ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಜ್ಞಾನವೆಂಬ ದೀಪದ ಕೆಳಗಿನ ಕತ್ತಲೆ

Published : 14 ಜುಲೈ 2024, 23:14 IST
Last Updated : 14 ಜುಲೈ 2024, 23:14 IST
ಫಾಲೋ ಮಾಡಿ
Comments

ಶಿಕ್ಷಣವು ಏಕಕಾಲಕ್ಕೆ ನಮ್ಮನ್ನು ದೇಶಕಾಲ ಬದ್ಧ ನಾಗರಿಕರನ್ನಾಗಿಯೂ ವ್ಯಕ್ತಿತ್ವದ ಅನಂತ ಸಾಧ್ಯತೆಗಳನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲ ವಿಶ್ವಮಾನವರನ್ನಾಗಿಯೂ ವಿಕಾಸಗೊಳಿಸಬೇಕಾದ ಸಾಧನ ಹಾಗೂ ಸಾಧ್ಯತೆ. ಜ್ಞಾನವೆಂಬುದು ಕನ್ನಡಿಯೊಳಗಿನ ಗಂಟಲ್ಲ, ಅದು ಒಳಗಿಳಿದು ನಮ್ಮನ್ನು ಕಿಂಚಿತ್ತಾದರೂ ಪರಿವರ್ತಿಸದಿದ್ದರೆ ಆ ಜಡ ಜ್ಞಾನಕ್ಕೆ ಅರ್ಥವೂ ಇಲ್ಲ. ಹಾಗೆ ಪರಿವರ್ತಿಸುವ ಪ್ರಕ್ರಿಯೆಯು ಶಿಕ್ಷಕರನ್ನೂ ವಿದ್ಯಾರ್ಥಿಗಳನ್ನೂ ಒಳಗೊಳ್ಳುತ್ತದೆ.

ಜ್ಞಾನದ ಅಧಿಕೃತತೆಗೆ ಧಕ್ಕೆಯಾಗದಂತೆ, ಪಠ್ಯವನ್ನು ಸೃಜನಶೀಲಗೊಳಿಸುವುದು ಹಾಗೂ ಮಾನವೀಯಗೊಳಿಸುವುದು ಅಧ್ಯಾಪಕರ ಸತ್ವವನ್ನು ಅವಲಂಬಿಸಿದೆ. ಹಾಗೆಯೇ ಕಲಿಕೆಯನ್ನು ಒಂದು ಧ್ಯಾನದಂತೆ ತೀವ್ರವಾಗಿ ಪರಿಭಾವಿಸುವುದು ವಿದ್ಯಾರ್ಥಿಗಳ ಅರಿವಿನ ಹಂಬಲವನ್ನೂ ಬೇಡುತ್ತದೆ. ಹೀಗೆ ಶಿಕ್ಷಣವು ಜ್ಞಾನ ನಿರ್ಮಾಣ ಹಾಗೂ ಜ್ಞಾನಾರ್ಜನೆ ಈ ಎರಡೂ ಮಗ್ಗುಲುಗಳಲ್ಲಿ ವಿಕಾಸವಾಗುತ್ತಾ, ಎರಡೂ ತುದಿಗಳು ಸೇರಿ ಒಂದು ಪೂರ್ಣವೃತ್ತವಾಗಿ ವಿಕಾಸವಾಗುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಭಾಷೆ, ಸಾಹಿತ್ಯ ಹಾಗೂ ಮಾನವಿಕ ವಿಭಾಗಗಳು ವ್ಯಕ್ತಿ ಹಾಗೂ ಸಮಾಜದ ನಡುವಿನ ಸಂಕೀರ್ಣ ಸಂಬಂಧಗಳ ವಿನ್ಯಾಸವನ್ನು ಎಳೆಎಳೆಯಾಗಿ ಬಿಡಿಸುತ್ತಾ ಸಾಮಾಜಿಕ ಸ್ವಾಸ್ಥ್ಯವನ್ನೂ ವೈಯಕ್ತಿಕ ಹಾಗೂ ಸಾಮಾಜಿಕ ನೈತಿಕತೆಯ ತುರ್ತನ್ನೂ ಎತ್ತಿ ಹಿಡಿಯುತ್ತವೆ. ಇವನ್ನು ಸಾಧಿಸಲು ಮೊದಲು ಅಧ್ಯಾಪಕರು ಸಿದ್ಧಗೊಂಡಿದ್ದಾರೆಯೇ ಎಂಬ ಪ್ರಶ್ನೆ ಹೆಜ್ಜೆ ಹೆಜ್ಜೆಗೂ ಕಾಡದಿದ್ದರೆ ನಮ್ಮ ಶಿಕ್ಷಣ ವ್ಯವಸ್ಥೆಯು ಕಾಗದದ ಹೂವಾಗಿಯೇ ಉಳಿದುಬಿಡುತ್ತದೆ.

