ನಮ್ಮ ದೇಶದಲ್ಲಿ ಹಸಿರುಕ್ರಾಂತಿ ಪ್ರಾರಂಭವಾದದ್ದು 1966– 67ರಲ್ಲಿ. ಅಧಿಕ ಇಳುವರಿಯ ಮಿಶ್ರತಳಿಗಳು, ರಾಸಾಯನಿಕ ಗೊಬ್ಬರ, ವಿಪುಲ ಪ್ರಮಾಣದಲ್ಲಿ ಕೀಟನಾಶಕಗಳು, ವಿಸ್ತರಿಸಿದ ನೀರಾವರಿ ಸೌಲಭ್ಯದಂತಹ
ವನ್ನು ಒಳಗೊಂಡಿದ್ದ ಹಸಿರುಕ್ರಾಂತಿಯ ಮುಖ್ಯ ಉದ್ದೇಶವು ಏರುತ್ತಿದ್ದ ಜನಸಂಖ್ಯೆಯ ಬೇಡಿಕೆಗೆ ಅನುಸಾರವಾಗಿ ಆಹಾರ ಉತ್ಪಾದನೆಯನ್ನು ಹೆಚ್ಚಿಸು ವುದು. ಈ ಎಲ್ಲ ಕ್ರಮಗಳು ಒಟ್ಟಾಗಿ ಸೇರಿ ನಿರೀಕ್ಷಿತ ಫಲ ನೀಡಿದುದರ ಪರಿಣಾಮವಾಗಿ, ದೇಶ ಇಂದು ಆಹಾರ ಭದ್ರತೆಯನ್ನು ಬಹುತೇಕ ಸಾಧಿಸಿದೆ.

2023ರ ನವೆಂಬರ್ ತಿಂಗಳ ‘ನೇಚರ್’ ಸಂಶೋಧನಾ ಜರ್ನಲ್‍ನ ‘ಸೈಂಟಿಫಿಕ್ ರಿಪೋರ್ಟಿಂಗ್’ ವಿಭಾಗದಲ್ಲಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಪಶ್ಚಿಮ ಬಂಗಾಳದ ವಿಧಾನಚಂದ್ರ ಕೃಷಿ ವಿಶ್ವವಿದ್ಯಾಲಯ ಮತ್ತು ಹೈದರಾಬಾದ್‍ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಸಂಸ್ಥೆಯ 11 ಕೃಷಿ ವಿಜ್ಞಾನಿಗಳು ಒಟ್ಟಾಗಿ ಸೇರಿ, ವಿಜ್ಞಾನಿ ಸೋವನ್ ದೇವನಾಥ್ ಅವರ ನೇತೃತ್ವದಲ್ಲಿ ನಡೆಸಿದ ಅಧ್ಯಯನದ ವರದಿಯೊಂದು ಪ್ರಕಟವಾಗಿದೆ. ಹಸಿರುಕ್ರಾಂತಿಯ ಮೂಲಕ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಭರದಲ್ಲಿ, ಆಹಾರಧಾನ್ಯಗಳ ಅದರಲ್ಲೂ ಮುಖ್ಯವಾಗಿ ಅಕ್ಕಿ ಮತ್ತು ಗೋಧಿಯಲ್ಲಿನ ಪೋಷಕಾಂಶಗಳನ್ನು ನಾವು ಹೇಗೆ ಕಳೆದುಕೊಂಡಿದ್ದೇವೆ, 2040ರ ಸುಮಾರಿಗೆ ಈ ಎರಡೂ ಆಹಾರಧಾನ್ಯಗಳು ತಮ್ಮ ಪೋಷಕಾಂಶ ಮೌಲ್ಯವನ್ನು ಕಳೆದುಕೊಂಡು ಹೇಗೆ ನಿಸ್ಸಾರವಾಗಲಿವೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ.

ಹಸಿರುಕ್ರಾಂತಿಯ ಕೃಷಿ ವಿಧಾನಗಳು, ಪರಿಸರ ಮತ್ತು ಆಹಾರ ವ್ಯವಸ್ಥೆಯಲ್ಲಿ ತಂದ ಬದಲಾವಣೆಗಳು ಮತ್ತು ಅವುಗಳ ಮೇಲಿನ ಪರಿಣಾಮಗಳಿಗೆ ಸಂಬಂಧಿಸಿದಂತೆ ವ್ಯಾಪಕವಾದ ಟೀಕೆ, ಟಿಪ್ಪಣಿಗಳು ಬಂದಿವೆ. ಆದರೆ ಈ ಎಲ್ಲ ದೂರು, ಆರೋಪ, ಆಕ್ಷೇಪಗಳು ಮಣ್ಣಿನ ಗುಣಮಟ್ಟದ ಅವನತಿ, ಮೇಲ್ಮೈನೀರಿನ ಮಾಲಿನ್ಯ, ಅಂತರ್ಜಲ ಮಟ್ಟದ ಕುಸಿತ, ಜೈವಿಕ ವೈವಿಧ್ಯದ ನಾಶದಂತಹವುಗಳನ್ನು ದಾಟಿ ಮುಂದೆ ಹೋಗಿಲ್ಲ. ಆದರೆ ಇದೀಗ ಈ 11 ಕೃಷಿ ವಿಜ್ಞಾನಿಗಳು ನಡೆಸಿರುವ ಸಂಶೋಧನಾ ಅಧ್ಯಯನವು ಮೊದಲ ಬಾರಿಗೆ, ಭಾರತದ ‘ಪೋಷಕಾಂಶಗಳ ಭದ್ರತೆ’ಯ (ನ್ಯೂಟ್ರಿಷನಲ್ ಸೆಕ್ಯೂರಿಟಿ) ಮೇಲೆ ಹಸಿರುಕ್ರಾಂತಿಯ ಪರಿಣಾಮವನ್ನು ವಿಶ್ಲೇಷಿಸಿದೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮೂಲಗಳ ಪ್ರಕಾರ, 1966–67ರಿಂದ 2010ರವರೆಗೂ ಹೆಚ್ಚು ಇಳುವರಿ ನೀಡುವ ಭತ್ತ ಮತ್ತು ಗೋಧಿಯ ಒಟ್ಟು 1,500 ಸುಧಾರಿತ ತಳಿಗಳನ್ನು ದೇಶದಾದ್ಯಂತ ಕೃಷಿಗಾಗಿ ಬಿಡುಗಡೆ ಮಾಡಲಾಗಿದೆ. ವಿವಿಧ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಮಿಶ್ರತಳಿ ಅಭಿವೃದ್ಧಿಯಲ್ಲಿ ಸಕ್ರಿಯವಾಗಿರುವ ರೈತ ಸಂಘಟನೆಗಳೊಡನೆ ಸಮಾಲೋಚನೆ ನಡೆಸಿದ ಸೋವನ್ ಅವರ ತಂಡ, ಹಿಂದಿನ 50 ವರ್ಷಗಳಲ್ಲಿ ಬಳಕೆಗೆ ಬಂದಿರುವ, ಅತ್ಯುತ್ತಮ ಮತ್ತು ಅತಿಮಹತ್ವದ 16 ಭತ್ತದ ತಳಿಗಳು ಮತ್ತು 18 ಗೋಧಿಯ ತಳಿಗಳನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿತು. ಈ ಆಯ್ದ ‘ಲ್ಯಾಂಡ್ ಮಾರ್ಕ್’ ತಳಿಗಳ ಬೀಜಗಳನ್ನು ಜೀನ್‍ಬ್ಯಾಂಕ್‍ನಿಂದ ಪಡೆದು, 2018– 20ರ ಅವಧಿಯಲ್ಲಿ ಕೃಷಿಭೂಮಿಯಲ್ಲಿ ಬೆಳೆಸಿ, ಪಡೆದ ಧಾನ್ಯಗಳ ‘ಪೋಷಕಾಂಶ ಪ್ರೊಫೈಲ್’ ಸಿದ್ಧಪಡಿಸಲಾಯಿತು. ಅದರಿಂದ, ದೇಶದ ಪ್ರಮುಖ ಆಹಾರಧಾನ್ಯಗಳಾದ ಅಕ್ಕಿ ಮತ್ತು ಗೋಧಿಯು ತಮ್ಮ ಆಹಾರದ ಮೌಲ್ಯವನ್ನು ಗಮನಾರ್ಹವಾಗಿ ಕಳೆದುಕೊಂಡಿರುವುದು ತಿಳಿದುಬಂದಿದೆ. ಉದಾಹರಣೆಗೆ, ಹಿಂದಿನ ಸುಮಾರು 50 ವರ್ಷಗಳಲ್ಲಿ ಅಕ್ಕಿಯಲ್ಲಿ ಸತು ಮತ್ತು ಕಬ್ಬಿಣದ ಅಂಶ ಶೇಕಡ 33 ಮತ್ತು ಶೇ 27ರಷ್ಟು ಕಡಿಮೆಯಾಗಿದೆ. ಗೋಧಿಯಲ್ಲಿ ಶೇ 30 ಮತ್ತು 19ರಷ್ಟು ಕಡಿಮೆಯಾಗಿದೆ. ಇವೇ ಅಲ್ಲದೆ ಕ್ಯಾಲ್ಸಿಯಂ, ಸಿಲಿಕಾನ್, ರಂಜಕ, ವೆನೇಡಿಯಮ್ ಅಂತಹವುಗಳ ಪ್ರಮಾಣವೂ ಕಡಿಮೆಯಾಗಿದೆ.

