ಇಡೀ ನಾಡು ತ್ರಸ್ತಗೊಂಡಿದೆ; ಅಸ್ತವ್ಯಸ್ತಗೊಂಡಿದೆ. ಒಂದೆಡೆ ಕ್ರೌರ್ಯದ ಹೇಷಾರವ ಹೆಚ್ಚಾಗಿದ್ದರೆ, ಮತ್ತೊಂದೆಡೆ ಸಂವೇದನಾಶೀಲ ಮನಸುಗಳು ದಿಗ್ಮೂಢವಾಗಿ ಕುಳಿತಿವೆ. ಕೋಮುದ್ವೇಷದ ವಿಷ ದಿನದಿಂದ ದಿನಕ್ಕೆ ‘ವಿಷಮ’ಶೀತ ಜ್ವರದ ಹಾಗೆ ಏರುತ್ತಲೇ ಇದೆ. ವಿಪರ್ಯಾಸವೆಂದರೆ ಕಣ್ಣು–ಹೃದಯಗಳಿಲ್ಲದ ಈ ಹರಿತ ಕತ್ತಿಯ ಬೀಸಿನ ಅಳವಿನಲ್ಲಿರುವವರೆಲ್ಲ ಎಳೆಯ ಕುಡಿಗಳು, ಮುಗ್ಧ ಮನಸ್ಸುಗಳು. ಕಾಲೇಜಿನ ಅಂಗಳದಲ್ಲಿ ಸೃಷ್ಟಿಯಾದ ‘ಹಿಜಾಬ್ ವಿವಾದ’ ಈಗ ಕೋರ್ಟಿನ ಅಂಗಳದಲ್ಲಿದೆ. ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತನ ಕೊಲೆ, ಅದರ ನಂತರ ನಡೆದ ದೊಂಬಿಗಳು ಕೋಮುದ್ವೇಷದ ಅಟ್ಟಹಾಸದ ಕ್ರೂರ ಕೋರೆ–ದಾಡೆಗಳನ್ನು ಕಾಣಿಸಿವೆ. ದೇಶಭಕ್ತಿ, ಧರ್ಮ, ಜಾತಿ ಎಲ್ಲವೂ ಪುರಾವೆಗಳನ್ನು ಬೇಡುತ್ತಿರುವ ಈ ಕಾಲದಲ್ಲಿ, ಮನುಷ್ಯನೆನಿಸಿಕೊಳ್ಳಲು ಅತ್ಯಗತ್ಯವಾದ ಆತ್ಮಸಾಕ್ಷಿಯೇ ಕಾಣೆಯಾಗುತ್ತಿದೆಯೇ? ಮುಗ್ಧ ಯುವಜನರದ ಬಿಸಿರಕ್ತದ ಕಾವಿನಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವರಿಗೆ ಈ ನೆಲದ, ಸಾಕ್ಷಿಪ್ರಜ್ಞೆಯ ಅಂತಃಕರಣದ ಧ್ವನಿ ಕೇಳಿಸುವ ಪ್ರಯತ್ನವೊಂದು ಇಲ್ಲಿದೆ...

ಅನ್ನಕ್ಕೇ ಕುತ್ತು ಬಂದು ಜನ ಬಾಯಿ ಬಾಯಿ ಬಡಿದುಕೊಳ್ಳುವ ಹೊತ್ತಿಗೆ ಇದು ಯಾವ ಬೆಂಕಿ ಹತ್ತಿದೆ! ಯಾರದು, ಮೈ ಮೇಲೆ ಎಚ್ಚರಿಲ್ಲದವರು. ಧರ್ಮವನ್ನು ಧರ್ಮಾರ್ಥ ಬೀದಿಗೆ ತಂದು ಆಟ ನೋಡುವವರು! ಹಸಿವು, ಬಳಲಿಕೆ, ಬಡತನ ಕಣ್ಣಿಗೇ ಕಾಣದವರು. ಬೇಕೇ ಈಗ ಇದು, ‘ಎಲ್ಲ ಬಿಟ್ಟ ಭಂಗಿ ನೆಟ್ಟ’ ಗಾದೆ ನೆನಪಾಗುತ್ತಿದೆ.

ಇದು ತೀರಾ ಹುಡುಗಾಟಿಕೆಯಾಯ್ತು. ಕೊರೊನಾದಿಂದ ಈಗಾಗಲೇ ಅಯೋಮಯವಾಗಿರುವ ಜನಜೀವನವನ್ನು ಕೈಯಾರೆ ಮತ್ತಷ್ಟು ಸಂಕಷ್ಟಕ್ಕೆ ದೂಡಿಕೊಳ್ಳುವ ನಾವು ಏನು ಸಾಧಿಸಿದೆವು? ಇವತ್ತು ನಮಗೆ ನಿಜವಾಗಿಯೂ ಅನಿವಾರ್ಯವಾದದ್ದು ಏನು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದೇ ಹೋದಲ್ಲಿ ಇನ್ನೂ ಆದಿಯಿಂದ ನಡೆದು ಬಂದ ನನ್ನ ಧರ್ಮ ನಿನ್ನ ಧರ್ಮ ಎಂಬ ಚಕಮಕಿ ಪರಸ್ಪರ ಘಟ್ಟಿಸುತ್ತ ಜ್ವಾಲೆ ಉಗುಳುತ್ತಲೇ ಇರುವುದು.

ಹೌದು, ವಿವಿಧ ಮತ ಧರ್ಮಗಳು ಇರುವ ರಾಷ್ಟ್ರದಲ್ಲಿ ಇದೆಲ್ಲ ಸಾಮಾನ್ಯವೆ. ಆದರೆ ಈ ಸಾಮಾನ್ಯವು ರಕ್ಕಸರೂಪ ತಾಳುವ ಅಪಾಯ ದಿನದಿಂದ ದಿನಕ್ಕೆ ಏರುತ್ತಿದೆ ಏಕೆ? ಭಾಷೆಯನ್ನೇಕೆ ಮರೆತಿದ್ದೇವೆ ನಾವು? ಇಂದು ನಮಗೆ ಬೇಕಾಗಿರುವುದು ಕೆರಳಿಸದ ಭಾಷೆ. ಒಟ್ಟಿಗೇ ಬದುಕುವ ಆಸೆಯ, ಅವರವರ ಧರ್ಮವನ್ನು ಶ್ರದ್ಧೆ ಮತ್ತು ಪ್ರೀತಿಯಿಂದ ಪಾಲಿಸುತ್ತ ಬದುಕುವ ಧಾರ್ಮಿಕರು ಲಕ್ಷಗಟ್ಟಲೆ ಇದ್ದಾರೆ. ಇಂಥ ಗಲಾಟೆ ನಡೆದಾಗೆಲ್ಲ ದಂಗಾಗುವ ಮಂದಿ ಅವರು. ಸಾತ್ವಿಕರಾದ ಅವರ ಮಾತನ್ನು ಬಗ್ಗು ಬಡಿಯುವ, ಅಟ್ಟಹಾಸದ ನಗೆಯಲ್ಲಿ ಹೊಟ್ಟಿ ಹಾರಿಸುವ ಕೆರಳುಭಾಷೆಯೆದುರು ಅವರು ಭಯಕಂಪಿತರಾಗುತ್ತಾರೆ. ಎಂದರೆ ಸೌಹಾರ್ದದ ಮಾತೆತ್ತಿದರೆ ಸಾಕು ಗೇಲಿಗೀಡಾಗುವ ಕಾಲ ಬಂದಿದೆ.

ಎಲ್ಲ ಕುಳಿತು ಸಮಾಧಾನದಿಂದ ಮಾತಾಡುವುದನ್ನೇ ಮರೆತೆವೆ ನಾವು? ವಾಗ್ವಾದದ ಯುಗವೇ ಅಂತ್ಯವಾಯಿತೇ? ಹಟ ಬಿದ್ದು ವಾದ ವಿವಾದದಲ್ಲಿ ಕೊಚ್ಚಿಹೋದಾಗಲೆಲ್ಲ ವಾಗ್ವಾದದ ಸುಂದರ ಮಾರ್ಗ ಮುಚ್ಚುತ್ತದೆ. ಅಲ್ಲಿಗೆ ಅದು ಪ್ರಭುತ್ವದ ಸೋಲು, ಜನರ ಸೋಲು, ದೇಶದ ಆತ್ಮವೇ ಮುಕ್ಕಾಗುವ ದುರಂತ.

ಇತ್ತೀಚೆಗೆ ನಡೆದ ವಿದ್ಯಮಾನಗಳಲ್ಲಿ ಕಾಣಿಸುತ್ತಿರುವುದು ಮುಸ್ಲಿಮರೂ ಅಲ್ಲ, ಹಿಂದೂಗಳೂ ಅಲ್ಲ. ತಮ್ಮ ತಮ್ಮ ಧರ್ಮದ ನಿಜತಿರುಳು ‘ತಿಳಿದಿದೆ ಎಂದುಕೊಂಡವರ’ ಗುಂಪು. ಹಿಂದೂಗಳಾಗಿಯೂ ಹಾಗಲ್ಲದ, ಮುಸ್ಲಿಮರಾಗಿಯೂ ಹಾಗಲ್ಲದ, ಧರ್ಮದ ಮರ್ಮವನ್ನೇ ಮರೆತು ಬೀದಿಗಿಳಿದ ಜಗಳಗಂಟಿ ಜನರ ಗದ್ದಲ. ರಾಜಕಾರಣಿಗಳೋ ತಮ್ಮಲ್ಲಿನ ಮನುಷ್ಯರನ್ನೇ ಮರೆತುಕೊಂಡು ಕೇವಲ ತಮ್ಮತಮ್ಮ ಉದ್ದೇಶ ನೆರವೇರಿಕೆಗಾಗಿ ನಟನೆಗೆ ತಮ್ಮನ್ನು ತೆತ್ತುಕೊಳ್ಳುತ್ತಿದ್ದಾರೆ, ತಮ್ಮ ಅಂತರ್ಧ್ವನಿಯನ್ನೇ ಮರೆತಿದ್ದಾರೆ.

ಮಾಧ್ಯಮದವರು ವರದಿ ಮಾಡಬೇಕು ಸರಿಯೇ. ಆದರೆ ಸಂಯಮವನ್ನೇಕೆ ಕಳೆಯಬೇಕು? ತಮ್ಮ ಸಾಮಾಜಿಕ ಹೊಣೆಯನ್ನು ಅವರೇ ತಳ್ಳಿಕೊಂಡರೆ ಹೇಗೆ! ಅವರು ಬರುವವರೆಗೂ ಕಾಯುತ್ತಿರುವಂತೆ ನಿಲ್ಲುವ ಜನ ಅವರು ಬಂದೊಡನೆ ಬೊಬ್ಬೆ ಎಬ್ಬಿಸುವ ಹೊಸ ನಶೆಗೆ ಒಳಗಾಗುತ್ತಿದ್ದಾರೆ. ಅವರದನ್ನು ರೋಮಾಂಚಕವಾಗಿ ವರ್ಣಿಸಲು ಹೋಗುವರಲ್ಲ. ಏನೆನ್ನಲಿ!

ಉಡುಪಿಯಲ್ಲಿ ಸೌಹಾರ್ದ ಬಾಳುವೆಯ ಅಂಥಾ ದಾರ್ಶನಿಕ ಹಾಜಿ ಅಬ್ದುಲ್ಲಾ ಸಾಹೇಬ್ ಇದ್ದರು. ಕಾರ್ಪೊರೇಶನ್ ಬ್ಯಾಂಕಿನ ಸ್ಥಾಪಕರು. ಇಲ್ಲಿನ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಒಂದು ವರ್ಷ ಲಕ್ಷ ದೀಪೋತ್ಸವದ ಹೊತ್ತಿನಲ್ಲಿ ಜಡಿ ಮಳೆ ಬಂದು ದೀಪಗಳೆಲ್ಲ ನಂದಿ ಹೋದಾಗ ಡಬ್ಬಿಗಟ್ಟಲೆ ಎಣ್ಣೆ ತರಿಸಿ ದೀಪಗಳನ್ನು ಮತ್ತೆ ಹೊತ್ತಿಸಿದವರು. ಮಹಾದಾನಿ, ಸಾರ್ವಜನಿಕ ಜೀವನ ಹೇಗಿರಬೇಕೆಂದು ಬದುಕಿ ತೋರಿದ ಮಹಾನುಭಾವ.

ಡಾ.ಟಿ.ಎಂ.ಎ. ಪೈ ಅಂಥ ಶಿಕ್ಷಣ ದ್ರಷ್ಟಾರ ಮಣಿಪಾಲ ಗುಡ್ಡೆಯನ್ನು ಶಿಕ್ಷಣ ದೇಗುಲವನ್ನಾಗಿಸಿದವರು. ಈ ದೇಶದ ಶಿಕ್ಷಣ ಕ್ಷೇತ್ರದಲ್ಲಿಯೇ ವಿಶಿಷ್ಟ ಕ್ರಾಂತಿ ಮಾಡಿದವರು. ಆದರೆ ಅದೇ ಮಣಿಪಾಲದ ಪಕ್ಕದ ಉಡುಪಿಯ ಶಿಕ್ಷಣ ಕ್ಯಾಂಪಸ್ಸಿನಲ್ಲಿಯೇ ನಡೆದ ಕೋಲಾಹಲ ನೋಡಿ ಇಲ್ಲೆಲ್ಲರಿಗೂ ದಿಗ್ಭ್ರಮೆ. ಇದೇನಿದು, ಮಕ್ಕಳು ಇಷ್ಟು ಅಗ್ಗವಾದರೆ? ದೊಡ್ಡವರು ಇಷ್ಟು ದುರ್ಬಲರಾದರೆ? ಮತಭೇದವಿಲ್ಲದೆ ಬಡಜನರ ನೆತ್ತಿ–ಸೂರು ತಂಪಾಗಿಸಲು ತಮ್ಮ ಜೀವಮಾನವನ್ನೇ ಸವೆಸಿದ, ಅಪ್ರತಿಮ ಸಮಾಜ ಸೇವೆಗಾಗಿ ಕರ್ನಾಟಕ ಮತ್ತು ಕೇರಳ ಸರ್ಕಾರ ಎರಡರಿಂದಲೂ ಸನ್ಮಾನಿತರಾಗಿ ಇತ್ತೀಚೆಗಷ್ಟೇ ನಿಧನರಾದ ಮುತ್ಸದ್ಧಿ ಕಿಳಿಂಗಾರು ಗೋಪಾಲಕೃಷ್ಣ ಭಟ್ ಅವರ ಮತ್ತು ನಮ್ಮ ಪ್ರೀತಿಯ ಕಿತ್ತಳೆ ಹಣ್ಣಿನ ವ್ಯಾಪಾರಿ ಪದ್ಮಶ್ರೀ ಹಾಜಬ್ಬ ಅವರ ಉದಾಹರಣೆಗಳಂತೂ ನಮ್ಮ ದೊಡ್ಡ ಹೆಮ್ಮೆ ಮತ್ತು ಮಾದರಿಗಳಾಗಿ ಕಣ್ಣಮುಂದೆಯೇ ಇವೆ. ಇವು ಯಾವುವೂ ನಮ್ಮ ಒಳ ವ್ಯಕ್ತಿತ್ವವನ್ನು ಹೊಕ್ಕೇ ಇಲ್ಲವೆ ಹಾಗಾದರೆ? ದಯಮಾಡಿ ಮಕ್ಕಳನ್ನು ಬೆಂಕಿಗೆ ಕೇಡಿಗೆ ದೂಡಬೇಡಿ. ಅಂತಿಮವಾಗಿ ಇದು ನಾವು ನಿಂತ ಭೂಮಿಯನ್ನೇ ಕರಕಾಗಿಸುತ್ತದೆ.

ವಿದ್ಯಾರ್ಥಿಗಳಾದರೂ ಕ್ಷಣಿಕ ಆವೇಶಕ್ಕೆ ಒಳಗಾಗದೆ ತಮ್ಮತಮ್ಮ ಭವಿಷ್ಯಕ್ಕೆ ಇದು ಯಾವುದೂ ಒದಗದು, ತಾವು ಸೋತು ನಿಂತಾಗ ಇವರಾರೂ ತಮಗೆ ಒದಗರು ಎಂಬ ಸತ್ಯವನ್ನು ಕಂಡುಕೊಳ್ಳಬೇಕು. ಮುಂದೆ ತಮ್ಮಲ್ಲಿಯೇ ಅರಿವು ಮೂಡಿದಾಗ ಅಮೂಲ್ಯ ವಿದ್ಯಾರ್ಥಿ ಜೀವನವನ್ನು ದಂಡ ಮಾಡಿಕೊಂಡ ಪಶ್ಚಾತ್ತಾಪದಲ್ಲಿ ಬೇಯುವಂತಾಗಬಾರದು. ಹೇಳಿ ನೀವು, ಉತ್ತಮ ಶಿಕ್ಷಣವೇ ದೇವರಲ್ಲವೇನು?

ಒಟ್ಟು ಹೇಳಬೇಕೆಂದರೆ, ಅಂದು ಇಂಡಿಯಾ ಎಂಬ ಇಡಿಯು ಪಕ್ಷವಾತಕ್ಕೆ ಈಡಾಗಿ ಸಿಕ್ಕಿದ ಸ್ವಾತಂತ್ರ್ಯ ಈಗಲೂ ಅದೇ ಪಕ್ಷವಾತದಲ್ಲಿ ನರಳುತ್ತಿದೆ. ಪಕ್ಷವಾತಕ್ಕೆ ಮದ್ದುಂಟೆ? ಅಂದು ಹೊತ್ತಿದ ಬೆಂಕಿ ಇಂದಿಗೂ ಆರಿಸುವವರಿಲ್ಲದೆ ಅಲ್ಲಲ್ಲಿ ಮತ್ತೆ ಮತ್ತೆ ಏಳುತ್ತಲೇ ಇದೆ. ನಮ್ಮ ವಿವೇಕವೇ ಇದನ್ನು ತಡೆಯಬೇಕು. ನಿತ್ಯಜಾಗೃತಿ ಇಲ್ಲದೆ ಹೋದಲ್ಲಿ ನಮಗೇ ತಿಳಿಯದಂತೆ ವಿವೇಕ ನಮ್ಮಿಂದ ದೂರವಾಗುವುದು. ಅದರ ಜಾಗದಲ್ಲಿ ಅಹಂಕಾರದ ಜೊತೆ ಅವಿವೇಕವೂ ಮಿಣ್ಣಗೆ ಸೇರಿ ಕತ್ತಿ ಮಸೆಯುವುದು. ಸಬಕೋ ಸನ್ಮತಿ ದೇ ಭಗವಾನ್ ಎಂಬ ಸಾಲು ಆರ್ತತೆಯಿಂದ ಹೊಮ್ಮುವುದು ಆಗಲೇ.

ಯಾವುದಕ್ಕೂ ನ್ಯಾಯಾಲಯವಿದೆ, ತೀರ್ಪು ನೀಡುತ್ತದೆ. ಅದನ್ನೂ ಧಿಕ್ಕರಿಸುವ ಕಾಲ ಬರಲಿಕ್ಕಿಲ್ಲ ಎಂದುಕೊಳ್ಳುತ್ತೇನೆ... ಕಷ್ಟಪಟ್ಟು ನೀರು ನಿಡಿ ನೋಡದೆ, ಜೀವ ಜೀವನದ ಹಂಗು ತೊರೆದು, ಆಸ್ತಿಪಾಸ್ತಿ ತೆತ್ತು ಸ್ವಾತಂತ್ರ್ಯ ತಂದುಕೊಟ್ಟ ಮಹಾಮಹಿಮರ ಮಾನ ಉಳಿಸೋಣ, ಆ ಮೂಲಕ ದೇಶದ ಮಾನ ಉಳಿಸೋಣ. ಇದು ನಮ್ಮ ಧರ್ಮ. ನಮ್ಮೆಲ್ಲರ ಮಾನವೂ ಧರ್ಮವೂ ಇರುವುದು ಇದರಲ್ಲಿಯೇ. ಭಾರತ ದೇಶ ಮಹಾನ್ ಆಗುವುದೂ ಆಗಲೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.