ತೋಳು–ತೊಡೆ ತಟ್ಟಿದವರ ಹಸ್ತಲಾಘವ
ದಶಕದ ಹಿಂದೆ ತೋಳು–ತೊಡೆ ತಟ್ಟಿಕೊಂಡು ಪರಸ್ಪರ ಸವಾಲು ಒಡ್ಡಿದ್ದ ಜಿ. ಜನಾರ್ದನ ರೆಡ್ಡಿ ಹಾಗೂ ಸಿದ್ದರಾಮಯ್ಯ ಇಂದು ಹಸ್ತಲಾಘವ ಮಾಡಿ ಒಂದಾದರು.
ಬಿ.ಎಸ್.ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅವರ ಸಂಪುಟದಲ್ಲಿ ಜನಾರ್ದನ ರೆಡ್ಡಿ ಪ್ರವಾಸೋದ್ಯಮ ಸಚಿವರಾಗಿದ್ದರು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗದಿದ್ದರು. ಬಳ್ಳಾರಿಯ ಅಕ್ರಮ ಗಣಿಗಾರಿಕೆ ವಿಷಯ ಚರ್ಚೆಗೆ ಬಂದಾಗ, ಜನಾರ್ದನರೆಡ್ಡಿ ಹಾಗೂ ಅಂದು ಶಾಸಕರಾಗಿದ್ದ ಸುರೇಶಬಾಬು ಬಳ್ಳಾರಿಗೆ ಬರುವಂತೆ ಸವಾಲು ಎಸೆದಿದ್ದರು. ಅದನ್ನು ಸ್ವೀಕರಿಸಿದ್ದ ಸಿದ್ದರಾಮಯ್ಯ ತಮ್ಮ ಪಕ್ಷದ ನಾಯಕರ ಜತೆ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದರು.
ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿದ ಜನಾರ್ದನ ರೆಡ್ಡಿ ಅವರ ಜತೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೆಡ್ಡಿ, ‘ಸಿದ್ದರಾಮಯ್ಯ ಮತ್ತುಶಿವಕುಮಾರ್ ಅವರು ನನ್ನನ್ನು ಕರೆಸಿಕೊಂಡು ಮಾತುಕತೆ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಯಾರಿಗೆ ಮತ ನೀಡಬೇಕು ಎಂಬುದನ್ನು ನಾನು ಇನ್ನೂ ನಿರ್ಧರಿಸಿಲ್ಲ’ ಎಂದರು.
ಜನಾರ್ದನ ರೆಡ್ಡಿ ನೇತೃತ್ವದ ಕೆಆರ್‌ಆರ್‌ಪಿ ಚುನಾವಣಾ ಏಜೆಂಟ್ ಆಗಿ ಯೋಗೇಂದ್ರ ವಿಕ್ರಂ ಅವರನ್ನು ನೇಮಿಸಲಾಗಿದೆ. ಯೋಗೇಂದ್ರ ಅವರು ಶಿವಕುಮಾರ್ ಅವರ ಆಪ್ತರು.