ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೊದಲಿಗಿಂತ ಹೆಚ್ಚು ಪ್ರಬಲರಾಗಿದ್ದಾರೆ. ಹಿಂದಿನ ಬಾರಿ ಅವರು ಅಧ್ಯಕ್ಷರಾಗಿ ಅಧಿಕಾರ ಪೂರ್ಣಗೊಳಿಸಿದಾಗ ಇದ್ದುದಕ್ಕಿಂತ ಈಗ ಅಮೆರಿಕದ ಆರ್ಥಿಕತೆ ಹೆಚ್ಚು ಸುಸ್ಥಿತಿಯಲ್ಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಅಮೆರಿಕವು ಕೋವಿಡ್ ಬಿಕ್ಕಟ್ಟಿನಿಂದ ಬೇಗ ಚೇತರಿಸಿಕೊಂಡಿತು. ಹಣದುಬ್ಬರದ ದರವೂ ಗಣನೀಯವಾಗಿ ತಗ್ಗಿದೆ. ನಿರುದ್ಯೋಗದ ಪ್ರಮಾಣ ಕಡಿಮೆಯಾಗಿದೆ. ಆದರೆ ಆರ್ಥಿಕ ಬೆಳವಣಿಗೆಯ ಫಲ ತಮಗೆ ಸಿಕ್ಕಿಲ್ಲ ಎನ್ನುವ ಹತಾಶೆ ಜನಸಾಮಾನ್ಯರಲ್ಲಿ ವ್ಯಾಪಕವಾಗಿದೆ. ಶ್ರೀಮಂತರ ಸಂಪತ್ತು ತೀವ್ರವಾಗಿ ಹೆಚ್ಚಿರುವುದು ಅವರಲ್ಲಿ ಹತಾಶೆಯನ್ನು ಹೆಚ್ಚಿಸಿದೆ. 2022ರಲ್ಲಿ ಕೆಲಕಾಲ ಕಾಡಿದ್ದ ಅತಿ ಹಣದುಬ್ಬರದ ಪರಿಣಾಮವು ಜನರನ್ನು ಇನ್ನೂ ಕಾಡುತ್ತಿದೆ. ಜನ ನೊಂದಿದ್ದಾರೆ. ಬದಲಾವಣೆ ಬೇಕು ಅನಿಸಿದೆ. ಜನರ ಈ ಹತಾಶೆಯನ್ನು ಗ್ರಹಿಸಿಕೊಳ್ಳುವಲ್ಲಿ ಡೆಮಾಕ್ರಟಿಕ್ ಪಕ್ಷ ವಿಫಲವಾಗಿದೆ.

ಜನರ ಅತೃಪ್ತಿಯನ್ನು ಟ್ರಂಪ್ ಸೊಗಸಾಗಿ ಬಳಸಿಕೊಂಡಿದ್ದಾರೆ. ಚುನಾವಣಾ ಪ್ರಚಾರದುದ್ದಕ್ಕೂ ‘ನಾಲ್ಕು ವರ್ಷ ಹಿಂದಕ್ಕೆ ಹೋಲಿಸಿದರೆ ಈಗ ನಿಮ್ಮ ಸ್ಥಿತಿಯಲ್ಲಿ ಏನಾದರೂ ಸುಧಾರಣೆಯಾಗಿದೆಯೇ?’ ಎಂದು ಕೆಣಕುತ್ತಾ, ಜನರ ನೋವು ತಮಗೆ ಅರ್ಥವಾಗುತ್ತದೆ ಅನ್ನುವಂತೆ ಬಿಂಬಿಸಿಕೊಂಡಿದ್ದರು. ಜನರ ಸಮಸ್ಯೆಗೆ ವಿದೇಶಿ ವಲಸಿಗರನ್ನು ಕಾರಣವನ್ನಾಗಿ ತೋರಿಸಿದ್ದರು. ಅವರನ್ನು ಹೊರಹಾಕಿ ಅಮೆರಿಕನ್ನರ ಆಸಕ್ತಿಯನ್ನು ಕಾಪಾಡುವುದಾಗಿ ಭರವಸೆ ನೀಡಿದ್ದರು. ಅದು ಕೆಲಸ ಮಾಡಿದೆ. ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಿದ್ದ ಕಾರ್ಮಿಕರು, ಪದವೀಧರರಲ್ಲದವರು ಹಾಗೂ ಸಾಧಾರಣ ಜನ ಈ ಬಾರಿ ಟ್ರಂಪ್ ಕೈಹಿಡಿದಿದ್ದಾರೆ.

ಅಮೆರಿಕದ ಆರ್ಥಿಕ ಬೆಳವಣಿಗೆಯನ್ನು ತೀವ್ರಗೊಳಿಸುವುದಕ್ಕೆ ಟ್ರಂಪ್ ಹಲವು ಕ್ರಮಗಳನ್ನು ಮುಂದಿಟ್ಟಿದ್ದಾರೆ. ಮಾರುಕಟ್ಟೆಯ ಮೇಲಿನ ನಿಯಂತ್ರಣವನ್ನು ತೆಗೆಯುವುದು, ಅಮೆರಿಕದ ಉದ್ದಿಮೆಗಳನ್ನು ರಕ್ಷಿಸಲು ಚೀನಾದ ಉತ್ಪನ್ನಗಳ ಮೇಲೆ ಶೇ 60ರಷ್ಟು ಹಾಗೂ ಇತರ ದೇಶಗಳ ಉತ್ಪನ್ನಗಳ ಮೇಲೆ ಶೇ 20ರಷ್ಟು ಆಮದು ಸುಂಕ ಹಾಕುವುದು, ವಲಸಿಗರನ್ನು ಹೊರಗೆ ಹಾಕುವುದು, ಕಾರ್ಪೊರೇಟ್ ತೆರಿಗೆಯಲ್ಲಿ ಕಡಿತ ಮಾಡುವುದು, ಆರೋಗ್ಯ, ಶಿಕ್ಷಣದಂತಹ ಸಾಮಾಜಿಕ ಸೇವೆಗಳನ್ನು ಖಾಸಗೀಕರಣಗೊಳಿಸುವುದು ಇವೆಲ್ಲಾ ಅವರು ಹಮ್ಮಿಕೊಂಡಿರುವ ಯೋಜನೆಗಳು. ವಿತ್ತೀಯ ಹಾಗೂ ಹಣಕಾಸು ನೀತಿಗಳನ್ನು ರೂಪಿಸುವುದಕ್ಕೆ ಹೆಚ್ಚಿನ ಅಧಿಕಾರವನ್ನೂ ಅವರು ಅಪೇಕ್ಷಿಸುತ್ತಿದ್ದಾರೆ. ಬಹುಶಃ ಈ ಪ್ರಕ್ರಿಯೆಯಲ್ಲಿ ಕೇಂದ್ರ ಬ್ಯಾಂಕಿನಂತಹ ಕೆಲವು ಸ್ವಾಯತ್ತ ಸಂಸ್ಥೆಗಳ ಸ್ವಾತಂತ್ರ್ಯ ಮೊಟಕುಗೊಳ್ಳಬಹುದು.

ಟ್ರಂಪ್ ಅವರ ಈ ಯೋಜನೆಗಳು ಪ್ರಮುಖ ಅರ್ಥಶಾಸ್ತ್ರಜ್ಞರೂ ಸೇರಿದಂತೆ ಹಲವರಲ್ಲಿ ಆತಂಕ ಮೂಡಿಸಿವೆ. ಇದರಿಂದ ಅಮೆರಿಕದ ಆರ್ಥಿಕತೆ ಮಾತ್ರವಲ್ಲ ಜಗತ್ತಿನ ಆರ್ಥಿಕತೆಯ ಮೇಲೂ ಕೆಟ್ಟ ಪರಿಣಾಮ ಆಗಬಹುದೆನ್ನುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ, ಸುಂಕವನ್ನೇ ಗಮನಿಸಿ. ಸುಂಕ ಅನ್ನುವುದು ವಿದೇಶಿ ಸರಕು ನಮ್ಮ ಗಡಿಯೊಳಗೆ ಬಂದಾಗ ಕಟ್ಟಬೇಕಾದ ತೆರಿಗೆ. ಸುಂಕದಿಂದಾಗಿ ವಿದೇಶಿ ವಸ್ತುಗಳು ದುಬಾರಿಯಾಗುತ್ತವೆ. ದೇಶದಲ್ಲಿ ತಯಾರಾದ ವಸ್ತುಗಳಿಗೆ ಸ್ಪರ್ಧೆ ಕಡಿಮೆಯಾಗುತ್ತದೆ. ಬೇಡಿಕೆ ಹೆಚ್ಚುತ್ತದೆ. ಸ್ಥಳೀಯ ಉದ್ದಿಮೆಗಳು ಬೆಳೆಯುತ್ತವೆ, ಉದ್ಯೋಗ ಸೃಷ್ಟಿಯಾಗುತ್ತದೆ. ಇದು ಸ್ಥೂಲವಾಗಿ ಆಮದು ಸುಂಕದ ಹಿಂದಿರುವ ತರ್ಕ. ಸಾಮಾನ್ಯವಾಗಿ ಸುಂಕವನ್ನು ಕೆಲವು ಆಯ್ದ ಸರಕುಗಳಿಗೆ ಮಾತ್ರ ವಿಧಿಸಲಾಗುತ್ತದೆ. ಆದರೆ ಅಮೆರಿಕಕ್ಕೆ ಆಮದಾಗುವ ಎಲ್ಲಾ ಉತ್ಪನ್ನಗಳ ಮೇಲೂ ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಅವರಿಗೆ ಮೊದಲಿನಿಂದಲೂ ಸುಂಕದ ಮೇಲೆ ವ್ಯಾಮೋಹ. ತಮ್ಮನ್ನು ‘ಸುಂಕದ ಮನುಷ್ಯ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸುಂಕ ಅವರಿಗೆ ಪ್ರತೀಕಾರದ, ರಾಜಕೀಯದ ಕ್ರಮವಾಗಿದೆ. ‘ನಮ್ಮಿಂದ ಮಿಲಿಟರಿ ನೆರವು ಪಡೆದ ಮಿತ್ರ ದೇಶಗಳೇ ವ್ಯಾಪಾರದ ವಿಷಯದಲ್ಲಿ ನಮಗೆ ಮೋಸ ಮಾಡಿವೆ. ನಾವು ಎಲ್ಲರ ಮೇಲೆ ಸುಂಕ ಹಾಕುತ್ತೇವೆ’ ಎಂದು ಘೋಷಿಸಿದ್ದಾರೆ. ‘ಚೀನಾವು ಇನ್ನೊಮ್ಮೆ ತೈವಾನ್ ಮೇಲೆ ಯುದ್ಧ ಮಾಡಿದರೆ, ಅದರ ಮೇಲೆ ಶೇ 1,000ದಷ್ಟು ಸುಂಕ ಹಾಕುತ್ತೇನೆ’ ಎಂದಿದ್ದಾರೆ. ಆದರೆ ಇದರಿಂದ ಕೆಲವು ಸಮಸ್ಯೆಗಳೂ ಆಗಬಹುದು.

ಸುಂಕದ ತಕ್ಷಣದ ಪರಿಣಾಮ ಅಂದರೆ ಬೆಲೆ ಏರಿಕೆ. ಸುಂಕದಿಂದ ವಿದೇಶಿ ಸರಕುಗಳ ಬೆಲೆ ಮಾತ್ರವಲ್ಲ ಅಮೆರಿಕದಲ್ಲಿ ತಯಾರಾದ ವಸ್ತುಗಳ ಬೆಲೆಯೂ ಏರುತ್ತದೆ. 2018ರಲ್ಲಿ ಅಮೆರಿಕದಲ್ಲಿ ವಾಷಿಂಗ್ ಮಷೀನ್ ಮೇಲೆ ಸುಂಕ ಹಾಕಿದಾಗ, ಸ್ಥಳೀಯವಾಗಿ ಉತ್ಪಾದನೆಯಾಗುತ್ತಿದ್ದ ವಾಷಿಂಗ್ ಮಷೀನ್ ಬೆಲೆಯೂ ಹೆಚ್ಚಿತ್ತು. ಅದರೊಂದಿಗೆ ಡ್ರೈಯರ್ ಬೆಲೆಯೂ ಏರಿತ್ತು. ಸಹಜವಾಗಿಯೇ ಹೆಚ್ಚಿನ ಬೆಲೆಯ ಹೊರೆ ಬೀಳುವುದು ಗ್ರಾಹಕರ ಮೇಲೆ. ಜೊತೆಗೆ ಅಮೆರಿಕದಲ್ಲಿ ತಯಾರಾಗುವ ಬಹುತೇಕ ವಸ್ತುಗಳ ಉತ್ಪಾದನೆಯು ವಿದೇಶಿ ಉತ್ಪನ್ನಗಳನ್ನು ಅವಲಂಬಿಸಿದೆ. ಉದಾಹರಣೆಗೆ, ಅಮೆರಿಕ ಇಂದು ಜಗತ್ತಿನಲ್ಲೇ ಅತಿ ಹೆಚ್ಚು ಉಕ್ಕು ಆಮದು ಮಾಡಿಕೊಳ್ಳುತ್ತಿರುವ ದೇಶ. ಉಕ್ಕಿನ ಮೇಲೆ ಸುಂಕ ಹೆಚ್ಚಿಸಿದರೆ ಉಕ್ಕನ್ನು ಬಳಸುವ ಪ್ರತಿ ಸರಕಿನ ಉತ್ಪಾದನಾ ವೆಚ್ಚವೂ ಹೆಚ್ಚುತ್ತದೆ, ಬೆಲೆಯೂ ಹೆಚ್ಚುತ್ತದೆ. ಅಂತಿಮವಾಗಿ, ಅದರಿಂದ ಬೇಡಿಕೆಗೆ ಹೊಡೆತ ಬೀಳುತ್ತದೆ.

ಅಮೆರಿಕ ಏಕಪಕ್ಷೀಯವಾಗಿ ಸುಂಕ ಹಾಕುತ್ತಾ ಹೋದರೆ ಉಳಿದ ದೇಶಗಳು ಸುಮ್ಮನಿರುವುದಿಲ್ಲ. ಪ್ರತಿಯಾಗಿ ಅವೂ ಸುಂಕ ಹಾಕುತ್ತವೆ. ಹಿಂದೆ ಟ್ರಂಪ್ ಹೀಗೆ ಸುಂಕ ಹಾಕಿದ್ದಕ್ಕೆ ಪ್ರತಿಯಾಗಿ ಚೀನಾವು ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಸುಂಕ ಹಾಕಿತು. ಜೋಳದಂತಹವುಗಳನ್ನು ಬ್ರೆಜಿಲ್ ಹಾಗೂ ಅರ್ಜೆಂಟೀನಾದಿಂದ ತರಿಸಿಕೊಳ್ಳಲು ಪ್ರಾರಂಭಿಸಿತ್ತು. ಇದರಿಂದ ಅಮೆರಿಕದ ಕೃಷಿ ಕ್ಷೇತ್ರಕ್ಕೆ ನಷ್ಟವಾಯಿತು. ಈಗ ಟ್ರಂಪ್ ಹೆಚ್ಚು ವ್ಯಾಪಕವಾಗಿ ಸುಂಕವನ್ನು ಹಾಕುವ ಆಲೋಚನೆಯಲ್ಲಿ ಇರುವುದರಿಂದ ಅಮೆರಿಕ ಹಾಗೂ ಜಾಗತಿಕ ಆರ್ಥಿಕತೆಯ ಮೇಲೆ ಇದರ ಪರಿಣಾಮ ಇನ್ನೂ ತೀವ್ರವಾಗಬಹುದು.

ಹಾಗೆಯೇ ಟ್ರಂಪ್ ಘೋಷಿಸಿರುವಂತೆ, ವಲಸಿಗರನ್ನು ಹೊರದಬ್ಬುವುದು ಕೂಡ ಸುಲಭವಲ್ಲ. ವಲಸೆಯ ಸಮಸ್ಯೆಯನ್ನು ಬರೀ ಅಮೆರಿಕ ಹಾಗೂ ವಿದೇಶಿ ಕಾರ್ಮಿಕರ ನಡುವಿನ ಸಂಘರ್ಷವಾಗಿ ನೋಡುವುದರಲ್ಲೇ ಸಮಸ್ಯೆಯಿದೆ. ಅಮೆರಿಕ ಮಾತ್ರವಲ್ಲ ಜಗತ್ತಿನ ಬಹುತೇಕ ದೇಶಗಳ ಆರ್ಥಿಕತೆಗಳೂ ವಲಸಿಗರನ್ನು ಬಹುವಾಗಿ ಅವಲಂಬಿಸಿವೆ. ಅವರನ್ನು ಹೊರಹಾಕಿದರೆ ಎಷ್ಟೋ ಉದ್ದಿಮೆಗಳಲ್ಲಿ ಕೆಲಸಗಾರರ ಕೊರತೆ ಉಂಟಾಗುತ್ತದೆ. ನೋಂದಾಯಿತ ಕಾರ್ಮಿಕರು ಅಗ್ಗದ ಕೂಲಿಗೆ ಕೆಲಸ ಮಾಡುವುದಕ್ಕೆ ತಯಾರಿರುವುದಿಲ್ಲ. ಸ್ವಾಭಾವಿಕವಾಗಿಯೇ ಉತ್ಪಾದನಾ ವೆಚ್ಚವೂ ಹೆಚ್ಚುತ್ತದೆ. ಅಮೆರಿಕದ ಉತ್ಪನ್ನಗಳಿಗೆ ಹೊರ ದೇಶಗಳಲ್ಲಿ ಸ್ಪರ್ಧೆಯನ್ನು ಎದುರಿಸುವುದು ಕಷ್ಟವಾಗುತ್ತದೆ. ಚೀನಾದಂತಹ ದೇಶಗಳಿಗೆ ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕದಂತಹ ದೇಶಗಳಲ್ಲಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಸುಲಭವಾಗುತ್ತದೆ.

ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರು ಹೇಳುವಂತೆ, ವಲಸಿಗರು ಬಳಕೆದಾರರೂ ಆಗಿರುತ್ತಾರೆ. ಅವರು ಬೇಡಿಕೆಯನ್ನು ಸೃಷ್ಟಿಸುತ್ತಿರುತ್ತಾರೆ. ಅವರನ್ನು ಹೊರಹಾಕುವುದರ ಮೂಲಕ ಆ ಬೇಡಿಕೆಗೂ ಪೆಟ್ಟು ಬೀಳುತ್ತದೆ. ಜೊತೆಗೆ ಕೂಲಿ ಹೆಚ್ಚು ಕೊಡಬೇಕಾಗಿ ಬಂದರೆ ಕಾರ್ಪೊರೇಟ್ ಸಂಸ್ಥೆಗಳ ಲಾಭವೂ ಕುಸಿಯುತ್ತದೆ, ಬೆಲೆಯೂ ಹೆಚ್ಚುತ್ತದೆ. ಅಗ್ಗದ ಬೆಲೆಗೆ ದುಡಿಯುವ ವಲಸಿಗರು ಇಲ್ಲದಿದ್ದರೆ ಹಣದುಬ್ಬರ ಇನ್ನೂ ಹೆಚ್ಚಿರುತ್ತಿತ್ತು.

ಇವೆಲ್ಲಕ್ಕಿಂತ ಹೆಚ್ಚಾಗಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ಡೆರೆನ್ ಅಸಿಮೊಗ್ಲು ಅವರು ಹೇಳುವಂತೆ, ಟ್ರಂಪ್ ಆಡಳಿತದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ದುರ್ಬಲವಾಗುವ ಸಾಧ್ಯತೆಗಳಿವೆ. ಇದರ ಪರಿಣಾಮವು ಆರ್ಥಿಕತೆಯ ಮೇಲೂ ಆಗುತ್ತದೆ. ಟ್ರಂಪ್ ಅವರಿಗೆ ಪ್ರಿಯವಾದ ಪಳೆಯುಳಿಕೆ ಇಂಧನದಂತಹ ಕೆಲವು ಉದ್ದಿಮೆಗಳಲ್ಲಿ ಹೂಡಿಕೆ ಹೆಚ್ಚಬಹುದು. ಆದರೆ ಒಟ್ಟಾರೆಯಾಗಿ ಪರಿಸರ, ತಂತ್ರಜ್ಞಾನ, ಸಾಮಾಜಿಕ ಸುಭದ್ರತೆ, ಆರೋಗ್ಯ, ಶಿಕ್ಷಣ ಎಲ್ಲದಕ್ಕೂ ಧಕ್ಕೆಯಾಗಬಹುದು.

ಈ ಸಮಯದಲ್ಲಿ ಇನ್ನೊಂದು ಪ್ರಶ್ನೆಯನ್ನು ಅವಶ್ಯವಾಗಿ ಕೇಳಿಕೊಳ್ಳಬೇಕು. ಈಗಿರುವ ಪ್ರಜಾಸತ್ತಾತ್ಮಕ ವ್ಯವಸ್ಥೆಗಳು ತೃಪ್ತಿಕರವಾದ ಆಡಳಿತ ನೀಡುತ್ತಿವೆಯೇ? ಭ್ರಷ್ಟಾಚಾರ, ಅರಾಜಕತೆ, ಹಿಂಸೆ, ಪರಿಸರದ ನಾಶ ಇವೆಲ್ಲ ಢಾಳಾಗಿ ಕಾಣುತ್ತಿವೆ. ಜನರಿಗೆ ತಮಗೆ ಬೇಕಾದಂತಹ ರಾಜಕೀಯ, ಆರ್ಥಿಕ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ, ಅಂತಹ ಪ್ರಜಾಸತ್ತಾತ್ಮಕ ವ್ಯವಸ್ಥೆಯಿಂದಲೇ ಟ್ರಂಪ್ ಅವರಂತಹ ನಾಯಕರೂ ಆಯ್ಕೆಯಾಗಿ ಬರುತ್ತಿದ್ದಾರೆ. ಹಾಗಾಗಿ, ಈಗಿರುವ ಪ್ರಜಾಸತ್ತಾತ್ಮಕ ವ್ಯವಸ್ಥೆಯ ನ್ಯೂನತೆಯ ಬಗ್ಗೆ ಗಂಭೀರವಾಗಿ ಪ್ರಶ್ನಿಸಿಕೊಳ್ಳಬೇಕಾಗಿದೆ. ಈಗಿರುವ ವ್ಯವಸ್ಥೆಯನ್ನು ಸುಮ್ಮನೆ ಒಪ್ಪಿಕೊಳ್ಳುವ ಬದಲು ಅದರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ, ಅದನ್ನು ನಿಜವಾದ ಅರ್ಥದಲ್ಲಿ ಪ್ರಜಾಸತ್ತಾತ್ಮಕಗೊಳಿಸುವ ಜವಾಬ್ದಾರಿಯೂ ನಮ್ಮ ಮೇಲೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.