ಅಮೆರಿಕದ ಡಾಲರ್ ಎದುರು ಕುಸಿಯುತ್ತಲೇ ಇರುವ ರೂಪಾಯಿ ಮೌಲ್ಯವು ಗುರುವಾರದ ಕೊನೆಗೆ ₹ 79.99ಕ್ಕೆ ತಲುಪಿದೆ. ಈ ವರ್ಷದ ಆರಂಭದಲ್ಲಿ ಇದ್ದ ಮಟ್ಟಕ್ಕೆ ಹೋಲಿಸಿದರೆ ರೂಪಾಯಿ ಮೌಲ್ಯವು ಡಾಲರ್ ಎದುರು ಶೇಕಡ 7.05ರಷ್ಟು ಕುಸಿದಿದೆ. ವರ್ಷದ ಆರಂಭದಲ್ಲಿ ರೂಪಾಯಿ ಮೌಲ್ಯವು ₹ 74.31 ಆಗಿತ್ತು. ಹೀಗಿದ್ದರೂ, ರೂಪಾಯಿಯು ಯೂರೊ, ಪೌಂಡ್ ಮತ್ತು ಯೆನ್‌ಗಿಂತ ಉತ್ತಮ ಸ್ಥಿತಿಯಲ್ಲಿದೆ. ಈ ಮೂರು ಕರೆನ್ಸಿಗಳು ಡಾಲರ್ ಎದುರು ಕ್ರಮವಾಗಿ ಶೇ 11.86ರಷ್ಟು, ಶೇ 12.14ರಷ್ಟು ಮತ್ತು ಶೇ 18.88ರಷ್ಟು ಕುಸಿದಿವೆ. ರೂಪಾಯಿ ಮೌಲ್ಯ ಕುಸಿದಿರುವುದಕ್ಕೆ ಹಲವು ಕಾರಣಗಳು ಇವೆ.

ಈ ವರ್ಷದಲ್ಲಿ ಡಾಲರ್ ಸೂಚ್ಯಂಕವು ಸರಿಸುಮಾರು ಶೇ 13ರಷ್ಟು ಏರಿಕೆ ಕಂಡಿದೆ. ರಷ್ಯಾ–ಉಕ್ರೇನ್ ಯುದ್ಧದ ಪರಿಣಾಮ ಹಾಗೂ ಜಾಗತಿಕ ಆರ್ಥಿಕ ಸ್ಥಿತಿಯ ಮುನ್ನೋಟ ಅಷ್ಟೇನೂ ಚೆನ್ನಾಗಿಲ್ಲದ ಕಾರಣ, ಹೂಡಿಕೆದಾರರು ಸುರಕ್ಷಿತ ಹೂಡಿಕೆ ಆಯ್ಕೆಗಳನ್ನು ಅರಸುತ್ತಿದ್ದಾರೆ. 2022ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ದರವು ಶೇ 3.6ರಷ್ಟು ಇರಲಿದೆ ಎಂದು ಅಂತರ
ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಚಿರುವ ಹಣದುಬ್ಬರ, ಬಡ್ಡಿ ದರ ಹೆಚ್ಚಾಗುತ್ತಿರುವುದು, ರಷ್ಯಾ ಮೇಲಿನ ನಿರ್ಬಂಧಗಳು ಜಾಸ್ತಿಯಾಗುತ್ತಿರುವುದು, ಚೀನಾದಲ್ಲಿ ಆರ್ಥಿಕ ಬೆಳವಣಿಗೆಯ ವೇಗ ತಗ್ಗುತ್ತಿರುವ ಕಾರಣಗಳಿಂದಾಗಿ ಆರ್ಥಿಕ ಹಿಂಜರಿತ ಶುರುವಾಗುವ ಸಾಧ್ಯತೆಯನ್ನು ಐಎಂಎಫ್ ಅಲ್ಲಗಳೆದಿಲ್ಲ.

ಅಮೆರಿಕದ ಡಾಲರ್, ಜಾಗತಿಕ ಮಟ್ಟದಲ್ಲಿ ಮೀಸಲು ಕರೆನ್ಸಿ ಇದ್ದಂತೆ. ಈಗ ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯು ಅಮೆರಿಕದ ಡಾಲರ್ ಮೌಲ್ಯವರ್ಧನೆಗೆ ನೆರವಾಗುತ್ತಿದೆ. ಅಮೆರಿಕದ ಟ್ರೆಷರಿ ಬಾಂಡ್‌ಗಳು ಹಣಕಾಸು ಜಗತ್ತಿನಲ್ಲಿ ಅತ್ಯಂತ ಸುರಕ್ಷಿತ ಹೂಡಿಕೆ ಉತ್ಪನ್ನಗಳು ಎಂದು ಪರಿಗಣಿತವಾಗಿವೆ.

ವಿಶ್ವಬ್ಯಾಂಕ್ ಹೇಳಿರುವಂತೆ, ಚೀನಾದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆಯು ಕೋವಿಡ್ ಸಂಬಂಧಿತ ನಿರ್ಬಂಧಗಳ ಕಾರಣದಿಂದಾಗಿ ಈ ವರ್ಷ ಶೇ 0.80ರಷ್ಟು ತಗ್ಗುವ ಸಾಧ್ಯತೆ ಇದೆ. ಚೀನಾವು ಕೋವಿಡ್ ವಿಚಾರದಲ್ಲಿ ಕಠಿಣ ನಿಲುವು ತಳೆದಿದೆ. ಹೀಗಾಗಿ, ಅದು ನಿರ್ಬಂಧಗಳು ಮತ್ತು ಲಾಕ್‌ಡೌನ್ ಮೊರೆ ಹೋಗುತ್ತಿದೆ. ಈ ಕ್ರಮಗಳು ಮುಂದಿನ ವರ್ಷದವರೆಗೂ ಮುಂದುವರಿಯಬಹುದು.

ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್, ಹಣದುಬ್ಬರ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಬಿಗಿಯಾದ ಆರ್ಥಿಕ ನಿಲುವು ತಳೆಯುತ್ತಿದೆ. ಹಣದುಬ್ಬರವು ಅಮೆರಿಕದಲ್ಲಿ ಆದಾಯ– ವೇತನ ಏರಿಕೆಯ ಪ್ರಯೋಜನವನ್ನು ಅಳಿಸಿಹಾಕಿದೆ. ಫೆಡರಲ್ ರಿಸರ್ವ್ ಬಡ್ಡಿ ದರ ಹೆಚ್ಚಿಸುತ್ತಿದೆ. ಅದು ಬಡ್ಡಿ ದರವನ್ನು ಈಗಾಗಲೇ ಶೇ 1.50ರಷ್ಟು ಜಾಸ್ತಿ ಮಾಡಿದೆ. ವರ್ಷಾಂತ್ಯದ ವೇಳೆಗೆ ಬಡ್ಡಿ ದರವನ್ನು ಶೇ 3.40ಕ್ಕೆ ಏರಿಸುವ ನಿರೀಕ್ಷೆ ಇದೆ. ಹಣದುಬ್ಬರವು ತಕ್ಷಣಕ್ಕೆ ಕಡಿಮೆ ಆಗಲಿಕ್ಕಿಲ್ಲ ಎಂಬ ವಿಚಾರವಾಗಿ ಅಲ್ಲಿನ ನೀತಿ ನಿರೂಪಕರು ಕಳವಳ ಹೊಂದಿದ್ದಾರೆ ಎಂಬುದನ್ನು ಫೆಡರಲ್ ರಿಸರ್ವ್ ಸಭೆಯ ನಡಾವಳಿ ತೋರಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸರಕುಗಳ ಬೆಲೆಯು ಹಲವು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಕೋವಿಡ್–19ರಿಂದಾಗಿ ಪೂರೈಕೆ ವ್ಯವಸ್ಥೆಯಲ್ಲಿ ಉಂಟಾದ ಅಡ್ಡಿಗಳು, ಉಕ್ರೇನ್–ರಷ್ಯಾ ಯುದ್ಧದ ಕಾರಣದಿಂದಾಗಿ ಆ ಅಡ್ಡಿಗಳು ಇನ್ನಷ್ಟು ತೀವ್ರಗೊಂಡಿದ್ದು, ಚೀನಾದಲ್ಲಿನ ನಿರ್ಬಂಧಗಳು ಈ ಬಗೆಯ ತೊಡಕುಗಳನ್ನು ಮತ್ತಷ್ಟು ಹೆಚ್ಚಿಸಿರುವುದು ಬೆಲೆ ಏರಿಕೆಗೆ ಕಾರಣಗಳು. ಡಬ್ಲ್ಯುಟಿಐ ಕಚ್ಚಾ ತೈಲವು ಪ್ರತೀ ಬ್ಯಾರೆಲ್‌ಗೆ 130 ಡಾಲರ್‌ಗೂ ಏರಿಕೆ ಆಗಿತ್ತು.

ರಷ್ಯಾದ ತೈಲದ ಮೇಲೆ ಹೇರಿರುವ ಆರ್ಥಿಕ ನಿರ್ಬಂಧಗಳ ಪರಿಣಾಮವಾಗಿ ಮತ್ತು ರಷ್ಯಾ ದೇಶವು ಯುರೋಪಿನ ಕೆಲವು ದೇಶಗಳಿಗೆ ಅನಿಲ ಪೂರೈಕೆ ತಡೆಹಿಡಿದಿರುವ ಪರಿಣಾಮವಾಗಿ ಯುರೋಪಿನಲ್ಲಿ ಇಂಧನ ಕೊರತೆ ತೀವ್ರವಾಗಿದೆ. ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತ ಎದುರಾಗುವ ಸಾಧ್ಯತೆ ಇದೆ.

ಸರಕುಗಳ ಬೆಲೆ ಹೆಚ್ಚಾಗಿರುವುದು, ಜಗತ್ತಿನ ಎಲ್ಲೆಡೆ ಹಣದುಬ್ಬರ ಪ್ರಮಾಣ ತೀವ್ರ ಹೆಚ್ಚಾಗಲು ಕಾರಣವಾಗಿದೆ. ಭಾರತದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ದರವು ಜೂನ್‌ನಲ್ಲಿ ಶೇ 7.01ಕ್ಕೆ ತಲುಪಿದೆ. ಇದು ಆರ್‌ಬಿಐ ನಿಗದಿ ಮಾಡಿಕೊಂಡಿರುವ ಮಿತಿಗಿಂತ (ಶೇ 4) ಜಾಸ್ತಿ. ಜಗತ್ತಿನ ಹಲವು ಪ್ರಮುಖ ದೇಶಗಳು ಹಣದುಬ್ಬರದ ವಿರುದ್ಧ ಸೆಣಸುತ್ತಿವೆ. ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಹಣದುಬ್ಬರ ಪ್ರಮಾಣವು ನಾಲ್ಕು ದಶಕಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಯೂರೊ ವಲಯದಲ್ಲಿಯೂ ಹಣದುಬ್ಬರ ಜಾಸ್ತಿಯಾಗಿದೆ. ಅರ್ಥ ವ್ಯವಸ್ಥೆಯ ಚೇತರಿಕೆಯ ಬಗ್ಗೆ ಮೂಡಿರುವ ಕಳವಳವು ಗ್ರಾಹಕರ ವಿಶ್ವಾಸವನ್ನು ಕುಗ್ಗಿಸಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2021ರ ಅಕ್ಟೋಬರ್‌ನಿಂದ ದೇಶದ ಷೇರು ಮಾರುಕಟ್ಟೆಗಳಿಂದ ಹಣವನ್ನು ನಿರಂತರವಾಗಿ ಹಿಂದಕ್ಕೆ ಪಡೆಯುತ್ತಿದ್ದಾರೆ. ಅವರು ಒಟ್ಟು ₹ 2.89 ಲಕ್ಷ ಕೋಟಿ ಬಂಡವಾಳ ಹಿಂಪಡೆದಿದ್ದಾರೆ. ಜೂನ್ ತಿಂಗಳಿನಲ್ಲೇ ಅವರು ₹58 ಸಾವಿರ ಕೋಟಿ ಹಿಂಪಡೆದಿದ್ದಾರೆ. 2020ರ ಮಾರ್ಚ್‌ನಲ್ಲಿ ಲಾಕ್‌ಡೌನ್ ಜಾರಿಯಾದ ನಂತರ ಅವರು ತಿಂಗಳೊಂದರಲ್ಲಿ ಹಿಂಪಡೆದಿರುವ ಅತಿದೊಡ್ಡ ಮೊತ್ತ ಇದು. ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಾಗುತ್ತಿರುವುದು ಹಾಗೂ ರಿಸ್ಕ್ ಹೆಚ್ಚಿರುವ ಹೂಡಿಕೆ ಬೇಡ ಎಂಬ ಮನೋಭಾವವೇ ಹೂಡಿಕೆ ಹಿಂದಕ್ಕೆ ಪಡೆಯುತ್ತಿರುವುದಕ್ಕೆ ಮುಖ್ಯ ಕಾರಣ.

ದೇಶದ ಷೇರು ಮಾರುಕಟ್ಟೆಗಳಲ್ಲಿನ ವಾತಾವರಣ ಕೂಡ ತೇಜಿ ಇಲ್ಲ. ಷೇರು ಮಾರುಕಟ್ಟೆ ಸೂಚ್ಯಂಕಗಳು 2021ರ ಅಕ್ಟೋಬರ್‌ನಲ್ಲಿ ಕಂಡಿದ್ದ ದಾಖಲೆಯ ಗರಿಷ್ಠ ಮಟ್ಟದಿಂದ ಕೆಳಗಿಳಿದಿವೆ. ಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿ ಇದ್ದಾಗ ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಷೇರುಗಳನ್ನು ಮಾರಾಟ ಮಾಡಿದ್ದು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿ ತೇಜಿ ವಹಿವಾಟು ಇಲ್ಲದಿರುವುದು ಸೂಚ್ಯಂಕಗಳ ಇಳಿಕೆಗೆ ಕಾರಣ.

ಸದ್ಯದ ಪರಿಸ್ಥಿತಿಯಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಇನ್ನಷ್ಟು ಕಡಿಮೆಯಾ ಗಲಿದೆ. ಫೆಡರಲ್ ರಿಸರ್ವ್‌ನ ಬಿಗಿ ಹಣಕಾಸು ನೀತಿ, ಜಾಗತಿಕ ಮಟ್ಟದಲ್ಲಿನ ಹಿಂಜರಿತ, ರಿಸ್ಕ್ ಇರುವ ಹೂಡಿಕೆ ಗಳು ಬೇಡ ಎಂದು ಹೂಡಿಕೆದಾರರಿಗೆ ಅನಿಸಿರುವುದು ಮತ್ತು ದೇಶದಲ್ಲಿ ಹೆಚ್ಚಿರುವ ಹಣದುಬ್ಬರವು ಡಾಲರ್ ಮೌಲ್ಯವನ್ನು ಹೆಚ್ಚಿನ ಮಟ್ಟದಲ್ಲಿ ಇರಿಸಲಿವೆ.

ಹೀಗಿದ್ದರೂ, ಆರ್‌ಬಿಐ ಹಾಗೂ ಕೇಂದ್ರ ಸರ್ಕಾರ ಕೈಗೊಂಡಿರುವ ಕೆಲವು ಕ್ರಮಗಳಿಂದಾಗಿ ರೂಪಾಯಿ ಮೌಲ್ಯವು ತೀರಾ ಕುಸಿಯಲಿಕ್ಕಿಲ್ಲ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಆರ್‌ಬಿಐ ಆಗಾಗ ಮಧ್ಯಪ್ರವೇಶ ಮಾಡಿದೆ. ಆದರೆ, ಹಾಗೆ ಮಧ್ಯಪ್ರವೇಶ ಮಾಡಿರುವುದು ರೂಪಾಯಿ ಮೌಲ್ಯ ಕುಸಿತದ ವೇಗ ತಡೆಯಲು ಮಾತ್ರ. ಅಂತರರಾಷ್ಟ್ರೀಯ ವಹಿವಾಟುಗಳನ್ನು ರೂಪಾಯಿ ಮೂಲಕ ನಡೆಸಲು ಬೇಕಿರುವ ವ್ಯವಸ್ಥೆಯನ್ನು ಆರ್‌ಬಿಐ ಈಚೆಗೆ ರೂಪಿಸಿದೆ. ಭಾರತದಿಂದ ಆಗುವ ರಫ್ತಿಗೆ ಒತ್ತು ನೀಡಿ ಜಾಗತಿಕ ಮಟ್ಟದಲ್ಲಿ ವಹಿವಾಟು ಹೆಚ್ಚಿಸುವ ಉದ್ದೇಶ ಆರ್‌ಬಿಐಗೆ ಇದೆ. ಈಚಿನ ಕೆಲವು ತಿಂಗಳುಗಳಲ್ಲಿ ಭಾರತಕ್ಕೆ ಚಿನ್ನದ ಆಮದು ಹೆಚ್ಚಾಗಿ ಡಾಲರ್‌ಗೆ ಬೇಡಿಕೆ ಜಾಸ್ತಿ ಆಗಿತ್ತು. ಇದನ್ನು ತಡೆಯಲು ಕೇಂದ್ರವು ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ. ರೂಪಾಯಿ ಮೌಲ್ಯವು ಅಲ್ಪಾವಧಿಯಲ್ಲಿ ಅಮೆರಿಕದ ಡಾಲರ್ ಎದುರು ₹ 78ರಿಂದ 81ರ ಮಟ್ಟದಲ್ಲಿ ವಹಿವಾಟು ನಡೆಸುವ ಅಂದಾಜು ಇದೆ.

ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಒಂದಿಷ್ಟು ಹೆಚ್ಚಿಸಿದ ನಂತರ ತನ್ನ ಬಿಗಿ ಹಣಕಾಸು ನೀತಿಯನ್ನು ಬದಲಾಯಿಸಿ, ‘ಕಾದುನೋಡುವ ತಂತ್ರ’ದ ಮೊರೆ ಹೋದರೆ ರೂಪಾಯಿಯ ಗತಿ ಬದಲಾಗಬಹುದು. ಕೋವಿಡ್‌ನಿಂದಾಗಿ ಚೀನಾದ ಅರ್ಥ ವ್ಯವಸ್ಥೆಗೆ ಆಗಿರುವ ನಷ್ಟ ಒಂದಿಷ್ಟು ಸರಿಹೋದರೆ, ರಷ್ಯಾ–ಉಕ್ರೇನ್ ಯುದ್ಧಕ್ಕೆ ರಾಜತಾಂತ್ರಿಕ ಪರಿಹಾರವೊಂದು ಸಿಕ್ಕರೆ, ಆಗ ಕೂಡ ರೂಪಾಯಿಗೆ ಅಷ್ಟಿಷ್ಟು ಪ್ರಯೋಜನ ಆಗುತ್ತದೆ.

ಲೇಖಕ: ಶೇರ್‌ಖಾನ್ ಬ್ರೋಕರೇಜ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.