ನಗುತ್ತಿರುವ ಬುದ್ಧನ ಮೂರ್ತಿಯ ಮುಖದಲ್ಲಿ ಉಲ್ಲಾಸದ ನಗುವೊಂದು ಇರುತ್ತದೆ. ಹಾಗೆಯೇ, ಆ ಮೂರ್ತಿಯ ಹೊಟ್ಟೆಡುಮ್ಮಗಾಗಿ ಇರುತ್ತದೆ. ಆ ಒಂದು ಪರಿಪೂರ್ಣತೆಯ ಮೂರ್ತಿಯ ಸ್ವರೂಪ ಥಾಯ್ಲೆಂಡ್ಗೆ ಹೆಚ್ಚು ಹೊಂದಿಕೆಯಾಗುತ್ತದೆ. ಏಕೆಂದರೆ, ಅಲ್ಲಿನ ಬೌದ್ಧ ಭಿಕ್ಕುಗಳ ಸೊಂಟದ ಭಾಗಅದೆಷ್ಟು ಹಿಗ್ಗಿಕೊಂಡಿದೆಯೆಂದರೆ, ಅಲ್ಲಿನ ಆರೋಗ್ಯ ಅಧಿಕಾರಿಗಳು ರಾಷ್ಟ್ರವ್ಯಾಪಿ ಮುನ್ನೆಚ್ಚರಿಕೆಯನ್ನು ರವಾನಿಸಿದ್ದಾರೆ!

ಕೇಸರಿ ಬಣ್ಣದ ವಸ್ತ್ರ ಧರಿಸಿದ ಬೌದ್ಧ ಭಿಕ್ಕುಗಳು ಪ್ರತಿದಿನ ಬೆಳಿಗ್ಗೆ ದೇವಸ್ಥಾನಗಳಿಂದ ಹೊರಟು, ಬೀದಿಗಳಲ್ಲಿ ಸುತ್ತಾಡಿ ಬೌದ್ಧ ಸಂಪ್ರದಾಯದಂತೆ ತಮ್ಮ ಪಾಲಿನ ಆಹಾರವನ್ನು ಜನರಿಂದ ಸ್ವೀಕರಿಸುತ್ತಾರೆ. ಭಿಕ್ಕುಗಳಿಗೆ ಆರೋಗ್ಯಕರ ಆಹಾರವನ್ನು ಜನ ನೀಡಬೇಕು ಎಂದು ಥಾಯ್ಲೆಂಡಿನ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳು ಜೂನ್ ತಿಂಗಳಲ್ಲಿ ಸೂಚನೆ ನೀಡಿದ್ದಾರೆ. ಅಷ್ಟೇನೂ ದೈಹಿಕ ಶ್ರಮವನ್ನು ಬೇಡದ ಪ್ರಾರ್ಥನೆ ಮತ್ತು ಧ್ಯಾನದಂತಹ ಕೆಲಸಗಳ ಜೊತೆಯಲ್ಲಿ ಭಿಕ್ಕುಗಳು ದೇವಸ್ಥಾನ ವನ್ನು ಶುಚಿಗೊಳಿಸುವಂತಹ ದೈಹಿಕ ಶ್ರಮದ ಕೆಲಸವನ್ನು ಮಾಡಬೇಕು ಎಂದೂ ಅಲ್ಲಿನ ಆರೋಗ್ಯ ಇಲಾಖೆಯ ಉಪ ಮಹಾನಿರ್ದೇಶಕ ಆ್ಯಂಪಾನ್ ಬೆಜಾಪೊಲ್ಪಿಟಕ್ ಸಲಹೆ ನೀಡಿದ್ದಾರೆ.

ಸ್ಥೂಲಕಾಯದ ಸಮಸ್ಯೆಯು ಥಾಯ್ಲೆಂಡಿನಲ್ಲಿ ಅಪಾಯದ ಮಟ್ಟ ತಲುಪಿದೆ. ಥಾಯ್ಲೆಂಡ್ ದೇಶ ಏಷ್ಯಾದಲ್ಲಿ ‘ಎರಡನೆಯ ಅತ್ಯಂತ ಸ್ಥೂಲಕಾಯದ ದೇಶ’ ಎಂಬ ಹೆಸರು ಪಡೆದಿದೆ. ಮೊದಲ ಸ್ಥಾನದಲ್ಲಿ ಮಲೇಷ್ಯಾ ಇದೆ. ಥಾಯ್ಲೆಂಡಿನ ಪ್ರತಿ ಮೂವರು ಪುರುಷರ ಪೈಕಿ ಒಬ್ಬ ಸ್ಥೂಲಕಾಯ ಹೊಂದಿದ್ದಾನೆ. ಅಲ್ಲಿನ ಶೇಕಡ 40ರಷ್ಟಕ್ಕಿಂತ ಹೆಚ್ಚಿನ ಮಹಿಳೆಯರು ಗಮನಾರ್ಹ ಪ್ರಮಾಣದಲ್ಲಿ ಸ್ಥೂಲಕಾಯ ಹೊಂದಿದ್ದಾರೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಪರಿವೀಕ್ಷಣಾ ಸಮೀಕ್ಷೆ ಹೇಳಿದೆ.

ಈ ಸಮಸ್ಯೆ ಭಿಕ್ಕುಗಳಲ್ಲಿ ಹೆಚ್ಚಾಗಿದೆ. ಭಿಕ್ಕುಗಳ ಪೈಕಿ ಶೇಕಡ ಐವತ್ತರಷ್ಟು ಜನ ಸ್ಥೂಲಕಾಯ ಹೊಂದಿದ್ದಾರೆ ಎಂಬುದನ್ನು ಚಲಾಲಾಂಗ್ಕಾರ್ನ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನವೊಂದು ಕಂಡುಕೊಂಡಿದೆ. ಭಿಕ್ಕುಗಳ ಪೈಕಿ ಶೇಕಡ
40ರಷ್ಟಕ್ಕಿಂತ ಹೆಚ್ಚಿನವರ ದೇಹದಲ್ಲಿ ಕೊಬ್ಬಿನ ಅಂಶ ಅಧಿಕವಾಗಿದೆ. ಅವರಲ್ಲಿ ಸರಿಸುಮಾರು ಶೇಕಡ 25ರಷ್ಟು ಜನ ಅಧಿಕ ರಕ್ತದೊತ್ತಡದ ಸಮಸ್ಯೆ ಹೊಂದಿದ್ದಾರೆ. ಹಾಗೆಯೇ, ಪ್ರತಿ 10 ಭಿಕ್ಕುಗಳಲ್ಲಿ ಒಬ್ಬರಿಗೆ ಮಧುಮೇಹದ ಸಮಸ್ಯೆ ಇದೆ ಎಂದೂ ಈ ಅಧ್ಯಯನ ಹೇಳಿದೆ.

‘ನಮ್ಮಲ್ಲಿನ ಭಿಕ್ಕುಗಳಲ್ಲಿ ಸ್ಥೂಲಕಾಯದ ಸಮಸ್ಯೆ ಟೈಂ ಬಾಂಬ್ನಂತೆ ಆಗಿದೆ. ಹಲವಾರು ಭಿಕ್ಕುಗಳು ತಡೆಯಬಹುದಾಗಿದ್ದ ಕಾಯಿಲೆಗಳಿಗೆ ತುತ್ತಾಗಿದ್ದಾರೆ’ ಎನ್ನುತ್ತಾರೆ ಜಾಂಗ್ಜಿತ್ ಅಂಕಟಾವನಿಕ್. ಇವರು ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ
ಗಳ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಥಾಯ್ಲೆಂಡಿನ ಭಿಕ್ಕುಗಳ ಆಹಾರ ಕ್ರಮದ ಬಗ್ಗೆ ಅಧ್ಯಯನ ಆರಂಭಿಸಿದ ಸಂಶೋಧಕರಿಗೆ ಕಕ್ಕಾಬಿಕ್ಕಿಯಾಗುವಂತಹ ಸಂಗತಿಯೊಂದು ಗೊತ್ತಾಯಿತು. ಅವರ ಆಹಾರದಲ್ಲಿ ಜನಸಾಮಾನ್ಯರ ಆಹಾರದಲ್ಲಿ ಇರುವುದಕ್ಕಿಂತ ಕಡಿಮೆ ಪ್ರಮಾಣದ ಕ್ಯಾಲೊರಿ ಇದೆ. ಹೀಗಿದ್ದರೂ ಅವರು ಸ್ಥೂಲಕಾಯ ಹೊಂದಿದ್ದಾರೆ. ‘ಇದಕ್ಕೆ ಒಂದು ಪ್ರಮುಖ ಕಾರಣ, ಭಿಕ್ಕುಗಳು ಸಕ್ಕರೆಯ ಅಂಶ ಹೆಚ್ಚಿರುವ ಪೇಯಗಳನ್ನು ಕುಡಿಯುವುದು’ ಎಂದರು ಜಾಂಗ್ಜಿತ್.

ಭಿಕ್ಕುಗಳು ಮಧ್ಯಾಹ್ನದ ನಂತರ ಆಹಾರ ಸೇವನೆ ಮಾಡುವಂತಿಲ್ಲ. ಹಾಗಾಗಿ, ದೇಹದಲ್ಲಿ ಶಕ್ತಿ ಉಳಿಸಿಕೊಳ್ಳಲು ಅವರಲ್ಲಿ ಬಹುತೇಕರು ಸಿಹಿ ಪ್ರಮಾಣ ಅತಿಯಾಗಿರುವ ಪೇಯಗಳನ್ನು ನೆಚ್ಚಿಕೊಂಡಿದ್ದಾರೆ. ಅವರಲ್ಲಿ ಕೆಲವರು ಶಕ್ತಿವರ್ಧಕ ಪೇಯಗಳನ್ನೂ ಕುಡಿಯುತ್ತಾರೆ. ದಾನ ಮಾಡುವುದರಿಂದ ತಮಗೆ ಈ ಜನ್ಮದಲ್ಲಿ ಹಾಗೂ ಮುಂದಿನ ಜನ್ಮದಲ್ಲಿ ಒಳ್ಳೆಯ ಕರ್ಮಫಲ ಸಿಗುತ್ತದೆ ಎಂದು ಬುದ್ಧನ ಅನುಯಾಯಿಗಳು ನಂಬುತ್ತಾರೆ. ತಾವು ಭಿಕ್ಕುಗಳಿಗೆ ದಾನ ಮಾಡುವುದರಿಂದ ತಮ್ಮ ಕುಟುಂಬದಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ಕೂಡ ಒಳ್ಳೆಯದಾಗುತ್ತದೆ ಎಂದು ಕೆಲವೊಮ್ಮೆ ಅವರು ಭಾವಿಸುತ್ತಾರೆ.

ಆದರೆ, ಸಕ್ಕರೆ ಅಂಶ ಹೆಚ್ಚಿರುವ ಪೇಯಗಳು ಹಾಗೂ ಕೊಬ್ಬಿನ ಅಂಶ ಹೆಚ್ಚಿರುವ ಆಹಾರದ ದಾನ, ಒಳ್ಳೆಯ ಉದ್ದೇಶದಿಂದ ಮಾಡಿದರೂ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಭಿಕ್ಕುಗಳು ಜನರಿಂದ ಮತ್ತೆ ಮತ್ತೆ ಸ್ವೀಕರಿಸುವ ಅನಾರೋಗ್ಯಕರ ಆಹಾರ, ಪೇಯಗಳ ಪಟ್ಟಿ ಮಾಡುವ ಜಾಂಗ್ಜಿತ್ ಅವರು, ‘ಲಘು ಪೇಯಗಳು, ಪೊಟ್ಟಣಗಳಲ್ಲಿಶೇಖರಿಸಿದ್ದ ಹಣ್ಣಿನ ರಸ, ಸಿಹಿಯಾದ ತಿನಿಸುಗಳು ಮತ್ತು ಅಂಗಡಿಯಿಂದ ತಂದ ಹಲವು ಬಗೆಯ ಆಹಾರಗಳಲ್ಲಿ ಪ್ರೊಟೀನ್ ಹಾಗೂ ನಾರಿನ ಅಂಶ ಕಡಿಮೆ ಇರುತ್ತದೆ’ ಎಂದು ಹೇಳುತ್ತಾರೆ.

ಇಷ್ಟು ಮಾತ್ರವೇ ಅಲ್ಲ, ಬೌದ್ಧ ಧರ್ಮೀಯರಲ್ಲಿ ಅದೆಷ್ಟು ಮಂದಿ ಅಂಗಡಿಯಿಂದ ತಂದ ಆಹಾರವನ್ನು ಕೊಡುತ್ತಾರೆಂದರೆ, ಕೆಲವೊಮ್ಮೆ ಮಿಕ್ಕಿ ಉಳಿಯುವ ಆಹಾರ ವಸ್ತುಗಳನ್ನು ಪುನಃ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತದೆ. ನೈತಿಕ ಮಾರ್ಗದಲ್ಲಿ ವಹಿವಾಟು ನಡೆಸದ ಕೆಲವರು ಈ ಆಹಾರವನ್ನು ಪುನಃ ಮಾರಾಟ ಮಾಡುತ್ತಾರೆ. ಅಂದರೆ, ಭಿಕ್ಕುಗಳು ದಾನದ ರೂಪದಲ್ಲಿ ಕೆಟ್ಟುಹೋದ ಆಹಾರ ಪಡೆಯುವ ಸಾಧ್ಯತೆಯೂ ಇರುತ್ತದೆ.

ದಾನ ಕೊಡುವವರಲ್ಲಿ ಕೆಲವರು ಇಂದಿಗೂ ಹಳೆಯ ಮಾದರಿಗಳನ್ನು ಅನುಸರಿಸುತ್ತಿದ್ದಾರೆ. ಬ್ಯಾಂಕಾಕ್ನಲ್ಲಿ ವಾಸಿಸುವ ಗೃಹಿಣಿ ವಿಲಾವಾನ್ ಲಿಮ್ ಅವರು ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಯಿಂದ ಭಿಕ್ಕುಗಳಿಗೆ ಮನೆಯಲ್ಲೇ ಮಾಡಿದ ಅಡುಗೆಯನ್ನು ಪ್ರತಿದಿನ ಬೆಳಿಗ್ಗೆ ದಾನ ಮಾಡುತ್ತಿದ್ದಾರೆ. ತಾತ್ವಿಕವಾಗಿ ಹೇಳಬೇಕು ಎಂದರೆ, ಭಿಕ್ಕುಗಳು ತಮಗೆ ಇಂತಹ ಆಹಾರ ಇಷ್ಟ ಎಂಬುದನ್ನು ದಾನ ಕೊಡುವವರಿಗೆ ಗೊತ್ತುಮಾಡುವಂತೆ ಇಲ್ಲ. ಆದರೆ, ‘ನಮ್ಮ ಮನೆಯ ಬಳಿ ಪ್ರತಿದಿನ ಬೆಳಿಗ್ಗೆ ಬರುವ ಭಿಕ್ಕು ತಮಗೆ ಯಾವುದು ಇಷ್ಟ ಎಂಬುದನ್ನು ಸೂಚ್ಯವಾಗಿ ಹೇಳುತ್ತಾರೆ’ ಎನ್ನುತ್ತಾರೆ ಲಿಮ್. ‘ಇವತ್ತು ಮಾಡಿರುವ ಮಸಾಲೆ ಪದಾರ್ಥ ಅವರಿಗೆ ಬಹಳ ಇಷ್ಟ’ ಎಂದು ಲಿಮ್ ಅವರು ಒಂದಿಷ್ಟು ಮೆಣಸು, ಬೆಳ್ಳುಳ್ಳಿ, ನಿಂಬೆರಸ, ಸಿಗಡಿ ಪೇಸ್ಟ್ ಅನ್ನು ಘಾಟಿನ ಪರಿಮಳ ಬರುತ್ತಿದ್ದ ಪಾತ್ರೆಗೆ ಹಾಕುತ್ತ ಹೇಳಿದರು. ಅದರ ಜೊತೆ ಬೇಯಿಸಿದ ತರಕಾರಿಗಳೂ ಇದ್ದವು.

ಲಿಮ್ ಅವರು ಭಿಕ್ಕುವಿನ ಬರುವಿಕೆಗೆ ಕಾಯುತ್ತ ಮನೆಯ ಹೊರಗೆ ನಿಂತಿದ್ದರು. ಆ ಭಿಕ್ಕು ನಿಗದಿತ ಸಮಯಕ್ಕೆ ಅಲ್ಲಿ ಬಂದರು. ಮುಂದಿನ ಮನೆಗೆ ತೆರಳುವ ಮೊದಲು ಆಶೀರ್ವಾದ ಮಾಡಿದರು. ಆ ಭಿಕ್ಕುವಿನ ಕೈಯಲ್ಲಿ ಇದ್ದ ಚೀಲವು ಆಹಾರ ಮತ್ತು ಪೇಯದ ಪೊಟ್ಟಣಗಳಿಂದ ಭರ್ತಿಯಾಗಿದ್ದ ಕಾರಣ ಅವರು ಅದರಲ್ಲಿ ಕೆಲವಷ್ಟನ್ನು ತಮ್ಮ ಸಹಾಯಕನ ಬಳಿ ಇದ್ದ ಪಾತ್ರೆಗೆ ವರ್ಗಾಯಿಸಿದರು. ಹತ್ತೇ ನಿಮಿಷಗಳಲ್ಲಿ ಆ ಪಾತ್ರೆ ಕೂಡ ಆಹಾರ ವಸ್ತುಗಳಿಂದ ಭರ್ತಿಯಾಯಿತು.

‘ಭಿಕ್ಕುಗಳಲ್ಲಿ ಸ್ಥೂಲಕಾಯದ ಸಮಸ್ಯೆ ಇದೆ ಎಂಬ ಬಗ್ಗೆ ನನಗೆ ನಿಜಕ್ಕೂ ಗೊತ್ತಿಲ್ಲ’ ಎಂದು ಲಿಮ್ ಹೇಳಿದರು. ‘ಆದರೆ, ಆರು ಗಂಟೆಗೆ ಬರುವ ಭಿಕ್ಕು ದಪ್ಪಗಿದ್ದಾರೆ, ಅವರ ಆರೋಗ್ಯ ಚೆನ್ನಾಗಿರುವಂತಿಲ್ಲ’ ಎಂದು ಅವರು ಹೇಳಿದರು.

ಥಾಯ್ಲೆಂಡಿನ ಸರ್ಕಾರ ಮತ್ತು ಅಲ್ಲಿನ ಧಾರ್ಮಿಕ ಸಂಸ್ಥೆಗಳ ಜೊತೆ ಕೆಲಸ ಮಾಡುವ ಜಾಂಗ್ಜಿತ್, ‘ಆರೋಗ್ಯಕರ ