ಕಳೆದ ವಾರ (25 ಮಾರ್ಚ್) ‘ಪ್ರಜಾವಾಣಿ’ಯ ಮುಖಪುಟದಲ್ಲಿ ಪ್ರಕಟವಾದ ‘ವಲಸಿಗರ ಕಾಲು ತೊಳೆದ ಪೋಪ್’ ಎಂಬ ಪುಟ್ಟ ಸುದ್ದಿ ಹೀಗಿದೆ: ‘ರೋಮ್‌ನಲ್ಲಿ ಪೋಪ್ ಫ್ರಾನ್ಸಿಸ್ ಗುರುವಾರ ರಾತ್ರಿ (24 ಮಾರ್ಚ್) ವಲಸಿಗ ಮುಸ್ಲಿಮರು, ಸಂಪ್ರದಾಯವಾದಿಗಳು, ಹಿಂದೂಗಳು, ಕ್ಯಾಥೊಲಿಕ್ ನಿರಾಶ್ರಿತರ ಕಾಲು ತೊಳೆದು ಮುತ್ತಿಟ್ಟು, ನಂತರ ಎಲ್ಲರೂ ಒಂದೇ ದೇವರ ಮಕ್ಕಳು ಎಂದು ಘೋಷಿಸಿದರು.’

ಈ ಸುದ್ದಿ ಬಂದ ಮಾರನೆಯ ದಿನದ ‘ಪ್ರಜಾವಾಣಿ’ಯಲ್ಲಿ ಇಟಲಿಯ ರೋಮ್ ಸಮೀಪದ ಕ್ಯಾಸಲಿನೋವ್ ಡಿಪೋರ್ಟ್‌ನ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರ ಪಾದ ತೊಳೆದ ಪೋಪ್ ಫ್ರಾನ್ಸಿಸ್ ಕಪ್ಪು ವರ್ಣೀಯರೊಬ್ಬರ ಕಾಲಿಗೆ ಮುತ್ತಿಕ್ಕುತ್ತಿರುವ ಫೋಟೊ ಪ್ರಕಟವಾಗಿದೆ. ‘ಎಲ್ಲ ಜನಾಂಗ ಹಾಗೂ ಧರ್ಮದವರು ಒಂದೇ ದೇವರ ಮಕ್ಕಳು ಎಂಬ ನಂಬಿಕೆಯಂತೆ ಈ ಅಚರಣೆಯನ್ನು ನೆರವೇರಿಸಲಾಗುತ್ತದೆ’ ಎಂದು ಫೋಟೊ ಕೆಳಗಿನ ವಿವರಣೆ ಹೇಳುತ್ತದೆ.

ಈ ಫೋಟೊ ನೋಡಿದ ಹುಡುಗನೊಬ್ಬ ಜೀಸಸ್ ಶಿಲುಬೆಗೇರುವ ಹಿಂದಿನ ದಿನ ತನ್ನ ಶಿಷ್ಯರ ಪಾದಗಳನ್ನು ತೊಳೆದದ್ದನ್ನು ನೆನಪಿಸಿದ: ಅಷ್ಟು ಹೊತ್ತಿಗಾಗಲೇ ಜೀಸಸ್‌ನ ಜನಪ್ರಿಯತೆಯನ್ನು ಸಹಿಸದ ಯಹೂದಿಗಳು, ಅವನು ಯಹೂದಿ ಧರ್ಮಕ್ಕೆ ಅಪಾಯ ತಂದೊಡ್ಡುತ್ತಾನೆಂದು ಆಪಾದಿಸುತ್ತಿದ್ದರು. ತನ್ನ ‘ಕೊನೆಯ ಊಟ’ದ (‘ಲಾಸ್ಟ್ ಸಪ್ಪರ್’) ದಿನ, ಜೀಸಸ್ ತನ್ನ ಹನ್ನೊಂದು ಶಿಷ್ಯರ ಕಾಲನ್ನು ತೊಳೆದ. ಊಟದ ಮುನ್ನ ಜೀಸಸ್, ‘ನಿಮ್ಮಲ್ಲಿ ಯಾರೋ ಒಬ್ಬರು ನನಗೆ ದ್ರೋಹ ಬಗೆಯುತ್ತೀರಿ’ ಎಂದ. ಅವನು ಹೇಳಿದ್ದು ನಿಜವಾಯಿತು.

ಅವನ ಶಿಷ್ಯರಲ್ಲೊಬ್ಬನಾದ ಜುದಾಸ್ ಇನ್ನಿತರರ ಜೊತೆ ರೋಮನ್ ಜನರಲ್ ಬಳಿ ಹೋಗಿ, ಬೆಳ್ಳಿ ತುಣುಕುಗಳ ಆಸೆಗೆ ಬಿದ್ದು ಜೀಸಸ್ ವಿರುದ್ಧ ಚಾಡಿ ಹೇಳಿದ. ನಂತರ ಜೀಸಸ್‌ನನ್ನು ಶಿಲುಬೆಗೇರಿಸಲಾಯಿತು. ಆ ದಿನದ ನೆನಪಿಗಾಗಿ ಗುಡ್ ಫ್ರೈಡೇ ಆಚರಿಸಲಾಗುತ್ತದೆ. ಮೊನ್ನೆ ಪೋಪ್ ವಲಸಿಗರ, ಮಹಿಳೆಯರ ಕಾಲು ತೊಳೆದದ್ದು ಗುಡ್ ಫ್ರೈಡೇಯ ಹಿಂದಿನ ದಿನ; ‘ಮಾಂಡಿ ಥರ್ಸ್ ಡೇ’ ದಿನ- ಜೀಸಸ್ ಮಾಡಿದ ಕೊನೆಯ ಸೇವೆಯನ್ನು ನೆನೆಸಿಕೊಳ್ಳುವ ದಿನ. ಫೋಟೊಗಳು ಪರಿಣಾಮಕಾರಿ ಸಂದೇಶವಾಹಕಗಳಾಗಿರುವ ಈ ಕಾಲದಲ್ಲಿ ಈ ಫೋಟೊ ಜಗತ್ತಿನಾದ್ಯಂತ ಅಪೂರ್ವ ಪುಳಕವನ್ನೂ, ಮುಗ್ಧ ಮನಸ್ಸುಗಳಲ್ಲಿ ಸಾತ್ವಿಕ ಭಾವನೆಯನ್ನೂ ಹುಟ್ಟಿಸಿರಬಹುದು ಎಂದು ನನ್ನ ಊಹೆ.

ಆದರೂ ಪೋಪ್ ಮಾಡಿದ ಈ ಆಚರಣೆಯನ್ನು ‘ಪ್ರದರ್ಶನ’ ಎನ್ನುವವರಿದ್ದಾರೆ; ಇದೊಂದು ಪ್ರತಿವರ್ಷದ ಯಾಂತ್ರಿಕ ಧಾರ್ಮಿಕ ಆಚರಣೆ ಎನ್ನುವವರೂ ಇದ್ದಾರೆ. ಕೆ.ಬಿ.ಸಿದ್ಧಯ್ಯನವರ ‘ಗಲ್ಲೇಬಾನಿ’ ಖಂಡಕಾವ್ಯದಲ್ಲಿ ಹಿಂದೊಮ್ಮೆ ಚಮ್ಮಾರರು ಚರ್ಮ ಹದ ಮಾಡಲು ಇಟ್ಟ ಗಲ್ಲೇಬಾನಿಯ ನೀರನ್ನು ಮಾಧ್ವರು ಮದುವೆಯ ಸಂದರ್ಭದಲ್ಲಿ ಬಳಸುತ್ತಿದ್ದ ಆಚರಣೆಯ ಉಲ್ಲೇಖವಿದೆ.

ಸಾಂಕೇತಿಕ ಆಚರಣೆಯ ಮಟ್ಟದಲ್ಲಿದ್ದ ಈ ‘ಸಂಬಂಧ’ ಅದರಾಚೆಗೆ ಇರಲಿಲ್ಲ! ಆದ್ದರಿಂದ ಪೋಪ್ ಆಚರಣೆ ಕೂಡ ಸಾಂಕೇತಿಕವೆಂದು ಅನ್ನಿಸಬಹುದು. ಆದರೆ ಕ್ರೈಸ್ತಧರ್ಮದ ಚರಿತ್ರೆಯಲ್ಲಿ ಹಿಂಸೆಯ ಮುಖಗಳ ಜೊತೆಗೇ ಹೀಗೆ ಮುಟ್ಟುವ ಕ್ರಿಯೆ ಕೂಡ ನಿರಂತರವಾಗಿ ಇದೆ. ಆಫ್ರಿಕಾದ ನಾಡುಗಳಲ್ಲಿ ಮೊದಲು ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡವರು ಅಲ್ಲಿ ಅಸ್ಪೃಶ್ಯರಾಗಿದ್ದ ಒಸುಗಳು. ಇಬೋ ಸಮುದಾಯದಲ್ಲಿ ಅವಳಿ ಮಕ್ಕಳನ್ನು ಹೆತ್ತ ತಾಯಿ ಹಾಗೂ ಅವಳಿ ಮಕ್ಕಳು ಭೂಮಿಗೆ ಕಂಟಕವೆಂದು ಅವರನ್ನು ಸಮುದಾಯದಿಂದ ಹೊರಹಾಕುವ ಕ್ರೂರ ಪದ್ಧತಿಯಿತ್ತು. ಅವರೇ ಒಸುಗಳು. ಚರ್ಚು ಒಸುಗಳನ್ನು ಅಸ್ಪೃಶ್ಯರನ್ನಾಗಿ ಕಾಣದಿದ್ದುದರಿಂದ ಅವರು ಕ್ರೈಸ್ತರಾದರು.

ಇಂಡಿಯಾದಲ್ಲೂ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡವರಲ್ಲಿ ಅಸ್ಪೃಶ್ಯತೆಯ ನರಕದಿಂದ ತಪ್ಪಿಸಿಕೊಂಡವರ ಸಂಖ್ಯೆಯೂ ಲಕ್ಷಾಂತರ ಇರಬಹುದು. ಹಾಗೆಯೇ ಜೈನ, ಬೌದ್ಧ, ಇಸ್ಲಾಂ, ಸಿಖ್ ಧರ್ಮಗಳನ್ನು ಈ ಕಾರಣದಿಂದಾಗಿಯೂ ಅಪ್ಪಿಕೊಂಡವರಿರಬಹುದು. ಆದ್ದರಿಂದ ಮೊನ್ನೆ ಪೋಪ್ ನಡೆಸಿದ ಈ ಸಾಂಕೇತಿಕ ಆಚರಣೆ ಕ್ರೈಸ್ತ ಧರ್ಮದ ಬಗ್ಗೆ ಅನೇಕರಲ್ಲಿ ಗೌರವ ಹುಟ್ಟಿಸಿದ್ದರೆ ಅಚ್ಚರಿಯಲ್ಲ.

ಅದರಲ್ಲೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್ ಅನ್ಯದ್ವೇಷದ ಕಾಯಿಲೆಯನ್ನು ಅಮೆರಿಕದಲ್ಲಿ ಹಬ್ಬಿಸುತ್ತಿರುವಾಗ ಪೋಪ್ ಘೋಷಣೆಗೆ ಇನ್ನಷ್ಟು ಮಹತ್ವ ಬಂದಿದೆ. ಇವತ್ತಿಗೂ ಜಗತ್ತಿನಾದ್ಯಂತ ಪೋಪ್‌ರನ್ನು ಗೌರವದಿಂದ ಕಾಣುವ ಅನುಯಾಯಿಗಳು ಇರುವುದರಿಂದ ತಮ್ಮ ಗುರುವಿನ ಈ ನಡವಳಿಕೆ ಅವರಲ್ಲಿ ಒಂದು ಸಣ್ಣ ಸ್ಪಂದನವನ್ನಾದರೂ ಹುಟ್ಟಿಸಿರಬಹುದು. ಅದರಲ್ಲೂ ಜಗತ್ತಿನಲ್ಲಿ ವಿಭಜನೆ, ಪ್ರತ್ಯೇಕತೆಯ ಮಾತುಗಳು ಹೆಚ್ಚುಹೆಚ್ಚಾಗಿ ಧರ್ಮಮೂಲದಿಂದ ಬರುತ್ತಿರುವಾಗ ಪೋಪ್ ಮಾತು, ಆಚರಣೆಗಳು ಇದೆಲ್ಲದರ ವಿರುದ್ಧ ಚಿಂತನೆಗಳನ್ನಾದರೂ ಹುಟ್ಟು ಹಾಕಬಲ್ಲವು.

ಪೋಪ್ ಫ್ರಾನ್ಸಿಸ್ ಕರಿಯನ ಕಾಲಿಗೆ ಮುತ್ತಿಟ್ಟ ಫೋಟೊ ನೋಡಿದಾಗ ಏನೆನ್ನಿಸಿತು ಎಂದು ಕೆಲವರನ್ನು ಕೇಳಿದೆ. ಇದು ಕೂಡ ಪೇಜಾವರರು ದಲಿತರ ಕೇರಿಗೆ ಹೋದಂತೆ ತೋರಿಕೆಯದಿರಬಹುದು ಎಂದರು ಒಬ್ಬರು. ಅಸ್ಪೃಶ್ಯತೆಯ ಸಂಕೀರ್ಣ ಮುಖಗಳ ಬಗ್ಗೆ ಕವನಗಳನ್ನು ಬರೆದಿರುವ ಕವಿಗಳಾದ ಎಲ್.ಹನುಮಂತಯ್ಯ ಹಾಗೂ ಸುಬ್ಬು ಹೊಲೆಯಾರ್ ಅವರನ್ನು ಕೇಳಿದೆ. ‘ಇದು ಪೋಪ್ ಅವರು ಒಂದು ಮಹತ್ತರ ನೈತಿಕ ಜವಾಬ್ದಾರಿಯನ್ನು ಹೊತ್ತಿರುವುದನ್ನು ಸೂಚಿಸುವಂತಿದೆ’ ಎಂದರು ಹನುಮಂತಯ್ಯ.

ಈ ಫೋಟೊ ನೋಡಿದಾಗ ನನಗೆ ನೆನಪಾಗಿದ್ದ ಲಂಕೇಶರ ‘ಸಹಪಾಠಿ’ ಕತೆ ಸುಬ್ಬುವಿಗೂ ನೆನಪಾಗಿತ್ತು. ‘ಸಹಪಾಠಿ’ ಕತೆಯ ಬಸವೇಗೌಡನ ಬೆಂಬಲಿಗರು ದಲಿತ ಮೇಷ್ಟರೊಬ್ಬರ ಮೇಲೆ ಹಲ್ಲೆ ಮಾಡಿದ್ದರಿಂದ ಬಸವೇಗೌಡ ಪಾಪಪ್ರಜ್ಞೆಯಿಂದ ನರಳುತ್ತಾನೆ. ಕತೆಗಾರ ಭಗವಾನ್ ಗೆಳೆಯ ಬಸವೇಗೌಡನ ಕಾಯಿಲೆಗೆ ಒಂದು ಗಾಂಧೀವಾದಿ ಮದ್ದು ಸೂಚಿಸುತ್ತಾನೆ. ಬಸವೇಗೌಡ ದಲಿತನೊಬ್ಬನ ಕಾಲು ತೊಳೆದು ತಾನು ಮಾಡಿರುವ ಅಸ್ಪೃಶ್ಯತೆಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.

ಅದರಂತೆ ದಲಿತ ಜೋನಿಯ ಕಾಲು ತೊಳೆದ ಬಸವೇಗೌಡ, ಆ ಪ್ರಾಯಶ್ಚಿತ್ತದಿಂದ ಅಹಂಕಾರಕ್ಕೆ ಪೆಟ್ಟು ಬಿದ್ದು ಕೆರಳುತ್ತಾನೆ. ಮಾರನೆಯ ದಿನ ಜೋನಿಯ ಪತ್ನಿಯ ಮೇಲೆ ಅತ್ಯಾಚಾರ ಮಾಡಿ ತನ್ನ ಅಹಂಕಾರವನ್ನು ತಣಿಸಿಕೊಳ್ಳುತ್ತಾನೆ. ಅವನ ಧರ್ಮ ಉದಾತ್ತ ಪ್ರಾಯಶ್ಚಿತ್ತದ ಸಾಧ್ಯತೆಯನ್ನೇ ಹೇಳಿಕೊಟ್ಟಿಲ್ಲ; ಹೀಗಾಗಿ ಅವನಿಗೆ ಉದಾತ್ತತೆ ಸಾಧ್ಯವಾಗಲಿಲ್ಲ.

ಆದರೆ ಕ್ರೈಸ್ತ ಧರ್ಮವನ್ನು ನಂಬುವವರಿಗೆ ಇದು ಅಸಾಧ್ಯವಾಗಿ ಕಾಣುವುದಿಲ್ಲ. ಕಾರಣ, ಆ ಧರ್ಮದ ಒಳಗೇ ಅವಮಾನಿತರನ್ನು ಒಳಗೊಳ್ಳುವ ವಿಶಿಷ್ಟ ಗುಣವೊಂದಿದೆ. ಮೊನ್ನೆ ಬೆಂಗಳೂರಿನಲ್ಲಿ ತೀರಿಕೊಂಡ, ಕನ್ನಡ ಕ್ರೈಸ್ತರ ಹೋರಾಟದ ಮುಂಚೂಣಿಯಲ್ಲಿದ್ದ ಕ್ರೈಸ್ತ ಗುರು ಫಾದರ್ ಚಸರಾ ಅವರ ಇಂಥ ಉದಾತ್ತ ನಡವಳಿಕೆಗೆ ಸಾವಿರಾರು ಜನ ಸಾಕ್ಷಿಯಾಗಿದ್ದಾರೆ. ಅವರು ನೂರಾರು ಜನರಿಗೆ ಜಾತಿ, ಮತ ನೋಡದೆ ನೆರವಾಗಿದ್ದರು. ಇವತ್ತಿಗೂ ಜಗತ್ತಿನ ಮುಖ್ಯ ಚರ್ಚುಗಳಲ್ಲಿ ಎಲ್ಲರನ್ನೂ ಬರಮಾಡಿಕೊಳ್ಳುವ ಔದಾರ್ಯವಿದೆ.

ಮದರ್ ತೆರೆಸಾ ಅವರನ್ನು ‘ಸೇಂಟ್’ ಎಂದು ಈಚೆಗೆ ರೋಮ್‌ನ ಚರ್ಚು ಘೋಷಿಸಿತು. ಆದರೆ ಕೋಲ್ಕತ್ತದಲ್ಲಿ ತೆರೆಸಾ ಕುಷ್ಠರೋಗಿಗಳಿಗಾಗಿ ಮಾಡಿರುವ ಅಪೂರ್ವ ಸೇವೆಯನ್ನು ಬಲ್ಲವರ ಮನಸ್ಸಿನಲ್ಲಿ ಅವರು ಸಂತರೆಂದು ಈಗಾಗಲೇ ನೆಲೆಯೂರಿದ್ದಾರೆ. ಕೋಲ್ಕತ್ತದ ಫುಟ್‌ಪಾತ್‌ಗಳಲ್ಲಿ ಎಸೆಯಲಾಗಿದ್ದ ಕುಷ್ಠರೋಗಿಗಳನ್ನು ತಬ್ಬಿ ಕರೆತಂದು ಆರೈಕೆ ಮಾಡಿದ ತೆರೆಸಾ ಅವರ ಜೀವಮಾನದ ಕಾಯಕ ಪೋಪ್ ಫ್ರಾನ್ಸಿಸ್ ಆವರ ಸಾಂಕೇತಿಕ ಕ್ರಿಯೆಗಿಂತ ನೂರು ಪಾಲು ಮೇಲು, ನಿಜ. ಆದರೆ ಕರಿಯರ ಮೇಲೆ ಪಶ್ಚಿಮ ಎಸಗಿರುವ ದೌರ್ಜನ್ಯಕ್ಕೆ ಕ್ರೈಸ್ತ ಧರ್ಮಗುರು ಮಾಡಿಕೊಂಡ ಉದಾತ್ತ ಪ್ರಾಯಶ್ಚಿತ್ತದ ಪ್ರಾತಿನಿಧಿಕ ರೂಪದಂತೆಯೂ ಈ ಆಚರಣೆಯನ್ನು ನೋಡಬೇಕು.

ವಸಾಹತೀಕರಣದ ಸಂದರ್ಭದಲ್ಲಿ ಚರ್ಚು ವಸಾಹತುಕಾರರ ಜೊತೆಗಿತ್ತು; ಎಷ್ಟೋ ವರ್ಷಗಳ ಕಾಲ ಕರಿಯರ ಗುಲಾಮಗಿರಿಯನ್ನು ಒಪ್ಪಿಕೊಂಡಿತ್ತು, ನಿಜ; ಆದರೆ ಚರ್ಚಿನ ನಡುವಿನಿಂದಲೇ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಥರದ ಗುರುಗಳೂ ಬಂದು ಕರಿಯರ ಬಿಡುಗಡೆಗೆ ಹೋರಾಡಿದರು ಎಂಬುದೂ ನಿಜ. ಇವೆಲ್ಲ ನಡೆಯುವ ಮೊದಲು, ಹನ್ನೆರಡನೆಯ ಶತಮಾನದಲ್ಲಿ ‘ಮಾದಾರ ಚೆನ್ನಯ್ಯನ ಮನೆಯ ಮಗ ನಾನು’ ಎಂದು ಘೋಷಿಸಿ ಜಾತಿಪ್ರಜ್ಞೆಯನ್ನು ಮೀರುವ ಕ್ರಮವನ್ನು ಬಸವಣ್ಣನವರು ತೋರಿಸಿದರು.

ಅವರು ಹರಳಯ್ಯ ಮತ್ತು ಅವರ ಪತ್ನಿಯ ತೊಡೆಯ ಚರ್ಮದಿಂದ ಹೊಲೆದ ಚಪ್ಪಲಿಗಳನ್ನು ತಮ್ಮ ತಲೆಯ ಮೇಲೆ ಹೊತ್ತು ನಡೆದರೆಂಬ ಪೌರಾಣಿಕ ಕತೆ ಕೂಡ ಉದಾತ್ತ ಪ್ರಾಯಶ್ಚಿತ್ತದ ಉದಾಹರಣೆಯಂತೆಯೇ ಇದೆ. ಸವರ್ಣೀಯ ಸಮಾಜ ದಲಿತರನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಟೀಕಿಸುವ ವಚನಗಳನ್ನು ಬರೆದ ಬಸವಣ್ಣನವರ ಜಾತ್ಯತೀತತೆಯನ್ನು ಎದ್ದು ಕಾಣುವ ಕ್ರಿಯೆಯೊಂದರ ಮೂಲಕವೂ ಸಾರುವ ಈ ಕತೆ ಸಮಾಜಕ್ಕೆ ಸ್ಪಷ್ಟ ಸಂದೇಶವೊಂದನ್ನು ಕೊಡಲೂ ಹುಟ್ಟಿರಬಹುದು.

ಆದರೆ ಈಚೆಗೆ ಕೆಲವು ಹಿಂದೂ ಸ್ವಾಮೀಜಿಗಳು ದಲಿತಕೇರಿಗೆ ಹೋಗುವುದು ಮೇಲುಜಾತಿಯ ಠೇಂಕಾರದಂತೆ ಕಾಣುತ್ತದೆಯೇ ಹೊರತು, ಅದು ಬಸವಣ್ಣನವರ ವಚನಗಳ ಸಹಜ ವಿನಯದಂತೆ ಕಾಣುವುದಿಲ್ಲ. ಅಕಸ್ಮಾತ್ ಈ ಸ್ವಾಮಿಗಳಿಗೆ ನಿಜಕ್ಕೂ ದಲಿತರ ಬಗ್ಗೆ ಕಾಳಜಿ ಇದ್ದರೆ, ಅವರು ತಂತಮ್ಮ ಜಾತಿಗಳ ಅನುಯಾಯಿಗಳನ್ನು ಮೊದಲು ಜಾತೀಯತೆಯಿಂದ ಹೊರ ತರಬೇಕಲ್ಲವೆ?

ಹಾಗೆ ನೋಡಿದರೆ, ಈಚಿನ ದಶಕಗಳಲ್ಲಿ ‘ವೆಜ್’ ಹಾಗೂ ‘ನಾನ್ ವೆಜ್’ ಜಾತಿಗಳನ್ನು ಹುಟ್ಟು ಹಾಕಿ ಹೊಸ ರೀತಿಯ ಅಸ್ಪೃಶ್ಯತೆಯನ್ನು ಸೃಷ್ಟಿ ಮಾಡುತ್ತಿರುವ ಹಿಂದೂ ಸಮಾಜ ಈವರೆಗೆ ಹುಟ್ಟು ಹಾಕಿ, ಪೋಷಿಸಿಕೊಂಡು ಬಂದಿರುವ ಬಗೆಬಗೆಯ ಅಸ್ಪೃಶ್ಯತೆಗಳ ಪಾಪಗಳನ್ನು ತೊಳೆದುಕೊಳ್ಳಲು ಎಷ್ಟೊಂದು ಜಾತಿ, ಧರ್ಮಗಳ ಜನರ ಕಾಲಿಗೆ ಸಾಂಕೇತಿಕವಾಗಿ ಮುತ್ತಿಕ್ಕಬೇಕಾಗಬಹುದು?

ಆದರೆ ಅಂಥ ಆತ್ಮಪರೀಕ್ಷೆಯ ವಿನಯ ಕೊನೆಯಪಕ್ಷ ಸಾಂಕೇತಿಕವಾಗಿಯಾದರೂ ಈ ಧರ್ಮಗುರುಗಳ ಲೋಕದಲ್ಲಿ ಎಲ್ಲಾದರೂ ಕಾಣುತ್ತಿದೆಯೇ? ಆದ್ದರಿಂದಲೇ ಧಾರ್ಮಿಕ ಆಡಂಬರದ ಈ ಕಾಲದಲ್ಲಿ, ನಿಜಕ್ಕೂ ಹೃದಯ ವೈಶಾಲ್ಯವಿರುವ ಬೌದ್ಧ ಧರ್ಮ, ವಚನ ಧರ್ಮ, ಸಿಖ್ ಧರ್ಮ, ಸೂಫಿ ಪಂಥಗಳನ್ನು ಹಾಗೂ ಇಂಡಿಯಾದ ನೂರಾರು ಜನಪದೀಯ ಧರ್ಮಗಳನ್ನು ಮತ್ತೆ ವ್ಯಾಖ್ಯಾನಿಸುತ್ತಿರುವ ಚಿಂತಕರ ಮಾತುಗಳನ್ನು ನಾವೆಲ್ಲ ಎಚ್ಚರದಿಂದ ಕೇಳಿಸಿಕೊಳ್ಳಬೇಕಾಗುತ್ತದೆ.

ಇಷ್ಟಾಗಿಯೂ, ಇವೆಲ್ಲ ತರಬೇತಿಗಳನ್ನೂ ಮೀರಿ, ಪ್ರಕೃತಿಯಂತೆ ಎಲ್ಲರನ್ನೂ ಒಂದೇ ಸಮನಾಗಿ ಕಾಣುವ ಸಹಜ ಜಾತ್ಯತೀತತೆಯೇ ಅತ್ಯುತ್ತಮವಾದುದು ಎಂಬುದರಲ್ಲಿ ನನಗಂತೂ ಅನುಮಾನವಿಲ್ಲ.

