ್‌ಗಳನ್ನು ಅಳವಡಿಸುವ ಸಂಬಂಧ ಕಾರ್ಯಸಾಧ್ಯತೆಯ ಪರಿಶೀಲನೆಯೂ ನಡೆಯಲಿದೆ. ಇದನ್ನು ಕಡೆಗಣಿಸಿದರ ಪರಿಣಾಮ ಏನು ಎಂಬುದು ಸರ್ಕಾರಕ್ಕೆ ಅರಿವಾಗಿರುವ ಕಾರಣ ಈ ಕಾರ್ಯಕ್ಕೆ ಚುರುಕು ದೊರೆಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT