ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ದೊಡ್ಡವರ ಗಲಾಟೆಯ ನಡುವೆ, ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಪುಸ್ತಕಗಳಿಗಾಗಿ ಕಾಯುತ್ತಾ ಕುಳಿತಿವೆ ನಮ್ಮ ನಾಡಿನ ಮಕ್ಕಳು. ಇದಕ್ಕೆ ಕಾರಣ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದ ಗೊಂದಲ. ಈ ಸಂದರ್ಭದಲ್ಲಿ ಕನ್ನಡ ಪಠ್ಯಪುಸ್ತಕಗಳ ಬೆಳವಣಿಗೆಯ ಹೆಜ್ಜೆಗುರುತುಗಳನ್ನು ತಡಕುತ್ತಾ ಹೋದರೆ ಕುತೂಹಲದ ಸಂಗತಿಗಳು ತೆರೆದುಕೊಳ್ಳುತ್ತವೆ.

ಸುಮಾರು ಎರಡು ಶತಮಾನಗಳಿಂದ ಬೆಳೆದುಬಂದ, 150 ವರ್ಷಗಳಿಗೂ ಹೆಚ್ಚಿನ ಸ್ಪಷ್ಟ ಚರಿತ್ರೆ ಇರುವ ಕನ್ನಡ ಪಠ್ಯಪುಸ್ತಕಗಳ ಪರಿಷ್ಕರಣೆಯು ದೊಡ್ಡ ವಿದ್ವಾಂಸರೊಬ್ಬರ ಅಧ್ಯಕ್ಷತೆಯಲ್ಲಿ ನಡೆದಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಬಲಪಂಥೀಯರೇ ಬೇಕೆಂದಾದರೆ, ಉನ್ನತ ಚಿಂತನೆಯುಳ್ಳ ವಿದ್ವಾಂಸರೂ ಶೈಕ್ಷಣಿಕ ಅನುಭವವುಳ್ಳ ನಿವೃತ್ತರೂ ಪ್ರೊಫೆಸರ್‌ಗಳೂ ಕರ್ನಾಟಕದಲ್ಲಿ ಇದ್ದಾರೆ. ಟ್ಯುಟೋರಿಯಲ್ ಅನುಭವದ ಆಧಾರದಲ್ಲಿ ಪಠ್ಯ ಪರಿಷ್ಕರಣೆ ಮಾಡಿದರೆ, ಪಠ್ಯವು ತನ್ನ ಘನತೆಯನ್ನು ಕಳೆದುಕೊಳ್ಳುತ್ತದೆ. ಅಷ್ಟಲ್ಲದೆ ಈ ಪರಿಷ್ಕೃತ ಪಾಠಗಳ ಆಯ್ಕೆಯಲ್ಲಿ, ಎರಡು ಶತಮಾನಗಳಿಂದ ಬೆಳೆದುಬಂದ ತಾತ್ವಿಕತೆ ಹಾಗೂ ಸಿದ್ಧಾಂತಗಳ ನೆರಳು ಕೂಡಾ ಮೇಲ್ನೋಟಕ್ಕೆ ಗೋಚರಿಸುವುದಿಲ್ಲ.

ಕನ್ನಡ ಪಠ್ಯಪುಸ್ತಕಗಳ ಬೆಳವಣಿಗೆಯು ಬಾಲಗೀತೆಗಳ ಮೂಲದಿಂದ ಆರಂಭವಾಗಿದೆ. ಕನ್ನಡದಲ್ಲಿ ಬಾಲಸಾಹಿತ್ಯ ಪ್ರಕಟಣೆಗೆ ತೊಡಗಿದ ಮೊದಲಿಗರು ಬಾಸೆಲ್ ಮಿಷನ್‌ನವರು. ಅವರಲ್ಲಿ ರೈಸ್ ಎಂಬುವರು 1840ರಲ್ಲೇ ಮಕ್ಕಳಿಗಾಗಿ ಪುಸ್ತಕಗಳನ್ನು ಪ್ರಕಟಿಸಿದರು. ಜಿ.ಬ್ರಿಗೆಲ್ ಎಂಬುವರು 1866ರಲ್ಲಿ ‘ಕನ್ನಡ ಕಾವ್ಯ ಭಾಗ’ ಕೃತಿ ಪ್ರಕಟಣೆಗೆ ಮುನ್ನ ಮಕ್ಕಳ ಸಾಹಿತ್ಯದ ಕುರಿತು ಹೇಳಿದ ಮಾತುಗಳು ‘ಕನ್ನಡ ಬಾಲಗೀತೆಗಳ ಪ್ರಾರಂಭದ ನಿರ್ದೇಶಕ ವಾಕ್ಯ’ಗಳಂತೆ ಕೆಲಸ ಮಾಡಿದವು. ಬಾಲಸಾಹಿತ್ಯವು ಕ್ಲಿಷ್ಟ ಸಮಾಸ, ಕಷ್ಟವಾದ ಸಂಸ್ಕೃತ ಪದಪುಂಜಗಳು, ಸಂದಿಗ್ಧ ಪ್ರಯೋಗ ಗಳಂತಹವು ಇಲ್ಲದೆ, ಆಡುಮಾತಿನ ಸಹಜ ಲಯದಲ್ಲಿ ಸ್ಪಷ್ಟವಾಗಿ ಇರಬೇಕೆಂದು ಬ್ರಿಗೆಲ್ ಸಲಹೆ ಕೊಟ್ಟಿದ್ದರು.

