ಬಿಹಾರದಲ್ಲಿ ಬರೀ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಮಿಂಚಿನ ವೇಗದ ರಾಜಕೀಯ ಕ್ರಾಂತಿಯೊಂದು ನಡೆದೇ ಹೋಯಿತು. ಮಹಾರಾಷ್ಟ್ರದ ‘ಪಾರ್ಟಿ ಹೈಜಾಕ್’ ಪಟಾಕಿ ಬಿಹಾರದಲ್ಲಿ ಕಿಡಿ ತಾಕುವ ಮೊದಲೇ ಠುಸ್ಸೆಂದಿತು!

ಎರಡು ತಿಂಗಳ ಕೆಳಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಗೃಹ ಸಚಿವರಿಗಾಗಲೀ ಗುಪ್ತಚರ ದಳಕ್ಕಾಗಲೀ ಸುಳಿವು ಕೊಡದೆ, ಏಕಾಏಕಿ ಏಕನಾಥ ಶಿಂದೆ ಬಣವನ್ನು ಹೈಜಾಕ್ ಮಾಡಿದ ದಿನವೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೊಸ ಸ್ಕ್ರಿಪ್ಟ್ ತಯಾರಾಗತೊಡಗಿದಂತಿದೆ!

ಹೆಚ್ಚು ಮಾತಾಡದೆ ಒಳಗೊಳಗೇ ಲೆಕ್ಕಾಚಾರ ಹಾಕಿ, ಒಂದೇ ದಿಕ್ಕಿನತ್ತ ಕಣ್ಣಿಟ್ಟು ಗುರಿ ಸಾಧಿಸುವ ಎಂಜಿನಿಯರ್ ನಿತೀಶ್ಗೆ ತಮ್ಮ ಪಕ್ಷಕ್ಕೂ ಒದಗಲಿರುವ ಗತಿ ಪರದೆಯ ಮೇಲೆ ಮೂಡಿತ್ತೇನೋ. ಕೊಂಚ ಮುಗ್ಧರಾದ ಉದ್ಧವ್ ಅವರಿಗೆ ಇರದಿದ್ದ ರಾಜಕೀಯ ಸಂಚುಗಳ ಜ್ಞಾನ ಐವತ್ತು ವರ್ಷ ರಾಜಕೀಯ ಮಾಡಿರುವ ನಿತೀಶ್ ಅವರಿಗಿತ್ತು. ತಕ್ಷಣ ಹುಷಾರಾದ ನಿತೀಶ್, ಒಂದು ಕಾಲಕ್ಕೆ ತಮ್ಮ ಬಲಗೈಯಾಗಿದ್ದ ಆರ್.ಸಿ.ಪಿ. ಸಿಂಗ್ ದೆಹಲಿ- ಪಟ್ನಾ ನಡುವೆ ಅನುಮಾನಾಸ್ಪದವಾಗಿ ಅಡ್ಡಾಡತೊಡಗಿದ ಮೇಲಂತೂ ‘ಪಾರ್ಟಿ ಹೈಜಾಕ್’ನ ಕಮಟು ವಾಸನೆ ಹಿಡಿದೇಬಿಟ್ಟರು. ಬಿಹಾರದ ಶಾಸಕರಿಗೆ ಆಮಿಷಗಳನ್ನೊಡ್ಡಿದ ದೃಶ್ಯಗಳೂ ಹರಿದಾಡತೊಡಗಿದವು. 2020ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೃಪಾಪೋಷಿತ ಚಿರಾಗ್ ಪಾಸ್ವಾನ್ ಅವರ ‘ವೋಟ್ ಕತ್ತರಿ’ ಆಟದಿಂದಾಗಿ ಹತ್ತಾರು ಸೀಟುಗಳನ್ನು ಕಳೆದುಕೊಂಡಿದ್ದ ನಿತೀಶ್ ಕುದಿಯುತ್ತಲೇ ಇದ್ದರು. ಇವೆಲ್ಲ ಸೇರಿಕೊಂಡು ನಿತೀಶರ ಕ್ಷಿಪ್ರ ‘ರಿವರ್ಸ್ ಆಪರೇಷನ್’ ನಡೆಯಿತು; ಶಾಸಕರ ಹರಾಜು, ಮಾರಾಟ, ರೆಸಾರ್ಟ್ ಬಂಧನಗಳ ಪ್ರಹಸನ ತಪ್ಪಿತು! ನಿತೀಶ್ ಮತ್ತೆ ಮುಖ್ಯಮಂತ್ರಿಯಾದರು.

ನಿತೀಶ್ ಬಾಂಬ್ ಹಠಾತ್ತನೆ ಸ್ಫೋಟಗೊಂಡಂತಿದ್ದರೂ, ಕೆಲವು ತಿಂಗಳುಗಳಿಂದ ಬಿಹಾರದಲ್ಲಿ ಒಳಗೊಳಗೇ ರಾಜಕೀಯ ಬದಲಾವಣೆಗಳ ಸೂಚನೆಗಳು ಕಾಣುತ್ತಲೇ ಇದ್ದವು. ಕಳೆದ ರಂಜಾನ್ ಉಪವಾಸ ಕಾಲದ ಇಫ್ತಾರ್ ಕೂಟಕ್ಕೆ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಮುಖಂಡ ತೇಜಸ್ವಿ ಯಾದವ್ ಅವರ ಮನೆಗೆ ನಿತೀಶ್ ಹೋದಾಗಲೇ ಇಂಥದೊಂದು ಒಕ್ಕೂಟದ ಸಾಧ್ಯತೆಯನ್ನು ನಿತೀಶ್–ತೇಜಸ್ವಿ ಇಬ್ಬರೂ ಮನಗಂಡಂತಿದ್ದರು. ಅವತ್ತು ‘ಯಾವುದಕ್ಕೂ ಇರಲಿ’ ಎಂಬಂತೆ ತೇಜಸ್ವಿ ಅವರ ತಾಯಿ, ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿಯವರ ಬಳಿ ನಿತೀಶ್, ‘ಮಾಫ್ ಕೀಜಿಯೇಗಾ’ ಎಂದು ಹೇಳಿದ್ದೂ ಆಯಿತು!

ಬೆಲೆಯೇರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಆರ್ಜೆಡಿ ಈಚೆಗೆ ನಡೆಸಿದ ಪ್ರತಿಭಟನೆ ಯಶಸ್ವಿಯಾಗಲು ಬಿಹಾರದ ಪೊಲೀಸರೂ ನೆರವಾಗಿ ದ್ದರು. ಪ್ರಧಾನಮಂತ್ರಿ ಕರೆದ ಸಭೆಗಳಿಗೆ ನಿತೀಶ್ ಪದೇ ಪದೇ ಗೈರುಹಾಜರಾದರು. ಪಾಲುದಾರ ಪಕ್ಷ ಬಿಜೆಪಿ ವಿರೋಧಿಸುತ್ತಿದ್ದ ಜಾತಿ ಜನಗಣತಿ ಮಾಡಲು ತೇಜಸ್ವಿ ಹಾಗೂ ಇತರ ವಿರೋಧ ಪಕ್ಷಗಳ ಜೊತೆ ಚರ್ಚಿಸಿ ನಿತೀಶ್ ಮುಂದಿನ ಹೆಜ್ಜೆಯಿಟ್ಟರು. ರಂಜಾನ್ನ ಇಫ್ತಾರ್ ಕೂಟದಲ್ಲಿ ಶುರುವಾದ ಹೊಸ ಮೈತ್ರಿಯ ಫಲವಾಗಿ, ಮೊಹರಂನ ಹುತಾತ್ಮ ದಿನದಂದು ಹಳೇ ಮೈತ್ರಿಗೆ ‘ಅಲ್ವಿದಾ’ ಹೇಳುವ ಚಣ ಬಂದೇಬಿಟ್ಟಿತು!

ಕೆಲವು ತಿಂಗಳಿಂದ ಸಂಖ್ಯಾಬಲದ ಆಟದತ್ತಲೂ ನಿತೀಶ್-ತೇಜಸ್ವಿ ಕಣ್ಣಿಟ್ಟಿದ್ದರು. ಜೂನ್ ಕೊನೆಯ ವಾರದಲ್ಲಿ ಎಐಎಂಐಎಂ ಪಕ್ಷದ ನಾಲ್ವರು ಶಾಸಕರು ಆರ್ಜೆಡಿ ಸೇರಿದ್ದು ಕೂಡ ನಿತೀಶ್-ತೇಜಸ್ವಿಯವರ ಮುಂದಿನ ಯೋಜನೆಗಳ ಭಾಗವಾಗಿತ್ತು. ನಾಲ್ವರು ಶಾಸಕರ ಸೇರ್ಪಡೆಯಿಂದ ಬಿಹಾರ ವಿಧಾನಸಭೆಯಲ್ಲಿ ಆರ್ಜೆಡಿ ಅತಿ ಹೆಚ್ಚು ಸಂಖ್ಯಾಬಲದ ಪಕ್ಷವಾಯಿತು. ನಿತೀಶ್ ಎನ್ಡಿಎ ಬಿಟ್ಟು ಬಂದರೆ, ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಆರ್ಜೆಡಿಯನ್ನು ಆಹ್ವಾನಿಸುವುದು ಅನಿವಾರ್ಯವಾಗಲೇಬೇಕೆಂಬ ಲೆಕ್ಕಾಚಾರವೂ ಈ ನಡೆಯಲ್ಲಿತ್ತು.

ಕಳೆದ ಆರು ತಿಂಗಳುಗಳಿಂದ ನಿತೀಶ್ ಬಿಜೆಪಿಯನ್ನೂ, ಬಿಜೆಪಿ ರಾಜ್ಯ ಘಟಕವು ನಿತೀಶರನ್ನೂ ಮೂಲೆಗೆ ಒತ್ತರಿಸುವ ಆಟ ನಡೆಯುತ್ತಲೇ ಇತ್ತು. ಬಿಜೆಪಿಯಿಂದ ಬಂದಿದ್ದ ಸ್ಪೀಕರ್ ನೀಡಿದ್ದ ರೂಲಿಂಗ್ಗಳ ವಿರುದ್ಧವೇ ನಿತೀಶ್ ಗುಡುಗುತ್ತಿದ್ದರು. ವಿಧಾನಸಭಾಧ್ಯಕ್ಷ ರನ್ನೇ ‘ಸಂವಿಧಾನ ವಿರೋಧಿ’ ಎಂದು ಕರೆದು, ವಾಕೌಟ್ ಮಾಡಿ ಬಂಡಾಯದ ಸ್ಪಷ್ಟ ಸಂದೇಶ ಕೊಟ್ಟಿದ್ದರು. ಇದಕ್ಕೆ ಉತ್ತರವೆಂಬಂತೆ, ಬಿಹಾರ ವಿಧಾನಸಭೆಯ ಶತಮಾನೋತ್ಸವದ ಸಭೆಗೆ ನಿತೀಶ್ ಅವರಿಗೆ ಆಹ್ವಾನವನ್ನೇ ಕೊಡದ ಸ್ಪೀಕರ್, ಯುದ್ಧ ಮುಂದುವರಿಸಿದರು. ಇವೆಲ್ಲ ದಿಲ್ಲಿ ಚಿತಾವಣೆಯೆಂಬುದು ನಿತೀಶ್ ಅವರಿಗೂ ಗೊತ್ತಿತ್ತು. ಇದೇ 8ರಂದು ಕೋವಿಡ್ ಪಾಸಿಟಿವ್ ಆಗಿದ್ದ ಸ್ಪೀಕರ್, ಮುಂದಿನ ಇಪ್ಪತ್ನಾಲ್ಕು ಗಂಟೆಯಲ್ಲಾಗಲೇ ನೆಗೆಟಿವ್ ರಿಪೋರ್ಟ್ ಝಳಪಿಸುತ್ತಾ ವಿಧಾನಸಭಾ ಕಚೇರಿಗೆ ಧಾವಿಸಿದಾಗ, ಒಳಕಸರತ್ತೇನಾದರೂ ನಡೆಯಬಹುದೆಂಬ ಅನುಮಾನವೂ ಹಬ್ಬಿತ್ತು.

ಈ ನಡುವೆ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ‘ಇನ್ನು ಪ್ರಾದೇಶಿಕ ಪಕ್ಷಗಳು ದೂಳೀಪಟವಾಗುತ್ತವೆ’ ಎಂದಿದ್ದು ಕೂಡ ನಿತೀಶ್ ಬಂಡಾಯಕ್ಕೆ ಮತ್ತೊಂದು ನೆವವಾಯಿತು! ಇವೆಲ್ಲ ಸೇರಿಕೊಂಡು ನಿತೀಶ್-ತೇಜಸ್ವಿ ಹೊಸಮೈತ್ರಿಯ ಚಿತ್ರಕತೆ ಫೈನಲ್ಲಾಯಿತು. ದೆಹಲಿಯ ಮಗಳ ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿಯೇ ಈ ಚಿತ್ರಕತೆಗೆ ಐಡಿಯಾಗಳನ್ನು ರವಾನಿಸುತ್ತಿದ್ದ ಲಾಲೂ ಪ್ರಸಾದ್ ಹಾಗೂ ಸದ್ದಿಲ್ಲದೆ ಸಮ್ಮತಿಸಿದ ಸೋನಿಯಾ ಗಾಂಧಿ ಅವರ ಅಭಯಹಸ್ತ ಸಿಕ್ಕ ತಕ್ಷಣ ನಿತೀಶ್ ಮುನ್ನುಗ್ಗಿಯೇ ಬಿಟ್ಟರು. ಶತ್ರು ಯುದ್ಧಕ್ಕೆ ಸಿದ್ಧವಾಗುವ ಮೊದಲೇ ಧಡ್ಡನೆ ಕಾರ್ಪೆಟ್ ಬಾಂಬಿಂಗ್ ಮಾಡುವ ತಮ್ಮ ಹಳೆಯ ತಂತ್ರ ಪ್ರಯೋಗಿಸಿ ನಿತೀಶ್ ಈ ಸಲವೂ ಗೆದ್ದರು. ಇದು ಬಿಹಾರದ ಮುಖ್ಯಮಂತ್ರಿಯಾಗಿ ಅವರ ಎಂಟನೇ ಪ್ರಮಾಣವಚನ! ಮೂವತ್ತೆರಡರ ಹರೆಯದ ತೇಜಸ್ವಿಗೆ ಉಪಮುಖ್ಯಮಂತ್ರಿಯಾಗಿ ಎರಡನೇ ಪ್ರಮಾಣವಚನ!

ಯಾರ ಜೊತೆಯೂ ಹೆಚ್ಚು ಕಾಲ ಬಾಳದ ನಿತೀಶ್ ಅವರ ಹೊಸ ಸಂಸಾರ ಇನ್ನೆಷ್ಟು ದಿನ ನಡೆದೀತು ಎಂದು ಗೊಣಗುವವರಿದ್ದಾರೆ. ಅದೇನೇ ಇದ್ದರೂ, ‘ಚಾಚಾ-ಭತೀಜಾ’ ಸಮಾಜವಾದಿಗಳಾದ ನಿತೀಶ್- ತೇಜಸ್ವಿ ತಮ್ಮ ಹಳೆಯ ಅನುಮಾನ, ಠೇಂಕಾರ ಬಿಟ್ಟು ಕೆಲಸ ಮಾಡುತ್ತಾರೆಂದು ನಿರೀಕ್ಷಿಸೋಣ. ರಾಜ್ಯಪಾಲರನ್ನು ಭೇಟಿ ಮಾಡಿ ಬಂದ ಸಂಜೆ ತೇಜಸ್ವಿ ಆಡಿದ ಮಾತುಗಳ ಲ್ಲಿದ್ದ ಸಿದ್ಧತೆ, ಪ್ರಬುದ್ಧತೆ ಅವರು ಮಾಗಿದ ನಾಯಕನಾಗಿ ಬೆಳೆಯುವ ಸೂಚನೆಗಳನ್ನಂತೂ ನೀಡುತ್ತವೆ. ಏಳು ಪಕ್ಷಗಳ ಈ ಮೈತ್ರಿಯಲ್ಲಿ ತಳಮಟ್ಟದಿಂದ ಜನರೊಡನೆ ಕೆಲಸ ಮಾಡಿ, ನಾಗರಿಕ ಸಮಾಜದ ಹೋರಾಟಗಳನ್ನು ಮುನ್ನಡೆಸಿರುವ ಸಿಪಿಐಎಂಎಲ್(ಎಲ್)ನ 12, ಸಿಪಿಐನ 2, ಸಿಪಿಎಂನ 2 ಶಾಸಕರಿದ್ದಾರೆ. ಆದರೆ ಸಿಪಿಐಎಂಎಲ್(ಎಲ್) ‘ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಸೂಚಿಸಿ, ಸಾಮಾನ್ಯ ಕಾರ್ಯಸೂಚಿಯ ಜಾರಿಗೆ ಪ್ರಯತ್ನಿಸುತ್ತೇನೆ’ ಎನ್ನುತ್ತಿದೆ.

ಈ ಮಹಾಮೈತ್ರಿಯು ಮರ್ಯಾದೆಯಿಂದ ಆಡಳಿತ ನಡೆಸಿ 2024ರ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕಾದ ಸವಾಲೂ ಇದೆ. 71ರ ಹರೆಯದ ನಿತೀಶ್ ನಿಜಕ್ಕೂ ಮಾಗಿದ್ದರೆ, ಮುಂದಿನ ವರ್ಷ ತೇಜಸ್ವಿ ಅವರಿಗೆ ಮುಖ್ಯಮಂತ್ರಿಗಿರಿ ಬಿಟ್ಟು ರಾಷ್ಟ್ರ ರಾಜಕಾರಣ
ಕ್ಕಿಳಿಯುವ ಸಾಧ್ಯತೆಯೂ ಇದೆ. ಭಾರತದ ಹಲವು ವಿರೋಧ ಪಕ್ಷಗಳಿಗೆ ಒಪ್ಪಿಗೆಯಾಗಬಲ್ಲ ನಿತೀಶ್, ವಿರೋಧ ಪಕ್ಷಗಳ ಒಕ್ಕೂಟವನ್ನು ಗಟ್ಟಿಯಾಗಿ ಕಟ್ಟಲು ಪ್ರಾಮಾಣಿಕವಾಗಿ ನಿಂತರೆ ರಾಷ್ಟ್ರ ರಾಜಕಾರಣದ ದಿಕ್ಕುಬದಲಾದೀತು.

ಯಾವ ಪಕ್ಷವನ್ನಾದರೂ ಕೊಳ್ಳಬಹುದು ಇಲ್ಲಾ ಕೊಲ್ಲಬಹುದು ಎಂಬ ಅಹಂಕಾರಕ್ಕೆ ಎದುರೇಟು ಕೊಡುವ ಪಟ್ಟುಗಳನ್ನಂತೂ ಬಿಹಾರದ ಲೇಟೆಸ್ಟ್ ಮಾಡೆಲ್ ತೋರಿಸಿದೆ! ಮೊನ್ನೆ ಆಗಸ್ಟ್ 9ರಂದು, ‘1942ರ ಆಗಸ್ಟ್ 8-9ರ ನಡುವೆ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಗಾಂಧಿ ಘೋಷಣೆ ದೇಶದುದ್ದಕ್ಕೂ ಮೊಳಗಿ ಹೊಸ ದಿಕ್ಕು ಮೂಡಿತ್ತು’ ಎಂದ ತೇಜಸ್ವಿ, ‘ಬಿಹಾರದ ಮಹಾಮೈತ್ರಿ ದೇಶದ ವಿರೋಧ ಪಕ್ಷಗಳಿಗೆ ಹೊಸ ದಿಕ್ಕು ಕೊಡಲಿದೆ’ ಎಂದು ಖಡಕ್ಕಾಗೇ ಹೇಳಿದರು. ಭಾರತದ ಪ್ರಜಾಪ್ರಭುತ್ವದಲ್ಲಿ ಮೆಜಾರಿಟಿಯ ಬಲ, ಹಣಬಲದ ಅಬ್ಬರ ಎದ್ದಾಗಲೆಲ್ಲ ಅವನ್ನು ಮಟ್ಟ ಹಾಕುವ ಮಾದರಿಗಳೂ ಹುಟ್ಟುತ್ತಿರುತ್ತವೆ ಎಂಬುದನ್ನೂ ಇದು ತೋರಿಸುತ್ತದೆ.

ಅದೇ ವೇಳೆಗೆ, ಕರ್ನಾಟಕದಲ್ಲಿ ಮತ್ತೆ ಗುಲ್ಲೆದ್ದಿರುವ ‘ಮುಖ್ಯಮಂತ್ರಿ ಸ್ಥಾನಪಲ್ಲಟ’ದ ‘ಸಾಂಕ್ರಾಮಿಕ ರೋಗ’ಕ್ಕೂ ಬ್ರೇಕ್ ಬೀಳಬಹುದು! ಬಿಹಾರದಲ್ಲಿ ಕುರ್ಚಿ ಕಳೆದುಹೋದ ಪ್ರಯುಕ್ತ ಕರ್ನಾಟಕದಲ್ಲಿ ‘ಮುಖ್ಯಮಂತ್ರಿ ಮ್ಯೂಸಿಕಲ್ ಚೇರ್ ಟೂರ್ನಮೆಂಟ್’ ಕೆಲ ಕಾಲ
ಮುಂದೂಡಲ್ಪಡಬಹುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.