ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಕೇಳಲಾದ ಎರಡು ಕಾಲ್ಪನಿಕ ಪ್ರಶ್ನೆಗಳ ಬಗ್ಗೆ ಕರ್ನಾಟಕದ ಶಾಲೆಯೊಂದರಲ್ಲಿ ಚರ್ಚೆ ನಡೆಯುತ್ತಿತ್ತು.

ಪ್ರಶ್ನೆ 1: ಟಿಪ್ಪು ಯಾರು?

ಪ್ರಶ್ನೆ 2: ನಮ್ಮ ದೇಶಕ್ಕೆ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು ನೀಡಿದ ಕಾಣಿಕೆಗಳು ಯಾವುವು?

ಮೊದಲನೆಯ ವಿದ್ಯಾರ್ಥಿಯ ಹೇಳಿಕೆ ಹೀಗಿತ್ತು– ಟಿಪ್ಪು ಒಬ್ಬ ಧರ್ಮಾಂಧ, ಹಿಂದೂ ದ್ವೇಷಿ. ಅನೇಕ ಜನರ ಹತ್ಯೆಯನ್ನು ಬರ್ಬರವಾಗಿ ಮಾಡಿಸಿದವನು. ಮೈಸೂರು ಸಂಸ್ಥಾನದ ಒಡೆಯರನ್ನು ಮೋಸದಿಂದ ಪಕ್ಕಕ್ಕೆ ಸರಿಸಿ ರಾಜ್ಯವನ್ನು ಕಬಳಿಸಿದ ಕ್ರೂರಿ ಟಿಪ್ಪು ಸುಲ್ತಾನ. ಅವನು ಕನ್ನಡ ದ್ವೇಷಿ. ಕನ್ನಡವನ್ನು ತೆಗೆದು ಪರ್ಶಿಯನ್ ಭಾಷೆಯನ್ನು ರಾಜ್ಯಭಾಷೆಯನ್ನಾಗಿ ಮಾಡಿದ. ಅವನು ವೀರನೇ ಅಲ್ಲ. ಹೇಡಿಯಂತೆ ಓಡಿಹೋಗುತ್ತಿದ್ದವನನ್ನು ರಸ್ತೆಯಲ್ಲಿ ಓಡಾಡಿಸಿ ಕೊಂದರು ಸೈನಿಕರು.

ಗಾಂಧೀಜಿಯವರ ಅಂಧ ಪ್ರೀತಿಯಿಂದ ನೆಹರೂ ಪ್ರಧಾನಮಂತ್ರಿಯಾದವರು. ಇಂದಿನ ಭಾರತದ ಸಮಸ್ಯೆಗಳಿಗೆಲ್ಲ ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳೇ ಕಾರಣ. ಅವರ ಮೂರ್ಖತನದಿಂದ ಕಾಶ್ಮೀರದ ಸಮಸ್ಯೆ ಇನ್ನೂ ಕಗ್ಗಂಟಾಗಿದೆ. ಅವರ ಅಪ್ರಬುದ್ಧತೆಯಿಂದಾಗಿಯೇ ನಾವು ಭಾರತೀಯರು ತೈವಾನ್ ಮತ್ತು ಟಿಬೆಟ್ಗಳನ್ನು ಚೀನಾದ ಭೂಭಾಗ ಎಂದು ಒಪ್ಪಿಕೊಳ್ಳಬೇಕಾಯಿತು. ಚೀನಾ ನಮ್ಮ ಮೇಲೆ ದಾಳಿ ಮಾಡಿದಾಗ ನಾವು ಸೋತು ಅಪಮಾನಿತರಾದದ್ದು ನೆಹರೂ ಅವರ ತಪ್ಪು ನಡೆಗಳಿಂದ. ಮುಸ್ಲಿಮರ ಬಗ್ಗೆ ಅತಿಯಾದ ಉದಾರತೆಯನ್ನು ತೋರಿದ್ದರಿಂದಲೇ ಇಂದು ಭಾರತದಲ್ಲಿ ಧಾರ್ಮಿಕ ಅಸಮತೋಲನವಾಗುತ್ತಿದೆ.

ಎರಡನೆಯ ವಿದ್ಯಾರ್ಥಿಯ ಉತ್ತರ ಬೇರೆಯೇ ಆಗಿತ್ತು.

ಟಿಪ್ಪು ಒಬ್ಬ ಅಸಾಮಾನ್ಯ ವೀರ. ಅವನನ್ನು ‘ಮೈಸೂರು ಹುಲಿ’ ಎಂದೇ ಕರೆಯಲಾಗುತ್ತದೆ. ಅವನು ಸರ್ವಧರ್ಮಗಳನ್ನೂ ಸಮಾನವಾಗಿ ಕಂಡವನು. ನಂಜನಗೂಡಿನ ದೇವಾಲಯದ ಪಚ್ಚೆಲಿಂಗ ಸ್ಥಾಪನೆಗೆ, ದೇವನಹಳ್ಳಿಯ ವೇಣುಗೋಪಾಲಸ್ವಾಮಿ, ತಮಿಳುನಾಡಿನ ನಾಮಕಲ್ ಕೋಟೆಯ ರಂಗನಾಥ ಸ್ವಾಮಿ, ನರಸಿಂಹಸ್ವಾಮಿ, ಮೇಲುಕೋಟೆಯ ದೇವಸ್ಥಾನಗಳಿಗೆ ಅಪಾರವಾದ ದತ್ತಿಯನ್ನು ಕೊಟ್ಟವನು. ಅವನು ಬ್ರಿಟಿಷರ ವಿರುದ್ಧ ಮಾಡಿದ ಹೋರಾಟ ಅವರ ಚಕ್ರಾಧಿಪತ್ಯವನ್ನೇ ನಡುಗಿಸಿಬಿಟ್ಟಿತ್ತು. ಉಳುವವರಿಗೇ ಭೂಮಿ ಎಂದು ತೀರ್ಮಾನ ನೀಡಿದವರಲ್ಲಿ ಟಿಪ್ಪು ಸುಲ್ತಾನನೇ ಮೊದಲಿನವ. ಆತ ಕನ್ನಡದ ಬೆಳವಣಿಗೆಗೆ ಸದಾ ಪ್ರೋತ್ಸಾಹ ನೀಡಿದ. ದೇಶಕ್ಕಾಗಿ ಹೋರಾಡುತ್ತಾ ವೀರಮರಣವನ್ನು ಹೊಂದಿದವನು ಟಿಪ್ಪು.

ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರಲ್ಲಿ ಅಗ್ರಗಣ್ಯರಾದವರು ಜವಾಹರಲಾಲ್ ನೆಹರೂ ಅವರು. ಶ್ರೀಮಂತ ಮನೆತನದಿಂದ ಬಂದಿದ್ದರೂ ಹೋರಾಟಗಾರರ ಸರಳತೆಯನ್ನು ಅಪ್ಪಿಕೊಂಡವರು. ಸ್ವಾತಂತ್ರ್ಯ ದೊರಕಿದಾಗ ದೇಶವನ್ನು ಕಲಕಿದ ಕೋಮುವಾದದ ಬೆಂಕಿಯನ್ನು ಸಮರ್ಥವಾಗಿ ನಂದಿಸಿದವರು. ಪಂಚವಾರ್ಷಿಕ ಯೋಜನೆಯನ್ನು ರೂಪಿಸಿ ದೇಶಕ್ಕೆ ಸರಿಯಾದ ಬುನಾದಿಯನ್ನು ಹಾಕಿದವರು. ಅದ್ಭುತ ವಾಗ್ಮಿ, ಚೆಂದದ ಬರಹಗಾರ. ಎಲ್ಲ ದೇಶಗಳೊಡನೆ ಆತ್ಮೀಯ ಸಂಬಂಧವನ್ನು ಬೆಳೆಸಿದ ಚತುರ. ಸಮಾಜವಾದದಲ್ಲಿ, ಸರ್ವಧರ್ಮ ಸಮನ್ವಯದಲ್ಲಿ ಬಲವಾದ ನಂಬಿಕೆಯಿದ್ದ ಅಸಾಮಾನ್ಯ ಆಡಳಿತಗಾರ.

ಮೂರನೆಯ ವಿದ್ಯಾರ್ಥಿ ಹೇಳಿದ:

ಈ ಎರಡೂ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವ ಮೊದಲು, ಆಗ ಯಾವ ಸರ್ಕಾರ ಆಡಳಿತದಲ್ಲಿತ್ತು ಎನ್ನುವುದು ಮುಖ್ಯವಾಗುತ್ತದೆ. ‘ಬಿ’ ಸರ್ಕಾರ ಆಡಳಿತ ಮಾಡುತ್ತಿದ್ದರೆ ಮೊದಲನೆಯ ವಿದ್ಯಾರ್ಥಿಯ ಉತ್ತರವೇ ನನ್ನ ಉತ್ತರ. ಒಂದು ವೇಳೆ ‘ಸಿ’ ಸರ್ಕಾರದ ಆಡಳಿತ ನಡೆಯುತ್ತಿದ್ದರೆ ಎರಡನೆಯ ವಿದ್ಯಾರ್ಥಿಯ ಉತ್ತರ ಸರಿಯಾದದ್ದು.

ಇದು ಮೇಲ್ನೋಟಕ್ಕೆ ತಮಾಷೆ ಎನ್ನಿಸಿದರೂ, ಇದು ನಮ್ಮ ವಿದ್ಯಾರ್ಥಿಗಳ ಕರ್ಮ. ಯಾವುದು ಸರಿ? ಸರ್ಕಾರಗಳು ಬದಲಾದಾಗಲೆಲ್ಲ ಸತ್ಯ ಬದಲಾಗುತ್ತದೆಯೇ? ಪ್ರತಿಯೊಬ್ಬರೂ, ಇನ್ನೊಬ್ಬರು ಇತಿಹಾಸವನ್ನು ತಿರುಚಿದ್ದಾರೆ ಎಂದು ಕೂಗು ಹಾಕುತ್ತಾರೆ. ಯಾವುದು ಸರಿಯಾದ ಇತಿಹಾಸ? ತಿರುಚಿದವರು ಯಾರು? ಯಾಕೆ ತಿರುಚುತ್ತಾರೆ? ಆಡಳಿತ ವರ್ಗಕ್ಕೆ ಸೇರಿದ ಪಕ್ಷದ ಧ್ಯೇಯೋದ್ದೇಶಗಳೇನಿದ್ದರೂ ಗೊಂದಲಕ್ಕೆ ಈಡಾಗುವವರು ಮಕ್ಕಳೇ. ಹಿಂದಿನ ವರ್ಷ ಕಲಿತದ್ದು ಸರಿಯೇ, ಈ ವರ್ಷ ಮಾಡಲಾದ ತಿದ್ದುಪಡಿ ಸರಿಯೇ? ಶಿಕ್ಷಕರು ಪಾಠ ಮಾಡುವುದು ಹೇಗೆ?

ನಿಜವಾದ ಇತಿಹಾಸ ಯಾವುದು? ‘ಇತಿಹಾಸ’ ಎನ್ನುವ ಪದದ ಅರ್ಥವೇ ‘ಇದು ನಡೆದದ್ದು ಹೀಗೆ’. ಇದು ಹೀಗೆಯೇ ನಡೆದದ್ದು ಎಂದು ಹೇಳುವವರು ಯಾರು? ಅದಕ್ಕೆ ಸರಿಯಾದ ಸಾಕ್ಷ್ಯಗಳಿವೆಯೇ? ಎರಡು ಪಂಗಡದವರೂ ಸಾಕ್ಷ್ಯಗಳಿವೆ ಎಂತಲೇ ಹೇಳುತ್ತಾರೆ. ಅದಕ್ಕೆ ಕೆಲವು ಪೂರಕವಾದ ಗ್ರಂಥಗಳನ್ನೂ ಉಲ್ಲೇಖ ಮಾಡುತ್ತಾರೆ. ನಮ್ಮಲ್ಲಿ ಇಬ್ಬರನ್ನೂ ಸಂತೈಸುವಂತಹ ಗ್ರಂಥಗಳಿವೆ. ಮಹಾತ್ಮ ಗಾಂಧಿಯಿಂದ ದೇಶಕ್ಕೆ ಅಪಚಾರವಾದಷ್ಟು ಇನ್ನಾರಿಂದಲೂ ಆಗಲಿಲ್ಲ ಎಂದು ದೀರ್ಘವಾಗಿ ವಿವರಿಸುವ ಗ್ರಂಥಗಳಿದ್ದಂತೆ, ಅವರೊಬ್ಬರೇ ಮಹಾತ್ಮ, ಮಹಾನ್ ಸಂತ ಎಂದು ದೈವತ್ವಕ್ಕೇರಿಸಿ ಕಣ್ಣು ಮುಚ್ಚಿಸುವ ಗ್ರಂಥಗಳೂ ಇವೆ. ವಿವೇಕಾನಂದರು ಭಾರತದ ಚೈತನ್ಯದ ಆತ್ಮ, ತರುಣರ ಆರಾಧ್ಯದೈವ ಎಂದು ವರ್ಣಿಸುವ ನೂರಾರು ಗ್ರಂಥಗಳಿವೆ. ಹಾಗೆಯೇ ಅವರೊಬ್ಬ ಸಿಗರೇಟು ಸೇದುವ, ಮಹಿಳೆಯರನ್ನು ಓಲೈಸುವ ಮೋಜುಗಾರ ಎಂದು ತಿಳಿಸಲು ಪ್ರಯತ್ನಿಸುವ ಒಂದೆರಡು ಗ್ರಂಥಗಳೂ ಇವೆ.

ಯಾವುದನ್ನು ಆಯ್ದುಕೊಳ್ಳಬೇಕು ಎನ್ನುವುದು ನಮ್ಮ ಮನೋಧರ್ಮವನ್ನು ಅವಲಂಬಿಸಿದೆ. ಸಾವಿರ ಉತ್ತಮ ವಸ್ತುಗಳ ನಡುವೆ ಇದ್ದ ಎರಡು ಕೊಳಕುಗಳನ್ನು ಎತ್ತಿ ತೋರುವ ಮನೋಧರ್ಮವಿದ್ದಂತೆ, ಎದ್ದು ಕಾಣುವಂತೆ ಮಾಡಿದ ಅಪರಾಧಗಳನ್ನು ಅನವಶ್ಯಕವಾದ ಔದಾರ್ಯದಿಂದ ಕಂಡು, ಮರೆಮಾಚುವ ಮನೋಧರ್ಮವೂ ಇದೆ.

ಇದು ಒಂದು ರೀತಿಯ ವೈಚಾರಿಕ ಮೇಲಾಟ. ನಮ್ಮ ಮನಸ್ಸಿಗೆ ಒಪ್ಪಿತವಾದದ್ದನ್ನು ಸಾಧಿಸುವ ದೃಷ್ಟಿಯಿಂದ, ನಮ್ಮ ಚಿಂತನೆಗೇ ಒಗ್ಗುವಂತಹ ವಿಚಾರಗಳನ್ನು, ಅವೆಷ್ಟೇ ವಿರಳವಾಗಿದ್ದರೂ ಹೆಕ್ಕಿ ಹೆಕ್ಕಿ, ಜೋಡಿಸಿ ಸಮರ್ಥಿಸಿಕೊಳ್ಳುವ ಕಸರತ್ತು. ಎರಡು ಕಡೆಗೂ ವಿಭಿನ್ನ ವಿಚಾರಧಾರೆಯ ‘ವಿದ್ವಾಂಸರು’ ಇದ್ದಾರೆ. ಅವರು ತಾವು ಹೇಳಿದ್ದೇ ಸತ್ಯ ಎಂದು ಎತ್ತರದ ಧ್ವನಿಯಲ್ಲಿ ಕೂಗುತ್ತಾರೆ.