ಮಕ್ಕಳ ಮೊದಲ ಐದು ವರ್ಷಗಳ ಕಲಿಕೆಗೆ ಇಂದಿಗೂ ಬಾಲಗೀತೆಗಳೇ ಸಹಕಾರಿ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಓದಿದಾಗ, 19ನೇ ಶತಮಾನದಲ್ಲಿ ಐಗಳ ಪಾಠಕ್ರಮದಿಂದ ಆರಂಭವಾಗಿ ಆಧುನಿಕ ವಿದ್ಯಾಭ್ಯಾಸ ಕ್ರಮಕ್ಕೆ ಮಲೆನಾಡಿನಲ್ಲಿ ಮಕ್ಕಳು ಕ್ರಮೇಣ ಬದಲಾದ ಚಿತ್ರವೊಂದನ್ನು ಊಹಿಸಿಕೊಳ್ಳಬಹುದು. ಇತ್ತೀಚಿನ ಪರಿಷ್ಕರಣೆ ಸಂದರ್ಭದಲ್ಲಿ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಎಂಬ ಲೇಖನಕ್ಕೂ ವಿರೋಧ ವ್ಯಕ್ತವಾಗಿ ಕಷ್ಟಕರ ಭಾಷೆ ಬಗೆಗೆ ರಕ್ಷಣಾತ್ಮಕವಾಗಿ ವಾದ ಮಂಡನೆಯಾದಾಗ, ಪಠ್ಯದ ಭಾಷೆ ಬಗ್ಗೆ ಪರಿಷ್ಕರಣಾ ಸಮಿತಿ ಗಮನಹರಿಸಿದಂತಿಲ್ಲ ಅನಿಸಿತು.

ಪ್ರೊ. ಹಿರಿಯಣ್ಣ ಅವರ ಬರಹಗಳ ಕೆಲವು ಕನ್ನಡ ಅನುವಾದಗಳು ಹಾಗೂ ಭಾರತೀಯ ಚಿಂತನೆಗಳ ಬಗೆಗೆ ಡಿವಿಜಿ ಅವರು ಬರೆದಿರುವ ಇನ್ನಿತರ ಬರಹಗಳನ್ನು ಅವಲೋಕಿಸಿದರೆ, ನಾನು ಹೇಳುವ ವಿಚಾರವೇನು ಎಂಬುದು ಸ್ಪಷ್ಟವಾದೀತು. ಪಠ್ಯಪುಸ್ತಕಗಳು ತಮಗೆ ಪ್ರಿಯವಾದ ಲೇಖಕನ ಬರಹವನ್ನು ತುರುಕುವುದಕ್ಕಾಗಲಿ, ಬಹುದೊಡ್ಡ ರಾಜಕೀಯ ಸಿದ್ಧಾಂತವನ್ನು ಹೇರುವುದಕ್ಕಾಗಲಿ ಇರುವುದಲ್ಲ. ಬದಲಾಗಿ ಅವು ಕಲಿಕೆಗೆ, ಚಿಂತನೆಗೆ ಪೂರಕವಾಗಿ ಇರಬೇಕಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಚಿಂತನೆ, ಅಧ್ಯಯನಶೀಲತೆ ಅಲ್ಲಿಂದ ಕವಲೊಡೆಯಬೇಕು.

ನಮ್ಮ ಬಹುತೇಕ ಶಾಲೆಗಳಲ್ಲಿ ಹರ್ಬರ್ಟ್‌ನ ಪಂಚ ಸೋಪಾನಗಳ ಆಧಾರದಲ್ಲಿ ಬೋಧನೆ ನಡೆಯುತ್ತದೆ. ಜರ್ಮನಿಯ 19ನೇ ಶತಮಾನದ ಈ ಶಿಕ್ಷಣ ತಜ್ಞನ ಮಾದರಿಯನ್ನು ಜಗತ್ತಿನಾದ್ಯಂತ ಹಲವು ದೇಶಗಳು ಅನುಸರಿಸುತ್ತವೆ. ಜೀವಮಾನವಿಡೀ ಶಿಕ್ಷಕರಾಗಿ ದುಡಿದ ಅನೇಕ ಕನ್ನಡ ಬರಹಗಾರರು, ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಆ ಪಂಚಸೋಪಾನಗಳ ಮಾದರಿಯನ್ನು ಹೇಗೆ ಬದಲಾಯಿಸಬಹುದು ಎಂಬ ಮಾಹಿತಿಯನ್ನು ಸ್ವ ಅನುಭವದಿಂದ ನೀಡಿದ್ದಾರೆ (ಅಂತಹವರಲ್ಲಿ ಒಬ್ಬರು ಕವಿ ಸುಬ್ರಾಯ ಚೊಕ್ಕಾಡಿ). ಪಠ್ಯಪುಸ್ತಕಗಳನ್ನು ಹೊಸದಾಗಿ ರೂಪಿಸುವ ಅಥವಾ ಪರಿಷ್ಕರಿಸುವ ತಜ್ಞರು ಶಾಲೆಯ ಅಂತಹ ಪಾಠ ವಿಧಾನಗಳಿಗೆ ಅನುಕೂಲವಾಗುವ ಪಠ್ಯಗಳನ್ನು ಇರಿಸಬೇಕು ಅಥವಾ ಪಾಠ ವಿಧಾನಗಳಲ್ಲಿ ಆಗಬೇಕಾದ ಬದಲಾವಣೆಗಳನ್ನು ಸೂಚಿಸಬೇಕು. ಶೈಕ್ಷಣಿಕ ಸಿದ್ಧಾಂತಗಳನ್ನು ಕಡೆಗಣಿಸಿ,ತಮ್ಮ ತತ್ವಗಳಿಗೆ ಅನುಗುಣವಾಗಿ ಪರಿಷ್ಕರಿಸಿದರೆ, ಜ್ಞಾನದ ಕ್ಷೇತ್ರದಲ್ಲಿ ಅಜ್ಞಾನದ ದಾಂದಲೆಯಾದೀತೇ ವಿನಾ ಸಾಧನೆ ಆಗದು.

ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂಬು ದೊಂದು ಪಾಠ ನಮ್ಮ ಎಂಟನೇ ತರಗತಿಯ ಚರಿತ್ರೆಯ ಪುಸ್ತಕದಲ್ಲಿ ಇತ್ತು. 52 ವರ್ಷಗಳ ಹಿಂದೆ ವಿಟ್ಲದ ನಮ್ಮ ಶಾಲೆಯ ಮೇಷ್ಟ್ರು ಮಹಾಬಲ ರೈ ಅವರು ಮಾಡಿದ ಆ ಪಾಠ ನನಗಿನ್ನೂ ನೆನಪಿದೆ. ‘1857ರಲ್ಲಿ ಅಂದಿನ ಬ್ರಿಟಿಷ್ ಆಡಳಿತದ ವಿರುದ್ಧ ಭಾರತದ ಸೈನಿಕರು ಪ್ರತಿಭಟನೆ ನಡೆಸಿದರು. ಇಂತಿಂತಹ ಕಾರಣಗಳಿಂದ ಭಾರತೀಯ ಹಿಂದೂ ಮತ್ತು ಮುಸ್ಲಿಂ ಸೈನಿಕರು ಆ ಸಶಸ್ತ್ರ ಬಂಡಾಯದಲ್ಲಿ ಒಂದಾಗಿದ್ದರು. ಬ್ರಿಟಿಷ್ ಆಡಳಿತ ಅದನ್ನು ಸಿಪಾಯಿಗಳ ದಂಗೆ ಎಂದು ಕರೆದು ಶಿಕ್ಷಿಸಿತು. ಬ್ರಿಟಿಷರಿಂದ ಭಿನ್ನವಾಗಿ ಸ್ವತಂತ್ರ ಚಿಂತನೆ ಮಾಡತೊಡಗಿದ್ದ ಭಾರತೀಯರಿಗೆ ಅದೊಂದು ಸಾಮಾನ್ಯ ದಂಗೆಯಲ್ಲ. ಅಂದು ನಡೆದುದು ಬ್ರಿಟಿಷ್ ಆಡಳಿತದ ವಿರುದ್ಧದ ಸಶಸ್ತ್ರ ಪ್ರತಿಭಟನೆ, ಅದುವೇ ನಮ್ಮ ಮೊದಲ ಸ್ವಾತಂತ್ರ್ಯ ಸಂಗ್ರಾಮ’ ಎಂದು ಹೇಳಿದರು.

ವಿದ್ಯಾರ್ಥಿಗಳ ಮನಸ್ಸನ್ನು ಹೀಗೆ ವಿಶ್ಲೇಷಣೆಯ ಮೂಲಕ ವಿಚಾರ ಪ್ರಚೋದಕವಾಗಿ ಬೆಳೆಸುವುದು ಪಠ್ಯ ಮತ್ತು ಪಾಠಗಳ ಉದ್ದೇಶ. ನಾರಾಯಣ ಗುರುಗಳಿಗೆ ಸಂಬಂಧಿಸಿದ ಪಾಠವನ್ನು ಸಮಾಜವಿಜ್ಞಾನದ ಪಠ್ಯದಿಂದ ತೆಗೆದು ಕನ್ನಡ ಭಾಷಾ ಪಠ್ಯಕ್ಕೆ ಹಾಕಿದ್ದೇವೆ ಎಂಬ ಮಾತುಗಳನ್ನು ಕೇಳುವಾಗ, ಕನ್ನಡ ಮತ್ತು ಸಮಾಜ ಪಾಠಗಳ ಹಿಂದಿನ ಬೋಧನಾ ತತ್ವಗಳ ಬಗೆಗೆ ನಿಜವಾದ ಚಿಂತನೆ ನಡೆದಿದೆಯೇ ಎಂಬ ಅನುಮಾನ ಬರುತ್ತದೆ.

ಪಂಜೆ ಮಂಗೇಶರಾಯರು ಮಕ್ಕಳ ಸಾಹಿತ್ಯದಲ್ಲಿ ಪ್ರಸಿದ್ಧರು. 1935ರ ಅಕ್ಟೋಬರ್ 29ರಂದು ಪಂಜೆ ಅವರು ಹೈದರಾಬಾದಿನಲ್ಲಿಮಾಡಿದ ನಾಡಹಬ್ಬದ ಭಾಷಣದಲ್ಲಿ, ಮಕ್ಕಳ ಸಾಹಿತ್ಯ ಹಾಗೂ ಅಧ್ಯಯನ ಪಠ್ಯಗಳು ಹೇಗಿರಬೇಕು ಎಂಬುದಕ್ಕೆ ಎಂಟು ಸೂತ್ರಗಳನ್ನು ಹೇಳುತ್ತಾರೆ. ಬರೀ ಬುದ್ಧಿವಾದ ಹೇಳುವುದಕ್ಕಾಗಿ ಇರುವ ಬರಹವು ಮಕ್ಕಳನ್ನು ಹೆಚ್ಚು ಆಕರ್ಷಿಸುವುದಿಲ್ಲ. ನೇರವಾದ, ವಾಚ್ಯವಾದ ಧರ್ಮಬೋಧನೆ ಹಾಗೂ ನೀತಿ ಬೋಧನೆಯು ಮಕ್ಕಳಿಗೆ ರುಚಿಸುವುದಿಲ್ಲ. ಅವು ಕತೆಗಳ ಅಂತರಂಗದಲ್ಲಿ ಅಡಗಿರಬೇಕು ಎಂಬುದು ಈ ಸೂತ್ರಗಳಲ್ಲಿ ಒಂದು.

ಬಹಳಷ್ಟು ಬಾಲ ಸಾಹಿತ್ಯವನ್ನು ರಚಿಸಿರುವ ಕಯ್ಯಾರ ಕಿಂಞಣ್ಣ ರೈ ಅವರ ‘ನಮ್ಮ ಬಾವುಟ’ ಪದ್ಯವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವ ದ್ವೇಷದ ಭಾವವನ್ನೂ ಬಿತ್ತದೆ, ಅಂತರಂಗದಲ್ಲಿ ಅಡಗಿರುವ ದೇಶಭಕ್ತಿಯನ್ನು ಪ್ರಚೋದಿಸುವಂತಿದೆ. ಇಂತಹವು ಸರ್ವಜನಾಂಗದ ಶಾಂತಿಯ ತೋಟವನ್ನು ಉಳಿಸಿಕೊಳ್ಳುವುದಕ್ಕೆ ಬೇಕಾದ ಪಠ್ಯಗಳ ಚಿಂತನಾ ಕ್ರಮಗಳು. ನಮ್ಮ ಪಠ್ಯಪುಸ್ತಕಗಳ ತಳಹದಿಯಲ್ಲಿ ಇರಬೇಕಾದ ವೈಚಾರಿಕತೆಯು ಸರ್ವ ಸಮಾನತೆ, ಸ್ವಾತಂತ್ರ್ಯ, ಸಂವಿಧಾನಾತ್ಮಕ ಮೌಲ್ಯಗಳನ್ನು ಒಳಗೊಂಡಿರಬೇಕು. ಅದು ಒಬ್ಬರ ಬಗೆಗಿನ ಪರಿಚಯ ದಲ್ಲಿ ನಾಲ್ಕು ವಾಕ್ಯ ಆ ಕಡೆ ಈ ಕಡೆ ಮಾಡಬಹುದಾದಷ್ಟು ಸರಳವಾದ ಕೆಲಸವಲ್ಲ.

ಮಕ್ಕಳ ಎಳೆ ಮನಸ್ಸಿನಲ್ಲಿ ಸತ್ಯದ ಕಲ್ಪನೆಯನ್ನು ಸ್ಪಷ್ಟವಾಗಿ ಮೂಡಿಸಬೇಕು. ಆಗಮಾತ್ರ ಋತದ ಗೆಲುವು. ಹೆಡಗೇವಾರ್ ಅವರ ಬರಹ ಬೇಕಾದರೆ, ಯಾವುದೋ ಒಂದು ಉದ್ದೇಶಕ್ಕಾಗಿ ‘ಭಗವಾಧ್ವಜ’ ಎಂದಿರುವುದನ್ನು ‘ಧ್ವಜ’ ಎಂದು ಬದಲಾಯಿಸಬಾರದು. ಹಾಗೆ ಬದಲಾಯಿಸಿದರೆ, ಒಂದು ಟಿಪ್ಪಣಿ ಕೊಟ್ಟು, ಯಾಕೆ ಬದಲಾಯಿಸಲಾಗಿದೆ ಎಂಬುದನ್ನು ಹೇಳಬೇಕು. ಅದರ ಬಗ್ಗೆ ಬರಬಹುದಾದ ಪ್ರತಿಕ್ರಿಯೆಗಳನ್ನು ನೇರವಾಗಿ ಎದುರಿಸಬೇಕು. ಹಾಗೆ ಆಗದೇ ಇದ್ದಾಗ, ಸ್ವಕಾರ್ಯ ಲಾಭಕ್ಕಾಗಿ ಸತ್ಯವನ್ನು ಮರೆಮಾಚುವುದು ಹಾಗೂ ಸುಳ್ಳಾಗಿ ತಿರುಚುವುದು ತಪ್ಪಲ್ಲ ಎಂಬ ತಪ್ಪು ಸಂದೇಶ ಮಕ್ಕಳಿಗೆ ಹೋಗುತ್ತದೆ. ಅದು ಸುನೀತಿ ಅಲ್ಲ. ಮಕ್ಕಳಿಗೆ ಅನೀತಿಯನ್ನು ಕಲಿಸುವುದು ತಪ್ಪು.

ಮಕ್ಕಳೆದುರು ಒಂದೆರಡು ಸಲ ಜಾಣತನದಿಂದ ಸತ್ಯವನ್ನು ಮರೆಮಾಚಲು ಸಾಧ್ಯವಾಗಬಹುದು. ಆದರೆ ಮುಂದೊಂದು ದಿನ ಅವರಿಗೆ ಸತ್ಯ ತಿಳಿದೇ ತಿಳಿಯುತ್ತದೆ. ಅದರ ದುಷ್ಪರಿಣಾಮವು ಹಿರಿಯರಿಗೆ, ಶಿಕ್ಷಣ ತಜ್ಞರು ಅನಿಸಿಕೊಂಡವರಿಗೆ ತಿಳಿದಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.