ದೇಶದ ಮುಂಚೂಣಿ ಸಮಾಜವಾದಿ ನಾಯಕರಲ್ಲಿ ಒಬ್ಬರಾಗಿದ್ದ ಕರ್ಪೂರಿ ಠಾಕೂರ್ (1924-1988) ಅವರಿಗೆ ಕೇಂದ್ರ ಸರ್ಕಾರ ‘ಭಾರತರತ್ನ’ ಗೌರವ ಘೋಷಿಸಿದೆ. ಎಪ್ಪತ್ತರ ದಶಕದಲ್ಲಿ ಬಿಹಾರ ರಾಜಕಾರಣ ಹಾಗೂ ಸಮಾಜದ ಚಹರೆ ಬದಲಿಸಲೆತ್ನಿಸಿದ ಕರ್ಪೂರಿಯವರ ನೂರೊಂದನೆಯ ಹುಟ್ಟುಹಬ್ಬದ ದಿನವೇ ಭಾರತದ ಅತ್ಯುನ್ನತ ಪ್ರಶಸ್ತಿ ಪ್ರಕಟವಾಯಿತು.

ಪ್ರಶಸ್ತಿಯ ಬೆನ್ನಿಗೇ ಬಿಹಾರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ, ಆ ರಾಜ್ಯದಲ್ಲಿ ಕಳೆದು
ಹೋಗಿದ್ದ ನೆಲೆಯನ್ನು ಮರಳಿ ಪಡೆಯುವ ಬಿಜೆಪಿಯ ಗುಪ್ತ ಉದ್ದೇಶ ಸ್ಪಷ್ಟವಾಗಿದೆ. ಜಾತಿ ಜನಗಣತಿಯ ಮೂಲಕ ರಾಜ್ಯ ರಾಜಕಾರಣದ ಮೇಲೆ ಹಿಡಿತ ಸಾಧಿಸಲೆತ್ನಿಸಿದ್ದ
ಜೆಡಿಯು–ಆರ್ಜೆಡಿ ನೇತೃತ್ವದ ಸರ್ಕಾರಕ್ಕೆ ಟಾಂಗ್ ಕೊಡುವ ಬಿಜೆಪಿಯ ಉಪಾಯ ಕುರಿತ ಗುಮಾನಿ ಭಾರತರತ್ನ ಘೋಷಣೆಯಾದ ದಿನವೇ ನಮ್ಮಂಥವರಲ್ಲಿ ಹುಟ್ಟಿತ್ತು. ಗುಮಾನಿ ನಿಜವಾಗಿದೆ. ನಿತೀಶ್ ಕುಮಾರ್ ಮತ್ತೆ ಆರ್ಜೆಡಿಗೆ ಕೈಕೊಟ್ಟಿದ್ದಾರೆ.

ಇದು, ಜೆಡಿಯು ಪಕ್ಷವನ್ನೇ ಒಡೆಯಲು ಯತ್ನಿಸಿದ್ದ ಬಿಜೆಪಿಗೇ ಮಂಕುಬೂದಿ ಎರಚಿದ ನಿತೀಶ್ ಆಟವೋ? ಹೆಚ್ಚಿನ ಲೋಕಸಭಾ ಸೀಟುಗಳಿಗಾಗಿ ಆರ್ಜೆಡಿಯನ್ನು ಬ್ಲ್ಯಾಕ್ಮೇಲ್ ಮಾಡುತ್ತಲೇ ನಡೆದ ಸಮಯಸಾಧಕ ಜಿಗಿತವೋ? ಅಂತೂ ಭಾರತದ ಅತ್ಯುನ್ನತ ಪ್ರಶಸ್ತಿ ಕ್ಷುದ್ರ ರಾಜಕಾರಣದ ಭಾಗವಾಗಿಬಿಟ್ಟಿತು; ಬಿಹಾರ ರಾಜಕೀಯದ ‘ಒಡಕಲು ಬಿಂಬ’ಗಳಿಂದಾಗಿ, ಹಿಂದುಳಿದ ವರ್ಗಗಳ ದೊಡ್ಡ ನಾಯಕನಿಗೆ ಸಿಕ್ಕ ಭಾರತರತ್ನದ ಸಂಭ್ರಮ ಕರಗಿಹೋಯಿತು.

ಅದೇನೇ ಇರಲಿ, ಎಪ್ಪತ್ತರ ದಶಕದಲ್ಲಿ ಜಯಪ್ರಕಾಶ ನಾರಾಯಣ ಅವರ ಜೊತೆಗೂಡಿ ಕಾಂಗ್ರೆಸ್ಸೇತರ ಪಕ್ಷಗಳನ್ನು ಒಗ್ಗೂಡಿಸುವ ‘ಸಮನ್ವಯ’ ರಾಜಕಾರಣ ಮಾಡಿದ್ದ ಕರ್ಪೂರಿ ಠಾಕೂರ್ ಥರದವರಿಂದ ಕೂಡ ಬಿಜೆಪಿ ಇವತ್ತು ಅಧಿಕಾರದಲ್ಲಿದೆ. ಕರ್ಪೂರಿಯವರಿಗೆ ಬಿಜೆಪಿ ಮಾಡಿದ ‘ಋಣಸಂದಾಯ’ದ ಒಳ ಉದ್ದೇಶಗಳೇನೇ ಇರಲಿ, ಭಾರತರತ್ನವು ಕರ್ಪೂರಿ ಠಾಕೂರರ ಕಮಿಟೆಡ್ ಸಮಾಜವಾದಿ ರಾಜಕಾರಣಕ್ಕೆ ಅರ್ಹ ಗೌರವ ಎಂದೇ ತಿಳಿಯಬೇಕು.

ಬಿಹಾರದಲ್ಲಿ ಪ್ರಬಲ ಹಿಂದುಳಿದ ವರ್ಗಗಳ ರಾಜಕಾರಣಕ್ಕೆ ಭದ್ರ ತಳಹದಿ ಹಾಕಿದವರು ಕರ್ಪೂರಿ ಠಾಕೂರ್. ಹಿಂದುಳಿದ ವರ್ಗಗಳ ರಾಜಕಾರಣದ ತಾತ್ವಿಕತೆ, ಸಾಧ್ಯತೆಗಳನ್ನು ವಿಸ್ತರಿಸಿದ ಅವರು ಹಿಂದುಳಿದವರು ಅಧಿಕಾರ ಹಿಡಿಯುವ ಸಮೀಕರಣಗಳನ್ನು ರೂಪಿಸಿದರು. ಅರವತ್ತರ ದಶಕದಲ್ಲಿ ಭಾರತೀಯ ಸಮಾಜವಾದದ ತಾತ್ವಿಕ ಚೌಕಟ್ಟುಗಳನ್ನು ರೂಪಿಸುತ್ತಿದ್ದ ರಾಮಮನೋಹರ ಲೋಹಿಯಾ, ಚುನಾವಣಾ ರಾಜಕಾರಣದ ಮೂಲಕ ಸಮಾಜವಾದಿ ಚಿಂತನೆಗಳನ್ನು ಕಾರ್ಯರೂಪಕ್ಕೆ ಇಳಿಸಬಲ್ಲ ನಾಯಕರನ್ನು ಹುಡುಕುತ್ತಿದ್ದರು. ಆಗ ಲೋಹಿಯಾಗೆ ಸಿಕ್ಕ ಕರ್ಪೂರಿ ಠಾಕೂರ್, ಲೋಹಿಯಾ ಪ್ರತಿಪಾದಿಸಿದ ಶೂದ್ರ ರಾಜಕಾರಣದ ತಾತ್ವಿಕತೆಯ ಫಲವಾಗಿಯೂ ಮುಖ್ಯಮಂತ್ರಿಯಾದರು; ‘ಜನನಾಯಕ’ನೆಂದೇ
ಜನಪ್ರಿಯರಾದರು.

ಬಡ ಕ್ಷೌರಿಕ ಕುಟುಂಬದಿಂದ ಬಂದು 1971ರಲ್ಲಿ ಐದು ತಿಂಗಳು ಹಾಗೂ 1977-79ರ ನಡುವೆ ಒಂದೂವರೆ ವರ್ಷ ಬಿಹಾರದ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಎರಡನೆಯ ಸಲ ಅಧಿಕಾರದಲ್ಲಿದ್ದಾಗ ಲೋಹಿಯಾ ಕನಸಿನ ಸಮಾಜವಾದಿ ಪಕ್ಷದ ಪ್ರಣಾಳಿಕೆಯ ಕೆಲವಾದರೂ ಯೋಜನೆಗಳನ್ನು, ಜೆ.ಪಿ.ಯವರ ‘ಅಂತ್ಯೋದಯ’ ಕಾರ್ಯಕ್ರಮವನ್ನು ಜಾರಿಗೊಳಿಸಿದರು. ಜಾತಿ ಆಧಾರಿತ ಅಸಮಾನತೆಯನ್ನು ತೊಡೆಯದ ರಾಜಕೀಯವು ಅರ್ಥಹೀನ ಎಂದು ಲೋಹಿಯಾ ಅವರಂತೆಯೇ ನಂಬಿದ್ದ ಕರ್ಪೂರಿ, ಸಮಾಜವಾದಿ ಸಿದ್ಧಾಂತದ ಯೋಜನೆಗಳನ್ನು ರೂಪಿಸಿದರು. ಆದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟಾಗ, ತಮ್ಮದೇ ಜನತಾಪಕ್ಷದಲ್ಲಿದ್ದ ಪ್ರಬಲ ಜಾತಿಗಳು ಹಾಗೂ ಜನಸಂಘದ ಚಿತಾವಣೆಯಿಂದ ಅಧಿಕಾರ ಕಳೆದುಕೊಂಡರು.

ಇವತ್ತಿನ ಅವಕಾಶವಾದಿ ರಾಜಕಾರಣವನ್ನು ನೋಡಿ ಅಸಹ್ಯಗೊಂಡವರಿಗೆ ಕರ್ಪೂರಿ ಠಾಕೂರ್ ರಾಜಕಾರಣ ಗತಕಾಲದ ಆದರ್ಶದಂತೆ ಕಾಣತೊಡಗುತ್ತದೆ.

ಹದಿಹರೆಯದ ಕರ್ಪೂರಿ, ಗಾಂಧೀಜಿ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಭೂಗತ ಹೋರಾಟಕ್ಕಿಳಿದರು. ಸಾಮಾಜಿಕ ಬದಲಾವಣೆಯ ರಾಜಕಾರಣದ ಪಾಠಗಳನ್ನು ಕಲಿತರು. ಒಮ್ಮೆ ಕರ್ಪೂರಿ ಎಂಬ ತರುಣನ ಜಬರ್ದಸ್ತ್ ಭಾಷಣ ಕೇಳಿದ ನಾಯಕರೊಬ್ಬರು ಅವರನ್ನು ‘ಠಾಕೂರ್’ ಎಂದರು. ಅವತ್ತಿನಿಂದ ಅವರು ಕರ್ಪೂರಿ ಠಾಕೂರ್ ಆದರು. 1952ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಬಿಹಾರದ ಪ್ರಥಮ ವಿಧಾನಸಭೆಗೆ ಆಯ್ಕೆಯಾದ ಕರ್ಪೂರಿ ಠಾಕೂರ್, ಚುನಾವಣೆಯಲ್ಲಿ ಒಮ್ಮೆ ಮಾತ್ರ ಸೋತರು. ಕೊನೆಯವರೆಗೂ ಬಿಹಾರ ವಿಧಾನಸಭೆ ಅಥವಾ ಲೋಕಸಭೆಗೆ ವಿವಿಧ ಕ್ಷೇತ್ರಗಳಿಂದ ಗೆಲ್ಲುತ್ತಲೇ ಇದ್ದರು.

ಜಾತಿಯ ಬಲವಿಲ್ಲದೆ ಸರಳ ವ್ಯಕ್ತಿತ್ವ, ಕಾರ್ಯಕರ್ತನ ನಮ್ರತೆ, ಅಧಿಕಾರದ ಒಳ-ಹೊರಗಿದ್ದಾಗ ಮಾಡಿದ ಜನಹಿತದ ಕೆಲಸಗಳ ಬಲದಿಂದಲೇ ಚುನಾವಣೆ ಗೆಲ್ಲುತ್ತಿದ್ದರು. ಅಧಿಕಾರದಲ್ಲಿದ್ದಾಗ ಕರ್ಪೂರಿ ಠಾಕೂರ್ ಜಾರಿಗೆ ತಂದ ಸಮಾಜವಾದಿ ಕಾರ್ಯಕ್ರಮಗಳು ಬಿಹಾರದ ತಬ್ಬಲಿ ಜಾತಿಗಳ ಬದುಕಿನ ದಿಕ್ಕುದೆಸೆಗಳನ್ನು ನಿರ್ಣಾಯಕವಾಗಿ ಬದಲಿಸಿದವು. ಅವರು ದೇಶದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗ ಹಾಗೂ ಅತಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ತಂದರು. ಶಾಲಾ-ಕಾಲೇಜುಗಳಲ್ಲಿ ಎಲ್ಲ ವಿಷಯಗಳಲ್ಲೂ ಒಳ್ಳೆಯ ಅಂಕ ಪಡೆದು, ಇಂಗ್ಲಿಷಿನಲ್ಲಿ ಫೇಲಾಗುತ್ತಿದ್ದ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ‘ಪಾಸ್ ವಿಥೌಟ್ ಇಂಗ್ಲಿಷ್’ ಎಂಬ ಅವಕಾಶ ಮಾಡಿಕೊಟ್ಟರು. ಸಮಾಜವಾದವನ್ನು ನಡೆ ನುಡಿ, ಸಂವೇದನೆಗಳಲ್ಲಿ ರೂಢಿಸಿಕೊಂಡಿದ್ದರು. ಕಾವ್ಯ, ರಾಜಕಾರಣ, ಸಮಾಜ ಕುರಿತ ಪುಸ್ತಕಗಳನ್ನು ಕೊಂಡು ಓದುತ್ತಿದ್ದರು. ಕ್ಷೇತ್ರವಾರು ಜಾತಿ ಸಮೀಕರಣಗಳು, ಪಕ್ಷಗಳ ವೋಟುಗಳ ಅಂಕಿ ಅಂಶಗಳು ಅವರ ನಾಲಗೆಯ ತುದಿಯಲ್ಲಿ ಇರುತ್ತಿದ್ದವು.

ಸರ್ಕಾರಗಳು ಉರುಳಿ, ತಮ್ಮ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿ ಸ್ಥಾನಗಳ ಕಾಲ ಮುಗಿದು ವಿರೋಧ ಪಕ್ಷದಲ್ಲಿ ಕೂತ ತಕ್ಷಣ ಕರ್ಪೂರಿ ಹೊಸ ಪಾತ್ರಕ್ಕೆ ಸಜ್ಜಾಗುತ್ತಿದ್ದರು. ವಿರೋಧ ಪಕ್ಷದ ನಾಯಕನಾದಾಗಲೂ ಜನನಾಯಕನ ಜವಾಬ್ದಾರಿಯಿಂದಲೇ ಕೆಲಸ ಮಾಡುತ್ತಿದ್ದರು. ‘ನಾವು ವಿರೋಧ ಪಕ್ಷದಲ್ಲಿದ್ದಾಗ ಮಾಡುವ ಡಿಮ್ಯಾಂಡುಗಳಲ್ಲೂ ನೈತಿಕತೆಇರಬೇಕು; ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದೆ ನಾವು ಅಧಿಕಾರಕ್ಕೆ ಬಂದಾಗ ಜಾರಿಗೊಳಿಸಬಲ್ಲಂಥ ಬೇಡಿಕೆಗಳನ್ನಷ್ಟೇ ಮಂಡಿಸಬೇಕು’ ಎನ್ನುತ್ತಿದ್ದರು. ಜನತಾಪಕ್ಷದಿಂದ ಲೋಕದಳಕ್ಕೆ ಹೋಗಿ, ಲೋಕದಳ ಬಿಟ್ಟು, ತಮ್ಮದೇ ಲೋಕದಳವನ್ನೂ ಕಟ್ಟಿದ್ದ ಕರ್ಪೂರಿ, ‘ಪಕ್ಷಾಂತರಿ’ ಎಂಬ ಟೀಕೆಗೊಳಗಾಗಿದ್ದರು. ಆದರೆ ಅವರ ಪಕ್ಷ ಬದಲಾವಣೆ ಸಮಾಜವಾದಿ ತತ್ವಗಳಿಗೆ ಹತ್ತಿರವಿದ್ದ ವಿರೋಧಪಕ್ಷಗಳ ಜೊತೆಗಷ್ಟೇ ನಡೆಯುತ್ತಿತ್ತು. ಅದು, ನಿತೀಶ್ ಥರದ ಅಧಿಕಾರದಾಹದ ಲಜ್ಜೆಗೇಡಿ ಕೂಡಾವಳಿಯಾಗಿರಲಿಲ್ಲ.

ಆದರೆ ಕರ್ಪೂರಿಯವರಿಗೆ ಭಾರತರತ್ನ ಬರುವಲ್ಲಿ ತನ್ನ ಪಾಲೂ ಇತ್ತೆಂದು ಹೇಳಿಕೊಳ್ಳಲು ಹೊರಟ ನಿತೀಶ್ ಅವರಿಂದ ಕರ್ಪೂರಿಯವರ ಆದರ್ಶ ರಾಜಕಾರಣದ ಚರ್ಚೆಯೇ ಹಿನ್ನೆಲೆಗೆ ಸರಿದುಹೋಯಿತು. ಪ್ರಶಸ್ತಿಯ ತೆರೆಮರೆ ಬಳಸಿಕೊಂಡು ಎನ್ಡಿಎಗೆ ಹಾರಲೆತ್ನಿಸಿದ ನಿತೀಶ್, ‘ನಾನು ಎಷ್ಟು ಕೇಳಿಕೊಂಡರೂ ಯುಪಿಎ ಸರ್ಕಾರ ಕರ್ಪೂರಿಯವರಿಗೆ ಭಾರತರತ್ನ ಕೊಟ್ಟಿರಲಿಲ್ಲ’ ಎಂದು ತಿವಿದರು. ‘ಕರ್ಪೂರಿಯವರು ಎಂದೂ ಕುಟುಂಬ ರಾಜಕಾರಣ ಮಾಡಲಿಲ್ಲ’ ಎಂದು ಅಭಿನಂದಿಸುತ್ತಲೇ ಕುಟುಂಬ ರಾಜಕಾರಣವನ್ನು ಕುಟುಕುವ ಮೂಲಕ ಒಂದು ಬಾಣವನ್ನು ಕಾಂಗ್ರೆಸ್ ಕಡೆಗೂ ಮತ್ತೊಂದು ಬಾಣವನ್ನು ಲಾಲೂ, ತೇಜಸ್ವಿ ಯಾದವರ ಕಡೆಗೂ ಬಿಟ್ಟರು. ನಾಲ್ಕೇ ದಿನಗಳಲ್ಲಿ ಬಾಣಸಮೇತ ಎನ್ಡಿಎಗೆ ಹಾರಿಬಿಟ್ಟರು. ಈ ಬಾಣಕ್ಕೆ ಮುಂದೆ ಕರ್ಪೂರಿ ಠಾಕೂರರ ಬಿಹಾರವೇ ತಿರುಗುಬಾಣವಾಗಬಹುದು. ಬಿಹಾರದಲ್ಲಷ್ಟೇ ಕೈ ಕೊಡುತ್ತಿದ್ದ ನಿತೀಶ್ ಈಗ ಇಡೀ ದೇಶದ ವಿರೋಧ ಪಕ್ಷಗಳ ಸಮೂಹಕ್ಕೇ ಕೈ ಕೊಟ್ಟಿರುವುದರಿಂದ ಇದು ಅವರ ಕೊನೆಯಾಟವೂ ಆಗಬಹುದು!

ಲೋಹಿಯಾ, ಜೆ.ಪಿ., ಕರ್ಪೂರಿ ಠಾಕೂರ್ ಹೆಸರು ಹೇಳುತ್ತಲೇ ಕುಟಿಲ ರಾಜಕಾರಣ ಮಾಡುವ ನಿತೀಶ್ ವರಸೆ ಕಂಡು, ಭಾರತರತ್ನ ಪಡೆದು ಹಿಗ್ಗಿದ್ದ ಕರ್ಪೂರಿಯವರ ಸಮಾಜವಾದಿ ಆತ್ಮ ವಿಷಾದದಿಂದ ಕುಗ್ಗಿರಬಹುದು! ಆದರೂ ಕರ್ಪೂರಿ ಠಾಕೂರ್ ‘ಭಾರತರತ್ನ’ ಆದ ಸಂದರ್ಭದಲ್ಲಿ ಲೋಹಿಯಾ-ಜೆ.ಪಿ-ಕರ್ಪೂರಿಯವರ ಸಮಾಜವಾದಿ ರಾಜಕಾರಣದ ಅಗತ್ಯ, ಮಹತ್ವದ ಬಗ್ಗೆ ಚರ್ಚಿಸಬೇಕು; ಹೊಸ ತಲೆಮಾರುಗಳಿಗೆ ಸಮಾಜವಿಭಜಕ ರಾಜಕಾರಣಕ್ಕಿಂತ ಸಂಪೂರ್ಣ ಭಿನ್ನವಾದ ಸಮಾಜ ನಿರ್ಮಾಣ ರಾಜಕಾರಣದ ಅರಿವನ್ನಾದರೂ ಮೂಡಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.