ನೂರು ವರ್ಷದ ಹಿಂದೆ ನಡೆದದ್ದು ನಮಗೆ ತುಂಬ ಮಸುಕಾಗಿದೆ. ನಮ್ಮ ದೇಶದಲ್ಲಿ ಚರಿತ್ರೆಯ ದಾಖಲೆ ಅಷ್ಟು ವ್ಯವಸ್ಥಿತವಾಗಿಲ್ಲ. ನಮ್ಮ ಬಹಳಷ್ಟು ಪುರಾತನ ದಾಖಲೆಗಳು ಸಾಹಿತ್ಯಿಕವಾಗಿ ದೊರಕಿದಂತಹವು. ಇತಿಹಾಸವು ಸಾಹಿತ್ಯವಾದಾಗ ಒಂದಷ್ಟು ರಂಜಕವಾದ, ಕೊಂಚ ಉತ್ಪ್ರೇಕ್ಷಿತವಾದ, ಪವಾಡಸದೃಶ ವಿವರಗಳು ಸೇರಿಕೊಳ್ಳುತ್ತವೆ. ಅದು ಸಹಜ. ಇದ್ದದ್ದನ್ನು ಇದ್ದಂತೆಯೇ ಹೇಳಿದರೆ ಅದು ವೃತ್ತಪತ್ರಿಕೆಯ ವರದಿಯಾಗುತ್ತದೆ, ಸಾಹಿತ್ಯಕೃತಿಯಾಗುವುದಿಲ್ಲ. ಐದಾರು ನೂರು ಅಥವಾ ಸಾವಿರಾರು ವರ್ಷಗಳ ಹಿಂದಿನ ಘಟನೆಗಳನ್ನು ಪರಂಪರೆಯಲ್ಲಿ ಬಂದ ನಂಬಿಕೆಯಲ್ಲೇ ಕಟ್ಟಿಕೊಳ್ಳಬೇಕಾಗುತ್ತದೆ.

ಹಾಗಾದರೆ ಶಾಲೆಯಲ್ಲಿ ಮಕ್ಕಳಿಗೆ ಯಾವುದನ್ನು ಸತ್ಯ ಎಂದು ತಿಳಿಸೋಣ? ಅದನ್ನು ಯಾರು ಮಾಡಬೇಕು? ಹಿರಿಯರೊಬ್ಬರು ತಿಳಿಸಿದಂತೆ, ಒಂದು ತಜ್ಞರ ಸಮಿತಿ ಈ ಕಾರ್ಯವನ್ನು ಮಾಡಬೇಕು. ಅದು ರಾಜಕೀಯದಿಂದ ಹೊರಗಿರಬೇಕು. ಆಡಳಿತ ನಡೆಸುವ ಪಕ್ಷ ಬದಲಾದಾಗಲೆಲ್ಲ ಪಠ್ಯಪುಸ್ತಕಗಳು ಬದಲಾಗಬೇಕಿಲ್ಲ. ಪಕ್ಷದ ಧೋರಣೆಯನ್ನು ಮಕ್ಕಳ ಮೇಲೆ ಹೇರುವುದು ಅಪಚಾರ. ಇದು ತುಂಬ ಸರಿಯಾದ ಸಲಹೆ. ಆದರೆ ಅಂತಹ ತಜ್ಞರು ಎಲ್ಲಿದ್ದಾರೆ? ಎಷ್ಟಿದ್ದಾರೆ? ನಾವು ಒಪ್ಪಲಿ, ಬಿಡಲಿ, ದುರ್ದೈವವೆಂದರೆ ನಮ್ಮ ಬಹಳಷ್ಟು ಜನ ‘ತಜ್ಞರು’ ಯಾವುದೋ ಧೋರಣೆಗೆ ಮನತೆತ್ತವರಾಗಿದ್ದಾರೆ.

ಹಿಂದೆ ರಾಜರಿಗೆ ಆಸ್ಥಾನ ವಿದ್ವಾಂಸರಿದ್ದಂತೆ, ಈಗ ಪ್ರತಿಯೊಂದು ಪಕ್ಷಕ್ಕೆ ಕೆಲವು ವಿದ್ವಾಂಸರು ಅಪೇಕ್ಷಿತ ಅಭಿಪ್ರಾಯಗಳನ್ನೇ ಚೆಂದವಾಗಿ ಬರೆದುಕೊಡಲು ಸಿದ್ಧರಾಗಿದ್ದಾರೆ. ಪಕ್ಷಗಳು ಬದಲಾದಂತೆ ವಿದ್ವಾಂಸರ ಪಡೆ ಬದಲಾಗುತ್ತದೆ. ಆದರೂ, ಯಾವ ಭಾಗಕ್ಕೂ ಸೇರದೆ ತಮ್ಮ ಶೈಕ್ಷಣಿಕ, ಸಾಹಿತ್ಯಿಕ ಕಾರ್ಯಗಳನ್ನು ನಿರ್ಲಿಪ್ತವಾಗಿ ನಡೆಸಿಕೊಂಡು ಹೋಗುತ್ತಿರುವ ಕೆಲವು ‘ಅಲ್ಪಸಂಖ್ಯಾತ’ ವಿದ್ವಾಂಸರಿದ್ದಾರೆ. ಅವರು ರಾಜಕಾರಣಿಗಳ ಹಿಂದೆ, ಅಧಿಕಾರಿಗಳ ಹಿಂದೆ ಸುತ್ತುವವರಲ್ಲ, ಯಾರ ಮುಲಾಜಿಗೂ ಬಗ್ಗುವವರಲ್ಲ.

ಅಂಥವರನ್ನು ದುರ್ಬೀನು ಹಾಕಿಕೊಂಡು ಹುಡುಕಿ ತರಬೇಕು. ಅವರಿಗೆ ಸ್ವಾತಂತ್ರ್ಯವನ್ನು ನೀಡಿ, ಪಠ್ಯಪುಸ್ತಕಗಳನ್ನು ರಚಿಸುವಂತೆ ಕೇಳಿಕೊಳ್ಳಬೇಕು. ಅವರು ಮಾಡಿದ್ದನ್ನು ಕೂಲಂಕಷವಾಗಿ ಪರಿಶೀಲಿಸಿದ ಮೇಲೆ, ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಆಡಳಿತಪಕ್ಷ ಬದಲಾದಾಗ ಪಠ್ಯಪುಸ್ತಕ ಬದಲಾಗಬಾರದು.

ಇನ್ನೊಂದು ಮಾತು. ಪಠ್ಯಪುಸ್ತಕದಲ್ಲಿ ಬರುವ ಯಾವುದೇ ಪಠ್ಯ ಸಕಾರಾತ್ಮಕವಾಗಿರಬೇಕು. ಇಂದು ನಾವು ಸಮಾಜವನ್ನು ಜಾತಿ, ಧರ್ಮ, ಲಿಂಗ, ಭಾಷೆಗಳ ಆಧಾರದ ಮೇಲೆ ಒಡೆದು ಚೂರು ಚೂರು ಮಾಡಿದ್ದೇವೆ. ಜನರ ನಡುವೆ ದ್ವೇಷದ ಬೆಂಕಿ ಹಚ್ಚಿ ಅದರಲ್ಲಿ ನಮ್ಮ ಅವಕಾಶಗಳನ್ನು ಕಾಯಿಸಿಕೊಳ್ಳುತ್ತಿದ್ದೇವೆ. ಈಗ ನಾವು ಮಾಡಬೇಕಾಗಿದ್ದು ಮಕ್ಕಳ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ. ಅದಾಗಬೇಕಾದರೆ, ಪಠ್ಯದಲ್ಲಿ ಯಾರ ಬಗ್ಗೆಯೇ ಆಗಲಿ, ಯಾವುದರ ಬಗ್ಗೆಯೇ ಆಗಲಿ ವಿಷ ಬೇಡ. ಎಲ್ಲ ಧರ್ಮಗಳಲ್ಲಿ, ಮತಗಳಲ್ಲಿ ಇರುವ ಸುಂದರ, ಸುಭಗ, ಹೃದಯ ತಟ್ಟುವ ವಿಷಯಗಳನ್ನು ಹಾಕಿ, ಮಕ್ಕಳು ತಮ್ಮ ಜಾತಿ, ಮತಗಳಿಗಿಂತ ಹೆಚ್ಚಾಗಿ, ತಾನು ಭಾರತೀಯ ಎಂದು ಹೆಮ್ಮೆಪಡುವಂತೆ ಮಾಡುವುದು ನಮ್ಮ ಇಂದಿನ ಕರ್ತವ್ಯ.

ರಾಜಕೀಯ ಅಧಿಕಾರದ ಅವಧಿ ತುಂಬ ಅಲ್ಪವಾದದ್ದು. ಅದೊಂದು ಜೋಕಾಲಿ. ಐದು ವರ್ಷಕ್ಕೊಮ್ಮೆ ಯಾವುದೋ ದಿಕ್ಕಿನಲ್ಲಿ ತುಯ್ಯುತ್ತದೆ. ಈ ಅಲ್ಪಕಾಲದ ಅಧಿಕಾರಕ್ಕಾಗಿ ದೀರ್ಘಕಾಲದ, ದೇಶಪ್ರೇಮದ, ರಾಷ್ಟ್ರ ಕಲ್ಪನೆಯನ್ನು ಬಲಿಕೊಡುವುದು ಬೇಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.