ವಿಶ್ವವಿದ್ಯಾಲಯವೊಂದರ ಅಧ್ಯಾಪಕಿಯಾಗಿ ಸೇರಿದ ಹೊಸದರಲ್ಲಿ ಅಂದಿನ ಪಾಠ ಮುಗಿದ ಮೇಲೆ ವಿದ್ಯಾರ್ಥಿಯೊಬ್ಬ ‘ಮೇಡಂ, ನೀವು ಮುಗ್ಧರಿದ್ದೀರಿ. ನೀವು ಮಾತಾಡುತ್ತಿರುವುದು ಆದರ್ಶವನ್ನು. ಆದರೆ ಅವೆಲ್ಲ ಸತ್ತು ಯಾವ ಕಾಲವಾಯಿತು? ಸಾಮಾಜಿಕ ಬದುಕು ನೀವಂದುಕೊಂಡಂತೆ ಇಲ್ಲ. ಈಗ ನಮ್ಮ ಮುಂದಿರುವ ಬದುಕಿನ ವೈರುಧ್ಯಗಳ ಬಗ್ಗೆ ನಾವು ಮಾತನಾಡಬೇಕಲ್ಲವೇ?’ ಎಂದ. ಅವನು ಪ್ರಶ್ನೆ ಕೇಳುತ್ತಿದ್ದಾನಾ? ನನಗೆ ಪಾಠ ಮಾಡುತ್ತಿದ್ದಾನಾ ಎಂದು ಅರೆಕ್ಷಣ ಗೊಂದಲಗೊಂಡೆ. ಆದರೆ ಅವನ ಈ ವರ್ತನೆ ನನಗಿಷ್ಟವಾಯಿತು. ತನಗನಿಸಿದ್ದನ್ನು //ನಿರ್ಭಿಡೆಯಾಗಿ// ಹೇಳಲೇಬೇಕೆಂಬ ತುಡಿತ ತುಂಬಿದ ಅವನ ಕಣ್ಣುಗಳು ಮುಂದೆ ತುಂಬ ದಿನ ಕಾಡಿದವು. ನಮ್ಮ ಅರಿವು ಹಾಗೂ ಇರುವಿನ ನಡುವಿನ ಬಿರುಕು ಇಂದಿನದಲ್ಲ. ಅದಕ್ಕೆ ದೀರ್ಘ ಚರಿತ್ರೆಯೇ ಇದೆ. ನೈತಿಕತೆ ಎಂದರೇನು ಎಂಬುದರ ವ್ಯಾಖ್ಯೆಗಳು ನಮಗೆ ಗೊತ್ತಿವೆ; ಆದರೆ ಅದು ನಮ್ಮ ಪ್ರಜ್ಞೆಯೊಳಗಿಲ್ಲ ಎಂಬುದೇ ನಮ್ಮ ಬಹುದೊಡ್ಡ ಬಿಕ್ಕಟ್ಟು.

ಈ ಪ್ರಶ್ನೆಗಳೆಲ್ಲ ಕೃತಕ ಬುದ್ಧಮತ್ತೆಯ ಚಾಟ್ ಜಿಪಿಟಿಗಳ ಕಾಲಕ್ಕೆ ತುಂಬ ಪುರಾತನ ಪ್ರಶ್ನೆಗಳಂತೆ  ಭಾಸವಾಗಬಹುದು. ಆದರೆ ನಾವಿನ್ನೂ ರಕ್ತಮಾಂಸಗಳುಳ್ಳ, ಭಾವನೆಗಳ ಮಿಡಿತವುಳ್ಳ ಅದೇ ಪುರಾತನ ಮನುಷ್ಯರೇ. ಆದ್ಯತೆಗಳು ಬದಲಾದರೂ ಆದಿಮ ಪ್ರವೃತ್ತಿಗಳು ಬದಲಾಗಿಲ್ಲ. ವಿದ್ಯಾರ್ಥಿಗಳೆಂಬ ಹೀರುಕಾಗದಗಳನ್ನು ನಾವೆಷ್ಟು ಶುಷ್ಕಗೊಳಿಸುತ್ತಿದ್ದೇವೆಂದರೆ ಅದಕ್ಕಿಂತ ದೊಡ್ಡ ಕ್ರೌರ್ಯ ಇನ್ನೊಂದಿಲ್ಲ. ಅಪರಾಧಿ ಭಾವವೇ ಇಲ್ಲದ ದೊಡ್ಡ ಗಂಟಲಿನ ಧೂರ್ತ ವ್ಯಕ್ತಿತ್ವಗಳ ವಿಜೃಂಭಣೆಯ ಕಾಲವಿದು. ಸಮಾಜದ ಮೌಲ್ಯಗಳು ಕುಸಿದಿವೆಯೆಂದಾದಲ್ಲಿ ನಮ್ಮಂಥ ಅಧ್ಯಾಪಕರ ಪಾತ್ರವೂ ಅದರಲ್ಲಿ ಇಲ್ಲದಿಲ್ಲ.

ನೈತಿಕ ಶಿಕ್ಷಣವೆಂದರೆ ಮೌಲ್ಯಗಳನ್ನು ಕುರಿತು ಭಾಷಣ ಮಾಡುವುದಲ್ಲ, ನಾವೇ ಅನ್ವಯಿಸಿಕೊಳ್ಳದ ನಿಯಮಗಳನ್ನು ಹಿರಿತನದ ಅಧಿಕಾರದಿಂದ ಹೇರುವುದೂ ಅಲ್ಲ. ಎಳೆಯರ ಪ್ರಾಕೃತಿಕ ಶಕ್ತಿಯು ಸರಿಯಾಗಿ ಹರಿಯುವಂತೆ ಆಗಲು ಮಾರ್ಗಗಳನ್ನು ತೋರುವುದು, ಭಾವನಾತ್ಮಕ ಬಿಕ್ಕಟ್ಟುಗಳನ್ನು ಬಿಡಿಸಿಕೊಳ್ಳುವ ವ್ಯವಧಾನವನ್ನು ಕಲಿಸುವುದು. ಬೌದ್ಧಿಕವಾಗಿ ಸಬಲಗೊಳಿಸುವುದು. ಬದುಕಿನ ಬಗೆಗೆ ಸಂವೇದನಾಶೀಲರಾಗಿಸುವುದು. ಹಾಗಾದರೆ ನಮ್ಮ ನಡುವಿನ ಸೂಕ್ಷ್ಮಜ್ಞ ವಿದ್ಯಾರ್ಥಿಗಳನ್ನು ನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ? ಅವರಲ್ಲಿ ಎಂಥ ಅರಿವನ್ನು ವಿಸ್ತರಿಸುತ್ತಿದ್ದೇವೆ? ಯಾವುದು ಮಾದರಿ ನಡೆ ಹಾಗೂ ಯಾವುದು ಅಲ್ಲ ಎಂದು ಹೇಳುವ ನೈತಿಕ ಸತ್ವ ನಮ್ಮಲ್ಲಿದೆಯೇ? ಇಂತಹ ಆತ್ಮವಿಮರ್ಶೆ ಮಾಡಿಕೊಳ್ಳಲು ಅಧ್ಯಾಪಕರಿಗಿದು ಸಕಾಲ.

ಗಾಂಧಿ, ಲೋಹಿಯಾ, ಅಂಬೇಡ್ಕರ್, ಬಸವ, ಬುದ್ಧರನ್ನೆಲ್ಲ ಅವರ ತಾತ್ವಿಕತೆಯ ಸಮೂಲ ತುಡಿತಗಳೊಂದಿಗೆ ಹೀರಿಕೊಳ್ಳಬೇಕೆಂಬ ಕನಸಿಗರು ವಿದ್ಯಾರ್ಥಿಗಳಲ್ಲಿ ಇನ್ನೂ ಇದ್ದಾರೆ. ಆದರೆ ಅವರನ್ನು ಈ ವಿದ್ವತ್ ವಲಯ ಎಂದು ಕರೆಸಿಕೊಂಡಿರುವ ವಲಯವು ಹೇಗೆ ನಡೆಸಿಕೊಳ್ಳುತ್ತಿದೆ? ಐನ್‌ಸ್ಟೀನ್ ಹೇಳಿದ್ದು ಎನ್ನಲಾದ ಮಾತೊಂದು ನೆನಪಾಗುತ್ತದೆ: ‘ವಿದ್ಯಾರ್ಥಿ ಎನ್ನುವುದು ನೀವು ತುಂಬಿಸಲು ಇರುವ ಪಾತ್ರೆಯಲ್ಲ; ಬದಲಾಗಿ ನೀವು ಬೆಳಗಿಸುವ ಸಲುವಾಗಿ ಇರುವ ದೀಪ’. ಆದರೆ ನಾವು ಅವರನ್ನು ಕಸದ ತೊಟ್ಟಿಯಾಗಿಸುತ್ತಿರುವುದೇ ಹೆಚ್ಚು.

ಹುಸಿ ಜಾತಿಪ್ರಜ್ಞೆ, ವೈಯಕ್ತಿಕ ಅಸೂಯೆ, ಇನ್ನೊಬ್ಬರ ತೇಜೋವಧೆ ಮಾಡಲು ಹಪಹಪಿಸುವ ಧೂರ್ತತೆ, ನಮ್ಮ ಸಕಲ ಸೋಗಲಾಡಿತನಗಳನ್ನು ಅಲ್ಲಿ ಸುರಿಯುತ್ತಿದ್ದೇವೆ. ಇದು, ನಿರಂತರವಾಗಿ ಭೂಮಿಗೆ ರಾಸಾಯನಿಕ ವಿಷ ಸುರಿಯುತ್ತಿರುವುದಕ್ಕಿಂತಲೂ ಮಿಗಿಲಾದ ಅಪಾಯಕಾರಿ ನಡೆ. ‘ಬೆಳೆಭೂಮಿಯಲ್ಲೊಂದು ಪ್ರಳಯದ ಕಸಹುಟ್ಟಿ ತಿಳಿಯಲೀಯದು ಎಚ್ಚರಲೀಯದು’ ಎಂಬ ಬಸವಣ್ಣನ ನೋವು ನಮಗೆ ಸೋಕದಿದ್ದರೆ ಇಡೀ ತಲೆಮಾರನ್ನು ವಿನಾಶದೆಡೆ ತಳ್ಳುವ ಪ್ರಳಯಕಾರಿಗಳು ನಾವೇ ಆಗುತ್ತೇವೆ. ಇಂಥ ಕಿಂಚಿತ್‌ ಎಚ್ಚರವಿಲ್ಲದೇ ನಮ್ಮ ಸಂಬಳ, ಬಡ್ತಿ, ಅಧಿಕಾರಗಳ ಸಲುವಾಗಿ ಹಪಹಪಿಸುತ್ತ ಸಮಾಜದ ಕಣ್ಣಲ್ಲಿ ಕುಗ್ಗಿರುವ ಅಧ್ಯಾಪಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಯಾಕೆಂದರೆ ಪ್ರಳಯ ನಮ್ಮನ್ನೂ ಬಿಡುವುದಿಲ್ಲ!

ಗುರುವಿನ ಸ್ಥಾನದಲ್ಲಿರುವ ನಾವು ನಮ್ಮ ನೈತಿಕ ಹಾಗೂ ಆಧ್ಯಾತ್ಮಿಕ ವಿಕಾಸಕ್ಕೆ ಬಾಗಿಲು ಹಾಕಿಕೊಂಡುಬಿಟ್ಟಿದ್ದೇವೆ. ಮುಗ್ಧತೆಯನ್ನು ಕೊಂದು ಬರಿಯ ಬುದ್ಧಿವಂತರನ್ನು ಸೃಷ್ಟಿಸಲು ಪಣತೊಟ್ಟಿದ್ದೇವೆ. ಬುದ್ಧ, ಬಸವ, ಅಂಬೇಡ್ಕರ್ ಎಲ್ಲರನ್ನೂ ನಮ್ಮ ಛದ್ಮವೇಷಗಳಿಗೆ ಬಳಸಿಕೊಳ್ಳುತ್ತಿದ್ದೇವೆ. ಅವರನ್ನು ತಮ್ಮ ಪಗಡೆಯಾಟದ ಕಾಯಿಗಳಂತೆ ಬಳಸಿಕೊಂಡು ಆಟವಾಡುವ ಕೆಲವು ಪ್ರಾಧ್ಯಾಪಕರ ಬುದ್ಧಿವಂತಿಕೆಯೇ ಅನೇಕ ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತಿರುವುದು ಈ ಕಾಲದ ಚೋದ್ಯ.

ವಿಶ್ವವಿದ್ಯಾಲಯಗಳು ನಮ್ಮ ಅಹಮ್ಮುಗಳ ಆಟದ ಮೈದಾನಗಳಾದಾಗ ಅಲ್ಲಿ ಸೃಷ್ಟಿಶೀಲತೆ ಸತ್ತುಹೋಗುತ್ತದೆ. ಜ್ಞಾನಸೃಷ್ಟಿಯ ಅಣಕ ನಡೆಯುತ್ತದೆ. ಕಟ್ ಎಂಡ್ ಪೇಸ್ಟ್ ಸರಕುಗಳು ಸಂಶೋಧನೆಯ ಹೆಸರಿನಲ್ಲಿ ಸದ್ದುಮಾಡುತ್ತವೆ. ಅದರ ಬಗೆಗೆ ಒಂದು ಸಣ್ಣ ಪಾಪಪ್ರಜ್ಞೆ ಕೂಡ ಬಾಧಿಸದಷ್ಟು ದಪ್ಪಚರ್ಮ ರೂಪುಗೊಳ್ಳುತ್ತದೆ. ನಮ್ಮೊಳಗಿನ ಸೂಕ್ಷ್ಮತೆಯೇ ಸತ್ತುಹೋಗಿರುವಾಗ ನಾವು ಏನನ್ನು ತಾನೇ ಬೆಳೆಸುತ್ತೇವೆ? ನಮ್ಮ ನಡೆನುಡಿಗಳು ಒಂದಾಗಿರುವುದನ್ನು ವಿದ್ಯಾರ್ಥಿಗಳು ನಿರೀಕ್ಷಿಸುತ್ತಾರಲ್ಲವೇ? ಒಬ್ಬ ಸಂವೇದನಾಶೀಲ ವಿದ್ಯಾರ್ಥಿಯನ್ನು ಹತ್ತಿರ ಕರೆದು ಮಮತೆಯಿಂದ ಮಾತಾಡಿಸಿದರೆ ಆತನ ಅತಂತ್ರ ಭಾವ ಎಷ್ಟು ಆಳವಾದುದೆಂಬುದು ಗೊತ್ತಾಗುತ್ತದೆ. ತಮ್ಮ ವಿದ್ವತ್ತಿನಿಂದ ಪ್ರಭಾವಿಸಲಾಗದ ಅಧ್ಯಾಪಕರು ಅಧಿಕಾರದಿಂದ ಭಯ ಹುಟ್ಟಿಸುತ್ತಾ, ಅಂಕಗಳಿಗಾಗಿ ವಿದ್ಯಾರ್ಥಿಗಳನ್ನು ಗುಲಾಮರಂತೆ ಬಳಸಿಕೊಳ್ಳುವಾಗ ಅವರ ಆತ್ಮಶ್ರೀ ಕುಸಿದುಹೋಗುತ್ತದೆ.

ನಿರಂಕುಶಮತಿಯನ್ನು ಬೆಳೆಸಬೇಕಾದ ತರಗತಿ ಕೊಠಡಿಗಳು ಗ್ಯಾಸ್ ಚೇಂಬರುಗಳಾಗುತ್ತವೆ. ಅರಿವಿನ ಹಂಬಲವನ್ನು ಹೊತ್ತುಬಂದ ಜೀವಂತಿಕೆಯುಳ್ಳ ವಿದ್ಯಾರ್ಥಿಗಳಲ್ಲಿ ತಮ್ಮ ಸತ್ವದ ಬಗ್ಗೆ ತಮಗೇ ಸಂಶಯ ಬರಲಾರಂಭಿಸುತ್ತದೆ. ಯಶಸ್ಸಿನ ಮಾನದಂಡಗಳೊಂದಿಗೆ ಸೆಣಸುತ್ತ ‘ಪ್ರಾಮಾಣಿಕತೆಯ ಫಲವೆಂಬ’ ಕನ್ನಡಿಯೊಳಗಿನ ಗಂಟು ಮನಸ್ಸಿನಿಂದ ದೂರವಾಗತೊಡಗುತ್ತದೆ. ಇದರ ನಡುವೆ ತಮಗೇನೂ ಕಲಿಕೆಯಾಗುತ್ತಿಲ್ಲ ಎಂಬ ತಳಮಳ ಹೆಚ್ಚಾಗುತ್ತದೆ. ಭವಿಷ್ಯದ ಬಗೆಗಿನ ಚಿಂತೆ ಎಳೆಯರನ್ನು ಹಿಂಡಿಹಾಕುತ್ತಿರುತ್ತದೆ. ಇಂದು ಮನುಷ್ಯ ಬದುಕಿನ ಸಂಕೀರ್ಣತೆ ಹೆಚ್ಚಿದೆ. ಮಕ್ಕಳಿಗೆ ತಮ್ಮನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಾಬೀತುಪಡಿಸಿಕೊಳ್ಳುವ ಉದ್ವಿಗ್ನತೆ ಅತ್ಯಂತ ಹೆಚ್ಚಿದೆ. ಇಂಥ ಕ್ಷಣಗಳಲ್ಲಿ ನಾವು ಅಧ್ಯಾಪಕರು ಸಂವೇದನಾಶೀಲರಾಗದಿದ್ದರೆ ‘ತಾಯ ಮೊಲೆಹಾಲು ನಂಜಾಗಿ ಕೊಲುವೊಡೆ ಇನ್ನಾರಿಗೆ ಹೇಳಲಿ’ ಎಂಬ ಅಳಲು ಮಾತ್ರ ಉಳಿಯುತ್ತದೆ.

ಲೇಖಕಿ: ಸಹಪ್ರಾಧ್ಯಾಪಕಿ, ಡಾ.ಡಿ.ವಿ.ಜಿ. ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾಲಯ, ತುಮಕೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT