ಹಿರಿಯೂರು ತಾಲ್ಲೂಕಿನ ಕಾಡುಗೊಲ್ಲರ ಕಟ್ಟೆಮನೆ ಯಾನೆ ಯರಬಳ್ಳಿ ದೊಡ್ಡಗೊಲ್ಲರಹಟ್ಟಿಯಲ್ಲಿ ಆಚರಿಸುವ ‘ಕಾಳುಹಬ್ಬ’ ಅಥವಾ ‘ಗುಗ್ರಿಹಬ್ಬ’ ಕಾಡುಗೊಲ್ಲರಿಗೆ ಸಂಬಂಧಿಸಿದ ವಿಶಿಷ್ಟ ಸಂಪ್ರದಾಯಗಳನ್ನು ಒಳಗೊಂಡಿರುವ ಹಬ್ಬ. ತಮ್ಮ ಹೊಲಗಳಲ್ಲಿ ಬೆಳೆದ ಅವರೆಕಾಳು, ಹೆಸರುಕಾಳು, ಅಲಸಂದೆ ಮತ್ತು ಕಡಲೆಕಾಳುಗಳನ್ನು ಪೂಜಿಸುವುದೇ ಈ ‘ಕಾಳುಹಬ್ಬ’. ಕಾಡುಗೊಲ್ಲರಹಟ್ಟಿಯವರಲ್ಲದೆ ಇತರ ಹಳ್ಳಿಯವರೂ ತಾವು ಬೆಳೆದ ಕಾಳುಗಳನ್ನು ಈ ಹಬ್ಬಕ್ಕೆ ತಂದುಕೊಡುವ ಸಂಪ್ರದಾಯವಿದೆ.

ಮೂಲತಃ ಇದು ಕೃಷಿಗೆ ಸಂಬಂಧಿಸಿದ ಆಚರಣೆ. ಕಾಡುಗೊಲ್ಲರ ಧಾರ್ಮಿಕ ಆಚರಣೆಗಳನ್ನು ಸಂಪ್ರದಾಯ ಬದ್ಧವಾಗಿ ನಡೆಸುವ ಕರ್ನಾಟಕದ ಕೆಲವೇ ಗೊಲ್ಲರಹಟ್ಟಿಗಳಲ್ಲಿ ಯರಬಳ್ಳಿ ದೊಡ್ಡಗೊಲ್ಲರಹಟ್ಟಿಯೂ ಒಂದು.

‘ಕಾಳುಹಬ್ಬ’ವನ್ನು ಆಚರಿಸುವವರು ವಿಶೇಷವಾಗಿ ಕಾಡುಗೊಲ್ಲರ ‘ಚಂದಮುತ್ತಿ’ ಕುಲದವರು. ಕಟ್ಟುಜಿನಿಗೆ, ಕಂಬಳಿ ಉಡುಗೆ, ಬಾಯಿಬತಉಳ್ಳಂಥ ಹಾಲುಗುಡದಪ್ಪನಿಗೆ ಇಡೀ ಗೊಲ್ಲಾಳಿಕೆಯಲ್ಲಿ ಬಿದಿರಿನ ಬಂಕು ಕಟ್ಟಿಮುತ್ತುಗದೆಲೆಯ ಸರುವುನಿಂದ ನಿರ್ಮಿಸಿರುವ ಏಕೈಕ ದೈವದ ಗುಬ್ಬಯರಬಳ್ಳಿಯಲ್ಲಿದೆ.

ಸಾಮಾನ್ಯವಾಗಿ ‘ಕಾಳುಹಬ್ಬ’ ಫೆಬ್ರುವರಿ ತಿಂಗಳಿನಲ್ಲಿ ಅಮಾವಾಸ್ಯೆ ನಂತರದಲ್ಲಿ ಬರುವ ಸೋಮವಾರ ನಿಗದಿಯಾದರೆ, ಅಂದೇ ಜಾಂಡೇವುಮರ (ಧ್ವಜದಕಂಬ) ಏರಿಸಿ ಎಲ್ಲರೂ ಕಂಕಣ ಕಟ್ಟಿಕೊಂಡು ಗುಗ್ರಿಹಬ್ಬಕ್ಕೆ ಚಾಲನೆ ಕೊಡುತ್ತಾರೆ. ಸಾವಿರ ಒಕ್ಕಲು ವಾರದಲ್ಲಿ (ಶನಿವಾರ ಮತ್ತು ಭಾನುವಾರ) ಮೀಸಲು ಹಾಲು ಅಳೆದು ತುಪ್ಪ ಮಾಡಿಕೊಳುವುದು ಈ ಹಬ್ಬದ ಮುಖ್ಯವಾದ ವಿಧಿಗಳಲ್ಲೊಂದು.

ಯರಬಳ್ಳಿ ಗೊಲ್ಲರಹಟ್ಟಿಯ ಹಾಲುಗುಡದಪ್ಪ, ಕಾಟುಂದೇವರು, ಗಾದ್ರಿ ದೇವರು, ಸಿಂಪಣ್ಣ, ವೀರನಾಗಣ್ಣ ಮತ್ತು ಜುಂಜಪ್ಪ ದೇವರುಗಳು ಮತ್ತು ಮದ್ದನಕುಂಟೆಯ ರ್ರಣ್ಣ ದೇವರುಗಳು ಯರಬಳ್ಳಿಗೊಲ್ಲರಹಟ್ಟಿಯ ಪಡುವಲು ದಿಕ್ಕಿಗಿರುವ ಸುಣ್ಣದಗುಡಿಹಳ್ಳಕ್ಕೆ ಹೊಳೆಪೂಜೆಗೆ ಹೊರಡುತ್ತವೆ. ಈ ದೇವರುಗಳಲ್ಲಿ ಮದ್ದನಕುಂಟೆಯಿಂದ ಕಾಳುಹಬ್ಬಕ್ಕಾಗಿ ಬರುವ ರ್ರಣ್ಣನನ್ನು ಹೊರತುಪಡಿಸಿದರೆ, ಉಳಿದೆಲ್ಲವೂ ಯರಬಳ್ಳಿದೊಡ್ಡಗೊಲ್ಲರಹಟ್ಟಿಯಲ್ಲಿರುವ ದೇವರುಗಳೆ. ಪೂಜಾರಿ, ಗಣೆ ಪೂಜಾರಿ, ದಳವಾಯಿಗಳು ಮದ್ದನಕುಂಟೆಗೆ ಹೋಗಿ ರ್ರಣ್ಣ ದೇವರನ್ನು ದೊಡ್ಡಗೊಲ್ಲರಹಟ್ಟಿಗೆ ಕರೆತಂದು ಉರುಮೆ ವಾದ್ಯದೊಂದಿಗೆ ಪೂಜೆಗೆ ಹೊರಡುತ್ತಾರೆ. ಹೊಳೆಪೂಜೆಗೆ ಹೊರಡುವ ಮೊದಲು, ಯರಬಳ್ಳಿಯ ಮಣೆಗಾರರು ಒಂದೇ ದನದ ಚರ್ಮದಲ್ಲಿ ಮಾಡಿದ ಪಾದರಕ್ಷೆಗಳನ್ನು ತಂದು ದೊಡ್ಡ ಪೂಜಾರಪ್ಪನಿಗೆ ತೊಡಿಸುತ್ತಾರೆ. ಅಂದು ಮಾತ್ರ ಪೂಜಾರಪ್ಪ ಪಾದರಕ್ಷೆ ಮೆಟ್ಟಿಕೊಂಡು ಹೊಳೆಪೂಜೆಗೆ ಹೊರಡುತ್ತಾನೆ. ಇನ್ನುಳಿದಂತೆ ಆತ ಎಂದೂ ಪಾದರಕ್ಷೆ ಧರಿಸುವುದಿಲ್ಲ! ವಿಶೇಷವೆಂದರೆ ಈ ದೇವರುಗಳು ವಿದ್ಯುತ್ ತಂತಿಗಳ ಕೆಳಗೆ ಹೋಗುವುದಿಲ್ಲ!

ಹೊಳೆಪೂಜೆಗೆ ಬಂದ ದೇವರುಗಳನ್ನು ಕೂರಿಸಿ ಸುತ್ತಲೂ ತಂಗಟೆಸೊಪ್ಪಿನಿಂದ ಬೆರೆಗು ಕಟ್ಟುತ್ತಾರೆ. ದೇವರಪೂಜೆಗೆ ಬೇಕಾದ ತಂಬಿಟ್ಟನ್ನುಅಲ್ಲಿಯೇ ಕಟ್ಟುತ್ತಾರೆ. ತಂಬಿಟ್ಟಿಗಾಗಿಯೇ ಬೆಳೆಯುವ ಕೆಂಬತ್ತಿ ಭತ್ತವನ್ನು ತಿಪಟೂರಿಗೆ ಸಮೀಪದ ಒಂದು ಹಳ್ಳಿಗೆ ಕಾಲ್ನಡಿಗೆಯಲ್ಲಿಯೇ ಹೋಗಿ 70 ಸೇರು ಕೆಂಬತ್ತಿ ಭತ್ತವನ್ನು ಹೊತ್ತು ತಂದಿರುತ್ತಾರೆ. ಕೆಂಬತ್ತಿ ಭತ್ತವನ್ನು ಹಸನು ಮಾಡಿ, ಸಗಣಿಯಲ್ಲಿ ಸಾರಿಸಿದ ಮಣ್ಣಿನ ಒರಳೆಯಲ್ಲಿಯೇ ಕುಟ್ಟಿ ಅಕ್ಕಿ ಮಾಡಿಕೊಳ್ಳುತ್ತಾರೆ. ವಿಶೇಷವಾಗಿ ದೇವರಿಗಾಗಿಯೇ ಬೆಳೆದ ಬಾಳೆಹಣ್ಣನ್ನು ಮಾತ್ರ ಪೂಜೆಗೆ ಬಳಸುವುದು ಇವರ ಸಂಪ್ರದಾಯ.

ಸುಣ್ಣದಗುಡಿಹಳ್ಳಕ್ಕೆ ಬಂದ ದೇವರುಗಳನ್ನು ತಂಗಟೆಸೊಪ್ಪಿನ ಮೇಲೆ ಕೂಡಿಸುತ್ತಾರೆ. ಸುಣ್ಣದಗುಡಿಹಳ್ಳದಲ್ಲಿ ಮೂರು ಚಿಲುಮೆಗಳನ್ನು ತೆಗೆದಿರುತ್ತಾರೆ. ಇವುಗಳಲ್ಲಿ ಕಾಟುಂದೇವರು ಮತ್ತು ಗಾದ್ರಿ ದೇವರುಗಳನ್ನು ಒಂದು ಚಿಲುಮೆ ನೀರಿನಲ್ಲಿ ತೊಳೆದು ಇನ್ನೊಂದು

ಚಿಲುಮೆ ನೀರಿನಲ್ಲಿ ಹಾಲುಗುಡದಪ್ಪನನ್ನು ಶುದ್ಧಿ ಮಾಡುತ್ತಾರೆ. ಇನ್ನೊಂದು ಚಿಲುಮೆ ನೀರನ್ನು ಇತರ ಬಳಕೆಗೆ ಉಪಯೋಗಿಸುತ್ತಾರೆ.

ಚಿಲುಮೆಯ ಸುತ್ತಲೂ ಕರಿಕಂಬಳಿಯ ತೆರೆಕಟ್ಟಿ, ದೊಡ್ಡ ಪೂಜಾರಪ್ಪ ಬಾಯಿಗೆ ಬತಕಟ್ಟಿಕೊಂಡು ಪೆಟ್ಟಿಗೆ ದೇವರನ್ನು ಶುದ್ಧಿ ಮಾಡುತ್ತಾನೆ. ಮೊದಲು ನಾಗಪ್ಪನಿಗೆ ಪೂಜೆ ಸಲ್ಲಿಸಿದ ನಂತರ ದೀಪ ಧೂಪಾರತಿಗಳನ್ನು ಮಾಡಿ, ಎತ್ತಪ್ಪನಗುಡ್ಡಕ್ಕೆ ಪಂಜಿನ ಸೇವೆ ಸಲ್ಲಿಸುತ್ತಾರೆ. ನಂತರ ಬಾಯಿಬತ, ಬಿಳಿನಿಲುವಂಗಿ ತೊಟ್ಟ ಪೂಜಾರಪ್ಪಗಳು ಪಟ್ಟದ ಛತ್ರಿ, ಹಾಲುಗುಡದಪ್ಪನ ಕುದುರೆ, ಕಾಟುಂದೇವರ ಪಟ್ಟದ ಛತ್ರಿಯೊಂದಿಗೆ 14 ಜನರಿಗೆ ವೀಳ್ಳೇವು ಎತ್ತುತ್ತಾರೆ. ಇದನ್ನು ‘ಕೈವಾಡ’ ಎಂದು ಕರೆಯುತ್ತಾರೆ. ಹಟ್ಟಿಯ ಪ್ರವೇಶಕ್ಕೆ ಮುನ್ನ ಗದ್ದುಗೆ ಮಾಡಿ ದೇವರುಗಳನ್ನು ಬಯಲು ಕಾಯುವುದಕ್ಕೆ ಬಿಡುತ್ತಾರೆ. ದೇವರು ಹಟ್ಟಿಯೊಳಕ್ಕೆ ಹೋದ ಮೇಲೆ ವಾರದ ದೀಪ ಏರಿದ ಮೇಲೆ ತಳುಕಿನಗುಡ್ಡಕ್ಕೆ ಪಂಜಿನ ಸೇವೆ ಸಲ್ಲಿಸಿ ಕೈವಾಡ ಎತ್ತುತ್ತಾರೆ. ಹೀಗೆ ಕಾಡುಗೊಲ್ಲರು ತಮ್ಮ ಎಲ್ಲ ಧಾರ್ಮಿಕ ಆಚರಣೆಗಳನ್ನು ‘ಹೊಳೆಪೂಜೆ’ಯಿಂದಲೇ ಆರಂಭಿಸುತ್ತಾರೆ.

ಹೊಳೆಪೂಜೆಯ ರಾತ್ರಿ ಮದ್ದನಕುಂಟೆಗೆ ನಡೆದುಹೋಗಿ ಕಾಳುಗಳನ್ನು ಕರಿಕಂಬಳಿಯಲ್ಲಿ ಮಾರನೋರುಹೊತ್ತು ತರುತ್ತಾರೆ. ಇದಕ್ಕೆ ‘ಮೀಸಲು ಕಾಳು’ ಎಂದು ಕರೆಯುತ್ತಾರೆ. ಮೀಸಲು ಕಾಳನ್ನು ಚಿಲುಮೆ ನೀರು ಹಾಕಿದ ಮೂರು ಸ್ವಾರೆಗೆ (ದೊಡ್ಡ ಬಾನಿ) ಹಾಕುತ್ತಾರೆ. ಈ ಸ್ವಾರೆಗಳನ್ನು ಹಾಲುಗುಡದಪ್ಪನ ಗುಬ್ಬದ ಮುಂದೆ, ಹಸಿಜಾಲಿಮರದ ತುಂಡುಗಳನ್ನೇ ಒಲೆಯನ್ನಾಗಿ ಮಾಡಿ ಅದರ ಮೇಲೆ ಸ್ವಾರೆಗಳನ್ನು ಇಟ್ಟು ಅದನ್ನು ಹಸಿ ತಂಗಟೆ ಕಟ್ಟಿಗೆಯಲ್ಲಿ ಇಡೀ ರಾತ್ರಿ ಬೇಯಿಸುತ್ತಾರೆ. ಮಂಗಳವಾರ ಬೆಳಗಿನ ಜಾವದ ಹೊತ್ತಿಗೆ ಹಸಿ ಜಾಲಮರದ ಕೊರಡುಗಳು ಉರಿದು ಬೂದಿಯಾಗುತ್ತಿದ್ದಂತೆ ಸ್ವಾರೆಯಲ್ಲಿ ಕಾಳುಗಳು ಬೆಂದಿರುತ್ತವೆ. ಮದ್ದನಕುಂಟೆ ಜಂಗ್ಲಿಗೌಡರು ಮತ್ತು ದಳವಾಯಿಗಳು ಬೇಯಿಸಿದ ಕಾಳುಗಳನ್ನು ದೇವರ ಮುಂದೆ ರಾಶಿ ಹೊಯ್ದು ಅನಂತರ ಕಾಳಿನರಾಶಿ ಪೂಜೆ ಮಾಡಿ ಹಟ್ಟಿಯವರಿಗೆ ಹಂಚುತ್ತಾರೆ.

ಇದು ಸಂಪೂರ್ಣವಾಗಿ ಕಾಡುಗೊಲ್ಲರಿಗೇ ಮೀಸಲಾದ ಕೃಷಿಗೆ ಸಂಬಂಧಿಸಿದ ಆಚರಣೆ. ಕಾಡುಗೊಲ್ಲರ ಧಾರ್ಮಿಕ ಆಚರಣೆಯಲ್ಲಿ ಮೇಲು ಸಂಸ್ಕೃತಿಯ ಯಾವುದನ್ನೂ ಸ್ವೀಕರಿಸದ ಮನೋಭಾವವು ಅವರ ಸಾಂಸ್ಕೃತಿಕ ಸಮಗ್ರತೆಯಲ್ಲಿ ವ್ಯಕ್ತವಾಗುತ್ತದೆ. ಮೇಲು ಸಮುದಾಯಗಳ ಅನುಕರಣೆ ತೀವ್ರವಾಗುತ್ತಿರುವ ಈ ಹೊತ್ತಿನ ಸಾಂಸ್ಕೃತಿಕ ವಿಪ್ಲವದ ನಡುವೆಯೂ ಕಾಡುಗೊಲ್ಲರು ತಮ್ಮ ಸಮುದಾಯದ ಸಾಂಸ್ಕೃತಿಕ ನಿಧಿಯನ್ನು ಆಚರಣೆಗಳ ಮೂಲಕ ಹಾಗೆಯೇ ಉಳಿಸಿಕೊಂಡಿರುವುದು ಕುತೂಹಲಕಾರಿಯಾಗಿದೆ.

ಚಿತ್ರ: ನಿಸರ್ಗ ಗೋವಿಂದರಾಜು ಚಳ್ಳಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.