‘ಚೆಲುವಾಂತ ಚೆನ್ನಿಗನೆ ನಲಿದಾಡು ಬಾ, ಈ ಶೃಂಗಾರ ಶಿಲೆಯೊಡನೆ ಕುಣಿದಾಡು ಬಾ...’ ಈ ಹಾಡಿನ ‘ಆ್ಯಕ್ಷನ್-–ಕಟ್’ ನಾನು ನೋಡಿದ ಮೊದಲ ಸಿನಿಮಾ ಚಿತ್ರೀಕರಣದ ದೃಶ್ಯ. ನಾನು ಬೇಲೂರಿನಲ್ಲಿ ಹೈಸ್ಕೂಲ್ ಓದುತ್ತಿದ್ದಾಗ ‘ಅಮರಶಿಲ್ಪಿ ಜಕಣಾಚಾರಿ’ ಸಿನಿಮಾದ ಚಿತ್ರೀಕರಣ. ಶಾಲೆಗೆ ಚಕ್ಕರ್ ಹೊಡೆದು ಎರಡು ದಿನ ಪೂರಾ ನೋಡಿದ್ದು ಕೇವಲ ಒಂದು ಹಾಡಿನ ನಾಲ್ಕು ಸಾಲುಗಳ ಚಿತ್ರೀಕರಣವನ್ನು. ನಾಡಿನ ಪ್ರಸಿದ್ಧ ನಟಿ ಬಿ.ಸರೋಜಾದೇವಿ ಅವರನ್ನು ಮೊದಲ ಬಾರಿಗೆ ಪ್ರತ್ಯಕ್ಷವಾಗಿ ನೋಡಿದ ಕ್ಷಣವದು.

ಸರೋಜಾದೇವಿ ಅವರನ್ನು ನಾನು ಪುನಃ ನೋಡಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕನಾಗಿದ್ದಾಗ. ಅವರಿಗೆ ‘ರಾಜ್ಯೋತ್ಸವ’ ಪ್ರಶಸ್ತಿ ದೊರಕಿದ ಬಗ್ಗೆ ತಿಳಿಸಲು ಫೋನ್ ಮಾಡಿದೆ. ಅವರು ಮದ್ರಾಸಿನಲ್ಲಿದ್ದರು. ಕರ್ನಾಟಕ ಸರ್ಕಾರ ಪ್ರಶಸ್ತಿ ಕೊಟ್ಟಿದ್ದರ ಬಗ್ಗೆ ಸರೋಜಾದೇವಿ ಅವರಿಗೆ ಬಹಳ ಹೆಮ್ಮೆ ಎನಿಸಿತ್ತು. ಇಡೀ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ದೊಡ್ಡ ಹೆಸರು ಮಾಡಿದ ನಾಯಕಿಗೆ ಹಲವಾರು ಪ್ರಶಸ್ತಿಗಳು ಸಿಕ್ಕಿದ್ದವು. ಆದರೆ, ಕರ್ನಾಟಕ ತನ್ನನ್ನು ಗೌರವಿಸಿತಲ್ಲ ಎಂದು ತುಂಬ ಖುಷಿಪಟ್ಟರು. ಬಂದು ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು. ಅಂದಿನಿಂದ ಇಂದಿನವರೆಗೆ ನನ್ನನ್ನು ಸೋದರ ವಾತ್ಸಲ್ಯದಿಂದ ನೋಡುವ ಸರೋಜಾದೇವಿ ಸರಳ, ಸೌಜನ್ಯದ ಅದ್ಭುತ ಕಲಾವಿದೆ. ತಾವು ಆಯ್ದುಕೊಂಡ ಕ್ಷೇತ್ರದಲ್ಲಿ ಶ್ರದ್ಧೆ ಮತ್ತು ಪರಿಶ್ರಮದಿಂದ ಗೌರವ ಮತ್ತು ಕೀರ್ತಿ ಸಂಪಾದಿಸಿಕೊಂಡವರು. ಅವರಲ್ಲಿ ಇಂದಿಗೂ ಅದೇ ಘನತೆ, ಗಾಂಭೀರ್ಯ ತುಂಬಿದೆ.

‘ಅಮರಶಿಲ್ಪಿ ಜಕಣಾಚಾರಿ’ ಚಿತ್ರೀಕರಣದಲ್ಲಿ ತಲ್ಲೀನನಾಗಿ ಸರೋಜಾದೇವಿ ಅವರ ನಾಟ್ಯಕ್ಕೆ ಮಾರುಹೋಗಿದ್ದ ನಾನು, ಬೇಲೂರಿನ ವಾಸ್ತುಶಿಲ್ಪ ವೈಭವವನ್ನೇ ಗಮನಿಸಿರಲಿಲ್ಲ. ಆ ಪ್ರೌಢಿಮೆಯೂ ನನಗಾಗ ಇರಲಿಲ್ಲ. ಬೇಲೂರಿನ ದೇವಸ್ಥಾನ ನಾಡಿನ ಶಿಲ್ಪಕಲೆ ವೈಭವಕ್ಕೆ, ವೈವಿಧ್ಯಕ್ಕೆ ಹೆಸರುವಾಸಿಯಾಗಿದ್ದರೂ ನಾನು ಅದನ್ನು ಪ್ರವಾಸಿಗಳ ದೃಷ್ಟಿಯಿಂದ ನೋಡಿದ್ದು ಪ್ರವಾಸೋದ್ಯಮ ಆಯುಕ್ತನಾದ ಬಳಿಕ.

ಅಲ್ಲಿಯವರೆಗೆ ನೂರಾರು ಬಾರಿ ಅದೇ ದೇವಸ್ಥಾನದಲ್ಲಿ ಓಡಾಡಿದ್ದರೂ ಅದರ ಮಹತ್ವವನ್ನು ನಾನು ಗಮನಿಸಿರಲಿಲ್ಲ. ಬೆಳಿಗ್ಗೆ ಆ ದೇವಸ್ಥಾನ ನೋಡಲು ಹೇಗಿರುತ್ತದೆಂದು ಒಂದುದಿನ ಬೆಳಗಿನ ೭ ಗಂಟೆಗೆ ಹೋಗಿದ್ದೆ. ಎರಡು ಬಸ್ ತುಂಬಾ ಶಾಲಾ ಮಕ್ಕಳನ್ನು ಪ್ರವಾಸಕ್ಕೆಂದು ಕರೆತಂದಿದ್ದರು. ರಾತ್ರಿಯಲ್ಲಿ ತಂಗುವ ವೆಚ್ಚ ಉಳಿಸಲು ಇಡೀ ರಾತ್ರಿ ಪ್ರಯಾಣಿಸಿ ಬೆಳಿಗ್ಗೆ ದೇವಸ್ಥಾನದಲ್ಲಿ ತಂದು ಇಳಿಸಿದ್ದರು. ಅವರೆಲ್ಲ ಬಾಯಲ್ಲಿ ಟೂತ್ ಬ್ರಷ್ ಮತ್ತು ಹೆಗಲ ಮೇಲೆ ಟವಲ್ ಹಾಕಿಕೊಂಡು ಮುಖ ತೊಳೆಯಲು, ಟಾಯ್ಲೆಟ್ಗಾಗಿ ಹುಡುಕಾಡುತ್ತಿದ್ದರು. ಅದರಲ್ಲೂ ಹೆಣ್ಣುಮಕ್ಕಳ ಅಸಹಾಯಕ ಸ್ಥಿತಿ ನೋಡಲಾಗುತ್ತಿರಲಿಲ್ಲ. ಇದು ಇಂದಿಗೂ ರಾಜ್ಯದ ಎಲ್ಲ ಪ್ರವಾಸಿ ತಾಣಗಳಲ್ಲಿ ವಾಸ್ತವ.

ಆ ದಿನಗಳಲ್ಲೇ ರಾಜ್ಯದ ಪ್ರವಾಸಿ ತಾಣಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲು ಒಂದು ನೀಲನಕ್ಷೆ ತಯಾರಿಸಲಾಯ್ತು. ಅದಕ್ಕೆ ಬಜೆಟ್ ಅನುಕೂಲವನ್ನೂ ಪಡೆಯಲಾಯ್ತು. ಸಿದ್ಧಗೊಂಡ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುವ ವೇಳೆಗೆ ಒಬ್ಬ ಅವಿವೇಕಿ ಮುಖ್ಯ ಕಾರ್ಯದರ್ಶಿಯ ತಿಕ್ಕಲುತನದಿಂದ ನನ್ನ ವರ್ಗಾವಣೆಯಾಯ್ತು. ಆ ಯೋಜನೆ ನನೆಗುದಿಗೆ ಬಿದ್ದಿತು. ಸರ್ಕಾರ ಪ್ರವಾಸೋದ್ಯಮ ಇಲಾಖೆಯನ್ನು ನಡೆಸಿಕೊಳ್ಳುವ ರೀತಿಗೆ ಇದೊಂದು ಸರಳ ಉದಾಹರಣೆಯಷ್ಟೇ.

ಪ್ರವಾಸೋದ್ಯಮ ಇಲಾಖೆ ಆಯುಕ್ತನಾಗಿ ೧೩ ತಿಂಗಳ ಅವಧಿಯಲ್ಲಿ ಆಗಿರುವ ಕೆಲಸಗಳನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನ. ಕೇಂದ್ರ ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಪ್ರವಾಸಿ ತಾಣಗಳಿಗೆ ಮಾರ್ಗದರ್ಶಿ ಫಲಕಗಳನ್ನು ಹಾಕಲು ಅಪಾರವಾದ ಸಹಾಯಧನ ನೀಡಿತ್ತು. ಆದರೆ, ಗುತ್ತಿಗೆ ನೀಡುವ ವಿಷಯದ ತಕರಾರಿನಿಂದ ಐದು ವರ್ಷಗಳ ಕಾಲ ಉಪಯೋಗವಾಗದೆ ಉಳಿದಿತ್ತು. ಕೇಂದ್ರಕ್ಕೆ ಈ ಹಣ ವಾಪಸ್ ಮಾಡುವಂತೆ ಸೂಚನೆ ಬಂದಿತ್ತು. ಅಂದಿನ ಕೇಂದ್ರ ಸಚಿವರಾಗಿದ್ದ ಜಗಮೋಹನ್ ಮತ್ತು ಕಾರ್ಯದರ್ಶಿಯಾಗಿದ್ದ ನಮ್ಮ ಕೊಡಗಿನವರೇ ಆದ ರತಿ ವಿನಯ್ ಝಾ ಅವರಿಂದ ಒಂದು ವರ್ಷ ವಿಸ್ತರಣೆ ಪಡೆದು ಕರ್ನಾಟಕದ ವಿವಿಧ ಪ್ರವಾಸಿ ತಾಣಗಳಿಗೆ ಮಾರ್ಗಸೂಚಿ ಫಲಕಗಳನ್ನು ಹಂತ–-ಹಂತವಾಗಿ ಅಳವಡಿಸಲಾಯ್ತು. ಈಗ ರಸ್ತೆ ಅಗಲೀಕರಣದಿಂದ ಕೆಲವು ಫಲಕಗಳು ನೆಲಕಚ್ಚಿವೆ. ಉಳಿದವು ತುಕ್ಕು ಹಿಡಿದಿವೆ. ಬಾಕಿ ಸ್ಥಳಗಳಿಗೆ ಮಾರ್ಗಸೂಚಿ ಫಲಕ ಹಾಕುವ ಕೆಲಸ ಸ್ಥಗಿತಗೊಂಡಿದೆ.

ಕರ್ನಾಟಕದ ಹೋಟೆಲ್ ದರಗಳು ಬಹುಶಃ ಇಡೀ ದೇಶದಲ್ಲಿನ ಹೋಟೆಲ್ ದರಗಳಿಗಿಂತ ಅತಿ ದುಬಾರಿ. ಅದರಲ್ಲೂ ಗ್ರಾಮಾಂತರ ಪ್ರವಾಸಿ ತಾಣಗಳಿಗೆ ಸನಿಹದಲ್ಲಿ ಉಳಿದುಕೊಳ್ಳಲು ಯೋಗ್ಯವಾದ ಸ್ಥಳಗಳಿಲ್ಲದ್ದರಿಂದ ‘ಅತಿಥಿ’ ಎಂಬ ಯೋಜನೆಯಡಿ ‘ಹೋಮ್ ಸ್ಟೇ’ಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿ ಕೊಡಗು, ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತೇಜನ ನೀಡಲಾಯ್ತು. ಪರಿಣಾಮವಾಗಿ ಇಂದು ಕರ್ನಾಟಕದಲ್ಲಿ ಒಂದು ಸಾವಿರಕ್ಕೂ ಹೆಚ್ಚು ‘ಹೋಮ್ ಸ್ಟೇ’ಗಳು ಪ್ರವಾಸಿಗರಿಗೆ ಸೌಲಭ್ಯ ಒದಗಿಸುತ್ತಿವೆ. ಸಮರ್ಪಕವಾಗಿ ನಿರ್ವಹಿಸಿದರೆ ‘ಹೋಮ್ ಸ್ಟೇ’ ಗ್ರಾಮೀಣ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಅನುಕೂಲ ಆಗುವುದಲ್ಲದೆ ಪ್ರವಾಸಿಗಳಿಗೆ ಕರ್ನಾಟಕದ ಸಂಸ್ಕೃತಿ, ಆಚಾರ-–ವಿಚಾರಗಳ ಪರಿಚಯ ಒದಗಿಸುತ್ತದೆ. ಇದೇ ಸಂದರ್ಭದಲ್ಲಿ ಕೇಂದ್ರದ ನೆರವಿನಿಂದ ಮಂಡ್ಯದ ಬಳಿಯ ಕೊಕ್ಕರೆ–ಬೆಳ್ಳೂರು ಮತ್ತು ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿ ಗ್ರಾಮ ಪ್ರವಾಸೋದ್ಯಮ (ವಿಲೇಜ್ ಟೂರಿಸಂ) ಪ್ರಾರಂಭಿಸಲಾಯ್ತು. ಇದನ್ನು ಇನ್ನೂ ಹಲವಾರು ಕಿರು ಪ್ರವಾಸಿ ತಾಣಗಳಿಗೆ ವಿಸ್ತರಿಸುವ ಸಾಧ್ಯತೆಗಳಿವೆ.

ಎಸ್.ಎಂ. ಕೃಷ್ಣ ಅವರ ಸರ್ಕಾರ ನನ್ನನ್ನು ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಮತ್ತು ಕೆಎಸ್ಟಿಡಿಸಿಯ ವ್ಯವಸ್ಥಾಪಕ ನಿರ್ದೇಶಕನನ್ನಾಗಿ ನೇಮಿಸಿದಾಗ ಸಹಜವಾಗಿ ಖುಷಿಯಾಯ್ತು. ಪ್ರವಾಸೋದ್ಯಮ ನನ್ನ ವೈಯಕ್ತಿಕ ಆಸಕ್ತಿಯ ವಿಷಯವೂ ಆಗಿತ್ತು. ಆದರೆ, ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ನನಗೆ ಭ್ರಮನಿರಸನವಾಗಿತ್ತು. ಕಾವೇರಿ ಭವನದ ಒಂದು ಮೂಲೆಯಲ್ಲಿ ಎರಡನೇ ಮಹಡಿಯಲ್ಲಿದ್ದ ಕೇಂದ್ರ ಕಚೇರಿಗೆ ಬಹಳ ದರಿದ್ರ ಹಿಡಿದಿತ್ತು. ತಲುಪಲು ಅಸಾಧ್ಯವಾದ ಸ್ಥಳ ಅದಾಗಿತ್ತು. ಕಚೇರಿಯನ್ನು ಖನಿಜ ಭವನದಂತಹ ಕೇಂದ್ರ ಸ್ಥಳಕ್ಕೆ ತರಲಾಯ್ತು. ಇದಕ್ಕಾಗಿ ನಾನು ಅನುಭವಿಸಿದ ಕಷ್ಟ ಭಗವಂತನಿಗೇ ಗೊತ್ತು. ಅದಕ್ಕೆ ಕಾರಣವಾದವರನ್ನು ಹೆಸರಿಸಬಹುದು. ಆದರೆ, ಕಹಿ ನೆನೆಯುವುದರಿಂದ ಏನು ಉಪಯೋಗ?

ಪ್ರವಾಸೋದ್ಯಮ ಅಭಿವೃದ್ಧಿ ಬಹುಮುಖ್ಯವಾಗಿ ಇತರ ಇಲಾಖೆಗಳ ಸಹಕಾರದಿಂದ ನಡೆಯಬೇಕು. ಉದಾಹರಣೆಗೆ ಲೋಕೋಪಯೋಗಿ ಇಲಾಖೆ ಸರಿಯಾದ ರಸ್ತೆಗಳನ್ನು ಮಾಡದಿದ್ದರೆ ಪ್ರವಾಸಿ ತಾಣಗಳಿಗೆ ಜನ ತಲುಪುವುದು ಹೇಗೆ? ಹಾಗೆಯೇ ಕೆಎಸ್ಆರ್ಟಿಸಿ ಸಂಚಾರಕ್ಕೆ ಉತ್ತಮ ವಾಹನಗಳ ವ್ಯವಸ್ಥೆ ಮಾಡಬೇಕು. ಸ್ಥಳೀಯ ಆಡಳಿತ ಪ್ರವಾಸಿ ಸ್ಥಳಗಳ ಕುಡಿಯುವ ನೀರು, ನೈರ್ಮಲ್ಯ, ಶೌಚಾಲಯ ಒದಗಿಸಬೇಕು. ಪುರಾತತ್ವ ಇಲಾಖೆ ಸ್ಮಾರಕಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು. ಪೊಲೀಸ್ ಇಲಾಖೆ ಪ್ರವಾಸಿಗರ ಸುರಕ್ಷೆ ಬಗ್ಗೆ ಕ್ರಮ ಕೈಗೊಳ್ಳಬೇಕು.

ಬರೀ ಬೆಂಗಳೂರು-ಮೈಸೂರಿಗೆ ಸೀಮಿತಗೊಂಡಿದ್ದ ಪ್ರವಾಸಿ ಚಟುವಟಿಕೆಗಳು ರಾಜ್ಯದ ಉದ್ದಗಲಕ್ಕೂ ವ್ಯಾಪಿಸುವಂತೆ ಮೂಲ ಸೌಕರ್ಯ ಅಭಿವೃದ್ಧಿಯ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲಾಯಿತು.

ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಇಲಾಖೆ ಪ್ರಥಮ ಬಾರಿಗೆ ಆಯೋಜಿಸಿದ್ದ ‘ಕನೆಕ್ಟ್’ ಕಾರ್ಯಕ್ರಮ ಉದ್ಘಾಟಿಸಲು ಆಹ್ವಾನಿಸಿದೆ. ‘ಕನೆಕ್ಟ್ ಎಂದರೆ ಏನು’ ಅಂದರು. ‘ಸರ್ಕಾರದ ವಿವಿಧ ಇಲಾಖೆಗಳ ನಡುವೆ, ಪ್ರವಾಸೋದ್ಯಮ ಕೈಗಾರಿಕೆಗಳ ಮಧ್ಯೆ ಇದು ಸಂಪರ್ಕ ಕಲ್ಪಿಸುತ್ತೆ. ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಪ್ರವಾಸೋದ್ಯಮವೇ ಕೇಂದ್ರಬಿಂದುವಾಗಬೇಕು’ ಎಂದು ಒಂದೇ ಉಸಿರಿನಲ್ಲಿ ‘ಕನೆಕ್ಟ್’ ಉದ್ದೇಶ ತಿಳಿಸಿದೆ. ನನ್ನ ಭಾವೋದ್ವೇಗದ ವಿವರಣೆ ನೋಡಿ ‘I know what was missing in my government’ ಎಂದು ಹೇಳಿದ ಅವರು, ತುಂಬ ಖುಷಿಯಿಂದ ಬಂದು ‘ಕನೆಕ್ಟ್’ ಉದ್ಘಾಟಿಸಿ ಪ್ರವಾಸೋದ್ಯಮದ ಎಲ್ಲರಿಗೂ ಸ್ಫೂರ್ತಿ ತುಂಬಿದರು.

‘ಕರ್ನಾಟಕ – ಎ ಥಿಯೇಟರ್ ಆಫ್ ಇನ್ಸ್ಪಿರೇಷನ್’ ಎಂಬ ಘೋಷವಾಕ್ಯದೊಂದಿಗೆ ನನ್ನ ಪ್ರವಾಸೋದ್ಯಮ ಪರಿಚಾರಿಕೆ ಪ್ರಾರಂಭವಾಯ್ತು. ನನ್ನ ಸ್ವಾಗತದಲ್ಲಿ ‘S.M. Krishna is our brand ambassador’ ಎಂದೆ. ‘ದೇಶದಲ್ಲಿ ನಂ. ೧ ಮುಖ್ಯಮಂತ್ರಿ’ಯಾಗಿ ಐ.ಟಿ ಮತ್ತು ಬಿ.ಟಿಯಿಂದ ಬೆಂಗಳೂರನ್ನು ಪ್ರಪಂಚದ ನಕ್ಷೆಯಲ್ಲಿ ಛಾಪಿಸಿದ ಕೀರ್ತಿ ಅವರದ್ದಾಗಿತ್ತು. ‘ಕನೆಕ್ಟ್’ ನಂತರ ಕರ್ನಾಟಕ ಪ್ರವಾಸೋದ್ಯಮದ ಬಗ್ಗೆ ದೇಶದಾದ್ಯಂತ ‘ರೋಡ್ ಷೋ’ಗಳು ನಡೆದವು. ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮೇಳಗಳಿಗೆ ಆತಿಥ್ಯ ಉದ್ಯಮದಲ್ಲಿ ತೊಡಗಿಕೊಂಡವರು, ಟೂರ್ ಅಂಡ್ ಟ್ರಾವೆಲ್ಸ್ನ ಆಪರೇಟರ್ಗಳು ಇವರನ್ನೆಲ್ಲ ಕರೆದೊಯ್ದು ಮೊಟ್ಟಮೊದಲ ಬಾರಿಗೆ ಕರ್ನಾಟಕ ಪ್ರವಾಸೋದ್ಯಮ ಬರ್ಲಿನ್ನಲ್ಲೂ ತನ್ನ ಅಸ್ತಿತ್ವ ತೋರಿಸಿತ್ತು. ಅಂತರರಾಷ್ಟ್ರೀಯ ಟ್ರಾವೆಲ್ ಕಂಪೆನಿಗಳನ್ನು ಭೇಟಿಯಾಗಲು ಕಾತರನಾಗಿದ್ದೆ. ಟಿಯುಐ ಎಂಬ ಪ್ರಸಿದ್ಧ ಕಂಪೆನಿಯ ಎಂ.ಡಿಯನ್ನು ಭೇಟಿಯಾಗಲು ಸತತ ಪ್ರಯತ್ನದ ನಂತರ ಸಾಧ್ಯವಾಯ್ತು. ಅವರ ಟೂರಿಸಂ ಸರ್ಕ್ಯೂಟ್ನಲ್ಲಿ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ ಸೇರಿಸುವ ಬಗ್ಗೆ ಚರ್ಚಿಸಿದೆ. ಗೋವಾಗೆ ಬರುವ ಪ್ರವಾಸಿಗರು ಹೇಗೆ ಹುಬ್ಬಳ್ಳಿ ಮುಖಾಂತರ ರೈಲಿನಲ್ಲಿ ಬಂದು ವಿಶ್ವ ಪಾರಂಪರಿಕ ತಾಣ ಹಂಪಿಯ ಅನುಭವ ಪಡೆಯಬಹುದೆಂದು ವಿವರಿಸಿದೆ. ‘ಅಲ್ಲಿಯ ಮೂಲಸೌಕರ್ಯಗಳು ಹೇಗಿವೆ’ ಎಂದು ಕೇಳಿದರು. ನಾನು ‘ಚೆನ್ನಾಗಿದೆ’ ಎಂದು ವಿವರಿಸಿ ತಿಳಿಸಿದೆ. ಹಟ ಬಿಡದ ನನ್ನ ಒತ್ತಾಯದ ಮೇರೆಗೆ ಅವರ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿ ಸ್ಥಾನ ಪಡೆಯಿತು. ನಾನು ತುಂಬಾ ಖುಷಿಯಾಗಿದ್ದೆ. ಮುಂದಿನ ವರ್ಷದ ಬರ್ಲಿನ್ ಮೇಳಕ್ಕೆ ಹೋದಾಗ ಟಿಯುಐ ಅವರೇ ನನ್ನನ್ನು ಹುಡುಕಿಕೊಂಡು ಬಂದಿದ್ದರು. ನಮ್ಮ ಪಾರಂಪರಿಕ ತಾಣಗಳನ್ನು ಅವರ ಪ್ರವಾಸಿ ಕ್ಯಾಲೆಂಡರ್ನಲ್ಲಿ ಸೇರಿಸಿದ್ದು ತುಂಬಾ ಒಳ್ಳೆಯದಾಯ್ತು. ಆ ಸರ್ಕ್ಯೂಟ್ಗೆ ಬಹಳ ಬೇಡಿಕೆ ಇದೆ ಎಂದರು. ‘ಕಳೆದ ವರ್ಷ ತೊಂದರೆಯಾಯ್ತು. ನಮ್ಮ ಪ್ರವಾಸಿಗರು ಮಲ್ಲಿಗೆ ಹೋಟೆಲ್ನಲ್ಲಿ ರೂಮ್ಗಳನ್ನು ಬುಕ್ ಮಾಡಿದ್ದರು. ಆದರೆ, ಜಿಲ್ಲಾಡಳಿತ ರೂಮ್ಗಳ ಬುಕಿಂಗ್ ರದ್ದುಗೊಳಿಸಿ ಹಂಪಿ ಉತ್ಸವಕ್ಕಾಗಿ ಎಲ್ಲ ರೂಮ್ಗಳನ್ನು ತೆಗೆದುಕೊಂಡಿತು. ಅದೂ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಹೆಸರಿನಲ್ಲಿ! ಇದರಿಂದ ನಮ್ಮ ಪ್ರವಾಸಿಗರು ತುಂಬಾ ತೊಂದರೆ ಅನುಭವಿಸಿದರು. ಇಂತಹ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳದಂತೆ ನಿಮ್ಮ ಸರ್ಕಾರಕ್ಕೆ ತಿಳಿಸಲು ಸಾಧ್ಯವೇ’ ಎಂದು ಕೇಳಿದರು. ಜಿಲ್ಲಾಧಿಕಾರಿಗಳ ಪರವಾಗಿ ಕ್ಷಮೆಯಾಚಿಸಿದ ನಾನು ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದೆ.

ಪ್ರವಾಸೋದ್ಯಮ ಯಾವಾಗಲೂ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಉದ್ದಿಮೆ. ಖಾಸಗಿ ಸಹಭಾಗಿತ್ವ ಸಮರ್ಪಕವಾಗಿದ್ದರೆ ಮಾತ್ರ ಪ್ರವಾಸೋದ್ಯಮ ವಿಜೃಂಭಿಸಲು ಸಾಧ್ಯ. ಕೃಷ್ಣ ಅವರ ಅವಧಿಯಲ್ಲಿ ಮಾಡಿದ ಮತ್ತೊಂದು ಅದ್ಭುತ ಪ್ರಯೋಗ ಚಲಿಸುವ ಐಷಾರಾಮಿ ರೈಲು. ಅಂದಿನ ರೈಲ್ವೆ ಸಚಿವರಾಗಿದ್ದ ನಿತೀಶ್ಕುಮಾರ್ ಅವರನ್ನು ಭೇಟಿಯಾಗಿ ನನೆಗುದಿಗೆ ಬಿದ್ದಿದ್ದ ‘ಪ್ಯಾಲೇಸ್ ಆನ್ ವ್ಹೀಲ್ಸ್’ ಮಾದರಿಯ ಕರ್ನಾಟಕದ ಪ್ರಸ್ತಾವ ಬಗ್ಗೆ ವಿವರಿಸಿದೆ. ‘ಎಸ್.ಎಂ. ಕೃಷ್ಣ ಅದ್ಭುತ ಮುಖ್ಯಮಂತ್ರಿ. ನಾವು ಒಪ್ಪಂದಕ್ಕೆ ಸಹಿ ಹಾಕೋಣ’ ಎಂದರು. ದೆಹಲಿಯಲ್ಲಿ ರಾಜ್ಯದ ಕಮಿಷನರ್ ಆಗಿದ್ದ ಸುಧಾಕರ ರಾವ್ ಅವರು ಆಸಕ್ತಿ ವಹಿಸಿ ಒಪ್ಪಂದಕ್ಕೆ ಸಹಿ ಹಾಕಲು ಮುಹೂರ್ತ ನಿಗದಿಗೊಳಿಸಿದರು. ‘ಗೋಲ್ಡನ್ ಚಾರಿಯಟ್’ ಕನಸು ನನಸಾದ ಕ್ಷಣವದು.

ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ಮತ್ತೊಂದು ಹೊಸ ಪ್ರಯತ್ನವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ನೂರಾರು ಹೊಸ ಹೋಟೆಲ್ಗಳು, ರೆಸಾರ್ಟ್ಗಳು ಪ್ರವಾಸಿಗರಿಗೆ ವಾಸ್ತವ್ಯದ ಕೊರತೆ ನೀಗಿಸಿವೆ. ಸ್ಥಳೀಯರಿಗೆ ಉದ್ಯೋಗಾವಕಾಶವನ್ನೂ ಒದಗಿಸಿವೆ.
ಪ್ರವಾಸೋದ್ಯಮ ಒಂದು ಅದ್ಭುತ ಸಾಧ್ಯತೆಗಳುಳ್ಳ ಕ್ಷೇತ್ರ. ಇಲ್ಲಿ ಮಾಲಿನ್ಯ ಇಲ್ಲ, ಇದು ಜನಸ್ನೇಹಿ ಕೂಡ. ಐ.ಟಿ ಮತ್ತು ಬಿ.ಟಿ ಸೇರಿದಂತೆ ಇತರ ಹಲವು ಕ್ಷೇತ್ರಗಳು ಪದವೀಧರರಿಗೆ ಮಾತ್ರ ಉದ್ಯೋಗ ನೀಡಬಲ್ಲವು. ಪ್ರವಾಸೋದ್ಯಮದಿಂದ ಎಸ್ಎಸ್ಎಲ್ಸಿಯನ್ನೂ ಪೂರ್ಣವಾಗಿ ಓದಿರದ ಒಬ್ಬ ಹೂವು ಮಾರುವವ, ಒಬ್ಬ ಹಣ್ಣು ಮಾರುವವ ಕೂಡ ಬದುಕಿನ ಮಾರ್ಗ ಕಂಡುಕೊಳ್ಳುತ್ತಾನೆ. ಎಲ್ಲ ವರ್ಗಗಳ, ಎಲ್ಲ ಕೌಶಲಗಳ ಜನರಿಗೆ ಉದ್ಯೋಗ ನೀಡಬಲ್ಲ ಸಾಮರ್ಥ್ಯ ಪ್ರವಾಸೋದ್ಯಮ ಒಂದಕ್ಕೇ ಇದೆ. ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಪ್ರವಾಸದ ಹುಚ್ಚು ಹಿಡಿಸುವ ಮೂಲಕ ನಾಡಿನ ಸಂಸ್ಕೃತಿ ಮತ್ತು ಪರಂಪರೆ ಕುರಿತು ಅರಿವು ಮೂಡಿಸಬಹುದಾದ ಉದ್ಯಮವೂ ಇದಾಗಿದೆ. ನಮ್ಮ ಆಚಾರ-ವಿಚಾರ, ಕರಕುಶಲ ಕಲೆಗಳನ್ನು ದೇಶ ವಿದೇಶಗಳ ಜನರಿಗೆ ತಲುಪಿಸುವ ಶಕ್ತಿಯಿರುವ ಉದ್ಯಮ ಇದೊಂದೇ!

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.