ನೀವು ಯಾವತ್ತೂ ಭೇಟಿಯಾಗದ, ನೀವು ಯಾವತ್ತೂ ಫೋನ್ ನಂಬರ್ ಹಂಚಿಕೊಳ್ಳದ ಒಬ್ಬರ ಮೊಬೈಲ್ ನಂಬರ್ಗೆ ಫೋನಾಯಿಸುತ್ತೀರಿ. ಅವರು ಫೋನ್ ಎತ್ತಿಕೊಂಡ ತಕ್ಷಣ ನಿಮ್ಮ ಹೆಸರು ಹೇಳಿದರೆ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ‘ನನ್ನ ನಂಬರ್ ಇವರ ಬಳಿ ಹೇಗಿತ್ತು?’ ಈ ಪ್ರಶ್ನೆಯನ್ನು ನೀವು ಕೇಳಿದರೆ ಅವರು ‘ನಿಮ್ಮ ನಂಬರ್ ಜೊತೆಗೆ ಹೆಸರು ಮತ್ತು ನಿಮ್ಮ ಫೋಟೊ ಫೋನ್ನಲ್ಲಿ ಕಾಣಿಸಿತು’ ಎಂದು ಅವರು ಉತ್ತರಿಸಿದರೆ...

ಇದೇನು ವೈಜ್ಞಾನಿಕ ಕಥೆಯಲ್ಲಿ ನಡೆಯುವ ಘಟನೆಯಲ್ಲ. ಈ ಅನುಭವ ನಿಮ್ಮಲ್ಲಿ ಅನೇಕರಿಗೆ ಆಗಿರಬಹುದು. ಆದರೆ ಅದರ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳದೇ ಇರಬಹುದು. ಅದು ಹೇಗೆ ಸಂಭವಿಸುತ್ತದೆ ಎಂಬುದನ್ನು ಇಲ್ಲಿ ಸ್ವಲ್ಪ ಪರಿಶೀಲಿಸೋಣ. ಸ್ಮಾರ್ಟ್ಫೋನ್ ಬಳಸುವ ಹೆಚ್ಚಿನವರು ತಮ್ಮ ಸಂಪರ್ಕಗಳ ಪಟ್ಟಿ ಅಥವಾ ಫೋನ್ ಬುಕ್ ಅನ್ನು ಜಿಮೇಲ್, ಫೇಸ್ಬುಕ್ ಖಾತೆಗಳೊಂದಿಗೆ Sync ಅಥವಾ synchronise ಮಾಡಿರುತ್ತಾರೆ. ಇದು ಎಷ್ಟೋ ಸಂದರ್ಭದಲ್ಲಿ ಅವರ ಅರಿವಿಗೇ ಬಾರದಂತೆ ಸಂಭವಿಸಿರುತ್ತದೆ.

ಆಂಡ್ರಾಯ್ಡ್ ಫೋನ್ ಬಳಸುವವರಿಗೆ ಒಂದು ಗೂಗಲ್ ಖಾತೆ ಇರಲೇಬೇಕಾಗುತ್ತದೆ. ಮೊಬೈಲ್ ಫೋನ್ನ appಗಳ ಮಾಹಿತಿಯೂ ಸೇರಿದಂತೆ ಸಕಲವೂ ಇಂಟರ್ನೆಟ್ ಸಂಪರ್ಕದಲ್ಲಿ ಇದ್ದಾಗಲೆಲ್ಲಾ ಗೂಗಲ್ ಖಾತೆಗೆ ಸೇರುತ್ತಲೇ ಇರುತ್ತದೆ. ಫೇಸ್ಬುಕ್ app ಅನ್ನು ಇನ್ಸ್ಟಾಲ್ ಮಾಡುವಾಗಲೇ ಅದು ನಿಮ್ಮ ಫೋನ್ ಸಂಪರ್ಕಗಳನ್ನು ಫೇಸ್ಬುಕ್ ಗೆಳೆಯರ ಪಟ್ಟಿಯ ಜೊತೆಗೆ ಹೊಂದಿಸಬೇಕೇ ಎಂದು ಕೇಳುತ್ತದೆ. ಇದನ್ನು ನಿರಾಕರಿಸಲು ಸಾಧ್ಯವಿದೆ ಎಂಬುದೂ ಗೊತ್ತಿಲ್ಲದೆ ಅದಕ್ಕೆ ಒಪ್ಪಿಗೆ ನೀಡುವವರೇ ಹೆಚ್ಚು. ಪರಿಣಾಮವಾಗಿ ಫೇಸ್ಬುಕ್ ಗೆಳೆಯರ ಪಟ್ಟಿಯಲ್ಲಿರುವವರು ಅಥವಾ ಜಿಮೇಲ್, ಜಿ ಪ್ಲಸ್ ಇತ್ಯಾದಿಗಳಲ್ಲಿ ಸಂಪರ್ಕದಲ್ಲಿರುವ ಯಾರಾದರೂ ಫೋನ್ ಮಾಡಿದರೆ ಅವರ ಹೆಸರು, ಚಿತ್ರಗಳೆಲ್ಲವೂ ಕಾಣಿಸಿಕೊಳ್ಳುವುದು ಸಾಮಾನ್ಯ. ಟ್ವಿಟರ್ ಸೇರಿದಂತೆ ಇನ್ನೂ ಕೆಲವು ಸಾಮಾಜಿಕ ಜಾಲ ತಾಣಗಳಿಗೂ ಇದು ಅನ್ವಯಿಸುತ್ತದೆ.

ಯಾರೋ ತಮ್ಮ ಫೋನನ್ನು ಸಾಮಾಜಿಕ ಜಾಲ ತಾಣಗಳೊಂದಿಗೆ Sync ಮಾಡಿದ್ದರೆ ನಿಮ್ಮ ದೂರವಾಣಿ ವಿವರ ಅವರಿಗೆ ಹೇಗೆ ತಿಳಿಯುತ್ತದೆ ಎಂಬ ಪ್ರಶ್ನೆ ನಿಮ್ಮದಾಗಿರಬಹುದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ನೀವು ಜಿಮೇಲ್, ಫೇಸ್ಬುಕ್ ಅಥವಾ ಟ್ವಿಟರ್ ಖಾತೆ ತೆರೆಯಲು ನೀವು ಏನೇನು ಮಾಹಿತಿಗಳನ್ನು ಒದಗಿಸಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. ಮೊಬೈಲ್ ಸಂಖ್ಯೆಯಿಲ್ಲದೆ ಖಾತೆ ತೆರೆಯುವುದಕ್ಕೆ ಈ ಎಲ್ಲಾ ತಾಣಗಳೂ ನಕರಾ ಮಾಡುತ್ತವೆ. ಮೊಬೈಲ್ ಸಂಖ್ಯೆ ಇದ್ದರೆ ನಿಮ್ಮ ಖಾತೆ ಎಷ್ಟು ಸುರಕ್ಷಿತ ಎಂಬ ಭಾಷಣ ಮಾಡುತ್ತವೆ. ನೀವು ಅದನ್ನು ನಂಬಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿರುತ್ತೀರಿ. ಖಾತೆ ತೆರೆದಿರುವುದು ನೀವೇ ಎಂದು ಸಾಬೀತು ಪಡಿಸಿಕೊಳ್ಳುವುದಕ್ಕೆ ಈ ತಾಣಗಳು ಒಂದು ಸಂಕೇತ ಸಂಖ್ಯೆ ಅಥವಾ ಅಕ್ಷರಗಳನ್ನು ಮೊಬೈಲ್ಗೆ ಕಳುಹಿಸಿಕೊಡುತ್ತವೆ.

ಅದನ್ನು ಬಳಸಿ ನೀವು ತೆರೆದ ಖಾತೆ ನಿಮ್ಮದೇ ಎಂದು ಸಾಬೀತು ಮಾಡಿ ಬಳಸಲು ಆರಂಭಿಸಿರುತ್ತೀರಿ. ನೀವು ಒದಗಿಸಿರುವ ದೂರವಾಣಿ ಸಂಖ್ಯೆ ಯಾರಿಗೆಲ್ಲಾ ಕಾಣಿಸುತ್ತದೆ ಎಂಬುದರ ಕುರಿತು ನೀವು ಯಾವತ್ತೂ ತಲೆಕೆಡಿಸಿಕೊಂಡಿರುವುದಿಲ್ಲ. ನೀವು ಫೇಸ್ಬುಕ್ ಬಳಕೆದಾರರಾಗಿದ್ದರೆ ಅಲ್ಲಿರುವ ಪ್ರೈವೆಸಿ ಸೆಟ್ಟಿಂಗ್ಸ್ಗೆ ಒಮ್ಮೆ ಭೇಟಿ ನೀಡಿ ನಿಮ್ಮ ಮಾಹಿತಿಗಳನ್ನು ಯಾರೆಲ್ಲಾ ನೋಡಬಹುದು ಎಂಬ ವಿವರಗಳನ್ನು ಗಮನಿಸಿ. ನೀವು ದೂರವಾಣಿ ಸಂಖ್ಯೆಯನ್ನು ಸಾಮಾನ್ಯವಾಗಿ ಎಲ್ಲರಿಗೂ ವೀಕ್ಷಿಸಲು ಸಾಧ್ಯವಾಗುವಂತೆ ಅಥವಾ ಗೆಳೆಯರು ವೀಕ್ಷಿಸುವಂತೆ ಬಿಟ್ಟಿರುತ್ತೀರಿ. ನಿಮಗೆ ಫ್ರೆಂಡ್ ರಿಕ್ವೆಸ್ಟ್ಗಳು ಬಂದಾಗ ಅದನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳುತ್ತಿರುತ್ತೀರಿ.

ಹಾಗೆಯೇ ಫೇಸ್ಬುಕ್ ನೀಡುವ ಸಲಹೆ ಪಟ್ಟಿಯಲ್ಲಿ ಇರುವವರಿಗೆ ಫ್ರೆಂಡ್ ರಿಕ್ವೆಸ್ಟ್ಗಳನ್ನು ಕಳುಹಿಸುತ್ತಲೂ ಇರುತ್ತೀರಿ. ಇವೆಲ್ಲವುಗಳ ಪರಿಣಾಮವಾಗಿ ನಿಜ ಜೀವನದಲ್ಲಿ ಮೊಟ್ಟ ಮೊದಲಿಗೆ ಪರಿಚಯಿಸಿಕೊಳ್ಳುವ ವ್ಯಕ್ತಿ ನಿಮಗೆ ಸಾಮಾಜಿಕ ಜಾಲ ತಾಣದಲ್ಲಿ ಹಳೆಯ ಗೆಳೆಯ ಅಥವಾ ಗೆಳತಿಯಾಗಿರುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ನೀವು ಮೊದಲನೇ ಬಾರಿಗೆ ಫೋನಾಯಿಸಿದ್ದರೂ ನಿಮ್ಮ ಹೆಸರು ಮತ್ತು ಫೋಟೊ ಅವರ ಸ್ಮಾರ್ಟ್ ಫೋನ್ನಲ್ಲಿ ಕಾಣಿಸಿಕೊಳ್ಳುತ್ತದೆ.

ನಮ್ಮ ವಿವರಗಳು ಯಾರಿಗೆಲ್ಲಾ ತಿಳಿದುಬಿಟ್ಟಿದೆಯಲ್ಲಾ ಎಂದು ನಿಮ್ಮ ಖಾತೆಗಳ ಪ್ರೈವೆಸಿ ಸೆಟ್ಟಿಂಗ್ ಬದಲಾಯಿಸಲು ಹೊರಟಿರಿ ಎಂದುಕೊಳ್ಳಿ. ಆಗಲೂ ನಿಮ್ಮ ಸಮಸ್ಯೆ ನಿವಾರಣೆಯಾಗುವುದಿಲ್ಲ. ಇಲ್ಲಿಯ ತನಕ ಅನೇಕ ಗೆಳೆಯ, ಗೆಳತಿಯರ ಮೊಬೈಲ್ ಫೋನ್ಗಳ ಮೂಲಕ ಅವರವರ ಖಾತೆಗಳಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಸೇರಿಕೊಂಡಿರುತ್ತವೆ. ಅವರೇನಾದರೂ ಈ ವಿವರಗಳನ್ನು ತಮ್ಮ ಕಂಪ್ಯೂಟರಿನಲ್ಲಿಯೂ ಬ್ಯಾಕಪ್ ಮಾಡಿದ್ದರೆ ನಿಮಗೆ ಅದನ್ನು ಅಳಿಸುವ ಅವಕಾಶವೂ ಇಲ್ಲ. ಇದಕ್ಕಿಂತ ಭಯ ಹುಟ್ಟಿಸುವ ವಿಚಾರವೆಂದರೆ ಇತರ ಅನೇಕ ವೆಬ್ ಸೇವೆಗಳಿಗೆ ಪ್ರವೇಶಿಸುವುದಕ್ಕೆ ನಿಮ್ಮ ಗೂಗಲ್, ಫೇಸ್ಬುಕ್ ಅಥವಾ ಟ್ವಿಟರ್ ಖಾತೆಗಳನ್ನು ಬಳಸಿಕೊಂಡಿರುತ್ತೀರಿ. ಅಲ್ಲೆಲ್ಲಾ ನಿಮ್ಮ ವೈಯಕ್ತಿಕ ವಿವರಗಳು ಈಗಾಗಲೇ ದಾಖಲಾಗಿರುತ್ತವೆ. ನಿಮಗೆ ಅರಿವಿಲ್ಲದೆಯೇ ನಿಮ್ಮ ಬದುಕು ತೆರೆದ ಪುಸ್ತಕವಾಗಿರುತ್ತದೆ.

ಸಾಮಾಜಿಕ ಜಾಲ ತಾಣಗಳಿಗೆ ನೀಡುವ ವೈಯಕ್ತಿಕ ಮಾಹಿತಿಗಳನ್ನು ಅಳಿಸಿ ಹಾಕುವುದಕ್ಕೆ ಸಾಧ್ಯವೇ ಇಲ್ಲವೇ? ಕೆಲಮಟ್ಟಿಗೆ ಸಾಧ್ಯ. ಗೂಗಲ್ ಮತ್ತು ಟ್ವಿಟರ್ ಖಾತೆಗಳನ್ನು ರದ್ದು ಮಾಡಿದರೆ ಅವು ಎಲ್ಲಾ ಮಾಹಿತಿಯನ್ನೂ ಅಳಿಸುತ್ತವೆ (ಗೂಗಲ್ ಮತ್ತು ಟ್ವಿಟರ್ಗಳು ಆ ಭರವಸೆ ನೀಡುತ್ತವೆ). ಫೇಸ್ಬುಕ್ನಲ್ಲಿ ಖಾತೆಯನ್ನು ರದ್ದು ಮಾಡಲು ಸಾಧ್ಯವಿಲ್ಲ. ಅಲ್ಲಿ ಏನಿದ್ದರೂ ನಿಮ್ಮ ಖಾತೆಯನ್ನು ಚಾಲನೆಯಲ್ಲಿ ಇಲ್ಲದಂತೆ ಅಥವಾ ಡಿಆ್ಯಕ್ಟಿವೇಟ್ ಮಾಡಬಹುದಷ್ಟೇ. ಇದಕ್ಕೆ ಕಾರಣವೂ ಇದೆ. ಖಾತೆಯನ್ನೇ ಅಳಿಸುವುದೆಂದರೆ ನೀವು ಹಿಂದೆ ಮಾಡಿದ ಲೈಕ್ಗಳು, ಚರ್ಚೆಗಳಲ್ಲಿ ಮಂಡಿಸಿದ ಅಭಿಪ್ರಾಯಗಳು ಇತ್ಯಾದಿಗಳೆಲ್ಲವೂ ಮಾಯವಾಗಬೇಕಾಗುತ್ತದೆ.

ಆಗ ಅನೇಕ ಸಂವಾದಗಳು ಅಪೂರ್ಣವಾಗಿಬಿಡುತ್ತವೆ. ಇದನ್ನು ನಿವಾರಿಸುವುದಕ್ಕೆ ಫೇಸ್ಬುಕ್ ಖಾತೆಯನ್ನು ಡಿಆ್ಯಕ್ಟಿವೇಟ್ ಮಾಡುವ ವ್ಯವಸ್ಥೆ ಕಲ್ಪಿಸಿದೆ. ಇಷ್ಟರ ಮೇಲೆ ಮಾಹಿತಿಯನ್ನು ಅಳಿಸಿ ಹಾಕುವ ಕ್ರಿಯೆಯೇನೂ ಸುಲಭವಲ್ಲ. ಸರ್ವರ್ನಲ್ಲಿರುವ ಮಾಹಿತಿಯನ್ನಷ್ಟೇ ಈ ಕಂಪೆನಿಗಳಿಗೆ ಅಳಿಸಲು ಸಾಧ್ಯ. ಆಗಾಗ ಬ್ಯಾಕಪ್ ಮಾಡಿಟ್ಟಿರುವ ಹಳೆಯ ಮಾಹಿತಿ ಟೇಪ್ಗಳಲ್ಲಿದ್ದರಂತೂ ಅದನ್ನು ಹುಡುಕಿ ಅಳಿಸಿ ಹಾಕುವುದು ಭಾರೀ ಖರ್ಚಿನ ಬಾಬತ್ತೇ ಆಗಿಬಿಡುತ್ತದೆ. ಉಚಿತ ಸೇವೆ ನೀಡುವ ಸಂಸ್ಥೆಗಳು ಅದನ್ನೆಲ್ಲಾ ಮಾಡಿಯಾವೇ?

ಈಗಿನ ತಂತ್ರಜ್ಞಾನ ಹೇಗೆ ಬೆಳೆದಿದೆಯೆಂದರೆ ಒಮ್ಮೆ ಹಾರ್ಡ್ಡಿಸ್ಕ್ ಅಥವಾ ಅಂತಹ ಯಾವುದೇ ವ್ಯವಸ್ಥೆಯಲ್ಲಿ ಮಾಹಿತಿಯನ್ನು ಸಂಗ್ರಹಿಸುವುದಕ್ಕಿಂತ ಅದನ್ನು ಅಳಿಸಿ ಹಾಕುವುದೇ ಹೆಚ್ಚು ಕಷ್ಟದ ಕೆಲಸ. ಕೇವಲ ಡಿಲಿಟ್ ಗುಂಡಿಯನ್ನು ಒತ್ತುವ ಮೂಲಕ ಮಾಹಿತಿಯನ್ನು ಅಳಿಸಿ ಹಾಕಿದ್ದೇವೆ ಎಂದು ಭಾವಿಸುವಂತಿಲ್ಲ. ಹೀಗೆ ಅಳಿಸಿ ಹಾಕಿದ ಮಾಹಿತಿಗೆ ವಿವಿಧ ತಂತ್ರಾಂಶಗಳನ್ನು ಬಳಸಿ ಮರುಜೀವ ನೀಡಲು ಸಾಧ್ಯ. ಇದು ಸಾಧ್ಯವಾಗದಂತೆ ಮಾಹಿತಿಯನ್ನು ಅಳಿಸಿ ಹಾಕುವುದಕ್ಕೆ ವಿಶೇಷ ತಂತ್ರಾಂಶಗಳೇ ಬೇಕು. ಇಂಥದ್ದೊಂದು ಸ್ಥಿತಿಯಲ್ಲಿ ವಿಶ್ವದ ಯಾವುದೋ ಮೂಲೆಯಲ್ಲಿ ಯಾರದೋ ಮಾಲೀಕತ್ವದಲ್ಲಿ ಇರುವ ಸರ್ವರ್ನಿಂದ ನಮ್ಮ ಮಾಹಿತಿಯನ್ನು ಅಳಿಸಿ ಹಾಕುತ್ತೇವೆ ಎಂದು ಭಾವಿಸುವುದೇ ಮೂರ್ಖತನವಾಗಿಬಿಡುತ್ತದೆ.

ನಿರ್ದಿಷ್ಟ ಖಾತೆಗಳಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಅಳಿಸುವುದಕ್ಕೇ ಇಷ್ಟೆಲ್ಲಾ ಕಷ್ಟವಿದೆ. ಈ ಖಾತೆಗಳನ್ನು ನಮ್ಮ ಗುರುತನ್ನಾಗಿ ಬಳಸಿಕೊಂಡು ಇನ್ಯಾವುದೋ ವೆಬ್ ಸೇವೆಯನ್ನು ಪಡೆದಿದ್ದರೆ ಸಮಸ್ಯೆ ಮತ್ತಷ್ಟು ಸಂಕೀರ್ಣವಾಗುತ್ತದೆ. ಉದಾಹರಣೆಗೆ ಫೇಸ್ಬುಕ್ನಲ್ಲಿರುವ ಆಟಗಳು. ಅದನ್ನು ಬಳಸುವುದಕ್ಕೆ ನಾವು ನಮ್ಮ ವೈಯಕ್ತಿಕ ವಿವರಗಳನ್ನು ನೋಡುವ ಹಕ್ಕನ್ನು ಆಟದ ಸವಲತ್ತು ಒದಗಿಸುವವರಿಗೆ ನೀಡಬೇಕಾಗುತ್ತದೆ. ಅವರು ಇಟ್ಟುಕೊಂಡಿರುವ ನಮ್ಮ ವಿವರಗಳನ್ನು ಅಳಿಸಿ ಹಾಕುವುದು ಹೇಗೆ?

ಇಷ್ಟರ ಮೇಲೆ ಈ ಎಲ್ಲಾ ಸೇವೆಗಳನ್ನು ಒದಗಿಸುವ ತಾಣಗಳೂ ನೀವು ಏನೇನು ಮಾಡುತ್ತಿದ್ದಿರಿ, ಯಾರೆಲ್ಲಾ ನಿಮ್ಮ ಗೆಳೆಯರು, ಯಾರ ಜೊತೆಗೆ ಚರ್ಚೆ, ಸಂವಾದದಲ್ಲಿ ತೊಡಗಿದ್ದಿರಿ, ಯಾವೆಲ್ಲಾ ಜಾಹೀರಾತುಗಳನ್ನು ನೋಡಿದ್ದಿರಿ ಎಂಬ ಮಾಹಿತಿಯನ್ನೂ ಸಂಗ್ರಹಿಸಿರುತ್ತವೆ. ಇದು ನಿಮ್ಮ ಅರಿವಿಗೇ ಬಾರದೆ ನಡೆದಿರುವ ಕ್ರಿಯೆ. ಈ ಮಾಹಿತಿಯನ್ನು ಆ ಸಂಸ್ಥೆಗಳು ಇತರರಿಗೆ ಮಾರಿಕೊಂಡು ಹಣ ಗಳಿಸಿರುತ್ತವೆ. ಇದನ್ನು ಅಳಿಸಿ ಹಾಕಲು ಸಾಧ್ಯವೇ ಇಲ್ಲ. ಪ್ರತಿಯೊಂದು ವೆಬ್ ಸೇವೆಗಳನ್ನು ಪಡೆಯುವಾಗಲೂ ನಾವು ಸ್ವಯಂಪ್ರೇರಿತವಾಗಿ ಒಪ್ಪಿಗೆಗಳನ್ನು ನೀಡಿರುವುದರಿಂದ ಆ ಕಂಪೆನಿಗಳು ಮಾಡುವುದು ಕಾನೂನಿನ ದೃಷ್ಟಿಯಲ್ಲೂ ತಪ್ಪಲ್ಲ.

ಜಗತ್ತಿನ ಪ್ರತಿಯೊಂದು ಜೀವಿಯ ಪ್ರತಿಯೊಂದು ಕ್ರಿಯೆಯನ್ನೂ ದೇವರು ದಾಖಲಿಸುತ್ತಾನೆ ಎನ್ನುತ್ತಾರೆ. ಇದು ನಿಜವೋ ಅಲ್ಲವೋ ಎಂಬುದಂತೂ ಗೊತ್ತಿಲ್ಲ. ಆದರೆ ಒಮ್ಮೆ ಡಿಜಿಟಲ್ ಜಗತ್ತಿಗೆ ನಾವು ಪ್ರವೇಶ ಪಡೆದವೆಂದರೆ ನಮ್ಮ ಪ್ರತಿ ಚಟುವಟಿಕೆಯನ್ನೂ ದಾಖಲಿಸುವವರ ಸಂಖ್ಯೆಯಂತೂ ದೊಡ್ಡದು. ನಾವು ಸಂಭವನೀಯ ಗಿರಾಕಿಗಳಾಗಿರುವ ಅನೇಕ ಉತ್ಪನ್ನಗಳ ಉತ್ಪಾದಕರಿಂದ ಆರಂಭಿಸಿ ಪೌರರ ಚಟುವಟಿಕೆಗಳೆಲ್ಲವನ್ನೂ ನೋಡಬೇಕೆಂದು ಬಯಸುವ ಸರ್ಕಾರಗಳ ತನಕದ ಎಲ್ಲರೂ ಇಲ್ಲಿದ್ದಾರೆ. ದುರಂತವೆಂದರೆ ಅವರೆಲ್ಲಾ ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡುವ ಸಣ್ಣ ಅವಕಾಶ ಕೂಡಾ ಗ್ರಾಹಕರೂ ಪೌರರೂ ಆದ ನಮಗಿಲ್ಲ ಎಂಬುದನ್ನು ಅರಿಯದಷ್ಟು ಮೈಮರೆತಿರುವ ನಾವು ಕ್ಷಣ ಕ್ಷಣವೂ ಅವರೆದುರು ಬೆತ್ತಲಾಗುತ್ತಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.