ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PSI Death | ಎಂಟು ಸರ್ಕಾರಿ ನೌಕರಿ ಪಡೆದಿದ್ದ ಪರಶುರಾಮ್‌

Published : 4 ಆಗಸ್ಟ್ 2024, 0:09 IST
Last Updated : 4 ಆಗಸ್ಟ್ 2024, 0:09 IST
ಫಾಲೋ ಮಾಡಿ
Comments

ಕೊಪ್ಪಳ: ಯಾದಗಿರಿಯಲ್ಲಿ ಮೃತಪಟ್ಟಿರುವ ಪಿಎಸ್‌ಐ ಪರಶುರಾಮ್‌ ಕಡುಬಡತನದ ನಡುವೆಯೂ ಉತ್ತಮವಾಗಿ ಓದಿ ಎಂಟು ಸರ್ಕಾರಿ ನೌಕರಿಗಳನ್ನು ಪಡೆದುಕೊಂಡಿದ್ದರು.

ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದ ಪರಶುರಾಮ್‌ ಪಿಎಸ್‌ಐ ಆಗಿದ್ದೇ ಸಾಹಸದ ಕಥೆ. ಬುದ್ಧಿವಂತಿಕೆ ಮತ್ತು ಕಠಿಣ ಪರಿಶ್ರಮದಿಂದ ಒಂದಾದ ಮೇಲೊಂದು ಸರ್ಕಾರಿ ನೌಕರಿ ಗಳಿಸಿಕೊಂಡಿದ್ದರು.

ಪರಶುರಾಮ್ ಪೋಷಕರು ಸೋಮನಾಳ ಗ್ರಾಮದಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪದವಿ ಓದುವಾಗಲೇ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದರು. ಪದವಿ ಪೂರ್ಣಗೊಳಿಸುತ್ತಲೇ ಮೊದಲು ಜೈಲ್‌ನಲ್ಲಿ ವಾರ್ಡನ್‌ ಆಗಿ ಮೊದಲ ಸರ್ಕಾರಿ ನೌಕರಿ ಪಡೆದುಕೊಂಡಿದ್ದರು.

ಐದು ವರ್ಷ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೆಲಸ ನಿರ್ವಹಿಸಿ, ನಂತರ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಒಂದು ವರ್ಷ ಎಫ್‌ಡಿಎ ಆಗಿದ್ದರು. ಈ ವೇಳೆ ಕೆಎಸ್‌ಆರ್‌ಟಿಸಿಯಲ್ಲಿ ಸಂಚಾರ ಇನ್ಸ್‌ಪೆಕ್ಟರ್‌, ಪಿಡಿಒ ಸೇರಿದಂತೆ ಹಲವು ಹುದ್ದೆಗಳಿಗೆ ಆಯ್ಕೆಯಾಗಿದ್ದರು. ಆದರೆ, ಪಿಎಸ್‌ಐ ಆಗಬೇಕೆನ್ನುವ ಕನಸು ನನಸು ಮಾಡಿಕೊಳ್ಳಲು ನೌಕರಿ ಮಾಡುತ್ತಲೇ ಪ್ರಯತ್ನಿಸುತ್ತಿದ್ದರು. ಸತತ ಪ್ರಯತ್ನದಿಂದಾಗಿ 2017ರಲ್ಲಿ ಪಿಎಸ್‌ಐ ಆಗಿ ಆಯ್ಕೆಯಾಗಿದ್ದರು.

ಒಂದು ಸರ್ಕಾರಿ ನೌಕರಿ ಪಡೆಯುವುದೇ ಕಠಿಣವಾಗಿರುವ ಈಗಿನ ದಿನಮಾನಗಳಲ್ಲಿ ಎಂಟು ಸರ್ಕಾರಿ ನೌಕರಿ ಪಡೆದಿದ್ದ ಪರಶುರಾಮ್‌ ಬದುಕು ಅನೇಕರಿಗೆ ಪ್ರೇರಣೆಯಾಗಿತ್ತು ಎಂದು ಅವರ ಸ್ನೇಹಿತರು ನೆನಪಿಸಿಕೊಂಡರು. ಯುವಕರಿಗೆ ಓದಿಗೆ ಸದಾ ಸ್ಫೂರ್ತಿ ತುಂಬುತ್ತಿದ್ದರು. ಕೆಲಸ ನಿರ್ವಹಿಸುತ್ತಿದ್ದಾಗಲೇ ಬಾಹ್ಯ ಅಭ್ಯರ್ಥಿಯಾಗಿ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಪಿಯುಸಿ ಅನುತ್ತೀರ್ಣನಾಗಿದ್ದಾಗ ಮಾನಸಿಕವಾಗಿ ನೊಂದಿದ್ದ ಪರಶುರಾಮ್‌, ಬೆಂಗಳೂರಿಗೆ ಹೋಗಿ ನೌಕರಿ ಪಡೆಯುವ ಮೊದಲು ಎರಡು ತಿಂಗಳು ಬೆಂಗಳೂರಿನಲ್ಲಿ ಗಾಲ್ಫ್‌ ಮೈದಾನದಲ್ಲಿ ನೀರು ಹರಿಸುವುದು, ಚೆಂಡು ತಂದುಕೊಡುವ ಕೆಲಸ ಮಾಡುತ್ತಿದ್ದರು ಎಂದು ಸ್ನೇಹಿತರು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT