‘ಈಗ ಬದಲಾವಣೆಯ ಸಮಯ; ಯುಗಾದಿಯ ಸಂಭ್ರಮಕ್ಕೆ ಹೊಸ ಕಾರ್ಯಕ್ರಮಗಳು’ ಎಂಬ ಜಿಂಗಲ್, ಕೆಲವು ದಿನಗಳಿಂದ ರೇಡಿಯೊದಲ್ಲಿ ಕೇಳಿಬರ ತೊಡಗಿದಾಗ ಕುತೂಹಲ ಕೆರಳಿತ್ತು. ಬದಲಾದ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುವ ಆಸಕ್ತಿಯೂ ಮೊಳಕೆಯೊಡೆಯಿತು. ಆದರೆ, ಕೇಳಿದಾಗ ಅಷ್ಟೇ ಆಘಾತವಾಯಿತು. ಕಾರಣವೆಂದರೆ, ಈಗ ಮಾಡ ಲಾಗಿರುವ ಬದಲಾವಣೆಗಳು, ಇಡೀ ರಾಜ್ಯದ ಸಾಂಸ್ಕೃತಿಕ ವೈವಿಧ್ಯವನ್ನು ಸಂಪೂರ್ಣ ನಾಶ ಮಾಡಿ, ಕೇಂದ್ರೀಕೃತ ಕೀರಲ ದನಿಯನ್ನು ಕರ್ನಾಟಕದ ಎಲ್ಲ ಕೇಂದ್ರಗಳಿಂದ ಪ್ರಸಾರ ಮಾಡುವ ಹುನ್ನಾರವೇ ಆಗಿರುವುದು.

ಹಣಕಾಸಿನ ಮತ್ತು ಕಾರ್ಯಕ್ರಮ ಅಧಿಕಾರಿಗಳ ಕೊರತೆಯ ನೆಪವೊಡ್ಡಿ, ಇಡೀ ರಾಜ್ಯದ ಬಹುಮುಖಿ ಸಂಸ್ಕೃತಿಯನ್ನು ಹಾಳುಮಾಡಲು ಹೊರಟಿರುವ ಈ ಕುತಂತ್ರವು ಹಲವಾರು ಒಳಸಂಚುಗಳನ್ನು ಹೊಂದಿ ರುವುದು ಸುಳ್ಳಲ್ಲ. ಭಾರತದ ಆಕಾಶವಾಣಿಗೆ ನೂರು ವರ್ಷ ಆಯಸ್ಸು ತುಂಬುವ ಮೊದಲೇ ಸಂಭವಿಸುತ್ತಿರುವ ಇಂಥ ಸಾಂಸ್ಕೃತಿಕ ಅವಸಾನವು ದೇಶದ ಇಂದಿನ ಒಟ್ಟು ಚಹರೆಯ ಸ್ಪಷ್ಟ ನಿದರ್ಶನದಂತೆಯೇ ಭಾಸವಾಗುತ್ತಿದೆ.

ಕರ್ನಾಟಕದ ಎಲ್ಲ ಆಕಾಶವಾಣಿ ಕೇಂದ್ರಗಳು, ಅವು ಆರಂಭವಾದ ದಿನದಿಂದ ‘ಕೃಷಿರಂಗ’ ಕಾರ್ಯಕ್ರಮವನ್ನು ಪ್ರತಿನಿತ್ಯ ಪ್ರಸಾರ ಮಾಡುತ್ತಿವೆ. ರೈತರು ಹೊಲದ ಕೆಲಸ ಮುಗಿಸಿ ಮನೆಗೆ ಬಂದು, ವಿಶ್ರಮಿಸುತ್ತ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅನುಕೂಲಕರವಾದ ಹೊತ್ತಿನಲ್ಲಿ, ಸಾಯಂಕಾಲ 6.50ಕ್ಕೆ ಈ ಕಾರ್ಯಕ್ರಮ ಮೂಡಿಬರುತ್ತಿತ್ತು. ಈಗ ಈ ‘ಬದಲಾವಣೆ’ಯ ವೀರರು ಅದನ್ನು ಸಂಜೆಯ 5.30ಕ್ಕೆ ನಿಗದಿ ಮಾಡಿದ್ದಾರೆ! ಆ ಹೊತ್ತಲ್ಲಿ ರೈತರು ಹೊಲದಲ್ಲೇ ಇರುತ್ತಾರೆಂಬ ಸಾಮಾನ್ಯ ಜ್ಞಾನವೂ ಇಲ್ಲದ ಅಧಿಕಾರಿಗಳು ಮಾತ್ರ ಇಂಥ ಕೆಲಸಕ್ಕೆ ಕೈ ಹಾಕಲು ಸಾಧ್ಯ.

ಇನ್ನೂ ಅಚ್ಚರಿಯೆಂದರೆ, ಈವರೆಗೆ ಇದು ‘ಕೃಷಿರಂಗ’ ಆಗಿತ್ತು. ಅದನ್ನೀಗ ‘ರೈತನೇ ರಾಜ’ ಎಂದು ಬದಲಿಸಿ, ರೈತನಿಗೆ ರಾಜನ ಪಟ್ಟ ಕಟ್ಟಿದ್ದಾರೆ! ಈ ಶೀರ್ಷಿಕೆ ರೈತನನ್ನು ವ್ಯಂಗ್ಯ ಮಾಡುತ್ತಿದೆಯಷ್ಟೇ ಅಲ್ಲ, ಅಪಮಾನವನ್ನೂ ಮಾಡುವಂತಿದೆ. ಇನ್ನು ಮುಂದೆ ಇಲ್ಲಿ, ‘ಕರಿಯೆತ್ತ ಕಾಳಿಂಗ, ಬಿಳಿ ಎತ್ತ ಮಾಲಿಂಗ, ಸರಕಾರದೆತ್ತ ಸಾರಂಗೋ’ ಎಂಬ ದೇಶಿ ದನಿಸೂಚಿ ಇರದೆ, ಬೆಂಗಳೂರು ಕೇಂದ್ರದ ದನಿಸೂಚಿ ಇರುತ್ತದೆ. ಇದನ್ನೇ ಬಹುತೇಕ ಕೇಂದ್ರಗಳು ಸಹಪ್ರಸಾರ ಮಾಡಬೇಕು.

ರಾಜ್ಯದ ಎಲ್ಲ 14 ಕೇಂದ್ರಗಳೂ ಇನ್ನು ಬಹುತೇಕ ಕಾರ್ಯಕ್ರಮಗಳನ್ನು ಬೆಂಗಳೂರಿನಿಂದಲೇ ಸಹಪ್ರಸಾರ ಮಾಡಬೇಕಿದೆ. ಇದರಲ್ಲಿ ಕೆಲವೊಂದು ಕಾರ್ಯಕ್ರಮಗಳ ಹೆಸರು ಬದಲಿಸಿ, ಹೊಸ ನಾಮಕರಣ ಮಾಡಿದ್ದಾರೆ. ಅವು ಕನ್ನಡ ಭಾಷೆಗೆ ಅಪಚಾರ ಮಾಡುವಂತಿವೆಯಷ್ಟೇ ಅಲ್ಲ, ನಗೆಯನ್ನೂ ಹುಟ್ಟಿಸುವಂತಿವೆ. ಈವರೆಗೆ ಇದ್ದ ಸಾಹಿತ್ಯ ಕಾರ್ಯಕ್ರಮ ಈಗ ‘ಲಿಟರರಿ ಗುರು’ ಎಂದಾಗಿದೆ. ಕರ್ನಾಟಕದ ಎಲ್ಲ ಕೇಂದ್ರಗಳ ಬಹು ದೊಡ್ಡ ಕೊಡುಗೆಯಾಗಿದ್ದ ಸಂಗೀತ ಕಾರ್ಯಕ್ರಮಗಳಿಗೆ ಕೊಕ್ಕೆ ಹಾಕಿ, ಅಳಿದುಳಿದ ಅಷ್ಟಿಷ್ಟು ಕಾರ್ಯಕ್ರಮಕ್ಕೆ ಈಗ ‘ಮ್ಯೂಸಿಕ್ ಗುರು’ ಎಂಬ ಶೀರ್ಷಿಕೆ ದಯಪಾಲಿಸಿದ್ದಾರೆ. ಜೊತೆಗೆ ‘ಟೆಕ್ ಗುರು’ ಬಂದಿದ್ದಾನೆ, ‘ಅಗ್ರಿ ಬುಲೆಟಿನ್’ ಬಂದಿದೆ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಾ ಬಂದ ಕರ್ನಾಟಕದ ಆಕಾಶ ವಾಣಿ ಕೇಂದ್ರಗಳ ಕಾರ್ಯಕ್ರಮಗಳು ಹೀಗೆ ‘ಕಂಗ್ಲಿಷೀ ಕರಣ’ಗೊಂಡದ್ದು, ಅವೆಲ್ಲಕ್ಕೂ ಹಂಡಬಂಡ ಬಣ್ಣ ಬಳಿದಂತಾಗಿದೆ.

ಕೃಷಿ, ಸಾಹಿತ್ಯ, ಸಂಗೀತ, ಜಾನಪದ, ಆರೋಗ್ಯದ ಸಮಸ್ಯೆಗಳು, ಶೈಕ್ಷಣಿಕ ವಿದ್ಯಮಾನಗಳು, ಗ್ರಾಮೀಣ ಬದುಕಿನ ಚಿತ್ರಗಳು- ಹೀಗೆ ವೈವಿಧ್ಯಮಯ ಕಾರ್ಯಕ್ರಮ ಗಳ ನಿರ್ಮಾಣಕ್ಕೆ ಇನ್ನುಮುಂದೆ ಪ್ರಾದೇಶಿಕ ಕೇಂದ್ರಗಳಿಗೆ ಹೆಚ್ಚು ಅವಕಾಶವಿಲ್ಲ. ಸ್ಥಳೀಯ ಸಾಹಿತಿಗಳು, ಸಂಗೀತಗಾರರು, ಜನಪದ ಕಲಾವಿದರು, ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ರೈತರು, ಕಾರ್ಮಿಕರು- ಇನ್ನು ಆಕಾಶವಾಣಿ ಕೇಂದ್ರಗಳ ಕಡೆಗೆ ಕಾಲು ಹಾಕುವಂತಿಲ್ಲ. ಹೀಗೆ ಬಹುಜನತೆಗೆ ಮೋಸ ಮಾಡಿ, ಕೆಲವರಿಗೇ ಮಣೆ ಹಾಕಹೊರಟಿರುವ ಈ ಕುತಂತ್ರವು, ಆಕಾಶವಾಣಿಯ ‘ಬಹುಜನ ಹಿತಾಯ, ಬಹುಜನ ಸುಖಾಯ’ ಎಂಬಧ್ಯೇಯವಾಕ್ಯವನ್ನೇ ಅಣಕಿಸುವಂತಿದೆ.

ಮಹಾನಿರ್ದೇಶನಾಲಯವೊಂದೇ ಆಕಾಶವಾಣಿಯ ಕಾರ್ಯಚಟುವಟಿಕೆಗಳನ್ನೆಲ್ಲ ಅಚ್ಚುಕಟ್ಟಾಗಿ ನಿರ್ವಹಿಸು ತ್ತಿದ್ದ ಕಾಲವೊಂದಿತ್ತು. ಅದರ ಮೇಲೆ ಯಾವಾಗ ಪ್ರಸಾರ ಭಾರತಿ ವಕ್ಕರಿಸಿತೋ (1997) ಅಂದಿನಿಂದಲೇ ಈ ಮಾಧ್ಯಮದ ಸಾಂಸ್ಕೃತಿಕ ಚಹರೆಯೇ ವಿರೂಪಗೊಳ್ಳತೊಡಗಿತು. ಆಕಾಶವಾಣಿಯನ್ನು ಸಂಪೂರ್ಣ ವಾಣಿಜ್ಯೀಕರಣಗೊಳಿಸಿದ ಪ್ರಸಾರ ಭಾರತಿಯು, ಕಾರ್ಯಕ್ರಮ ನಿರ್ಮಾಣದ ಚಟುವಟಿಕೆ ಯನ್ನು ಕಡೆಗಣಿಸಿತು. ಅಗತ್ಯವಿರುವ ಸಿಬ್ಬಂದಿಯ ನೇಮಕಾತಿಯನ್ನು ಮಾಡಲಿಲ್ಲ. ಇರುವವರಿಗೆ ಬಡ್ತಿ ಕೊಡಲಿಲ್ಲ. ಈಗ ಬಹುತೇಕ ಕೇಂದ್ರಗಳಲ್ಲಿ ಕೆಲಸ ಮಾಡಲು ಜನರೇ ಇಲ್ಲ, ಜನರಿದ್ದರೆ ಹಣವಿಲ್ಲ ಎನ್ನಲಾಗುತ್ತಿದೆ. ಈ ಕಾರಣಗಳನ್ನೇ ಮುಂದೆ ಮಾಡಿಕೊಂಡು, ಪ್ರಾದೇಶಿಕ ಕೇಂದ್ರಗಳಲ್ಲಿ ಕಾರ್ಯಕ್ರಮ ನಿರ್ಮಾಣದ ಚಟುವಟಿಕೆಯನ್ನು ಸ್ಥಗಿತಗೊಳಿಸಿ, ಇರುವ ಕೆಲವೇ ಅಧಿಕಾರಿಗಳು ಬೆಂಗಳೂರು ಕೇಂದ್ರದಲ್ಲಿ ನಿರ್ಮಿಸುವ ಕಾರ್ಯಕ್ರಮಗಳನ್ನು ಎಲ್ಲ ಕೇಂದ್ರಗಳಿಂದಲೂ ಪ್ರಸಾರ ಮಾಡಿಸುವ ಹುನ್ನಾರ ನಡೆದಿದೆ.

ಪ್ರಸಾರ ಭಾರತಿಯ ಅಧ್ಯಕ್ಷರಾದವರಲ್ಲಿ ಕನ್ನಡಿಗರದೇ ಸಿಂಹಪಾಲಿದೆ. ಅವರಲ್ಲಿ ಯಾರಾದರೂ ಈ ಸಂಸ್ಥೆಯ ಉಳಿವು- ಉನ್ನತಿಗೆ ಹೊಸ ಯೋಜನೆಗಳನ್ನು ರೂಪಿ ಸುವ ಪ್ರಯತ್ನ ಮಾಡಿದ್ದರೂ ಈಗಿನ ಸ್ಥಿತಿ ಬರುತ್ತಿರ ಲಿಲ್ಲ. ‘ಆಕಾಶವಾಣಿ’ ಎಂಬ ಹೆಸರನ್ನು ಕೊಟ್ಟು, ದೇಶದ ಮೊದಲ ಪ್ರಾಂತೀಯ ರೇಡಿಯೊ ಕೇಂದ್ರವನ್ನು ಆರಂಭಿಸಿದ ಕರ್ನಾಟಕದ ಡಾ. ಎಂ.ವಿ.ಗೋಪಾಲ ಸ್ವಾಮಿಯವರ ದೂರದೃಷ್ಟಿಯನ್ನು ಗಮನಿಸಿದರೆ, ಈಗ ರಾಜ್ಯದ ಆಕಾಶವಾಣಿ ಕೇಂದ್ರಗಳಿಗೆ ಬಂದಿರುವ ದುಃಸ್ಥಿತಿಯು ನಿಜಕ್ಕೂ ನೋವುಂಟು ಮಾಡುತ್ತದೆ.

ಇಂಥದ್ದೇ ವಿಪತ್ತು ಬಂದೊದಗಿದಾಗ, ಕೇರಳ, ತಮಿಳುನಾಡಿನ ಜನಪ್ರತಿನಿಧಿಗಳು ಪ್ರಬಲವಾಗಿ ಪ್ರತಿಭಟಿಸಿ, ಅಲ್ಲಿನ ಆಕಾಶವಾಣಿ ಕೇಂದ್ರಗಳಿಂದ ಆಗುವ ಅನಾಹುತ ತಪ್ಪಿಸಿದ್ದಾರೆ. ಆದರೆ ಕರ್ನಾಟಕದ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಆಕಾಶವಾಣಿಯ ಅಧಿಕಾರಿ ವರ್ಗದವರು ಕಾರ್ಯಕ್ರಮಗಳಿಗೆ ‘ಹಂಡಬಂಡ’ ಹೆಸರುಗಳನ್ನು ಕೊಡುತ್ತ, ಇದೇ ಮಹಾಬದಲಾವಣೆಯ ಸಾಧನೆಯೆಂದು ಬೀಗುತ್ತ, ಎಲ್ಲ ಕೇಂದ್ರಗಳ ಅಸ್ಮಿತೆಯನ್ನು ಹಾಳುಮಾಡುತ್ತಿದ್ದಾರೆ. ಇದು ಒಟ್ಟಾರೆ ಆಕಾಶವಾಣಿಯ ಅವನತಿಯ ಸೂಚನೆಯಲ್ಲದೆ ಬೇರಲ್ಲ.

‘ಯಾರನ್ನಾದರೂ ಕೊಲ್ಲುವ ಉದ್ದೇಶವಿದ್ದರೆ ಒಮ್ಮೆಲೇ ಕೊಂದು ಅಪರಾಧಿಯಾಗಬೇಡ, ಅನ್ನ ನೀರು ಕೊಡದೇ ಉಪವಾಸ ಕೆಡವುತ್ತ ಹೋಗು, ನಿಧಾನವಾಗಿ ತಂತಾನೇ ಸಾಯುತ್ತಾರೆ’ ಎಂಬ ಕೆಟ್ಟ ರಾಜತಂತ್ರದ ಮಾತೊಂದನ್ನು ಓದಿದ ನೆನಪಾಗುತ್ತಿದೆ. ಸೂಚನಾ ಮತ್ತು ಪ್ರಸಾರ ಸಚಿವಾಲಯದಡಿಯಲ್ಲಿರುವ ಪ್ರಸಾರ ಭಾರತಿಯು ಈಗ ಆಕಾಶವಾಣಿಯ ವಿಷಯದಲ್ಲಿ ಇಟ್ಟಿರುವ ಹೆಜ್ಜೆ ಖಂಡಿತವಾಗಿ ಇದೇ ಕ್ರಮದ್ದಾಗಿದೆ. ದೇಶದ ವೈವಿಧ್ಯದ ದನಿಯೇ ಆಗಿರುವ ಆಕಾಶವಾಣಿಯ ಕುತ್ತಿಗೆಯನ್ನು ಹಿಚುಕುವ ಇಂಥ ಕುತಂತ್ರ ನಡೆಯುತ್ತಿರುವುದು ದುರಂತವಲ್ಲದೆ ಬೇರಲ್ಲ.

ಸಾಂಸ್ಕೃತಿಕ ಬಹುತ್ವದ ವಿಕಾಸಕ್ಕಾಗಿ ಪ್ರಸಾರ ಜಾಲವನ್ನು ವಿಸ್ತರಿಸುತ್ತಲೇ ಹೋಗಬೇಕೆಂಬುದು ಹಿಂದಿನ ಮಾಧ್ಯಮ ತಜ್ಞರ ಕನಸಾಗಿತ್ತು. ಆದರೆ ಈಗಿನ ಪರಿಣತರು, ಇರುವ ಕೇಂದ್ರಗಳ ಬಾಯಿ ಮುಚ್ಚಿಸುವ ಹುನ್ನಾರದಲ್ಲಿದ್ದಾರೆ. ಕಟ್ಟುತ್ತ ಹೋಗುವವರು ಆಗ ಇದ್ದರು, ಕೆಡವುತ್ತ ಹೋಗುತ್ತಿದ್ದಾರೆ ಈಗಿನವರು!

‘ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೇಳಿ ಮಾಡಿಸಿದ ಮಾಧ್ಯಮ ಆಕಾಶವಾಣಿ’ ಎಂಬುದು ಮಾಧ್ಯಮ ತಜ್ಞರ ಅಭಿಪ್ರಾಯ. ಒಕ್ಕೂಟ ವ್ಯವಸ್ಥೆಯ ನಿರ್ವಹಣೆಯಲ್ಲಿ ಆಕಾಶವಾಣಿಯು ಮಹತ್ವದ ಪಾತ್ರ ವಹಿಸಬಲ್ಲ
ದೆಂಬುದು ಕಳೆದ 95 ವರ್ಷಗಳಿಂದ ಸಾಬೀತಾಗುತ್ತ ಬಂದಿದೆ. ಜೊತೆಗೇ, ಜಗತ್ತಿನಲ್ಲೇ ಅತ್ಯಂತ ಬೃಹತ್ತಾದ ಪ್ರಸಾರ ಜಾಲವೆಂಬ ಖ್ಯಾತಿಯನ್ನೂ ಪಡೆದಿದೆ. ಇಂಥ ಮಾಧ್ಯಮದ ಕುತ್ತಿಗೆ ಹಿಚುಕಿ, ಅದರ ದನಿಯನ್ನೇ ಅಡಗಿಸುವ ಕ್ರೌರ್ಯ ನಡೆದಿರುವುದು ಸಾಂಸ್ಕೃತಿಕ ಅವಸಾನದ ಸೂಚಕ. ಬಹುತ್ವವೇ ಭಾರತದ ಸೊಗಸು, ಅದೇ ಅದರ ಸೌಂದರ್ಯ. ಅದನ್ನೇ ಅಳಿಸಿಹಾಕಿದರೆ, ಉಳಿಯುವುದು ವಿರೂಪಗೊಂಡ ಅಥವಾ ಮುಖವಾಡ ಧರಿಸಿದ ವಿಕೃತ ಮುಖ ಮಾತ್ರ. ಆ ಚಿತ್ರವು ಕಾಣಬಾರದೆಂದರೆ, ಆಕಾಶವಾಣಿಯು ಈಗ ಇಟ್ಟಿರುವ ಕೆಟ್ಟ ಹೆಜ್ಜೆಗಳನ್ನು ಹಿಂಪಡೆಯುವುದು ಔಚಿತ್ಯಪೂರ್ಣ. ಇಲ್ಲದಿದ್ದರೆ ‘ವಿವಿಧತೆಯಲ್ಲಿ ಏಕತೆ’ ಎಂಬ ದೇಶದ ಘೋಷಣೆಯೇ ನಗೆಪಾಟಲಿಗೀಡಾಗುತ್ತದೆ.

ಲೇಖಕ: ಆಕಾಶವಾಣಿ ಬೆಂಗಳೂರು ಕೇಂದ್ರದನಿವೃತ್ತ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.