ನೆನಪಿನ ಬುತ್ತಿ ಬಿಚ್ಚಲು ಹೃದ ಯದ ನೋವು ಬಿಡುತ್ತಿಲ್ಲ....
ಒಂದು ವಿಚಾರ ಸರಿ ಎನಿಸಿದರೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ಅವರಲ್ಲಿ ಹಿಂಜರಿಕೆ ಇರುತ್ತಿರಲಿಲ್ಲ. ಎಂತಹ ಸಂದರ್ಭದಲ್ಲೂ ತಮ್ಮ ನಿಲುವಿನಿಂದ ಹಿಂದೆ ಸರಿಯುತ್ತಿರಲಿಲ್ಲ.

– ಅನಂತಮೂರ್ತಿ ಅವರ ಬಗ್ಗೆ ನನ್ನಲ್ಲಿನ ಒಟ್ಟಾರೆ ಅಭಿಪ್ರಾಯ ಇದು. ಅದು 1950 ದಶಕದ ಆಜು ಬಾಜು. ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ನಾನು ಆಗತಾನೆ ಹೈಸ್ಕೂಲು ಮೆಟ್ಟಿಲು ಹತ್ತಿದ್ದೆ. ಅವರ ಪರ ಪ್ರಚಾರಕ್ಕೆ ಯು.ಆರ್.ಅನಂತಮೂರ್ತಿ ಬರುತ್ತಾರೆ. ಸಭೆಗೆ ಹೋಗಿ ಅವರ ಮಾತು ಕೇಳಿಸಿಕೊಳ್ಳಿ ಎಂದು ಹಿಂದಿ ಪಂಡಿತರಾಗಿದ್ದ ತೀರ್ಥಹಳ್ಳಿಯ ವೆಂಕಟ ಶಾಮರಾವ್ ಅವರು ಹೇಳಿದ್ದರು. ಅಂದು ಶಾಲೆಗೆ ಚಕ್ಕರ್ ಹೊಡೆದು ಅವರ ಭಾಷಣ ಕೇಳಲು ಹೋಗಿದ್ದೆ. ಅದೇ ಮೊದಲು ಅವರನ್ನು ನೋಡಿದ್ದು. ಅಂದು ಅವರಾಡಿದ ಸಮಾಜವಾದಿ ಚಿಂತನೆಯ ಮಾತುಗಳು ನನ್ನೆದೆಯ ಆಳಕ್ಕೆ ಇಳಿದವು.

ಆಗುಂಬೆ–ತೀರ್ಥಹಳ್ಳಿ ಮಧ್ಯೆ ಇರುವ ಮೇಗರವಳ್ಳಿಯಲ್ಲಿ ಅವರ ಜಮೀನು ಇತ್ತು (ಈಚೆಗೆ ತಾನೆ ಅದನ್ನು ಮಾರಾಟ ಮಾಡಿದ್ದಾರೆ). ಅಲ್ಲಿಂದ 4 ಕಿ.ಮೀ ದೂರದ ಊರುವಳ್ಳಿಯಲ್ಲಿ ನಮ್ಮ ನೆಂಟರ ಮನೆಯಿಂದ ನಿತ್ಯವೂ ಮೇಗರವಳ್ಳಿ ಶಾಲೆಗೆ ಬಂದು ಹೋಗುತ್ತಿದ್ದೆ. ಅವರ ತಂದೆ ರಾಜಗೋಪಾಲಾಚಾರ್ ಅವರ ಪರಿಚಯವೂ ಆಗಿತ್ತು.

ನಮ್ಮದು ಕಟ್ಟಾ ಕಾಂಗ್ರೆಸ್ಸಿಗರ ಕುಟುಂಬ. ದೊಡ್ಡಪ್ಪ ಕಡಿದಾಳು ಮಂಜಪ್ಪ, ಅಪ್ಪ ಕಡಿದಾಳು ರಾಮಪ್ಪ ಗೌಡ ಅಲ್ಲಿನ ಪ್ರಭಾವಿ ಕಾಂಗ್ರೆಸ್

ಮುಖಂಡರು. ನಮ್ಮ ಕುಟುಂಬದಲ್ಲಿ ನಾನೊಬ್ಬನೇ ಸಮಾಜವಾದಿ!

ಅಪ್ಪ ಒಮ್ಮೆ ಕೇಳಿದರು– ‘ಏನಿದೆಲ್ಲಾ?’ ಎಂದು. ನಾನು ಹೇಳಿದೆ. ಸಮಾಜವಾದದ ಜತೆ ಹೋಗುವುದು ಪ್ರವಾಹದ ವಿರುದ್ಧ ಈಜಿದಂತೆ. ಕಾಂಗ್ರೆಸ್ ಸಹವಾಸ ಪ್ರವಾಹದ ಜತೆ ಸಾಗಿದಂತೆ... ಅಪ್ಪ ಬಲವಂತ ಮಾಡಲಿಲ್ಲ. ಅನಂತಮೂರ್ತಿ, ಗೋಪಾಲಗೌಡರು ನಮ್ಮ ನಾಯಕರು ಎಂದು ಮನಸ್ಸು ಒಪ್ಪಿಯಾಗಿತ್ತು.

ಹೈಸ್ಕೂಲ್ ಮುಗಿಸಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ಮೀಡಿಯೆಟ್ ಸೇರಿದಾಗ ನಾನು, ತೇಜಸ್ವಿ, ಶಿವಮೊಗ್ಗ ಸುಬ್ಬಣ್ಣ, ಮುತ್ತಣ್ಣ, ಕೋಣಂದೂರು ಲಿಂಗಪ್ಪ ಜತೆಯಾದೆವು. ಕನ್ನಡ ಮಾಧ್ಯಮದ ನಮಗೆ ಅಲ್ಲಿ ಇಂಗ್ಲಿಷ್ ಮಾಧ್ಯಮ ಅನಿವಾರ್ಯವಾಗಿದ್ದು ನುಂಗಲಾರದ ತುತ್ತಾಗಿತ್ತು. ಅಂದು ಗಾಂಧೀಜಿ ಬಗ್ಗೆ ಇದ್ದ ‘ನಾನ್ಡಿಟೈಲ್’ ಕುರಿತು ಪಾಠ ಮಾಡಲು ಅಂದು ಬಂದ ಉಪನ್ಯಾಸಕರ ನೋಡಿ ಸ್ವರ್ಗವೇ ಸಿಕ್ಕಷ್ಟು ಸಂತೋಷ ಆಯ್ತು. ಅವರು ಅನಂತಮೂರ್ತಿಯೇ...

ಒಕ್ಕಲಿಗರ ಹಾಸ್ಟೆಲ್ನಲ್ಲಿ ಉಳಿದು ಕಾಲೇಜಿಗೆ ಬರುತ್ತಿದ್ದ ನಾವು ಇಂಗ್ಲಿಷ್ ಎಂಬ ಕೀಳರಿಮೆಯಿಂದ ಬಳಲುತ್ತಿದ್ದೆವು. ಗುರುಗಳು ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದರು. ಇಂಗ್ಲಿಷ್ನಲ್ಲೇ ಪಠ್ಯ ಓದಿ, ಕನ್ನಡದಲ್ಲೇ ಸಂಪೂರ್ಣ ತಾತ್ಪರ್ಯ ಹೇಳುತ್ತಿದ್ದರು. ಬಿಡುವಿನ ವೇಳೆಯಲ್ಲಿ ಕಾಲೇಜು ಕ್ಯಾಂಪಸ್ನ ಬಯಲಲ್ಲೇ ಕುಳಿತು ನಮ್ಮ ಜತೆ ಹರಟುತ್ತಿದ್ದರು. ‘ಏನು ಸಹಾಯಬೇಕಾದರೂ ಕೇಳಿ ದಾಕ್ಷಿಣ್ಯ ಬೇಡ. ಗೊತ್ತಿಲ್ಲ ಎಂದು ಸುಮ್ಮನೆ ಕೂರಬಾರದು’ ಎನ್ನುತ್ತಿದ್ದರು. ನಮ್ಮೆದುರೇ ಸಿಗರೇಟು ಸೇದುತ್ತಿದ್ದರು. ಆದರೆ, ನಮಗೆ ಕಲಿಯಲು ಬಿಡಲೇ ಇಲ್ಲ!
ಮೈಸೂರಿನಲ್ಲೂ ಅವರೇ...!

ನಾನು ಇಂಟರ್ಮೀಡಿಯೇಟ್ ಅನುತ್ತೀರ್ಣನಾದೆ. ತೇಜಸ್ವಿ ಅವರೆಲ್ಲ ಮೈಸೂರು ಮಹಾರಾಜ ಕಾಲೇಜು ಸೇರಿದರು. ನಾನೂ ಅವನ ಜತೆ ಮೈಸೂರು ಸೇರಿಕೊಂಡೆ. ಒಂದು ವರ್ಷ ನಷ್ಟದ ನಂತರ ಪದವಿ ವ್ಯಾಸಂಗಕ್ಕಾಗಿ ಮಹಾರಾಜ ಕಾಲೇಜು ಸೇರಿದೆ. ಅಲ್ಲೂ ಅನಂತಮೂರ್ತಿ ನಮಗೆ ಇಂಗ್ಲಿಷ್ ಭಾಷಾ ತರಗತಿ ತೆಗೆದುಕೊಳ್ಳುತ್ತಿದ್ದರು. ಮೈಸೂರಿನ ಅವರ ಮನೆಗೆ ಹೋಗುತ್ತಿದ್ದೆ. ಅವರ ತಾಯಿ ಸಿಹಿ ಮಾಡಿದರೆ ನನಗಾಗಿ ಒಂದು ಲೋಟ ಎತ್ತಿಡುತ್ತಿದ್ದರು.

ನನ್ನ ಕುರಿತು ಸಾಕ್ಷ್ಯಚಿತ್ರ ತಯಾರಿಸಲು ಬಂದಿದ್ದ ಬೆಂಗಳೂರಿನ ಪ್ರಕಾಶ್ ಅವರ ಬಳಿ ಹೇಳಿಕೆ ನೀಡುವಾಗ ಅನಂತಮೂರ್ತಿ ನನ್ನನ್ನು ನಾಲ್ಕನೇ ಮಗ ಎಂದಿದ್ದು ನನ್ನ ಕಣ್ಣಾಲಿಗಳಲ್ಲಿ ನೀರು ತರಿಸಿತ್ತು.

ಅವರ ಮೊದಲ ಕವನ ಸಂಕಲನ:
ಮೈಸೂರಿನಲ್ಲಿ ನಾನು, ತೇಜಸ್ವಿ ಸೇರಿ ನೃಪತುಂಗ ಮುದ್ರಣಾಲಯ ನಡೆಸುತ್ತಿದ್ದೆವು. ಸಹ್ಯಾದ್ರಿ ಪ್ರಕಾಶನದ ಅಡಿ ಪುಸ್ತಕ ಪ್ರಕಟಣೆ ಮಾಡಬೇಕು ಎಂಬ ಹಂಬಲ. ಆದರೆ, ಅದಕ್ಕೆ ಅನಂತಮೂರ್ತಿ ಸಹಮತವಿರಲಿಲ್ಲ. ಅದರ ಬದಲು ಕೇರಳ ಮಾದರಿಯಲ್ಲಿ ಬರಹಗಾರರ ಸಹಕಾರ ಸಂಘ ಸ್ಥಾಪಿಸಲು ಸಲಹೆ ನೀಡಿದ್ದರು.

