ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ7 ಶೃಂಗಸಭೆ ಆರಂಭ |ಉಕ್ರೇನ್‌ಗೆ ₹ 4.17 ಲಕ್ಷ ಕೋಟಿ ಸಾಲ ನೀಡಲು ಒಪ್ಪಿಗೆ

Published : 13 ಜೂನ್ 2024, 14:13 IST
Last Updated : 13 ಜೂನ್ 2024, 14:13 IST
ಫಾಲೋ ಮಾಡಿ
Comments

ಬಾರಿ (ಇಟಲಿ): ಮುಟ್ಟುಗೋಲು ಹಾಕಿಕೊಂಡಿರುವ ರಷ್ಯಾದ ಆಸ್ತಿಗಳ ಆಧಾರದ ಮೇಲೆ ಉಕ್ರೇನ್‌ಗೆ ₹ 4.17 ಲಕ್ಷ ಕೋಟಿ (55 ಶತಕೋಟಿ ಡಾಲರ್‌) ಸಾಲ ನೀಡುವ ಒಪ್ಪಂದದೊಂದಿಗೆ ಜಿ7 ರಾಷ್ಟ್ರಗಳ ಶೃಂಗಸಭೆ ಗುರುವಾರ ಪ್ರಾರಂಭವಾಯಿತು. ಈ ಒಪ್ಪಂದದಿಂದಾಗಿ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ಭಾರಿ ಬೆಂಬಲ ಸಿಕ್ಕಂತಾಗಲಿದೆ. ಸಾಲ ನೀಡುವ ಕುರಿತಾದ ಈ ಒಪ್ಪಂದದ ಬಗ್ಗೆ ಅಮೆರಿಕ ಪ್ರಸ್ತಾವ ಇರಿಸಿತ್ತು.

ಮೂರು ದಿನಗಳ ಶೃಂಗಸಭೆಗಾಗಿ ಜಿ7 ರಾಷ್ಟ್ರಗಳ ನಾಯಕರು ದಕ್ಷಿಣ ಇಟಲಿಗೆ ಬಂದಿಳಿಯುವ ಮೊದಲು ಈ ಒಪ್ಪಂದದ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗಿತ್ತು ಎಂದು ರಾಜತಾಂತ್ರಿಕರು ದೃಢಪಡಿಸಿದರು. 

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಪ್ರತ್ಯೇಕವಾಗಿ ದ್ವಿಪಕ್ಷೀಯ ಭದ್ರತಾ ಒಪ್ಪಂದಕ್ಕೂ ಇದೇ ವೇಳೆ ಸಹಿ ಹಾಕುವ ನಿರೀಕ್ಷೆ ಇದೆ.

‘ಜಿ7 ಶೃಂಗಸಭೆಯಲ್ಲಿ ಜಪಾನ್ ಮತ್ತು ಅಮೆರಿಕದ ಜತೆಗಿನ ಭದ್ರತಾ ಒಪ್ಪಂದಕ್ಕೆ ಸಹಿ ಹಾಕಲಾಗುವುದು’ ಎಂದು ಝೆಲೆನ್‌ಸ್ಕಿ ಅವರು ‘ಟೆಲಿಗ್ರಾಮ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಬೈಡನ್ ಅವರು ಗುರುವಾರ ಉಕ್ರೇನ್‌ ಜತೆಗಿನ ಹೊಸ ಭದ್ರತಾ ಒಪ್ಪಂದಕ್ಕೆ ಸಹಿ ಹಾಕಲಿರುವ ಬಗ್ಗೆ ಅಮೆರಿಕದ ಅಧಿಕಾರಿಯೊಬ್ಬರು ಬುಧವಾರವೇ ಮಾಹಿತಿ ಹಂಚಿಕೊಂಡಿದ್ದರು. 

ಪೋಪ್ ಫ್ರಾನ್ಸಿಸ್ ಅವರು ಜಿ7 ಶೃಂಗಸಭೆ ಉದ್ದೇಶಿಸಿ ಶುಕ್ರವಾರ ಭಾಷಣ ಮಾಡಲಿದ್ದು, ಈ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಮೊದಲ ಪೋಪ್‌ ಎನ್ನುವ ಶ್ರೇಯಕ್ಕೆ ಅವರು ಪಾತ್ರರಾಗಲಿದ್ದಾರೆ.  

ಬಿಸಿಲಿನ ಝಳದಲ್ಲಿ ಮುಳುಗಿರುವ ಇಟಲಿಯ ಪುಗ್ಲಿಯಾ ಪ್ರದೇಶದಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ಈ ವರ್ಷ ನಡೆಯುತ್ತಿರುವ ವಾರ್ಷಿಕ ಶೃಂಗದಲ್ಲಿ ಪೋಪ್‌ ಕೃತಕ ಬುದ್ಧಿಮತ್ತೆಯಿಂದ ಆಗುವ ಅನುಕೂಲಗಳು ಮತ್ತು ಅಪಾಯಗಳ ಬಗ್ಗೆ ಮಾತನಾಡಲಿದ್ದಾರೆ. ಜತೆಗೆ ಉಕ್ರೇನ್‌ ಮೇಲೆ ನಡೆಯುತ್ತಿರುವ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣ ಮತ್ತು ಗಾಜಾದಲ್ಲಿ ಇಸ್ರೇಲ್-ಹಮಾಸ್ ನಡುವಿನ ಯುದ್ಧವನ್ನು ಶಾಂತಿಯುತವಾಗಿ ಅಂತ್ಯಗೊಳಿಸಬೇಕು ಎಂಬ ಮನವಿಯನ್ನು ಅವರು ತಮ್ಮ ಭಾಷಣದಲ್ಲಿ ಪುನರುಚ್ಚರಿಸುವ ನಿರೀಕ್ಷೆ ಇದೆ.

ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಬ್ರಿಟನ್‌ ಹಾಗೂ ಅಮೆರಿಕ ಜಿ7 ಗುಂಪಿನ ಸದಸ್ಯ ರಾಷ್ಟ್ರಗಳಾಗಿವೆ. ಈ ವರ್ಷದ ಶೃಂಗಸಭೆಯ ಆತಿಥ್ಯ ವಹಿಸಿರುವ ಇಟಲಿ, ಅಲ್ಜೀರಿಯಾದ ಅಧ್ಯಕ್ಷ ಅಬ್ಡೆಲ್‌ಮಡ್ಜಿದ್ ಟೆಬ್ಬೌನ್, ಕೆನ್ಯಾದ ಅಧ್ಯಕ್ಷ ವಿಲಿಯಂ ರುಟೊ ಮತ್ತು ಟುನೀಶಿಯಾದ ಅಧ್ಯಕ್ಷ ಕೈಸ್ ಸೈದ್ ಸೇರಿದಂತೆ ಆಫ್ರಿಕಾದ ಹಲವು ನಾಯಕರನ್ನು ಸಭೆಗೆ ಆಹ್ವಾನಿಸಿದೆ. ಅಲ್ಲದೆ, ಅತಿಥಿಗಳಾಗಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಭಾರತದ ಪ್ರಧಾನಿ ನರೇಂದ್ರ ಮೋದಿ, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರನ್ನೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆಹ್ವಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT