ಪ್ರಜಾಪ್ರಭುತ್ವ ಎಂದರೆ ಏನು? ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಏನು? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂವಿಧಾನ ಹಾಕಿರುವ ಮಿತಿಯಲ್ಲಿಯೇ ಒಬ್ಬ ಪ್ರಜೆಯಾಗಿ ನಾನು ಮಾತನಾಡಲು ಆಗುವುದಿಲ್ಲ ಎಂದರೆ ಏನು? ‘ನೀನು ಹೀಗೆಯೇ ಮಾತನಾಡಬೇಕು, ಇಲ್ಲವಾದರೆ ನಿನಗೆ ದೇಶದ್ರೋಹಿ ಎಂಬ ಪಟ್ಟಕಟ್ಟಿ ನೇಣಿಗೆ ಏರಿಸಿ ಬಿಡುತ್ತೇವೆ’ ಎಂದರೆ ಈ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಆಗುತ್ತ ಬಂತು ಎಂದು ಹೇಗೆ ನಂಬುವುದು?
ಈಗ ದೇಶದಲ್ಲಿ ನಡೆದಿರುವ ವಿದ್ಯಮಾನಗಳು ವಿಚಿತ್ರವಾಗಿವೆ; ಸರ್ವಸ್ವತಂತ್ರವಾಗಿ ಯೋಚಿಸುವವರನ್ನು ತಲ್ಲಣಗೊಳಿಸುವಷ್ಟು ಆತಂಕಕಾರಿಯಾಗಿವೆ.

ಯಾರೋ ದೂರದಲ್ಲಿ, ಮರೆಯಲ್ಲಿ ನಿಂತು ನೀವು ಹೀಗೆಯೇ ಯೋಚಿಸಬೇಕು, ಹೀಗೆಯೇ ಮಾತನಾಡಬೇಕು ಎಂದು ನಿರ್ಬಂಧ ಹೇರುತ್ತಿರುವಂತೆ ಭಾಸವಾಗುತ್ತದೆ; ಉಸಿರು ಕಟ್ಟಿದಂತೆ ಆಗುತ್ತಿದೆ. ಇದು ನೈಜ, ಜೀವಂತ ಪ್ರಜಾಪ್ರಭುತ್ವದ ರೀತಿ ಅಲ್ಲವೇ ಅಲ್ಲ ಎಂದು ಅನಿಸತೊಡಗಿದೆ. ಆದರೆ ಎಲ್ಲವೂ ರಾಷ್ಟ್ರಪ್ರೇಮ, ದೇಶಪ್ರೇಮ ಮತ್ತು ರಾಷ್ಟ್ರಧ್ವಜದ ಹೆಸರಿನಲ್ಲಿಯೇ ನಡೆಯುತ್ತಿದೆ. ಬಹುಪಾಲು ಮಾಧ್ಯಮಗಳು ಇದೇ ‘ವಾದ್ಯಗೋಷ್ಠಿ’ಯಲ್ಲಿ ಮತ್ತು ಅದೇ ಉಸುರಿನಲ್ಲಿ ಹಾಡುತ್ತಿರುವಂತೆಯೂ ಕಾಣುತ್ತದೆ. ಮತ್ತೆ, ಇಡೀ ಪ್ರಕರಣದಲ್ಲಿ ಕಣ್ಣಿಗೆ ಕಾಣುವಂತೆಯೇ ಹಿಂಸೆ ತಾಂಡವವಾಡುತ್ತಿದೆ.

ದೆಹಲಿಯ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಕುಮಾರ್ ಅವರನ್ನು ಪಟಿಯಾಲ ನ್ಯಾಯಾಲಯಕ್ಕೆ ಪೊಲೀಸರು ಕರೆದುಕೊಂಡು ಬರುತ್ತಿದ್ದಾರೆ. ದಾರಿಯಲ್ಲಿ ಕೆಲವರು ವಕೀಲರ ವೇಷದಲ್ಲಿ ಇರುವವರು ಅಥವಾ ಸ್ವತಃ ವಕೀಲರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು, ‘ಆತನಿಗೆ ಗುಂಡು ಹಾಕಿ’, ‘ಅವನನ್ನು ನೇಣಿಗೆ ಏರಿಸಿ’ ಎಂದು ಕನ್ಹಯ್ಯ ಕಡೆಗೆ ಓಡಿ ಬರುತ್ತಾರೆ. ಅವರಿಗೆ ಸಿಕ್ಕ ಸಿಕ್ಕ ಕಡೆ ಥಳಿಸುತ್ತಾರೆ. ಥಳಿಸುತ್ತ ‘ಭಾರತ್ ಮಾತಾ ಕೀ ಜೈ’ ಎನ್ನುತ್ತಾರೆ. ಕನ್ಹಯ್ಯ ವಿರುದ್ಧ ಇರುವ ಆರೋಪ ಏನು ಎಂದು ತೀರಾ ಈಚಿನವರೆಗೆ ದೆಹಲಿ ಪೊಲೀಸ್ ಕಮಿಷನರ್ ಆಗಿದ್ದ ಬಸ್ಸಿ ಅವರಿಗೇ ಗೊತ್ತಿದ್ದಂತೆ ಕಾಣುವುದಿಲ್ಲ. ನ್ಯಾಯಾಲಯದಲ್ಲಿ ಬರೀ ಸರ್ಕಾರದ ಪರವಾಗಿ ಮಾತ್ರವಲ್ಲ ಆರೋಪಿ ಪರವಾಗಿಯೂ ವಾದಿಸಿ ಆತ ತಪ್ಪಿತಸ್ಥ ಅಲ್ಲ ಎಂದು ಮನವರಿಕೆ ಮಾಡಿಕೊಡಬೇಕಾದ ವಕೀಲರೇ, ‘ಗುಂಡು ಹಾರಿಸುವ’,‘ನೇಣಿಗೆ ಏರಿಸುವ’ ಮಾತು ಆಡುತ್ತಿದ್ದಾರೆ.

ಇದೇ ಸಮಯದಲ್ಲಿ ದೇಶದ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಇದ್ದಕ್ಕಿದ್ದಂತೆ ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಕರೆಯಬೇಕು ಎಂದು ಅನಿಸುತ್ತದೆ. ಸಭೆಯಲ್ಲಿ ಅವರು ವಿಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿಗೆ ಸಂಬಳ ಕೊಡಲು ಹಣ ಇದೆಯೇ ಎಂದೇನೂ ಕೇಳುವುದಿಲ್ಲ, ಪಾಠಗಳು ಸರಿಯಾಗಿ ನಡೆದಿವೆಯೇ ಎಂದೂ ವಿಚಾರಿಸುವುದಿಲ್ಲ. ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳ ಮೇಲೆ 207 ಅಡಿ ಎತ್ತರದ ರಾಷ್ಟ್ರಧ್ವಜ ಹಾರಿಸಬೇಕು ಎಂದು ಒಂದೇ ಒಂದು ದಿಕ್ಖತ್ತು ಕೊಟ್ಟು ಸಭೆಯನ್ನು ಬರ್ಖಾಸ್ತು ಮಾಡುತ್ತಾರೆ.

ಅಂದೇ ಸಂಜೆ ಒಂದು ಪ್ರಬಲ ರಾಷ್ಟ್ರೀಯ ವಾಹಿನಿಯಲ್ಲಿ ಸರ್ಕಾರದ ಈ ತೀರ್ಮಾನವನ್ನು ಘನಘೋರವಾಗಿ ಸಮರ್ಥಿಸುವ ಏಕಮುಖದ ವಾಗ್ಝರಿ ಶುರುವಾಗುತ್ತದೆ. ಬರೀ ರಾಷ್ಟ್ರಧ್ವಜ ಹಾರಿಸುವುದು ಮಾತ್ರ ದೇಶಭಕ್ತಿಯಲ್ಲ ಎಂದು ಹೇಳಲು ಪ್ರಯತ್ನಿಸುವವರ ಬಾಯಿಯನ್ನು ನಿರ್ದಯವಾಗಿ ಮುಚ್ಚಿಸಲಾಗುತ್ತದೆ. ಎಲ್ಲವೂ ಪೂರ್ವನಿರ್ಧರಿತ ನಾಟಕದಂತೆ ಕಾಣುತ್ತದೆ. ಹಾಗಾದರೆ ಭಿನ್ನವಾಗಿ ಯೋಚಿಸುವುದು ರಾಷ್ಟ್ರಪ್ರೇಮ ಅಲ್ಲವೇ? ಹಾಗೆ ಸ್ವತಂತ್ರವಾಗಿ ಯೋಚಿಸುವುದನ್ನೇ ದೇಶದ್ರೋಹ ಎಂದು ಬಿಂಬಿಸಿ ಬಾಯಿ ಮುಚ್ಚಿಸಿ ಬಿಟ್ಟರೆ ಪ್ರಜಾಪ್ರಭುತ್ವಕ್ಕೆ ಏನು ಅರ್ಥ, ಏನು ಬೆಲೆ? ಈ ಸ್ವಾತಂತ್ರ್ಯವನ್ನು ದೇಶ ಎಷ್ಟು ಕಷ್ಟಪಟ್ಟು ಗಳಿಸಿದೆಯಲ್ಲವೇ? ನಾವೆಲ್ಲ ಹೆಮ್ಮೆಪಡುವ ಸಂವಿಧಾನವನ್ನು ಎಷ್ಟೆಲ್ಲ ಯೋಚಿಸಿ ನಮ್ಮ ಹಿರಿಯರು ಬರೆದರು ಅಲ್ಲವೇ?

ಜೆ.ಎನ್.ಯುವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಎಲ್ಲ ವಿದ್ಯಮಾನ ನಡೆಯುತ್ತಿರುವುದು ಕೂಡ ಕುತೂಹಲಕಾರಿ ಮಾತ್ರವಾಗಿಲ್ಲ; ಇದರ ಹಿಂದೆ ಆಳವಾದ ರಾಜಕೀಯ ಹುನ್ನಾರವೂ ಇದ್ದಂತೆ ತೋರುತ್ತದೆ. ಜೆ.ಎನ್.ಯು ರಾಷ್ಟ್ರದ ರಾಜಧಾನಿಯಲ್ಲಿ ಇದೆ ಮತ್ತು ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಾಗೂ ಮುಕ್ತ ಚಿಂತನೆಯ ಒಂದು ಬಹುದೊಡ್ಡ ವೇದಿಕೆ ಎನಿಸಿದೆ. ‘ಮುಕ್ತ ಚಿಂತನೆಗೆ ಅಲ್ಲಿಯೇ ಕಡಿವಾಣ ಹಾಕಿಬಿಟ್ಟರೆ ಆಯಿತು’ ಎಂದು ಅಧಿಕಾರದಲ್ಲಿ ಇದ್ದವರು ಯೋಚಿಸುತ್ತಿದ್ದಾರೆ. ‘ಜೆ.ಎನ್.ಯು ವಿದ್ಯಾರ್ಥಿ ಸಂಘದ ನಾಯಕನನ್ನೇ ಬಲಿ ಹಾಕಿಬಿಟ್ಟರೆ ಬಾಕಿಯವರೆಲ್ಲ ಮುಚ್ಚಿಕೊಂಡು ಇರುತ್ತಾರೆ’ ಎಂದು ಸರ್ಕಾರ ಭಾವಿಸಿದಂತಿದೆ.

ಅದು ಉಳಿದ ವಿಶ್ವವಿದ್ಯಾಲಯಗಳಲ್ಲಿನ ಸ್ವತಂತ್ರ ಚಿಂತನೆಗೂ ಮೂಗುದಾಣ ಹಾಕಿದಂತೆ ಆಗುತ್ತದೆ ಎಂದೂ ಸರ್ಕಾರ ಭಾವಿಸಿರಬಹುದು. ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂಬ ಸೂಚನೆಯ ಹಿಂದೆ ಇದೇ ಹುನ್ನಾರ ಇದೆ. ಜೆ.ಎನ್.ಯು ಎಷ್ಟು ಸ್ವತಂತ್ರ ಚಿಂತನೆಯ ಕೇಂದ್ರ ಎನಿಸುತ್ತದೆ ಎಂದರೆ ಅಲ್ಲಿನ ನಾಲ್ವರು ಎಬಿವಿಪಿ ಮುಖಂಡರು ಕೂಡ ತಮ್ಮ ಸಂಘಟನೆಗೆ ರಾಜೀನಾಮೆ ನೀಡಿದ್ದಾರೆ. ‘ಜೆ.ಎನ್.ಯು ವಿದ್ಯಮಾನವನ್ನು ಸರ್ಕಾರ ನಿಭಾಯಿಸುತ್ತಿರುವ ರೀತಿ ಸರಿಯಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದರೆ ಅವರೂ ದೇಶದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟಲು ಆಗುತ್ತದೆಯೇ?

ನಮಗೆ ಪ್ರತ್ಯೇಕ ದೇಶ ಬೇಕು ಎಂದು ಕೇಳುವುದು ಈ ದೇಶಕ್ಕೆ ಹೊಸದೇನೂ ಅಲ್ಲ. ಕಾಶ್ಮೀರದಲ್ಲಿ ಈಗ ಅದು ನಿತ್ಯವೂ ಕೇಳಿಬರುತ್ತಿರುವ ಕೂಗು. ಹಾಗೆಂದು ಅಂಥ ಕೂಗು ಹಾಕುತ್ತಿರುವ ಎಲ್ಲರ ವಿರುದ್ಧವೂ ರಾಷ್ಟ್ರದ್ರೋಹದ ಪ್ರಕರಣ ಹಾಕಿ ಜೈಲಿಗೆ ಕಳುಹಿಸಲು ಆಗುತ್ತದೆಯೇ? ಈಶಾನ್ಯದ ಅನೇಕ ರಾಜ್ಯಗಳಲ್ಲಿ ಭಾರತದ ವಿರುದ್ಧ ಕೂಗು ಕೇಳಿಬರುತ್ತಿಲ್ಲವೇ? ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯ ಬೇಕು ಎಂದು ಕೇಳಲಿಲ್ಲವೇ? ಈಗಲೂ ಕೊಡಗಿನ ಮಂದಿ ಕೇಳುತ್ತಿಲ್ಲವೇ? ಅವರ ವಿರುದ್ಧ ರಾಜ್ಯದ್ರೋಹದ ಪ್ರಕರಣ ಜಡಿದು ಒಳಗೆ ಹಾಕಲು ಆಗುತ್ತದೆಯೇ? ಎಲ್ಲಿಯವರೆಗೆ ಇಂಥ ಕೂಗುಗಳು ಅಹಿಂಸಾತ್ಮಕವಾಗಿ ಮತ್ತು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಇರುತ್ತವೆಯೋ ಅಲ್ಲಿಯವರೆಗೆ ಅವುಗಳನ್ನು ಪ್ರಜಾಪ್ರಭುತ್ವದಲ್ಲಿ ಲಭ್ಯ ಇರುವ ಕಾನೂನಿನ ಚೌಕಟ್ಟಿನಲ್ಲಿಯೇ ನಿಭಾಯಿಸಬೇಕು.

ಜೆ.ಎನ್.ಯುದಲ್ಲಿ ಯಾರೋ ಕೆಲವರು ಹುಡುಗರು, ಅವರು ಪ್ರತ್ಯೇಕ ಕಾಶ್ಮೀರದ ಪರವಾಗಿಯೇ ಇದ್ದಾರೆ ಎಂದುಕೊಳ್ಳೋಣ, ಪ್ರತ್ಯೇಕ ದೇಶದ ಪರವಾಗಿ ಕೂಗು ಹಾಕಿದರೆ ಅವರನ್ನು ಕಾಶ್ಮೀರದಲ್ಲಿ ನಿರಂತರವಾಗಿ ಇದೇ ಕೂಗು ಹಾಕುತ್ತಿರುವವರಿಗಿಂತ ಭಿನ್ನವಾಗಿ ಹೇಗೆ ಪರಿಗಣಿಸುವುದು? ‘ಕಾಶ್ಮೀರದಲ್ಲಿ ಅವರು ಬಹುಸಂಖ್ಯಾತರು. ಆದರೆ, ಇಲ್ಲಿ ನಾಲ್ಕೈದು ಜನ ಸಿಕ್ಕಿದ್ದಾರೆ ಅವರನ್ನು ಬಡಿದು ಬಿಡೋಣ’ ಎಂದು ಸರ್ಕಾರ ಯೋಚನೆ ಮಾಡುತ್ತಿದೆಯೇ? ಹಾಗೆ ಮಾಡಿದರೆ ಆ ಕೂಗನ್ನೇ ಅಡಗಿಸಿದಂತೆ ಆಗುತ್ತದೆ ಎಂದು ತಿಳಿದುಕೊಳ್ಳುವುದು ಎಂಥ ಆತ್ಮವಂಚನೆ ಅಲ್ಲವೇ? ಅಥವಾ ಜೆ.ಎನ್.ಯುದಲ್ಲಿ ಉಳಿದ ಯಾರಿಗೂ ದೇಶಪ್ರೇಮ ಇಲ್ಲ ಎಂಬ ತೀರ್ಮಾನಕ್ಕೆ ಸರ್ಕಾರ ಹೇಗೆ ಬರುತ್ತದೆ? ಅವರೆಲ್ಲ ಈ ಕಾಶ್ಮೀರಿ ಹುಡುಗರನ್ನು ನೋಡಿ ನಕ್ಕು ಸುಮ್ಮನಾಗಿಬಿಟ್ಟಿರಬಹುದಲ್ಲ? ದೇಶಪ್ರೇಮ ಎಂಬುದು ಯಾರದಾದರೂ ಕೆಲವರ ಗುತ್ತಿಗೆ ಅಲ್ಲವಲ್ಲ!

ಬಿಜೆಪಿಯವರು ಇದು ತಮ್ಮದೇ ಗುತ್ತಿಗೆ ಎನ್ನುತ್ತಿದ್ದಾರೆ. ಅವರು ಮೂರು ದಿನಗಳ ‘ಜನ ಸ್ವಾಭಿಮಾನ ಅಭಿಯಾನ’ವನ್ನು ದಿಢೀರ್ ಎಂದು ಈಗಲೇ ಹಮ್ಮಿಕೊಳ್ಳುವ ಕಾರಣ ಏನಿರಬಹುದು? ಬಿಜೆಪಿಯವರು ತಾವು ಮಾತ್ರ ದೇಶಪ್ರೇಮಿಗಳು ಮತ್ತು ದೇಶಪ್ರೇಮದ ವ್ಯಾಖ್ಯಾನವನ್ನು ‘ನಾವು ಮಾತ್ರ ಮಾಡಬಲ್ಲೆವು ಅಥವಾ ಮಾಡುತ್ತೇವೆ’ ಎಂದು ಅಂದುಕೊಂಡಿದ್ದಾರೆ. ಹಾಗೂ ಎಲ್ಲರೂ ಅದಕ್ಕೆ ಅನುಸಾರವಾಗಿ ನಡೆದುಕೊಳ್ಳಬೇಕು ಎಂದು ಅವರು ನಿರ್ಬಂಧ ವಿಧಿಸುತ್ತಾರೆ. ‘ನೀವು ಹೇಳುವುದೇ ಮಾತ್ರ ದೇಶಪ್ರೇಮ ಅಲ್ಲ’ ಎಂದಕೂಡಲೇ ನಿಮಗೆ ‘ದೇಶದ್ರೋಹಿ’ ಪಟ್ಟ ಸಿಕ್ಕು ಬಿಡುತ್ತದೆ. ಹಾಗೂ ಅವರ ಧ್ವನಿ ಎಷ್ಟು ಜೋರಾಗಿದೆ ಎಂದರೆ ನಿಮ್ಮ ಧ್ವನಿ ಕೇಳುವುದೇ ಇಲ್ಲ. ಇದು ಒಂದು ರೀತಿಯಲ್ಲಿ ದೇಶದ ಹೆಸರಿನಲ್ಲಿ ನಡೆಸುವ ಮತ್ತು ನಡೆಯುತ್ತಿರುವ ಭಯೋತ್ಪಾದನೆ.

ಇಲ್ಲಿ ಬರೀ ರಾಜಕಾರಣಿಗಳು ಮಾತ್ರ ಇರುವುದಿಲ್ಲ. ಪೊಲೀಸರು ಇರುತ್ತಾರೆ, ವಕೀಲರು ಇರುತ್ತಾರೆ, ಮಾಧ್ಯಮದವರು ಇರುತ್ತಾರೆ ಮತ್ತು ಕೈಯಲ್ಲಿ ಬಡಿಗೆ ಹಿಡಿದುಕೊಂಡ ಗೂಂಡಾಗಳೂ ಇರುತ್ತಾರೆ. ಎಲ್ಲರೂ ಸೇರಿಕೊಂಡು ಬಾಯಿಮುಚ್ಚಿಸಲು, ‘ಧ್ವನಿ ಅಡಗಿಸಲು’ ಪ್ರಯತ್ನ ಮಾಡುತ್ತಾರೆ. ಇಡೀ ಪ್ರಕರಣದುದ್ದಕ್ಕೂ ದೆಹಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಒಂದು ಅಂಗ ಎಂದೇ ನಮಗೆ ಅನಿಸಲಿಲ್ಲ. ಜೆ.ಎನ್.ಯು ವಿದ್ಯಾರ್ಥಿಗಳ ಮೇಲೆ ಹಾಗೂ ಮಾಧ್ಯಮದವರ ಮೇಲೆ ಹಲ್ಲೆ ನಡೆಯುತ್ತಿದ್ದಾಗ ಅವರು ಬಿಟ್ಟ ಕಣ್ಣು ಬಿಟ್ಟುಕೊಂಡು ಸುಮ್ಮನೆ ನಿಂತಿದ್ದರು. ಮಾಧ್ಯಮದವರ ಮೇಲೆ ಹಲ್ಲೆ ಎಂದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ಎಂದು ಸರ್ಕಾರಕ್ಕೆ ಅರ್ಥವಾಗಬೇಕಿತ್ತು. ‘ಮಾಧ್ಯಮದವರಿಗೆ ಚೆನ್ನಾಗಿ ಒದೆಯಲಿ’ ಎಂದು ಸರ್ಕಾರದಲ್ಲಿ ಇದ್ದವರು ಯೋಚಿಸಿರಲಾರರು ಎಂದು ಹೇಗೆ ಹೇಳುವುದು?

ಇಲ್ಲೆಲ್ಲ ಒಂದೋ ಇಂಥ ದೈಹಿಕ ಹಿಂಸೆ ಇದೆ. ಅಥವಾ ಭಾರತೀಯ ದಂಡ ಸಂಹಿತೆಯ ರಾಷ್ಟ್ರದ್ರೋಹದ ಕಲಮಿನ ದುರ್ಬಳಕೆ(?)ಯ ಕಾನೂನಾತ್ಮಕ ಹಿಂಸೆ ಇದೆ. ಕನ್ಹಯ್ಯಕುಮಾರ್ ಏನು ಮಾತನಾಡಿದ್ದಾರೆ ಎಂದು ಗೊತ್ತೇ ಇಲ್ಲದಿರುವಾಗ ಅವರ ವಿರುದ್ಧ ರಾಷ್ಟ್ರದ್ರೋಹದ ಕಲಮಿನ ಪ್ರಕಾರ ಪ್ರಕರಣ ದಾಖಲಿಸುವುದು ಹೇಗೆ ಸಾಧ್ಯ? ಕನ್ಹಯ್ಯ ಅಪರಾಧ ಮನೋಭಾವದ ವ್ಯಕ್ತಿಯಲ್ಲ ಎನ್ನುವುದಕ್ಕೆ ಪುರಾವೆಯಾಗಿ ಅವರು ತಾವು ಈ ದೇಶದ ಸಂವಿಧಾನದ ವಿರೋಧಿಯಲ್ಲ ಎಂದು ಸಾರಿ ಸಾರಿ ಹೇಳಿದ್ದಾರಲ್ಲ, ಇನ್ನೇನು ಮಾಡಬೇಕು? ಹಾಗೆ ನೋಡಿದರೆ ಪೊಲೀಸರ ನಡವಳಿಕೆಯೇ ಅಪ್ರಾಮಾಣಿಕವಾಗಿತ್ತು. ಇನ್ನೇನು ನಿವೃತ್ತರಾಗಲಿರುವ ದೆಹಲಿಯ ಹಿಂದಿನ ಪೊಲೀಸ್ ಮುಖ್ಯಸ್ಥರಿಗೆ ಈ ಸರ್ಕಾರದಿಂದ ಇನ್ನೇನೋ ಆಗಬೇಕಿದೆ.

ಯಾವುದಾದರೂ ಹುದ್ದೆಯ ಮೇಲೆ ಕಣ್ಣು ಇಟ್ಟವರು ಈಗಿರುವ ಹುದ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದರಲ್ಲಿ ಯಾವ ಅನುಮಾನವೂ ಬೇಡ. ಬಸ್ಸಿ ಕೂಡ ಹಾಗೆಯೇ ನಡೆದುಕೊಂಡರು. ಅವರು ಕನ್ಹಯ್ಯಕುಮಾರ್ ಅವರನ್ನು ಒಳಗೆ ಹಾಕಿ ಅಧಿಕಾರದಲ್ಲಿ ಇದ್ದವರನ್ನು ಸಂಪ್ರೀತಗೊಳಿಸಲು ನೋಡಿದರು. ತಕ್ಷಣ ದೇಶದ ಗೃಹಸಚಿವರು ಜೆ.ಎನ್.ಯು ವಿದ್ಯಾರ್ಥಿಗಳ ವಿರುದ್ಧ ಎಲ್.ಇ.ಟಿ ಸಂಪರ್ಕದಂಥ ಕಪೋಲಕಲ್ಪಿತ ಸಂಗತಿಗಳನ್ನು ಬಿತ್ತರಿಸಲು ಆರಂಭಿಸಿದರು. ಅಂತರರಾಷ್ಟ್ರೀಯ ಮಟ್ಟದ ಚಿಂತಕರು, ವಿಜ್ಞಾನಿಗಳು ಮತ್ತು ರಾಜಕೀಯ ವಿಶ್ಲೇಷಕರು, ಜೆ.ಎನ್.ಯು ವಿದ್ಯಮಾನವನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ಹೀನಾಮಾನವಾಗಿ ಟೀಕಿಸಿದರೂ ದೇಶದ ಪ್ರಧಾನಿ ದಿವ್ಯಮೌನ ತಾಳಿದ್ದಾರೆ. ಈಗ ನಡೆಯುತ್ತಿರುವುದೆಲ್ಲ ಅವರಿಗೆ ಇಷ್ಟವಿಲ್ಲದ್ದು ಎಂದು ಹೇಗೆ ಹೇಳುವುದು? ಇಷ್ಟವಿದ್ದುದೇ ಇರಬೇಕೇ?

ಇದೆಲ್ಲ ಭಾವುಕ ಎಂದು ಅನಿಸಬಹುದು: ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಗಾಂಧಿ. ಪ್ರಜಾಪ್ರಭುತ್ವದಲ್ಲಿ ಅವರಂಥ ಭಿನ್ನಮತೀಯ ಇನ್ನೊಬ್ಬ ಇರಲು ಸಾಧ್ಯವಿಲ್ಲ. ಅವರ ಎಲ್ಲ ಅಸಹಕಾರವೂ ಅಹಿಂಸಾತ್ಮಕವಾಗಿಯೇ ಇರುತ್ತಿತ್ತು. ಪ್ರಭುತ್ವದ ಜೊತೆಗೆ ತಮಗೆ ಇರುವ ಎಲ್ಲ ಅಸಮ್ಮತಿಯನ್ನು ಅವರು ಅಹಿಂಸಾತ್ಮಕವಾಗಿಯೇ ವ್ಯಕ್ತಪಡಿಸುತ್ತಿದ್ದರು. ಪ್ರಭುತ್ವ ಎನ್ನುವುದು ಅದು ನಮ್ಮದಾದರೂ ಇರಲಿ, ಪರಕೀಯರದಾದರೂ ಇರಲಿ. ಅದು ಹಿಂಸಾತ್ಮಕವಾಗಿಯೇ ಇರುತ್ತದೆ ಎಂದು ಕಾಣುತ್ತದೆ. ಈಗಲಂತೂ ಅದು ಹಿಂಸಾತ್ಮಕವಾಗಿಯೇ ಇದೆ. ಮತ್ತು ಹಿಂಸಾತ್ಮಕವಾಗಿಯೇ ನಡೆದುಕೊಳ್ಳುತ್ತಿದೆ. ಸ್ವತಂತ್ರವಾಗಿ ಯೋಚಿಸುವವರಿಗೆ ಈಗಿರುವ ಮಾನಸಿಕ ಹಿಂಸೆ ಹಿಂದೆ ಎಂದೂ ಇರಲಿಲ್ಲ ಎಂದೂ ಭಾಸವಾಗುತ್ತದೆ. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಸ್ವಾಮಿನಾಥನ್ ಅಂಕ್ಲೆಸಾರಿಯಾ ಅಯ್ಯರ್ ತಮ್ಮ ಈಚಿನ ಅಂಕಣವನ್ನು, ‘ದೇಶಪ್ರೇಮ ಎಂಬುದು ಫಟಿಂಗರ ಕೊನೆಯ ಆಸರೆ’ ಎಂದು ಶುರು ಮಾಡಿದ್ದರು. ‘ರಾಜಕೀಯ, ಫಟಿಂಗರ ಕೊನೆಯ ಅಸರೆ’ ಎನ್ನುವ ಮಾತು ಇತ್ತು. ಎಂಥ ವಿಪರ್ಯಾಸ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.