ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಹಲವು ವಿಶಿಷ್ಟ ಪ್ರಯೋಗಗಳನ್ನು ನಡೆಸಿದ ಗೌರವ ಕರ್ನಾಟಕಕ್ಕೆ ಸಲ್ಲುತ್ತದೆ. ಇಂತಹ ಪ್ರಯೋಗಗಳಲ್ಲಿ ‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿ’ ಎಂಬ ಹುದ್ದೆಯ ಪರಿಕಲ್ಪನೆ ಮತ್ತು 2010ರಲ್ಲಿ ನಡೆದ ನೇಮಕಾತಿ ಮತ್ತು ತರಬೇತಿ ಪ್ರಕ್ರಿಯೆಗಳೂ ಪ್ರಮುಖವಾದುವು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇಮಕಾತಿ ಮತ್ತು ತರಬೇತಿಗಳು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯಲ್ಲಿ ನಡೆದ ವಿಶಿಷ್ಟವಾದ ಪ್ರಕ್ರಿಯೆ. ಮೊದಲ ಬಾರಿಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೆರವಿಲ್ಲದೇ ಇಲಾಖೆಯು ಈ ಹುದ್ದೆಗಳಿಗೆ ನೇರ ನೇಮಕಾತಿಗಳನ್ನು ಪೂರ್ಣಗೊಳಿಸಿತು. ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಜಿಲ್ಲಾ ಪಂಚಾಯಿತಿಗಳ ಸಹಯೋಗದಲ್ಲಿ ಸತತ ಮೂರು ತಿಂಗಳ ಬುನಾದಿ ತರಬೇತಿ, ಕ್ಷೇತ್ರ ಕಾರ್ಯ ಮತ್ತು ಗ್ರಾಮ ಪಂಚಾಯಿತಿ ಚುನಾವಣಾ ಪ್ರಕ್ರಿಯೆಗಳ ಅನುಭವಗಳನ್ನು ಈ ಅಧಿಕಾರಿಗಳಿಗೆ ನೀಡಿದ್ದು ಈ ಪ್ರಕ್ರಿಯೆಗಳ ಹೆಗ್ಗಳಿಕೆ.

ಈ ಪ್ರಯೋಗದಿಂದ 2010ರಲ್ಲಿ ಸುಮಾರು 1000 ಗ್ರಾಮಪಂಚಾಯಿತಿಗಳು (ಶೇ 20) ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಪಡೆದವು. ಇದರಿಂದಾಗಿ ಗ್ರಾಮ ಪಂಚಾಯಿತಿಯ ಅಧಿಕಾರಿ ವರ್ಗದಲ್ಲಿ ಕಾರ್ಯದರ್ಶಿ ಮತ್ತು ಕರವಸೂಲಿಗಾರರ ಜೊತೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೂ ಸೇರಿಕೊಂಡಿದ್ದಾರೆ.

ಈ ನೇಮಕಾತಿಗಳು ನಡೆದು ಈಗ 4 ವರ್ಷಗಳು ಪೂರೈಸಿವೆ. ನಾಲ್ಕು ವರ್ಷಗಳಲ್ಲಿ ಈ ಹುದ್ದೆಗೆ ಸಂಬಂಧಿಸಿದಂತೆ ಹಲವು ಗಂಭೀರ ಸಮಸ್ಯೆಗಳು ವರದಿಯಾಗಿವೆ, ಹಲವು ಸಫಲತೆಯ ಮಾದರಿಗಳನ್ನು ಕಾಣಬಹುದು. ಕೆಲವು ಅಧಿಕಾರಿಗಳು ಗಮನಿಸುವಂತೆ ಗ್ರಾಮಪಂಚಾಯಿತಿಗಳ ದಾಖಲಾತಿ ನಿರ್ವಹಣೆ, ಅನುಷ್ಠಾನಗಳಲ್ಲಿ ಗುಣಮಟ್ಟ ಹೆಚ್ಚಿದೆ. ಆದರೆ, ಹಲವು ಸುಶಿಕ್ಷಿತ ಅಧಿಕಾರಿಗಳು ಹುದ್ದೆಯ ಸುತ್ತಮುತ್ತಲಿರುವ ಭ್ರಷ್ಟಾಚಾರ, ನೀತಿನಿಯಮಗಳ ಪರಿಧಿಯನ್ನು ಬಿಟ್ಟು ಕೆಲಸ ಮಾಡಬೇಕಾದ ಒತ್ತಡಗಳು, ಮತ್ತಿತರ ಪ್ರತಿಕೂಲ ಕಾರಣಗಳಿಂದ ಕಾರ್ಯನಿರ್ವಹಿಸಲಾಗದೇ ಉದ್ಯೋಗಕ್ಕೇ ರಾಜೀನಾಮೆ ನೀಡಿ ಹೋಗಿದ್ದಾರೆ.

ಈ ತೊಂದರೆಗಳಿಗೆ ಅನೇಕ ಕಾರಣಗಳಿವೆ. ಬಹುಮುಖ್ಯವಾಗಿರುವುದು ಆಡಳಿತಾತ್ಮಕ ವಿಚಾರಗಳು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಕರ್ತವ್ಯಗಳ ನಡುವಣ ವ್ಯತ್ಯಾಸವನ್ನು ಸರಿಯಾಗಿ ವ್ಯಾಖ್ಯಾನಿಸಲಾಗಿಲ್ಲ. ಆಡಳಿತಾತ್ಮಕ ಶ್ರೇಣೀಕರಣ, ಹುದ್ದೆಯ ಪ್ರಾದೇಶಿಕ ಮತ್ತು ಆಡಳಿತಾತ್ಮಕ ವ್ಯಾಪ್ತಿ ಮತ್ತು ಬಡ್ತಿ ಹಾದಿಗಳ ವಿಷಯದಲ್ಲಿ ಸಾಕಷ್ಟು ಗೊಂದಲಗಳಿವೆ. ಇದಕ್ಕೆ ಪುಟವಿಟ್ಟಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮೇಲಧಿಕಾರಿಗಳ ಅಸಹಕಾರವೂ ಸೇರಿಕೊಳ್ಳುತ್ತದೆ.

ಜನಪ್ರತಿನಿಧಿಗಳ ಕಿರುಕುಳ, ಹಲ್ಲೆಗಳನ್ನೂ ಅನೇಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅನುಭವಿಸಬೇಕಾಗಿ ಬಂದಿದೆ. ಕೆಲವರು ಆತ್ಮಹತ್ಯೆ ಪ್ರಯತ್ನ ಮಾಡಿದ್ದರೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವೇಳೆ ಪಂಚಾಯತಿ ಸದಸ್ಯರು ಮತ್ತು ಇತರ ಚುನಾಯಿತ ಪ್ರತಿನಿಧಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ಸಹಕಾರ ನೀಡದಿರುವುದು, ಹಕ್ಕುಗಳಿಗೆ ಚ್ಯುತಿ ತಂದಿರುವುದು, ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಮುಂತಾದ ವಿಷಯಗಳ ಬಗ್ಗೆ ದೂರುತ್ತಾರೆ.

ಗ್ರಾಮಪಂಚಾಯಿತಿ ಮಟ್ಟದಲ್ಲಿ ಸುಶಿಕ್ಷಿತ ಅಧಿಕಾರಿಗಳ ಯುವ ತಂಡವನ್ನು ರಚಿಸುವುದು ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮ ಪಂಚಾಯಿತಿಗಳ ಸಬಲೀಕರಣಕ್ಕೆ ಅವಶ್ಯ. ಆದರೆ, ಇಂತಹ ಹೊಸ ಹುದ್ದೆಗಳನ್ನು ಸೃಷ್ಟಿಸುವಾಗ ಬೇಕಾದ ದೂರಾಲೋಚನೆ ಮತ್ತು ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಹುದ್ದೆಯ ಉಪಯುಕ್ತತೆಯ ಬಗ್ಗೆ ಪ್ರಶ್ನೆಯೇಳುತ್ತದೆ. ಈ ಹುದ್ದೆಯಲ್ಲಿ ನಾನು ಕಂಡ ಘಟನೆಗಳು ಮತ್ತು ಅನುಭವಗಳ ಆಧಾರದ ಮೇಲೆ ಈ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳ ಬಯಸುತ್ತೇನೆ.

ಅಧಿಕಾರ ವರ್ಗೀಕರಣ
ಹುದ್ದೆಯ ಪರಿಕಲ್ಪನೆಯ ಹಂತದಲ್ಲಿ ಪ್ರತಿಯೊಬ್ಬ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಮೂರರಿಂದ ಐದು ಗ್ರಾಮ ಪಂಚಾಯಿತಿಗಳ ಪ್ರಮುಖ ಚಟುವಟಿಕೆಗಳಾದ ಸಮುದಾಯದ ಪಾಲ್ಗೊಳ್ಳುವಿಕೆ, ಪಾರದರ್ಶಕ ಯೋಜನಾ ತಯಾರಿ ಮತ್ತು ಅನುಷ್ಠಾನ ಮತ್ತು ತಾಂತ್ರಿಕ ವಿಚಾರಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುವುದರ ಬಗ್ಗೆ ಚರ್ಚೆಯಾಗಿತ್ತು. ಇಂತಹ ಜವಾಬ್ದಾರಿಗಳ ನಿರ್ವಹಣೆಗೆ ಗ್ರಾಮ ಪಂಚಾಯಿತಿ ಮಟ್ಟದಿಂದ ಮೇಲ್ಪಟ್ಟು ಪಂಚಾಯಿತಿ ಅಧಿಕಾರಿಗಳ ಆಡಳಿತ ವ್ಯಾಪ್ತಿಯಿರಬೇಕಾದದ್ದು ಅವಶ್ಯವಾಗಿತ್ತು.

ಕಾರ್ಯದರ್ಶಿಯಲ್ಲದೇ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಇತರ ಇಲಾಖೆಗಳ ಅಧಿಕಾರಿಗಳ (ಶಿಕ್ಷಣ, ಆರೋಗ್ಯ, ಶಿಶು ಅಭಿವೃದ್ಧಿ, ಇಂಜಿನಿಯರಿಂಗ್ ವಿಭಾಗ, ಅರಣ್ಯ, ಕೃಷಿ ಇತ್ಯಾದಿ) ನಡುವೆ ಆಗಲೇಬೇಕಿದ್ದ ಸ್ಪಷ್ಟ ಅಧಿಕಾರ ವರ್ಗೀಕರಣ ಇಲ್ಲದಿರುವುದು ಹುದ್ದೆಯ ಉಪಯುಕ್ತತೆಗೆ ಮಾರಕವಾಗಿದೆ.

ವಿಪರ್ಯಾಸವೆಂದರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅಧಿಕಾರ ವ್ಯಾಪ್ತಿಯು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಸೀಮಿತವಾಗಿರುವುದಲ್ಲದೇ, ಕಾರ್ಯದರ್ಶಿಯ ಹುದ್ದೆಯ ಅಧಿಕಾರಗಳಿಗಿಂತ ಭಿನ್ನವಾಗಿಲ್ಲ. ಸೀಮಿತ ಅಧಿಕಾರಗಳ ಜೊತೆಗೆ ಇತರ ಗ್ರಾಮ ಪಂಚಾಯಿತಿಗಳ ಹೆಚ್ಚುವರಿ ನಿಯೋಜನೆ ಯಿಂದಾಗಿ ಈ ಹುದ್ದೆಯೂ ಕಾರ್ಯದರ್ಶಿಯ ಹುದ್ದೆಯಷ್ಟೇ ಅಸಮರ್ಪಕವಾಗಿದೆ.

ವಿಕೇಂದ್ರೀಕರಣ ಮತ್ತು ಅಧಿಕಾರಿಗಳು
ಕಾರ್ಯಕ್ರಮ ಮತ್ತು ಯೋಜನೆಗಳ ಅನುಷ್ಠಾನ ದಲ್ಲಿ ಸರ್ಕಾರದ ನೀತಿ ನಿಯಮಗಳ ಪಾಲನೆಯೇ ಅಧಿಕಾರಿ ವರ್ಗದ ಪ್ರಥಮ ಗುರಿ. ಆದರೆ, ವಿಕೇಂದ್ರೀಕೃತ ವ್ಯವಸ್ಥೆಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ನೀತಿ ನಿಯಮಗಳನ್ನು ಕ್ಷೇತ್ರಮಟ್ಟದಲ್ಲಿ ಬದಲಾಯಿಸಿ ಕೊಳ್ಳುವ ಅವಶ್ಯಕತೆಯಿರುತ್ತದೆ. ಈ ಬದಲಾವಣೆಗಳು ಸರಿಯೋ ತಪ್ಪೋ ಎನ್ನುವ ಚರ್ಚೆಗೆ ಮೊದಲೇ, ಈ ಬದಲಾವಣೆಗಳು ಜಿಲ್ಲೆ, ತಾಲೂಕು ಅಥವಾ ಗ್ರಾಮಗಳ ಮಟ್ಟದಲ್ಲಿ ಅಧಿಕೃತವಾಗಿ ದಾಖಲಾಗದೇ, ಮೌಖಿಕವಾಗಿ, ಅಥವ ಸ್ಥಳೀಯ ಜನಪ್ರತಿನಿಧಿಗಳ ಇಚ್ಛೆಯಂತೆ, ಅಥವಾ ಜಿಲ್ಲಾ ಪಂಚಾಯಿತಿ ಅಥವಾ ತಾಲೂಕು ಪಂಚಾಯಿತಿ ಅಧಿಕಾರಿಗಳ ಅನುಕೂಲಕ್ಕೆ ತಕ್ಕಂತೆ ಅನೌಪಚಾರಿಕವಾಗಿ ಜಾರಿಗೆ ತರಲಾಗುತ್ತದೆ. ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆ ಮತ್ತು ಸಂಬಂಧಿಸಿದ ನೀತಿ ನಿಯಮಗಳು, ಕಟ್ಟಡ ಮತ್ತಿತರ ಕಾಮಗಾರಿಗಳ ಅನುಷ್ಠಾನ, ಉದ್ಯೋಗ ಖಾತರಿ ಮತ್ತಿತರ ಬೇಡಿಕೆ ಆಧಾರಿತ ಯೋಜನೆಗಳಲ್ಲಿ ಇದು ಸಾಮಾನ್ಯ.

ಈ ಬದಲಾವಣೆಗಳು ಕೆಲವೊಮ್ಮೆ ಸ್ಥಳೀಯ ಸಮುದಾಯಗಳಿಗೆ ಲಾಭದಾಯಕವಾದರೂ, ಕ್ಷೇತ್ರಮಟ್ಟದ ಅಧಿಕಾರಿಗಳಿಗೆ ಕಾನೂನಿನ ಚೌಕಟ್ಟನ್ನು ಮೀರಬೇಕಾದ ಅನಿವಾರ್ಯತೆ ತರುತ್ತವೆ. ಅಧಿಕೃತ ನೀತಿ ನಿಯಮಗಳಿಗೆ ತಪ್ಪದೇ ನಡೆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವ ಆಪಾದನೆ, ಮತ್ತು ಒತ್ತಡಕ್ಕೆ ಮಣಿದು ನಡೆದರೆ, ಮುಂದೆ ಇದೇ ವಿಷಯಗಳು ಕಾನೂನಿನ ಉಲ್ಲಂಘನೆಗಳ ಉದಾಹರಣೆಗಳಾಗಿ ನಿಷ್ಠಾವಂತ ಅಧಿಕಾರಿಗಳ ವಿರುದ್ಧ ಬಳಸಿಕೊಳ್ಳುವ ಅಸ್ತ್ರವಾಗುತ್ತವೆ. ವಿಕೇಂದ್ರೀಕರಣದ ಪರಿಕಲ್ಪನೆ ಮತ್ತು ಅದರ ಅವಶ್ಯಕತೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಸಾಕಷ್ಟು ಉತ್ಸಾಹದಿಂದ ತರಬೇತಿ ನೀಡಲಾಗುತ್ತದೆ.

ಆದರೆ ವ್ಯವಸ್ಥೆಯ ಮೇಲ್ಮಟ್ಟದಲ್ಲಿರುವ ಅಧಿಕಾರಿಗಳಿಗೆ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಪ್ರಮುಖ ಇಲಾಖಾ ಹುದ್ದೆಗಳಲ್ಲಿ ವಿಕೇಂದ್ರೀಕೃತ ಆಡಳಿತದ ಕುರಿತು ಇರಬೇಕಾದ ಮಾಹಿತಿ, ಮತ್ತು ಅದಕ್ಕಿಂತ ಹೆಚ್ಚಾಗಿ ವಿಕೇಂದ್ರೀಕರಣದ ಬಗ್ಗೆ ಇರಬೇಕಾದ ನಂಬಿಕೆಗಳಲ್ಲಿಯೇ ಕೊರತೆಯಿದ್ದಾಗ ಕ್ಷೇತ್ರಮಟ್ಟದ ಸಮಸ್ಯೆಗಳಿಗೆ ಸ್ಪಂದಿಸಲು ಅವಶ್ಯವಾದ ಸ್ಥಳೀಯ ಸ್ವಾಯತ್ತತೆ ಕುಂದುತ್ತದೆ. ತಳಹಂತದ ಯೋಜನಾ ಪ್ರಕ್ರಿಯೆ ಮತ್ತು ಸಮುದಾಯದ ಹೊಣೆಗಾರಿಕೆಗಳು ಕೇವಲ ಪುಸ್ತಕದಲ್ಲಿ ಉಳಿಯುತ್ತವೆ. ಅದಕ್ಕಿಂತ ಹೆಚ್ಚಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಂತಹ ಕ್ಷೇತ್ರಮಟ್ಟದ ಕೆಲಸಗಾರರಿಗೆ ನಿತ್ಯದ ಕೆಲಸಗಳಲ್ಲಿ ಈ ವಿರೋಧಾಭಾಸಗಳು ತೊಡಕಾಗುತ್ತವೆ.

ವೃತ್ತಿಯಲ್ಲಿ ಮುನ್ನಡೆ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯ ನೇಮಕಾತಿ ಪ್ರಕ್ರಿಯೆಗಳು ಪ್ರಾರಂಭವಾದಾಗಿನಿಂದಲೂ ಈ ಹುದ್ದೆಯ ಬಡ್ತಿ ಹಾದಿಯ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಹುದ್ದೆಯ ನೇಮಕಾತಿಯಾಗಿ ನಾಲ್ಕು ವರ್ಷಗಳು ಸಂದರೂ ಬಡ್ತಿ ಹಾದಿಯ ವಿಚಾರ ಕೇವಲ ಊಹೆಯಾಗಿಯೇ ಉಳಿದಿದೆ. ಹೋಬಳಿ ಮಟ್ಟದಲ್ಲಿ ಹೊಸದೊಂದು ಹುದ್ದೆಗೆ ಬಡ್ತಿ, ತಾಲ್ಲೂಕು ಮಟ್ಟದಲ್ಲಿ ಮತ್ತೊಂದು ಹೊಸ ಹುದ್ದೆಗೆ ಬಡ್ತಿ ಮತ್ತು ನಂತರ ಇಲಾಖೆಯ ಹಿರಿಯ ಹುದ್ದೆಗಳಿಗೆ ಬಡ್ತಿ, ಹೀಗೆ ಬಡ್ತಿಯ ಹಾದಿಯನ್ನು ತೋರಿಸಿದರೂ, ಕರ್ನಾಟಕದಲ್ಲಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಖ್ಯೆಯನ್ನು ಗಮನಿಸಿದರೆ, ಹಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ನಿವೃತ್ತಿ ಹೊಂದಬೇಕಾಗಬಹುದು.

ಸರ್ಕಾರವು ಒಂದು ಹುದ್ದೆಯನ್ನು ಸೃಷ್ಟಿಸಿ ನೇಮಕಾತಿ ಮಾಡಿದ ಮಾತ್ರಕ್ಕೆ ಹುದ್ದೆಯಲ್ಲಿರುವವರೆಲ್ಲರೂ ಬಡ್ತಿ ಹೊಂದಬೇಕೆನ್ನುವುದು ನನ್ನ ವಾದವಲ್ಲ. ಒಂದು ಹೊಸ ಹುದ್ದೆಯ ಸೃಷ್ಟಿಯಾಗಿ, ಅದೂ ಬೇರೆ ಹುದ್ದೆಗಳಿಗಿಂತ ಭಿನ್ನವಾಗಿಯೂ ಇಲ್ಲದೇ ಅದರ ಬಡ್ತಿ ಹಾದಿಯೂ ಊಹಾತ್ಮಕ ಅಸ್ತಿತ್ವದಲ್ಲಷ್ಟೇ ಇದ್ದರೆ, ಈ ಹುದ್ದೆಯ ಅವಶ್ಯಕತೆಯ ಬಗ್ಗೆ ಅನುಮಾನಗಳು ಸಹಜವಾಗುತ್ತವೆ.

ವಿಕೇಂದ್ರೀಕರಣದ ಅನುಷ್ಠಾನದಲ್ಲಿ ಮಹತ್ವವಾದ ಬದಲಾವಣೆಯನ್ನು ತರಲು ಅವಕಾಶವಿದ್ದ ಈ ಹುದ್ದೆಯು ಇತರೆ ಹುದ್ದೆಗಳಲ್ಲಿ ಸಾಮಾನ್ಯವಾಗಿ ಕಾಣದಂತಹ ವೈಪರೀತ್ಯಗಳು ಮತ್ತು ವೈಯುಕ್ತಿಕ ನೋವುಗಳಿಗೆ ಕಾರಣವಾಗಿದೆ. ಇಷ್ಟಾಗಿಯೂ ಹುದ್ದೆಗೆ ಅವಶ್ಯಕವಿರುವ ಮಾರ್ಪಾಡುಗಳನ್ನು ತರದಿರುವುದನ್ನು ಗಮನಿಸಿದರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪರಿಸ್ಥಿತಿಯ ಬಗ್ಗೆ ವಿಷಾದವಾಗುತ್ತದೆ.

ಪಂಚಾಯಿತಿ ಅಭಿವೃದ್ಧಿ ಆಧಿಕಾರಿಗಳ ಇಂದಿನ ಸ್ಥಿತಿಗತಿ ಮತ್ತು ಹುದ್ದೆಯ ವೈಫಲ್ಯಗಳು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಆಡಳಿತಾತ್ಮಕ, ರಾಜಕೀಯ, ಆರ್ಥಿಕ ಕ್ಲಿಷ್ಟತೆ ಮತ್ತು ದೂರಾಲೋಚನೆ ಕೊರತೆಗಳನ್ನು ಪ್ರತಿಬಿಂಬಿಸುತ್ತದೆ. ಇದು ವ್ಯವಸ್ಥೆಯ ಸರಪಳಿಯಲ್ಲಿ ಕೇವಲ ಕೊನೆಯ ಕೊಂಡಿಯನ್ನು ಬದಲಾಯಿಸಿ ಇಡೀ ಸರಪಳಿಯನ್ನು ಬಲಪಡಿಸಲು ಹೊರಟ ದುಬಾರಿ ಪ್ರಯತ್ನ.

(ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಪಡೆದಿರುವ ಲೇಖಕರು ಈಗ ಮೈಸೂರಿನಲ್ಲಿರುವ ಗ್ರಾಸ್ ರೂಟ್ ರೀಸರ್ಚ್ ಅಂಡ್ ಅಡ್ವೊಕೆಸಿ ಮೂವ್ಮೆಂಟ್ನಲ್ಲಿ ಸಂಶೋಧನಾ ವಿಭಾಗದ ಮುಖ್ಯಸ್ಥರು.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.