ಮೂಳೆಗಳು ಉತ್ತಮವಾಗಿ ರೂಪುಗೊಳ್ಳಲು ರಂಜಕ, ಕ್ಯಾಲ್ಸಿಯಂ, ಸಿಲಿಕಾನ್, ವೆನೇಡಿಯಮ್ ಬೇಕು. ರೋಗನಿರೋಧಕ ಪ್ರತಿರಕ್ಷೆ, ಸಂತಾನೋತ್ಪಾದನೆ ಮತ್ತು ನರಮಂಡಲ ವ್ಯವಸ್ಥೆಯ ಬೆಳವಣಿಗೆಗೆ ಸತು ಅಗತ್ಯ. ರಕ್ತದಲ್ಲಿನ ಹಿಮೋಗ್ಲೋಬಿನ್ ಉತ್ಪಾದನೆಗೆ ಕಬ್ಬಿಣ ಬೇಕು. ಅಕ್ಕಿ ಮತ್ತು ಗೋಧಿಯಲ್ಲಿ ಈ ಮೂಲವಸ್ತುಗಳ ಕೊರತೆಯುಂಟಾದಾಗ ನರಮಂಡಲ, ಸಂತಾನೋತ್ಪಾದನೆ, ಪ್ರತಿರಕ್ಷೆ, ಸ್ನಾಯು– ಅಸ್ಥಿಪಂಜರ ವ್ಯವಸ್ಥೆಗಳಲ್ಲಿ ತೊಂದರೆ ಕಂಡುಬರುತ್ತದೆ. ವಿಷಕಾರಿ ಮೂಲಧಾತುಗಳ ಪ್ರಮಾಣ ಏರುತ್ತಿರುವುದನ್ನೂ ಸೋವನ್ ಅವರ ತಂಡ ದಾಖಲಿಸಿದೆ. ಉದಾಹರಣೆಗೆ, ಅಕ್ಕಿಯಲ್ಲಿ ಆರ್ಸೆನಿಕ್ ಪ್ರಮಾಣ ಶೇ 1,493ರಷ್ಟು ಹೆಚ್ಚಾಗಿದೆಯೆಂದು ಸಂಶೋಧನಾ ಲೇಖನ ತಿಳಿಸುತ್ತದೆ!

‘ಭತ್ತ, ಗೋಧಿಯಂತಹ ಆಹಾರ ಸಸ್ಯಗಳಲ್ಲಿ ಸಂಕೀರ್ಣವಾದ, ಅಂತರ್ಗತವಾದ ನಿಯಂತ್ರಣ ವ್ಯವಸ್ಥೆ
ಗಳಿವೆ. ಈ ವ್ಯವಸ್ಥೆಯು ಮಣ್ಣಿನಿಂದ ಖನಿಜ, ಪೋಷಕಾಂಶ ಗಳನ್ನು ಸಮತೋಲಿತ ಪ್ರಮಾಣದಲ್ಲಿ ಹೀರಿಕೊಂಡು, ಧಾನ್ಯಗಳಲ್ಲಿ ಶೇಖರವಾಗುವಂತೆ ಮಾಡುತ್ತದೆ. ವಿಷಯುಕ್ತ ಪದಾರ್ಥಗಳನ್ನು ಶೋಧಿಸಿ ಹೊರಗಿಡುವ ಕೆಲಸವನ್ನೂ ಮಾಡುತ್ತದೆ. ಅಧಿಕ ಇಳುವರಿಯ ಮಿಶ್ರ ತಳಿಗಳನ್ನು
ಅಭಿವೃದ್ಧಿಪಡಿಸುವ ಭರದಲ್ಲಿ, ಇಂತಹ ನಿಯಂತ್ರಣ ವ್ಯವಸ್ಥೆಗೆ ಕಾರಣವಾದ ವಿಶಿಷ್ಟ ಜೀನೀಯ ಸ್ವಭಾವಗಳಲ್ಲಿಏರುಪೇರಾಗಿರುವುದೇ ಪೋಷಕಾಂಶಗಳ ಕೊರತೆಗೆ ಕಾರಣ’ ಎನ್ನುತ್ತಾರೆ ನ್ಯಾಷನಲ್ ರೈಸ್ ರಿಸರ್ಚ್ ಇ ನ್‌ಸ್ಟಿಟ್ಯೂಟ್‍ನ ಕೃಷಿ ವಿಜ್ಞಾನಿ ರುಬಿನಾ ಖಾನಮ್.

ನಮ್ಮ ದೇಶದಲ್ಲಿ ಮೊದಲ ಬಾರಿಗೆ ‘ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ’ ನಡೆದದ್ದು 1992- 93ರಲ್ಲಿ. ಈ ಸಮೀಕ್ಷೆಯ ಫಲಿತಾಂಶಗಳು ಜನಸಂಖ್ಯೆಯಲ್ಲಿ ಅದರಲ್ಲೂ ಮುಖ್ಯವಾಗಿ ಮಕ್ಕಳಲ್ಲಿ ನ್ಯೂನಪೋಷಣೆಯ ಸಮಸ್ಯೆಯನ್ನು ಎತ್ತಿ ತೋರಿದವು. ಅದೇ ಸಮಯದಲ್ಲಿ ಹಸಿರುಕ್ರಾಂತಿಯ ಭಾಗವಾಗಿ ಕೃಷಿಗೆ ಬಿಡುಗಡೆ
ಆಗಿದ್ದ ಹೊಸ ತಳಿಗಳ ಧಾನ್ಯಗಳಲ್ಲಿ ಪೋಷಕಾಂಶಗಳು ಕ್ಷೀಣಿಸುತ್ತಿದ್ದ ಬಗ್ಗೆ ಅಲ್ಪಸ್ವಲ್ಪ ಮಾಹಿತಿಯಿದ್ದರೂ ಸರ್ಕಾರ ಸೂಕ್ತ ಗಮನಹರಿಸಲಿಲ್ಲ ಎಂಬ ಟೀಕೆಯಿದೆ.

ಇಳುವರಿಯೂ ಹೆಚ್ಚಿರಬೇಕು, ಪೋಷಕಾಂಶಗಳ ಕೊರತೆಯೂ ಇರಬಾರದು. ಈ ಗುರಿಯನ್ನು ಸಾಧಿಸಲು ಹಿಂದಿನ ಸುಮಾರು 15 ವರ್ಷಗಳಿಂದ ಆಹಾರಧಾನ್ಯಗಳ ‘ಜೈವಿಕ ಬಲವರ್ಧನೆ’ಯ (ಬಯೊಫೋರ್ಟಿಫಿಕೇಷನ್) ಪ್ರಯತ್ನಗಳು ನಡೆಯುತ್ತಿವೆ. ಹಿಂದಿನ ಹತ್ತು ವರ್ಷಗಳ ಅವಧಿಯಲ್ಲಿ ಈ ಯೋಜನೆಯಡಿಯಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಮತ್ತು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಸಿರುಕ್ರಾಂತಿಗೂ ಮುಂಚೆ ಬಳಕೆಯಲ್ಲಿದ್ದ, ಇಂದಿಗೂ ವನ್ಯಸ್ಥಿತಿಯಲ್ಲಿರುವ, ಉತ್ತಮ ಪೋಷಕಾಂಶಗಳುಳ್ಳ ತಳಿಗಳಿಗಾಗಿ ವ್ಯವಸ್ಥಿತ ಹುಡುಕಾಟ ನಡೆಸಿ, ಅವುಗಳನ್ನು ಅಧಿಕ ಇಳುವರಿಯ ತಳಿಗಳೊಡನೆ ಅಡ್ಡಹಾಯಿಸುವ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ.

2016ರಿಂದ ಈಚೆಗೆ ಐಸಿಎಆರ್ ಅಧೀನದ, ಕಟಕ್ ನಲ್ಲಿರುವ ನ್ಯಾಷನಲ್ ರೈಸ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಹೈದರಾಬಾದ್‍ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರೈಸ್ ರಿಸರ್ಚ್ ಮತ್ತು ರಾಯ್‍ಪುರದಲ್ಲಿರುವ ಇಂದಿರಾ ಗಾಂಧಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಒಟ್ಟಾಗಿ ಸೇರಿ, ಸತು ಮತ್ತು ಪ್ರೋಟೀನ್ ಉತ್ತಮ
ಪ್ರಮಾಣದಲ್ಲಿರುವ 10 ಭತ್ತದ ತಳಿಗಳನ್ನು ಕೃಷಿಗಾಗಿ ಬಿಡುಗಡೆ ಮಾಡಿದ್ದಾರೆ. ಒಟ್ಟಾರೆಯಾಗಿ ಐಸಿಎಆರ್ ಇದುವರೆವಿಗೂ 142 ಜೈವಿಕ ಬಲವರ್ಧಿತ ತಳಿಗಳನ್ನು ಅಭಿವೃದ್ಧಿ ಮಾಡಿ ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಭತ್ತ (10), ಗೋಧಿ (43), ಮುಸುಕಿನ ಜೋಳ (20), ಸಜ್ಜೆ (11), ಸಾಮೆ (13) ಮತ್ತು ತೋಟಗಾರಿಕಾ ಬೆಳೆಗಳು (18) ಸೇರಿವೆ. ಕೇಂದ್ರ ಸರ್ಕಾರವು 2023ರ ಡಿಸೆಂಬರ್ 8ರಂದು ಲೋಕಸಭೆಗೆ ನೀಡಿದ ಮಾಹಿತಿಯಂತೆ, ಸದ್ಯದಲ್ಲಿ ಜೈವಿಕ ಬಲವರ್ಧನೆಯ ಪ್ರಯತ್ನಗಳ ಗಮನವು ಸತು, ಕಬ್ಬಿಣ ಮತ್ತು ಪ್ರೋಟೀನ್ ಮೇಲಿದೆ. ಅದನ್ನು ಅತ್ಯವಶ್ಯಕ ಮೂಲಧಾತುಗಳಾದ ಕ್ಯಾಲ್ಸಿಯಂ, ತಾಮ್ರ, ಮ್ಯಾಂಗನೀಸ್‌ನಂತಹವುಗಳಿಗೂ ವಿಸ್ತರಿಸಬೇಕೆಂಬುದು ವಿಜ್ಞಾನಿಗಳ ಒತ್ತಾಯ.

ಉತ್ತಮ ಪ್ರಮಾಣದಲ್ಲಿ ಪೋಷಕಾಂಶಗಳಿದ್ದು, ಹೆಚ್ಚು ಇಳುವರಿ ನೀಡುವ ಮಿಶ್ರತಳಿಗಳನ್ನು ಅಭಿವೃದ್ಧಿ
ಪಡಿಸುವುದು ಒಂದು ಸವಾಲಾದರೆ, ಅಂತಹ ತಳಿಗಳನ್ನು ಬಳಸಿ, ಬೆಳೆ ತೆಗೆಯುವಂತೆ ರೈತರ ಮನವೊಲಿಸುವುದು ಅದಕ್ಕಿಂತ ದೊಡ್ಡ ಸವಾಲೆಂಬ ಅಭಿಪ್ರಾಯವಿದೆ. 2017– 23ರ ಆರು ವರ್ಷಗಳ ಅವಧಿಯಲ್ಲಿ, ದೇಶದ ಕೃಷಿಭೂಮಿಯ ಶೇ 6ರಷ್ಟರಲ್ಲಿ ಮಾತ್ರ ಜೈವಿಕ ಬಲವರ್ಧಿತ ಬೆಳೆಗಳನ್ನು ಬೆಳೆಯಲಾಗಿದೆ. ಸೂಕ್ತ ಪ್ರೋತ್ಸಾಹಕಗಳಿಂದ ರೈತರ ಮನವೊಲಿಸಿ, ಈ ಪ್ರಮಾಣವನ್ನು ತ್ವರಿತ ಗತಿಯಲ್ಲಿ ಹೆಚ್ಚಿಸಿದರೆ ಮಾತ್ರ, ನಮ್ಮ ದೇಶದಲ್ಲಿರುವ ನ್ಯೂನಪೋಷಣೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಸಮಸ್ಯೆ ಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.