ಒಂದು ದೇಶ- ಒಂದು ಪರೀಕ್ಷೆ ಹೆಸರಿನಲ್ಲಿ ವೈದ್ಯಕೀಯ ಸೀಟುಗಳ ಪ್ರವೇಶಾತಿಗಾಗಿ ಪರಿಚಯಿಸಲಾದ ‘ನೀಟ್’ ಪರೀಕ್ಷೆ ವರ್ಷವೂ ಒಂದಲ್ಲ ಒಂದು ವಿವಾದಗಳಲ್ಲಿದ್ದು, ಈ ವರ್ಷ ಭಾರಿ ಪ್ರಮಾಣದ ಅಕ್ರಮದಲ್ಲಿ ಸಿಲುಕಿ ದೇಶದಾದ್ಯಂತ ತಲ್ಲಣಕ್ಕೆ ಕಾರಣವಾಗಿದೆ. ದೇಶಕ್ಕೆ ಮಾದರಿ ಅನ್ನುವಂತಹ ಸಿಇಟಿ ವ್ಯವಸ್ಥೆಯನ್ನು ಹೊಂದಿದ್ದ ಕರ್ನಾಟಕದಂತಹ ರಾಜ್ಯಗಳು ಈ ಹೊತ್ತಿನಲ್ಲಿ ನೀಟ್ ಥರದ ಪರೀಕ್ಷಾ ವ್ಯವಸ್ಥೆಯಲ್ಲಿ ಮುಂದುವರಿಯಬೇಕೆ ಅನ್ನುವ ಬಗ್ಗೆ ಗಂಭೀರವಾಗಿ ಅವಲೋಕಿಸಬೇಕಾದ ತುರ್ತಿದೆ.

ಈ ವರ್ಷದ ನೀಟ್ ಪರೀಕ್ಷೆಯು ಪ್ರಶ್ನೆಪತ್ರಿಕೆಗಳ ಸೋರಿಕೆ, 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ, ತಪ್ಪು ಉತ್ತರದ ಆಯ್ಕೆ, ಘೋಷಿತ ಫಲಿತಾಂಶದ ದಿನಾಂಕಕ್ಕಿಂತ ಹತ್ತು ದಿವಸ ಮೊದಲೇ ಫಲಿತಾಂಶದ ಘೋಷಣೆ, ಹಿಂದೆಂದೂ ಕಾಣದ ರೀತಿಯಲ್ಲಿ 67 ಮಕ್ಕಳು 720ಕ್ಕೆ 720 ಅಂಕ ಪಡೆದುಕೊಂಡಿದ್ದು, ಒಂದೇ ಪರೀಕ್ಷಾ ಕೇಂದ್ರದ 8 ಮಕ್ಕಳು ಈ ಪಟ್ಟಿಯಲ್ಲಿ ಇದ್ದದ್ದು, ಹೀಗೆ ಸಾಲು ಸಾಲು ಎಡವಟ್ಟುಗಳಿಂದ ವಿದ್ಯಾರ್ಥಿಗಳು ಮತ್ತು ಪಾಲಕರ ನಂಬಿಕೆ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು.

ಭಾರತದಂತಹ ಹಲವು ಭಾಷಿಕರ ನಾಡಿನಲ್ಲಿ ವಿಕೇಂದ್ರೀಕೃತವಾದ ವ್ಯವಸ್ಥೆಯನ್ನು ಕೈಬಿಟ್ಟು, ಕೇಂದ್ರೀಕರಿಸುವ ಇಂತಹ ಪರೀಕ್ಷಾ ಏರ್ಪಾಡುಗಳು ದೇಶಕ್ಕೆ ಅನುಕೂಲಕ್ಕಿಂತ ತೊಂದರೆಯನ್ನೇ ಹೆಚ್ಚು ಉಂಟು ಮಾಡುತ್ತಿವೆಯೇ? ಒಕ್ಕೂಟ ವ್ಯವಸ್ಥೆ, ಸಾಮಾಜಿಕ ನ್ಯಾಯ, ನಗರ ಮತ್ತು ಹಳ್ಳಿಗಳ ನಡುವಿನ ಕಂದರ... ಹೀಗೆ ಹಲವು ಆಯಾಮಗಳಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆ.

ಭಾರತದ ಶಕ್ತಿ ವಿವಿಧತೆಯಲ್ಲಿ ಏಕತೆ. ಈ ಹಲತನ ಬ್ರಿಟಿಷರಿಂದ ಹುಟ್ಟಿದ್ದಲ್ಲ. ಸಾವಿರಾರು ವರ್ಷಗಳಿಂದ ಸಹಜವಾಗಿ ರೂಪುಗೊಂಡದ್ದು. ಸಂವಿಧಾನ ರಚಿಸುವವರು ಅದನ್ನು ಮನಗಂಡಿದ್ದರಿಂದಲೇ ಭಾಷಾವಾರು ರಾಜ್ಯಗಳು ಸ್ಥಾಪನೆಯಾಗಿದ್ದು ಮತ್ತು ಆಯಾ ರಾಜ್ಯದಲ್ಲಿ ಅಲ್ಲಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಮೇಲೆ ಮಕ್ಕಳ ಕಲಿಕೆಯ ಏರ್ಪಾಡು ಹೇಗಿರಬೇಕು ಅನ್ನುವ ನಿರ್ಧಾರ ಕೈಗೊಳ್ಳುವ ಬಹುಪಾಲು ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಕೊಟ್ಟಿದ್ದು. ನೀಟ್ ಥರದ ಪರೀಕ್ಷೆ ರಾಜ್ಯಗಳಿಗಿರುವ ಇಂತಹ ಸ್ವಾಯತ್ತತೆಯನ್ನು ಕಸಿದುಕೊಂಡಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 1994ರಲ್ಲಿ ಕರ್ನಾಟಕದಲ್ಲಿ ಅತ್ಯಂತ ಪಾರದರ್ಶಕವಾದ ಸಿಇಟಿ ವ್ಯವಸ್ಥೆಯನ್ನು ಜಾರಿಗೆ ತಂದು, ಸಾಮಾನ್ಯರಲ್ಲಿ ಸಾಮಾನ್ಯರು, ಹಳ್ಳಿಗಾಡಿನ ಮಕ್ಕಳು ಕೂಡ ಡಾಕ್ಟರ್, ಎಂಜಿನಿಯರ್ ಆಗುವ ಕನಸನ್ನು ನನಸಾಗಿಸಿತು. ಪಿಯುಸಿ ಮತ್ತು ಸಿಇಟಿಯ ಅಂಕಗಳೆರಡನ್ನೂ ಪರಿಗಣಿಸಿ ನೀಡಲಾಗುತ್ತಿದ್ದ ರ್ಯಾಂಕ್ ವ್ಯವಸ್ಥೆಯು ರಾಜ್ಯ ಸರ್ಕಾರಿ ಪಠ್ಯಕ್ರಮದ ಕಾಲೇಜುಗಳಲ್ಲಿ ಓದಿ ಬರುತ್ತಿದ್ದ ಮಕ್ಕಳಿಗೂ ಸಮಾನವಾದ ಅವಕಾಶ ಕಲ್ಪಿಸಿತ್ತು. ನೀಟ್ ಶುರುವಾಗುವವರೆಗೆ ನಡೆದ ಈ ವ್ಯವಸ್ಥೆಯಲ್ಲಿ ಸಾವಿರಾರು ಅತ್ಯುತ್ತಮ ಗುಣಮಟ್ಟದ ವೈದ್ಯರನ್ನು ಕರ್ನಾಟಕ ಹೊರ ತಂದಿದೆ. ಇಂದು ಬೆಂಗಳೂರಿನಂತಹ ಊರಿನಲ್ಲಿ ವೈದ್ಯಕೀಯ ಕ್ಷೇತ್ರ ಬಹುತೇಕ ಕನ್ನಡಿಗ ವೈದ್ಯರ ಕೈಯಲ್ಲೇ ಇದೆ ಅಂದರೆ ಅದಕ್ಕೆ ಕರ್ನಾಟಕದ ಸಿಇಟಿ ವ್ಯವಸ್ಥೆಯೂ ಒಂದು ದೊಡ್ಡ ಕೊಡುಗೆ ನೀಡಿದೆ.

ನೀಟ್ ಬರುತ್ತಲೇ ಕೆಲವು ಬದಲಾವಣೆಗಳು ಆದವು. ನೀಟ್ ಪರೀಕ್ಷೆ ಸಿಬಿಎಸ್ಇ ಪಠ್ಯಕ್ರಮದ ಮೇಲೆ ರೂಪುಗೊಂಡ ಕಾರಣಕ್ಕೆ ಪಿಯುಸಿಯಲ್ಲಿ ರಾಜ್ಯ ಪಠ್ಯಕ್ರಮದ ಕಾಲೇಜುಗಳು ಕಡಿಮೆಯಾಗತೊಡಗಿದವು. ಅದರ ಬೆನ್ನಲ್ಲೇ ರಾಜ್ಯ ಪಠ್ಯಕ್ರಮದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಖ್ಯೆ ತೀವ್ರವಾಗಿ ಕುಸಿಯಲು ಆರಂಭಿಸಿತು. ರಾಜ್ಯ ಪಠ್ಯಕ್ರಮವನ್ನೂ ಸಿಬಿಎಸ್ಇ ಪಠ್ಯಕ್ರಮದ ಮಟ್ಟಕ್ಕೆ ಏರಿಸಿದ್ದೇವೆ ಎಂದು ಸರ್ಕಾರಗಳು ಹೇಳಿದರೂ ಜನಸಾಮಾನ್ಯರು ಅದನ್ನು ನಂಬದ ಸ್ಥಿತಿ ಉಂಟಾಯಿತು. ಇಂದು ರಾಜ್ಯ ಪಠ್ಯಕ್ರಮದ ಶಾಲೆಗಳು ನಗರ ಪ್ರದೇಶಗಳಲ್ಲಿ ದುರ್ಬೀನು ಹಾಕಿಕೊಂಡು ಹುಡುಕುವ ಹಂತಕ್ಕೆ ಹೋಗಿವೆ. ಹೀಗೆ ಮೇಲ್ತುದಿಯಲ್ಲಿ ತಂದ ಒಂದು ಬದಲಾವಣೆ, ರಾಜ್ಯದ ಕಲಿಕಾ ವ್ಯವಸ್ಥೆಯನ್ನು ನೋಡ ನೋಡುತ್ತಲೇ ಬಲಹೀನಗೊಳಿಸಿದೆ.

ಇದರ ಜೊತೆಯಲ್ಲಿ ಹಲವು ಆಯ್ಕೆಗಳ ಪ್ರಶ್ನೆಗಳನ್ನು ಹೊಂದಿದ್ದ ಇಂತಹ ಪರೀಕ್ಷೆಗೆ ತರಬೇತಿ ಕೊಡುವ ಸಂಸ್ಥೆಗಳು ನಗರ ಪ್ರದೇಶಗಳಲ್ಲಿ ನಾಯಿಕೊಡೆಗಳಂತೆ ಹಬ್ಬಿ, ಇಂತಹ ಅನುಕೂಲವಿಲ್ಲದ ಹಳ್ಳಿಗಾಡಿನ ಬಡ ಮಕ್ಕಳನ್ನು ವ್ಯವಸ್ಥಿತವಾಗಿ ಹಿಂದಕ್ಕೆ ಉಳಿಸಿ, ನಗರ ಪ್ರದೇಶದ, ಕೋಚಿಂಗ್ ಸವಲತ್ತು ಇರುವ ಸಿರಿವಂತ ಮಕ್ಕಳು ಈ ಪರೀಕ್ಷೆಯಲ್ಲಿ ಹೆಚ್ಚೆಚ್ಚು ಅಂಕಗಳನ್ನು ಪಡೆದು ವೈದ್ಯಕೀಯ ಸೀಟುಗಳನ್ನು ಪಡೆಯುವಂತಹ ಬೆಳವಣಿಗೆಗೂ ಕಾರಣವಾಯಿತು. ಹಿಂದಿನ ಹತ್ತು ವರ್ಷಗಳ ನೀಟ್ ಫಲಿತಾಂಶದಲ್ಲಿ ಕೋಚಿಂಗ್ ಮೂಲಕ ಬಂದ ನಗರಪ್ರದೇಶಗಳ ಮಕ್ಕಳೇ ಹೆಚ್ಚಿರುವುದನ್ನು ಅಂಕಿಅಂಶಗಳೇ ಹೇಳುತ್ತಿವೆ.

ಒಂದೇ ಬಾರಿ ನೀಟ್ನಲ್ಲಿ ಯಶಸ್ವಿಯಾಗದವರು ಮತ್ತೆ ಮತ್ತೆ ಪ್ರಯತ್ನಿಸಿ ಒಳ್ಳೆಯ ರ್ಯಾಂಕ್ ಪಡೆಯುತ್ತಿರುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಅನ್ನುವ ಮಾಹಿತಿಯಿದೆ. ಇಂತಹ ಮರುಪ್ರಯತ್ನಕ್ಕೆ ಬೇಕಾದ ಸಾಮಾಜಿಕ ಬೆಂಬಲ ಮತ್ತು ಆರ್ಥಿಕ ಚೈತನ್ಯ ಸಹಜವಾಗಿಯೇ ನಗರ ಪ್ರದೇಶದ ಮೇಲ್ಮಧ್ಯಮ ವರ್ಗದ ಮಕ್ಕಳಲ್ಲಿ ಹೆಚ್ಚಿದೆ ಅನ್ನುವುದನ್ನು ಇಲ್ಲಿ ಮನಗಾಣಬೇಕಿದೆ. ಈಗಿರುವ ವ್ಯವಸ್ಥೆಯಲ್ಲಿ ಮುಂದಿನ 25 ವರ್ಷಗಳಲ್ಲಿ ಕರ್ನಾಟಕದಿಂದ ಹೆಚ್ಚೆಚ್ಚು ನಗರ ಪ್ರದೇಶದ ಮಕ್ಕಳೇ ವೈದ್ಯರಾಗುವ ಸಾಧ್ಯತೆ ಇದ್ದು, ವೈದ್ಯರ ಕೊರತೆ ಹೆಚ್ಚಿರುವ ಹಳ್ಳಿ-ಪಟ್ಟಣಗಳಲ್ಲಿನ ಸ್ಥಿತಿ ಹಾಗೆಯೇ ಮುಂದುವರಿಯಬಹುದು.

ಎಲ್ಲರೂ ನಗರಗಳತ್ತ ಹೊರಟಿರುವಾಗ ನಗರ ಪ್ರದೇಶಗಳಲ್ಲಿ ಓದಿ, ಬೆಳೆದ ಮಕ್ಕಳು ವೈದ್ಯರಾಗಿ ಹಳ್ಳಿಗಳಲ್ಲಿ ಸೇವೆಗೆ ಬರುವ ಸಾಧ್ಯತೆ ಎಷ್ಟಿದೆ? ಅದೆಲ್ಲವೂ ಅಣ್ಣಾವ್ರ ಸಿನಿಮಾಗಳ ಕಾಲಕ್ಕೆ ಸರಿಯೇನೊ! ಇದಲ್ಲದೇ ದೊಡ್ಡ ಮಟ್ಟದಲ್ಲಿ ವಲಸೆ ಎದುರಿಸುತ್ತಿರುವ ನಮ್ಮ ನಗರ ಪ್ರದೇಶಗಳಲ್ಲಿ ದಿನೇದಿನೇ ಕನ್ನಡೇತರರ ಪ್ರಮಾಣವೂ ಹೆಚ್ಚುತ್ತಿದೆ. ಹೀಗೆ ನೆಲಸಿರುವವರ ಮಕ್ಕಳು ಕಾಲಕ್ರಮೇಣ ಈ ವ್ಯವಸ್ಥೆಯಲ್ಲಿ ರಾಜ್ಯದ ಕೋಟಾದಡಿಯಲ್ಲೇ ಸೀಟು ಪಡೆಯುತ್ತ ಕರ್ನಾಟಕದಲ್ಲೇ ಕನ್ನಡದ ಮಕ್ಕಳಿಗೆ ಇರುವ ಅವಕಾಶಗಳು ಕಡಿಮೆಯಾಗುತ್ತಿರುವುದು ಈ ವ್ಯವಸ್ಥೆಯ ಇನ್ನೂ ಒಂದು ವ್ಯಂಗ್ಯದ ಮುಖ.

ಅಮೆರಿಕದ ನಾಸಿಮ್ ನಿಕೋಲಸ್ ತಾಲೇಬ್ ಈ ಹೊತ್ತಿನ ಪ್ರಮುಖ ಚಿಂತಕರಲ್ಲಿ ಒಬ್ಬರು. ಅವರು ತಮ್ಮ ‘ಆ್ಯಂಟಿಫ್ರ್ಯಾಜೈಲ್’ ಎಂಬ ಪುಸ್ತಕದಲ್ಲಿ ಹೇಳುವಂತೆ, ವ್ಯವಸ್ಥೆಯೊಂದು ಎಷ್ಟು ವಿಕೇಂದ್ರೀಕೃತವಾಗಿ ಇರುತ್ತದೆಯೋ ಅಷ್ಟೇ ಅದು ಬದಲಾವಣೆಗೆ ತೆರೆದುಕೊಂಡಿರುತ್ತದೆ ಮತ್ತು ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಎದುರಾಗುವ ಯಾವುದೇ ತೊಂದರೆಯು ಒಂದು ಸಣ್ಣ ಭಾಗವೊಂದನ್ನಷ್ಟೇ ಪ್ರಭಾವಿಸುವುದರಿಂದ, ಇಡೀ ವ್ಯವಸ್ಥೆಯೇ ಕುಸಿದು ಬೀಳುವಂತಹ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.

ನೀಟ್ನಲ್ಲಿ ನಡೆದಿರುವ ಅಕ್ರಮ ಇಡೀ ದೇಶದ 25 ಲಕ್ಷಕ್ಕೂ ಹೆಚ್ಚು ಮಕ್ಕಳ ಮೇಲೆ ಬೀರಿರುವ ಪರಿಣಾಮವನ್ನು ಗಮನಿಸಿದಾಗ, ವಿಕೇಂದ್ರೀಕೃತವಾದ ವ್ಯವಸ್ಥೆ ಎಷ್ಟು ಮುಖ್ಯ ಅನ್ನುವುದು ಅರಿವಾಗಬಹುದು. ಒಂದು ದೇಶ- ಒಂದು ವ್ಯವಸ್ಥೆ ಅನ್ನುವುದು ಅತ್ಯಂತ ಸರಳೀಕರಿಸಿದ ವಾದವಾಗಿ ಕೇಳುವುದರಿಂದ ಕಿವಿಗೇನೋ ಇಂಪಾಗಿಯೇ ಕೇಳಿಸುತ್ತದೆ. ಆದರೆ ಈ ವರ್ಷ ನಡೆದಂತಹ ಪ್ರಕರಣಗಳು ಇಂತಹ ವಾದಗಳಿಗಿರುವ ಮಿತಿಯನ್ನು ತೋರಿಸುತ್ತಿವೆ.

ರಾಜ್ಯ ಸರ್ಕಾರ ಈ ದಿಸೆಯಲ್ಲಿ ಏನು ಮಾಡಬಹುದು? ನೀಟ್ ಥರದ ಪರೀಕ್ಷೆಯ ತೊಡಕುಗಳ ಕುರಿತು ಕರ್ನಾಟಕದ ಮೂರೂ ಪಕ್ಷಗಳ ನಾಯಕರು ಬೇರೆ ಬೇರೆ ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಈಗ ಅದರತ್ತ ಒಂದು ಸ್ಪಷ್ಟವಾದ ನಿಲುವು ಕೈಗೊಳ್ಳುವ ಅವಕಾಶ ಅವರೆದುರು ಇದೆ. ಸಂವಿಧಾನದ ರಾಜ್ಯ ಪಟ್ಟಿಯಲ್ಲಿ ಶೆಡ್ಯೂಲ್ 7ರ ಅಡಿ 32ನೇ ಅಂಶದ ಅನ್ವಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದು, ನಡೆಸುವುದು, ಮುಚ್ಚುವುದು ಎಲ್ಲವೂ ಬರೀ ರಾಜ್ಯ ಸರ್ಕಾರದ ಕೈಯಲ್ಲಿದೆ. ಪ್ರವೇಶ ಪರೀಕ್ಷೆ ಮತ್ತು ಪದವಿ ನೀಡುವ ವಿಷಯದಲ್ಲಿನ ನಿಯಂತ್ರಣವೂ ಇದರಲ್ಲಿ ಸೇರಿದೆ. ಇದನ್ನು ಬಳಸಿಕೊಂಡು ರಾಜ್ಯ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿನ ಪ್ರವೇಶಾತಿಯನ್ನು ನೀಟ್ ವ್ಯವಸ್ಥೆಯ ಹೊರಗಿರಿಸುವ ಆಯ್ಕೆ ರಾಜ್ಯ ಸರ್ಕಾರಕ್ಕಿದೆ.

ರಾಜ್ಯ ಸರ್ಕಾರ ಬಯಸಿದರೆ, ವೈದ್ಯಕೀಯ ಶಿಕ್ಷಣದ ಪ್ರವೇಶಾತಿಯ ವಿಷಯದಲ್ಲಿ ಕಳೆದುಹೋಗಿರುವ ತನ್ನ ಸ್ವಾಯತ್ತತೆಯನ್ನು ಇದರ ಮೂಲಕವೇ ಮರಳಿ ಪಡೆಯುವ ಪ್ರಯತ್ನ ಶುರು ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.