ಅಧಿಕಾರದಲ್ಲಿ ಇರುವವರೇ ಹಾಗೆ, ಅವರಿಗೆ ಸುತ್ತಲೂ ವಂದಿಮಾಗಧರು ಇರಬೇಕು; ‘ನಿಮ್ಮ ಹಾಗೆ ಅಧಿಕಾರ ಮಾಡಿದವರು ಹಿಂದೆ ಯಾರೂ ಇರಲಿಲ್ಲ, ಮುಂದೆ ಯಾರೂ ಬರುವುದಿಲ್ಲ’ ಎಂದು ಬಹುಪರಾಕು ಹಾಕುವವರು ಬೇಕು. ಅಧಿಕಾರದಲ್ಲಿ ಇರುವವರಿಗೆ ಅಹಂಕಾರ ಇರುತ್ತದೆ, ‘ನಾನು ಕೊಡುವವನು’ ಎಂಬ ಭಾವ ಅವರಲ್ಲಿ ಇರುತ್ತದೆ.

ಎದುರು ಬಿದ್ದರೆ ‘ನಿನ್ನನ್ನು ಶಿಕ್ಷಿಸಬಲ್ಲೆ’ ಎಂದೂ ಆತ ಹೇಳುತ್ತ ಇರುತ್ತಾನೆ. ತನ್ನ ವಿರುದ್ಧ ಯಾರಾದರೂ ಇದ್ದಾರೆ ಎಂದು ಅನಿಸಿದರೆ ಅವರನ್ನು ಹೇಗಾದರೂ ಮಾಡಿ ಬಗ್ಗು ಬಡಿಯುತ್ತಾನೆ; ಇಲ್ಲ ಎನಿಸಿಬಿಟ್ಟರೂ ಅಚ್ಚರಿಯಿಲ್ಲ. ನಾನು ಹೇಳುತ್ತಿರುವುದು ಆತನ ರಾಜಕೀಯ ವೈರಿಗಳ ಬಗ್ಗೆ ಅಲ್ಲ. ವಂದಿಮಾಗಧ ಆಗಲು ಬಯಸದ ಪತ್ರಕರ್ತರ ಬಗ್ಗೆ. ನನಗೆ ತಿಳಿದ ಹಾಗೆ ಭಾರತದಲ್ಲಿ ಪತ್ರಕರ್ತರನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ನಡೆದ ನೆನಪು ಇಲ್ಲ.

ಈಗ ಅದೂ ನಡೆದು ಹೋಯಿತು. ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಪತ್ರಕರ್ತ ಜಗೇಂದ್ರ ಸಿಂಗ್ ಅವರನ್ನು ಅವರ ಮನೆಗೇ ನುಗ್ಗಿ ಪೊಲೀಸರು ಮತ್ತು ಗೂಂಡಾಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹೊರಟು ಹೋದರು. ಅವರೆಲ್ಲ ಉತ್ತರಪ್ರದೇಶದ ಸಚಿವ ರಾಮಮೂರ್ತಿ ವರ್ಮಾ ಅವರ ಹಸ್ತಕರು. ಈ ಸಂಬಂಧ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ವರ್ಮಾ ಅವರ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲಾಗಿದೆ. ಆದರೆ, ರಾಜೀನಾಮೆ ಕೊಡಲು ಅದು ಸಾಕಾಗದು ಎಂದು ವರ್ಮಾ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಾದಿಸುತ್ತಿದ್ದಾರೆ. ಪತ್ರಕರ್ತರ ಮೇಲೆ ಹಲ್ಲೆ ಮಾಡಿದವರಿಗೆ, ಕೊಲೆ ಮಾಡಿದವರಿಗೆ ಶಿಕ್ಷೆ ಎಲ್ಲಿ ಆಗಿದೆ?

ಜಗೇಂದ್ರ ಸಿಂಗ್ ಅವರೇನು ದೊಡ್ಡ ಪತ್ರಿಕೆಯ ದೊಡ್ಡ ವರದಿಗಾರ ಆಗಿರಲಿಲ್ಲ. ಅವರಿಗೆ ದೊಡ್ಡ ಸಂಬಳವೂ ಇರಲಿಲ್ಲ. ಅವರು ಫೇಸ್‌ಬುಕ್ಕಿನಲ್ಲಿ ‘ಜಗೇಂದ್ರಸಿಂಗ್’ ಮತ್ತು ‘ಸಹರಾನ್‌ಪುರ ಸಮಾಚಾರ’ ಎಂಬ ಎರಡು ಹೆಸರುಗಳಲ್ಲಿ ಖಾತೆ ತೆರೆದು ಅಲ್ಲಿಯೇ ಸುದ್ದಿ ಬರೆಯುತ್ತಿದ್ದರು. ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಬೇಕಾದರೆ ಒಂದು ದಿನ ಕಳೆದು ಬೆಳಗು ಆಗಬೇಕು. ಸಾಮಾಜಿಕ ಜಾಲತಾಣದಲ್ಲಿಯಾದರೆ ಆ ಕ್ಷಣದ ಸುದ್ದಿಯನ್ನು ಆ ಕ್ಷಣವೇ ಬಿತ್ತರಿಸಬಹುದು ಎಂದು ಅವರು ವಾದಿಸಿದರು, ಅದನ್ನೇ ಪಾಲಿಸಿದರು. ಕೆಲವು ಪತ್ರಿಕೆಗಳಿಗೆ ಹವ್ಯಾಸಿಯಾಗಿ ವರದಿಗಳನ್ನೂ ಕಳಿಸುತ್ತಿದ್ದರು.

ಅವರಿಗೆ ತಿಂಗಳಿಗೆ ಆರರಿಂದ ಏಳು ಸಾವಿರ ರೂಪಾಯಿಗಳ ಜುಜುಬಿ ಎನ್ನುವಂಥ ಆದಾಯವಿತ್ತು! ಅವರು ತಮ್ಮ ಕ್ಷೇತ್ರದ ಸಚಿವ ವರ್ಮಾ ಅವರ ಕುಕೃತ್ಯಗಳನ್ನೆಲ್ಲ ಫೇಸ್ ಬುಕ್ಕಿನಲ್ಲಿ ಸಚಿವರ ಚಿತ್ರಸಮೇತ ಹಾಕುತ್ತಿದ್ದರು. ಅಂಗನವಾಡಿ ಶಿಕ್ಷಕಿಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಬಯಲಿಗೆ ಬಂದುದು ಹಾಗೆಯೇ. ವರ್ಮಾ ಮತ್ತು ಅವರ ಬೆಂಬಲಿಗರಿಗೆ ಇನ್ನು ಸಹಿಸಲು ಆಗದು ಎಂದು ಅನಿಸಿತು. ಜಗೇಂದ್ರ ಸಿಂಗ್ ಅವರ ಮನೆಗೆ ನುಗ್ಗಿ ಬೆಂಕಿ ಹಚ್ಚಿ ಹೊರಟು ಹೋದರು. ‘ನಾವು ಅವರ ಮನೆಗೆ ಹೋದಾಗ ಅವರೇ ಹೆದರಿ ಬೆಂಕಿ ಹಚ್ಚಿಕೊಂಡರು’ ಎಂದು ಸುಳ್ಳು ಸುದ್ದಿ ಹಬ್ಬಿಸಿದರು.

ಆದರೆ, ಜಗೇಂದ್ರ ಸಿಂಗ್ ಸಾಯುವಾಗ ಕೊಟ್ಟ ಹೇಳಿಕೆ ತದ್ವಿರುದ್ಧವಾಗಿತ್ತು : ‘ನನಗೆ ಅವರೇಕೆ ಬೆಂಕಿ ಹಚ್ಚಬೇಕಿತ್ತು. ಅವರಿಗೆ ನನ್ನ ಮೇಲೆ ಅಷ್ಟು ಸಿಟ್ಟು ಇದ್ದರೆ ಹೊಡೆಯಬಹುದಿತ್ತು, ಬಡಿಯಬಹುದಿತ್ತು, ಪೆಟ್ರೋಲ್ ಹಾಕಿ ಸುಟ್ಟರೇಕೆ’ ಎಂದು ಅವರು ಕೇಳಿದ್ದರು. ಜಗೇಂದ್ರ ಸಿಂಗ್ ಸಾವನ್ನು ಪತ್ರಕರ್ತರ ಎಷ್ಟು ಸಂಘಟನೆಗಳು ಖಂಡಿಸಿವೆಯೋ ಏನೋ? ಅದನ್ನು ಒಂದು ಬಿಡಿ ಘಟನೆ ಎಂದು ಭಾವಿಸುವವರೇ ಹೆಚ್ಚು. ಇನ್ನು ಕೆಲವು ದಿನಗಳಲ್ಲಿ ಎಲ್ಲ ಮರೆತು ಹೋಗುತ್ತದೆ. ಪೊಲೀಸರ ಅಮಾನತು ಆದೇಶ ರದ್ದಾಗುತ್ತದೆ.

ಸಚಿವರಿಗೆ ಹೇಗೂ ಏನೂ ಆಗುವುದಿಲ್ಲ. ಆ ಅಂಗನವಾಡಿ ಶಿಕ್ಷಕಿ ಕೂಡ ಈಗ ತಿರುಗಿ ಬಿದ್ದಿದ್ದಾರೆ. ಜಗೇಂದ್ರ ಸಿಂಗ್ ತಾನೇ ಬೆಂಕಿ ಹಚ್ಚಿಕೊಂಡರು ಎಂದು ಆಕೆ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ. ಆಕೆ ಈ ಘಟನೆಯ ಏಕೈಕ ಸಾಕ್ಷಿಯಾಗಿದ್ದರು. ನ್ಯಾಯಾಲಯದಲ್ಲಿ ಸಾಕ್ಷಿ–ಪುರಾವೆ ಇಲ್ಲದ ಪ್ರಕರಣಗಳಿಗೆ ಏನು ಗತಿಯಾಗುತ್ತದೆಯೋ ಇದಕ್ಕೂ ಅದೇ ಗತಿ ಆಗುತ್ತದೆ. ನಿಜ, ಜಗೇಂದ್ರ ಸಿಂಗ್ ಮಾಡಿದ್ದೆಲ್ಲ ಸರಿ ಎಂದು ಹೇಳಲು ಆಗದು.

ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದವರ ವಿರುದ್ಧ ಇಂಥ ಗುರುತರ ಆರೋಪ ಮಾಡುವಾಗ ಬೇಕಾದ ಸಾಕ್ಷ್ಯ– ಪುರಾವೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರೇ ಹೇಗೆ ಎಂದು ಸ್ಪಷ್ಟವಾಗಿಲ್ಲ. ಚಾರಿತ್ರ್ಯಹರಣ ಮಾಡುವಂಥ ವರದಿಗಳನ್ನು ಮಾಡುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಬಹುಶಃ, ಜಗೇಂದ್ರ ಸಿಂಗ್ ಉತ್ತರಪ್ರದೇಶದಲ್ಲಿ ನಡೆಯುತ್ತಿದ್ದ ಅಂಧಾದುಂದಿ ಆಡಳಿತ ನೋಡಿ ರೋಸಿ ಹೋಗಿದ್ದರೋ ಏನೋ? ಅವರು ಸಾವನ್ನು ಎದುರಿಸಲು ಸಿದ್ಧರಾಗಿಯೇ ಹಾಗೆಲ್ಲ ಮಾಡಿದ್ದಿರಬಹುದು.

ನಮ್ಮ ವೃತ್ತಿಯೇ ಹಾಗೆ. ಅಧಿಕಾರದಲ್ಲಿ ಇದ್ದವರಿಗೆ ನಮ್ಮನ್ನು ಕಂಡರೆ ಅಷ್ಟಕ್ಕಷ್ಟೆ. ಅಧಿಕಾರದಲ್ಲಿ ಇದ್ದಾಗ ಎದುರಿಗೆ ಬಂದರೆ ಕಂಡರೂ ಕಾಣದಂತೆ ಹೋಗುವ ರಾಜಕಾರಣಿಗಳು ಅಧಿಕಾರ ಕಳೆದುಕೊಂಡ ನಂತರ ಒಮ್ಮೆಲೇ ತಬ್ಬಿಕೊಳ್ಳಲು ಬರುತ್ತಾರೆ. ಅಧಿಕಾರದಲ್ಲಿ ಇರುವ ಮುಖ್ಯಮಂತ್ರಿಯಾದಿಯಾಗಿ ಎಲ್ಲರಿಗೂ ತಾವು ಅದ್ಭುತವಾಗಿ ಕೆಲಸ ಮಾಡಿದ್ದೇವೆ ಮತ್ತು ಮಾಡುತ್ತಿದ್ದೇವೆ, ಆದರೆ ಮಾಧ್ಯಮಗಳಲ್ಲಿ ಅದಕ್ಕೆ ಸೂಕ್ತ ಪ್ರಚಾರ ಸಿಗುತ್ತಲೇ ಇಲ್ಲ ಎಂಬ ಭಾವನೆ ಇರುತ್ತದೆ.

ಹಾಗೆಂದು ನಾವು ಸರ್ಕಾರದಲ್ಲಿ ಇದ್ದವರನ್ನು ಹೊಗಳಿ ಪುಟಗಟ್ಟಲೆ ಬರೆದರೆ ಜನರು ನಮ್ಮನ್ನು ಅನುಮಾನಿಸಲು ಆರಂಭಿಸುತ್ತಾರೆ. ಅವರು ಹೇಗೂ ರಾಜಕಾರಣಿಗಳನ್ನು ನಂಬುವುದಿಲ್ಲ. ನಮ್ಮನ್ನೂ ಅನುಮಾನಿಸಿದರೆ ಅಲ್ಲಿಗೆ ಮಾಧ್ಯಮಗಳ ಕಥೆ ಮುಗಿದಂತೆಯೇ. ವಿಶ್ವಾಸಾರ್ಹತೆಯ ಬಿಕ್ಕಟ್ಟು ಉದ್ಭವಿಸುತ್ತದೆ. ಇಲ್ಲಿ ಬರೀ ಮಾಧ್ಯಮಗಳ ವಿಶ್ವಾಸಾರ್ಹತೆಯ ಪ್ರಶ್ನೆ ಅಡಗಿಲ್ಲ. ಮಾಧ್ಯಮಗಳು ಕಾಪಾಡಬೇಕಾದ ಕೊನೆಯ ಮನುಷ್ಯನ ಹಿತ ಅಡಗಿದೆ.
ಅಧಿಕಾರದಲ್ಲಿ ಇದ್ದವರು ಮಾಧ್ಯಮಗಳನ್ನು ಗೆಲ್ಲಲು ಅನೇಕ ದಾರಿಗಳನ್ನು ಬಳಸುತ್ತಾರೆ. ಓಲೈಸಲು ನೋಡುತ್ತಾರೆ. ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ರಾಜಕೀಯ ಒತ್ತಡಗಳನ್ನು ತರುತ್ತಾರೆ. ಆರ್ಥಿಕ ಒತ್ತಡಗಳನ್ನು ಬಳಸುತ್ತಾರೆ. ಎಲ್ಲದಕ್ಕೂ ಮಣಿಯದಿದ್ದರೆ ಜೀವ ಬೆದರಿಕೆ ಹಾಕುತ್ತಾರೆ.

ಹಿಂದಿನ ಸರ್ಕಾರದ ಅವಧಿಯ ಹಕ್ಕುಚ್ಯುತಿ ಪ್ರಕರಣವೊಂದರಲ್ಲಿ ನಮ್ಮ ಪತ್ರಿಕೆಯ ವಿರುದ್ಧವೇ ಆರ್ಥಿಕ ಒತ್ತಡವನ್ನು ಹೇರುವ ಪ್ರಯತ್ನ ನಡೆಯಿತು. ಒಂದು ವರ್ಷದ ಅವಧಿಗೆ ನಮ್ಮ ಪತ್ರಿಕೆಗೆ ಯಾವ ಜಾಹೀರಾತನ್ನು ಕೊಡಬಾರದು ಎಂದು ಹಕ್ಕುಚ್ಯುತಿ ಸಮಿತಿ ನಿರ್ಣಯಿಸಿತು. ಬಿಜೆಪಿಯ ಶಾಸಕರೊಬ್ಬರು ಸಮಿತಿಯ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಯ ಒಬ್ಬೊಬ್ಬ ಶಾಸಕರು ಸೇರಿಕೊಂಡು ನಮ್ಮ ವಿರುದ್ಧ ದೂರು ಕೊಟ್ಟಿದ್ದರು. ಹಾಲಿ ಸರ್ಕಾರದಲ್ಲಿ ಆ ಕಾಂಗ್ರೆಸ್ ಶಾಸಕರು ಒಬ್ಬ ಪ್ರಭಾವಿ ಸಚಿವರು. ಅಧಿಕಾರದಲ್ಲಿ ಇದ್ದವರಿಗೆ ಅಹಂಕಾರ ಇರುತ್ತದೆ. ನಾನು ಕೊಡುವ ಜಾಗದಲ್ಲಿ ಇದ್ದೇನೆ ಎಂಬ ಭಾವನೆ ಇರುತ್ತದೆ. ಯಾವ ರಾಜನೂ ಎಷ್ಟೇ ಕೊಡುಗೈ ದಾನಿ ಎನಿಸಿದರೂ ತನ್ನ ಜೇಬಿನಿಂದ ತೆಗೆದು ಯಾರಿಗೂ ದಾನ ಮಾಡುತ್ತಿರಲಿಲ್ಲ. ಪ್ರಜೆಗಳ ತೆರಿಗೆಯ ಹಣದಿಂದಲೇ ಆತ ದಾನ ಮಾಡುತ್ತಿದ್ದ.

ಈಗಿನ ಆಧುನಿಕ ‘ಮಹಾರಾಜ’ರೂ ತಮ್ಮ ಜೇಬಿನಿಂದ ಏನನ್ನೂ, ಕೊನೆಗೆ ಪತ್ರಿಕೆಗಳಿಗೆ ಜಾಹೀರಾತನ್ನೂ, ಕೊಡುವುದಿಲ್ಲ. ಆದರೂ ನಾನು ಕೊಡುವ ಸ್ಥಾನದಲ್ಲಿ ಇದ್ದೇನೆ ಎಂಬ ಭಾವನೆ ಅವರಿಗೆ ಇರುತ್ತದೆ. ಮತ್ತು ಅದು ಮಾಧ್ಯಮವನ್ನು ಮೌನವಾಗಿಸುವ ಒಂದು ದಾರಿ ಎಂದು ಅವರು ಅಂದುಕೊಂಡಿರುತ್ತಾರೆ. ರಾಜ್ಯ ಸರ್ಕಾರಗಳು ಅಷ್ಟೇ ಏಕೆ? ಕೇಂದ್ರ ಸರ್ಕಾರವೂ ಮಾಧ್ಯಮ ಸ್ನೇಹಿ ಅಲ್ಲ. ಹಾಲಿ ಪ್ರಧಾನಿಗಳಿಗೆ ಮಾಧ್ಯಮಗಳು ಎಂದರೆ ಯಾವಾಗಲೂ ಅಷ್ಟಕ್ಕಷ್ಟೇ. ಈಗಂತೂ ಕೇಳುವುದೇ ಬೇಡ. ಅವರು ಪ್ರಧಾನಿಯಾದ ನಂತರ ಮಾಧ್ಯಮಗಳ ಜತೆಗೆ ಸಂವಾದ ಮಾಡಿದ್ದು ಯಾರಿಗಾದರೂ ನೆನಪು ಇದೆಯೇ? ಈ ಕೇಂದ್ರ ಸರ್ಕಾರದ ಹಾಗೆ ಉಕ್ಕಿನ ಗೋಡೆ ಕಟ್ಟಿ ಮಾಹಿತಿಯ ಹರಿವನ್ನು ತಡೆದ ಯಾವ ಸರ್ಕಾರವಾದರೂ ಹಿಂದೆ ಇತ್ತು ಎಂದು ಅನಿಸುವುದಿಲ್ಲ.

ಜಗತ್ತಿನಲ್ಲಿ, ದೇಶದಲ್ಲಿ, ರಾಜ್ಯದಲ್ಲಿ, ಜಿಲ್ಲೆಯಲ್ಲಿ, ನಮ್ಮ ನೆರೆಹೊರೆಯಲ್ಲಿ ಏನಾಗುತ್ತಿದೆ ಎಂಬುದನ್ನು ನಿರ್ಭಯವಾಗಿ ಜನರಿಗೆ ತಿಳಿಸುವುದು ಮಾಧ್ಯಮಗಳ ಕೆಲಸ. ಅದು ಸರ್ಕಾರಿ ಕ್ಷೇತ್ರವೇ ಇರಲಿ, ಖಾಸಗಿ ಕ್ಷೇತ್ರವೇ ಇರಲಿ. ಉತ್ತರದಾಯಿತ್ವ ಎಂಬುದು ಒಂದು ಇರಬೇಕು. ಆ ಮೂಲಕವೇ ಪ್ರಜಾಪ್ರಭುತ್ವದ ಬುನಾದಿಯನ್ನು ಗಟ್ಟಿಗೊಳಿಸಲು ಸಾಧ್ಯ. ಆದರೆ, ತನಗೆ ವಿರುದ್ಧವಾದ ಮಾಹಿತಿ ಮಾಧ್ಯಮಗಳಿಗೆ ತಲುಪುವುದೂ ಬೇಡ, ಅದು ಪ್ರಸಾರ ಆಗುವುದೂ ಬೇಡ ಎಂದು ಸರ್ಕಾರದಲ್ಲಿ ಇದ್ದವರು ಬಯಸುತ್ತಾರೆ. ಇದಕ್ಕೆ ಪ್ರಭಾವಿ ಉದ್ಯಮಿಗಳೂ ಹೊರತಲ್ಲ.

ನಮ್ಮ ವೃತ್ತಿಯೇ ಹಾಗೆ. ಅದು ಅಧಿಕಾರಸ್ಥರ ಜತೆಗಿನ ನಿರಂತರ ಸಂಘರ್ಷದ್ದು ಅಥವಾ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಮಾಜಿ ಸಂಪಾದಕ ಬೆನ್ ಬ್ರ್ಯಾಡ್ಲಿ ಹೇಳಿದ ಹಾಗೆ ‘ಇರುಸು ಮುರುಸಿನದು’. ಅಧಿಕಾರದಲ್ಲಿ ಇದ್ದವರು ನಮ್ಮನ್ನು ಪ್ರೀತಿ ಮಾಡಲು ಬರಬೇಕಾದ ಅಗತ್ಯವೇನೂ ಇಲ್ಲ. ನಮ್ಮ ಕೆಲಸಕ್ಕೆ ಅಡ್ಡಿ ಮಾಡದೇ ಇದ್ದರೆ ಅದೇ ದೊಡ್ಡ ಉಪಕಾರ. ಅಧಿಕಾರದಲ್ಲಿ ಇದ್ದವರ ಜತೆಗೆ ಹಿತವಾಗಿ ಇದ್ದು ಯಾವುದಾದರೂ ಮಾಧ್ಯಮ ಜನಪರವಾಗಿ ಕೆಲಸ ಮಾಡಲು ಸಾಧ್ಯ ಎಂದು ಹೇಳುವುದು ಅಪ್ಪಟ ಸುಳ್ಳು. ಮಾಧ್ಯಮಗಳು ವಿರೋಧ ಪಕ್ಷದ ಸ್ಥಾನದಲ್ಲಿಯೇ ಇರಬೇಕು.

ವಿರೋಧ ಪಕ್ಷಗಳು ಮಾಡುವ ಕೆಲಸವನ್ನೇ ಅದೂ ಮಾಡಬೇಕು. ಸಂದರ್ಭ ಬಂದರೆ ವಿರೋಧ ಪಕ್ಷಗಳನ್ನೂ ಟೀಕಿಸಬೇಕು. ಏಕೆಂದರೆ ಮಾಧ್ಯಮದ ಗುರಿ ಇರುವುದು ಸಮಾಜದ ಕಟ್ಟ ಕಡೆಯ ಮನುಷ್ಯನ ಕ್ಷೇಮವನ್ನು ಸಾಧಿಸುವುದರಲ್ಲಿ. ಆ ಗುರಿ ಮುಟ್ಟುವ ಹಾದಿಯಲ್ಲಿ ಒಂದಿಷ್ಟು ಬಲಿಗಳನ್ನು ಕೊಡಬೇಕಾಗಿ ಬರುತ್ತದೆಯೋ ಏನೋ? ಜಗೇಂದ್ರ ಸಿಂಗ್ ಅಂಥ ಒಂದು ಬಲಿ ಇರಬಹುದೇ?. ಆರು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ಅಧಿಕಾರಸ್ಥರಿಂದ ಹತ್ಯೆಯಾದ ಲಸಂತ್ ವಿಕ್ರಮ ತುಂಗೆ ಹತ್ಯೆಯಾಗುವುದಕ್ಕಿಂತ ಮುಂಚೆಯೇ ಬರೆದಿಟ್ಟ ಮಾತು ಕೂಡ ಇದೇ ಆಗಿತ್ತು : ‘ನನ್ನ ಹತ್ಯೆ ಮಾಧ್ಯಮದ ಸ್ನೇಹಿತರಿಗೆ ಒಂದು ಬೆದರಿಕೆ ಎಂದು ಅನಿಸದಿರಲಿ, ಬದಲಿಗೆ ಅದು ಒಂದು ಸ್ಫೂರ್ತಿಯಾಗಲಿ.’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.