ಕೊನೆ ಟಿಪ್ಪಣಿ: ಜಾತಿಯ ಗೋಡೆ ಕಳಚಿ ಬಿದ್ದ ಗಳಿಗೆ
ಆ ದೃಶ್ಯ ಇವತ್ತಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅದೇ ಆಗ ಹೈಸ್ಕೂಲ್ ಮುಗಿಸಿದ್ದ ನಾನು ಅವತ್ತು ನಮ್ಮ ಮಿಡ್ಲ್ ಸ್ಕೂಲಿನ ಮೈದಾನದಲ್ಲಿ ನಿಂತಿದ್ದೆ. ಆ ಮಧ್ಯಾಹ್ನ ಅಲ್ಲಿ ಪಂಚಾಯಿತಿ ಚುನಾವಣೆಗಳ ಫಲಿತಾಂಶ ಘೋಷಣೆಯಾಗುತ್ತಿತ್ತು. ವಾರ್ಡೊಂದರಿಂದ ರಹಮತ್ ಉಲ್ಲಾಸಾಬ್ ಗೆದ್ದಿದ್ದರು. ಅವರ ಅಭಿಮಾನಿಗಳು ಹಾರಗಳನ್ನು ಹಿಡಿದು ಅವರನ್ನು ಮುತ್ತಿಕೊಂಡಿದ್ದರು.

ಅಲ್ಲೇ ಕೊಂಚ ದೂರದಲ್ಲಿ ಖಾಕಿ ನಿಕ್ಕರ್ ಹಾಗೂ ಖಾಕಿ ಷರಟು ಹಾಕಿದ್ದ ನಮ್ಮೂರ ಸ್ವೀಪರ್ ಸಂಕೋಚದಿಂದ ನಿಂತಿದ್ದರು. ರಹಮತ್ ತಕ್ಷಣ ತೋಳು ಚಾಚುತ್ತಾ ‘ನೀವು ಕಣ್ರೋ ನೀವು!’ ಎಂದು ಕೃತಜ್ಞತೆಯಿಂದ ಅವರನ್ನು ಬಾಚಿ ತಬ್ಬಿಕೊಂಡರು. ನನ್ನ ಬಾಲ್ಯದ ಸಾಂಪ್ರದಾಯಿಕ ಸಮಾಜದಲ್ಲಿ ನಾನು ಎಂದೂ ಕಾಣದಿದ್ದ ಒಂದು ‘ಮುಟ್ಟಿಸಿಕೊಂಡ’ ಘಟನೆ ನಡೆದಿತ್ತು. ನಮ್ಮಂಥ ಹುಡುಗರ ಮನಸ್ಸಿನಲ್ಲಿ ಸಮಾಜ, ಮನೆ, ನೆರೆಹೊರೆಗಳಿಂದಾಗಿ ಬೆಳೆದು ನಿಂತಿದ್ದ ಅಸ್ಪೃಶ್ಯತೆಯ ಗೋಡೆ ಏಕ್‌ದಂ ಮುರಿದು ಬಿದ್ದಿತ್ತು; ಅದು ಮುರಿದು ಬಿದ್ದಿದ್ದು ರಹಮತ್ ಸಾಹೇಬರು ನಮ್ಮೂರ ಸ್ವೀಪರ್ ಒಬ್ಬರನ್ನು ಸಹಜವಾಗಿ ಅಪ್ಪಿಕೊಂಡ ರೀತಿಯಿಂದ. ಆದ್ದರಿಂದಲೇ ಇಂಥ ಆರೋಗ್ಯಕರ ಬಹಿರಂಗ ವರ್ತನೆಗಳ ಪರಿಣಾಮದ ಬಗ್ಗೆ ಇವತ್ತಿಗೂ ನನಗೆ ನಂಬಿಕೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.