ಉಡುಪಿ: ಹಾಲಿನ ನದಿಯೊಂದು ಆಕಾಶ ಮಾರ್ಗವಾಗಿ ಬಾಹುಬಲಿಯ ಮುಡಿಯಿಂದ ಇಳಿದು ಶಾಂತವಾಗಿ ಚಲಿಸಿ ಧನ್ಯತೆ ಅನುಭವಿಸಿದಂತೆ, ಸ್ಪರ್ಶ ಮಾತ್ರದಿಂದಲೇ ಸಕಲವನ್ನೂ ಪವಿತ್ರಗೊಳಿಸುವ ಗಂಗೆಯೂ ಹಂಬಲಿಸಿ ಹರಿದಂತೆ, ಎಲ್ಲವನ್ನೂ ಕಣ್ತುಂಬಿಕೊಂಡ ಜನಸ್ತೋಮದ ಭಕ್ತಿ ಕಡಲಾಗಿ ಉಕ್ಕಿದಾಗ ತ್ಯಾಗ ಮೂರ್ತಿಯನ್ನು ಹೊತ್ತು ನಿಂತ ಕಾರ್ಕಳದ ಗೊಮ್ಮಟ ಬೆಟ್ಟದ ಬೃಹತ್ ಕರಿಕಲ್ಲಿಗೂ ಜೀವ ಬಂದು ಸಂಭ್ರಮಿಸಿದಂತೆ ಭಾಸವಾಯಿತು. ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ನಡೆದ ಮಹಾಮಸ್ತಕಾಭಿಷೇಕ ಹೃನ್ಮನ ಸೆಳೆಯಿತು.

ನೀರು, ಎಳನೀರು, ಅರಿಶಿನ– ಅಕ್ಕಿ ಹಿಟ್ಟು, ಕಬ್ಬಿನ ರಸ, ಶ್ರೀಗಂಧ, ಚಂದನ, ಮೊದಲಾದ ದ್ರವ್ಯಗಳು 42 ಅಡಿ ಎತ್ತರದ ಬಾಹುಬಲಿಯ ಮೂರ್ತಿಯನ್ನು ಸ್ಪರ್ಶಿಸಿ– ಆವರಿಸಿ ಪದತಲ ಮುಟ್ಟುವ ಗುರಿಯೊಂದಿಗೆ ಧಾವಂತದಲ್ಲಿ ಇಳಿಯುವ ಮಸ್ತಕಾಭಿಷೇಕದ ಅಪರೂಪದ ದೃಶ್ಯ ನಯನ ಮನೋಹರವಾಗಿತ್ತು.

ಪ್ರತಿ ದ್ರವ್ಯದ ಅಭಿಷೇಕ ನಡೆದಾಗಲೂ ಬದಲಾಗುತ್ತಿದ್ದ ಮೂರ್ತಿಯ ಬಣ್ಣ ನೋಡುಗರಿಗೆ ಅನೂಹ್ಯ ಆನಂದ ನೀಡಿತು. ಆದರೆ ಬದಲಾಗದ ಬಾಹುಬಲಿಯ ಸ್ಥಿರ ವಿರಕ್ತ ಮುಖಭಾವ ಮಾತ್ರ ಅದೇ ವೈರಾಗ್ಯದ ಸಂದೇಶ ಸಾರಿ ಬದುಕಿನ ಸಾರ್ಥಕತೆಯ ಸೂತ್ರ ಬೋಧಿಸಿತು. ಮಹಾಮಸ್ತಕಾಭಿಷೇಕ ಮಾಡಲು ನಿರ್ಮಾಣ ಮಾಡಿದ್ದ ಬೃಹತ್ ಅಟ್ಟಳಿಗೆಯ ಮೇಲೆ ನಿಂತು ಮೊದಲ ದಿನದ ಮಹಾಮಸ್ತಕಾಭಿಷೇಕವನ್ನು ಸಂಪನ್ನಗೊಳಿಸಲಾಯಿತು.

ಸಕಲ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿ 108 ಕಲಶಾಭಿಷೇಕದಿಂದ ಮಹಾ ಮಜ್ಜನಕ್ಕೆ ಚಾಲನೆ ನೀಡಲಾಯಿತು. ನೂರಾರು ಲೀಟರ್‌ಗಳ ಹಾಲು, ಎಳನೀರು, ಚಂದನ, ಕಬ್ಬಿನ ಹಾಲಿನಿಂದ ಅಹಿಂಸಾ ಪ್ರತಿಪಾದಕನಿಗೆ ಮಜ್ಜನ ಮಾಡಲಾಯಿತು. ಇದೇ ಸಂದರ್ಭಕ್ಕೆ ಸಾಕ್ಷಿಯಾಗಲು ಕಾಯುತ್ತಿದ್ದ ಸಾವಿರಾರು ಭಕ್ತರು ಭಕ್ತಿಯಲ್ಲಿ ತೇಲಿ ಹೋದರು.

ಮೂರ್ತಿಯ ಮುಂಭಾಗದ ಜಾಗದಲ್ಲಿ ವೇದಿಕೆ ನಿರ್ಮಿಸಿ ನೂರಾರು ಕುರ್ಚಿಗಳನ್ನು ಹಾಕಿದ್ದರಿಂದ ಭಕ್ತರು ನೇರವಾಗಿ ಮಸ್ತಕಾಭಿಷೇಕವನ್ನು ವೀಕ್ಷಿಸಲು ಅನುಕೂಲವಾಯಿತು. ಕುರ್ಚಿ ಸಿಗದ ಸಾವಿರಾರು ಜನರು ನಿಂತುಕೊಂಡೇ ಮಜ್ಜನಕ್ಕೆ ಸಾಕ್ಷಿಯಾದರು. ಬೆಟ್ಟದ ಕೆಳಗೆ ಅಳವಡಿಸಿದ್ದ ಬೃಹತ್ ಎಲ್‌ಇಡಿ ಪರದೆಗಳ ಮೂಲಕವೂ ಸಾವಿರಾರು ಭಕ್ತರು ಮಜ್ಜನ ದೃಶ್ಯಗಳನ್ನು ಕಣ್ತುಂಬಿಕೊಂಡರು. ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ಗೊಮ್ಮಟ ಬೆಟ್ಟ ವೈಭವದ ಪುಟ್ಟ ದ್ವೀಪದಂತೆ ಕಂಗೊಳಿಸಿತು.

ಜನ ಸಾಗರ: ಮೊದಲ ದಿನದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದ ಜನಸಾಗರ ಎಲ್ಲ ದಾರಿಗಳೂ ಕಾರ್ಕಳವನ್ನು ಸೇರಿದಂತೆನಿಸಿತು. ಈ ಬಾರಿಯ ಉತ್ಸವವನ್ನು ಜನಸ್ನೇಹಿಯಾಗಿಸಲು ಸಂಘಟಕರು ಮಾಡಿದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಐದು ವಿಶಾಲ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಸಮತಟ್ಟು ಮಾಡಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿದ್ದು ಅನುಕೂಲವಾಯಿತು. ವಾಹನ ನಿಲ್ಲಿಸಿ ಬಂದವರನ್ನು ವಾಹನದ ಮೂಲಕ ಬೆಟ್ಟಕ್ಕೆ ಕರೆದೊಯ್ದ ಕಾರಣ ಬೆಟ್ಟ ಹತ್ತುವ ಕಷ್ಟ ಇಲ್ಲವಾಯಿತು. ಊಟ– ಉಪಹಾರದ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಿದ್ದರಿಂದ ಉದರ ಬ್ರಹ್ಮನೂ ತೃಪ್ತನಾದ. ಸುಮಾರು ಮೂರು ಸಾವಿರ ಸ್ವಯಂ ಸೇವಕರು ಹಗಲಿರುಳು ದುಡಿದ ಪರಿಣಾಮ ಯಾವುದೇ ಗೊಂದಲಗಳಿಗೆ ಅವಕಾಶವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.