ನಾವು ಪದವಿ ಮುಗಿಸುವುದರ ಒಳಗೆ ಅವರು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಡ್ಗೆ ಹೋಗಲು ಸಿದ್ಧತೆ ನಡೆಸಿದ್ದರು. ಅದುವರೆಗೆ ಅವರು ಬರೆದಿದ್ದ ಕವನಗಳನ್ನು ಅಷ್ಟೇನೂ ಚೆನ್ನಾಗಿಲ್ಲ ಎಂಬ ನೆಪಹೇಳಿ ಗಂಟುಕಟ್ಟಿ ಅಟ್ಟದ ಮೇಲೆ ಹಾಕಿದ್ದರು. ಅವರ ತಾಯಿಯ ಅನುಮತಿ ಪಡೆದು ಮುದ್ರಿಸಿದೆವು. ಅದು ಅವರ ಮೊದಲ ಸಂಕಲನ ‘ಬಾವಲಿ’ ಅದಕ್ಕಾಗಿ ಅವರಿಗೆ ₨ 500 ಗೌರವಧನ ನೀಡಿದ್ದೆ. ಅದನ್ನು ನಯವಾಗೇ ನಿರಾಕರಿಸಿದ್ದರು.

ಕಾರು ಪುರಾಣ:
ಅನಂತಮೂರ್ತಿ, ಎಸ್ತರ್ ಅವರನ್ನು ಮದುವೆ ಆದ ನಂತರ ಕಾಫಿ ಹೌಸ್ಗೆ ಹೋಗಲು ಒಂದು ಕಾರು ಇದ್ದಿದ್ದರೆ ಚೆನ್ನ ಅಲ್ಲವೇ ಎಂದರು. ಅವರ ಭಾವನೆ ಅರ್ಥಮಾಡಿಕೊಂಡೆ. ನಮ್ಮ ತಂದೆ ಬಳಿ ಇದ್ದ ಮಾರೀಷ್–8 ಎಂಬ ಕಾರು ತಂದು ಮೈಸೂರಿನಲ್ಲಿ ದುರಸ್ತಿ ಮಾಡಿಸಿದೆ. ಒಮ್ಮೆ ಟಾಂಗಾ ಗಾಡಿಗೆ ಗುದ್ದಿ ಅಪಘಾತ ಮಾಡಿದಾಗ ಕಾರಿನ ಎರಡು ಬಾಗಿಲು ಮುರಿದುಬಿದ್ದಿದ್ದವು. ಆಗ ಅನಂತಮೂರ್ತಿ, ‘ನಮ್ಮ ಮನೆಯಲ್ಲಿ ಸೋಫಾಸೆಟ್ ಇದೆ. ಮತ್ತೊಂದು ಏಕೆ. ಇದನ್ನು ಕೊಟ್ಟುಬಿಡು’ ಎಂದು ಸೋಫಾಸೆಟ್ನಂತಿದ್ದ ಕಾರನ್ನು ಕುರಿತು ನಗೆಚಟಾಕಿ ಹಾರಿಸಿದ್ದರು.

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರೂ ಒಂದು ವರ್ಷದ ಹಿಂದೆ ನಮ್ಮೂರು ಭಗವತಿಕೆರೆಯ (ಭದ್ರಾವತಿ ತಾಲ್ಲೂಕು) ಸರ್ಕಾರಿ ಶಾಲೆಗೆ ಬಂದು ಮಕ್ಕಳಿಂದ ‘ಧರಣಿಮಂಡಲ ಮಧ್ಯದೊಳಗೆ’ ಹಾಡು ಹೇಳಿಸಿ ಸಂತಸಪಟ್ಟಿದ್ದರು. ಒಂದು ತಿಂಗಳ ಹಿಂದೆ ನಾನು, ನನ್ನ ಮಗಳು, ಅಳಿಯ ಅವರ ಮನೆಗೆ ಹೋಗಿ ಒಂದು ದಿನ ಉಳಿದು ಬಂದಿದ್ದೆವು... ನೆನಪಿನ ಬುತ್ತಿಬಿಚ್ಚಲು ಹೃದಯದ ನೋವು ಬಿಡುತ್ತಿಲ್ಲ...

ನಿರೂಪಣೆ: ಚಂದ್ರಹಾಸ ಹಿರೇಮಳಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.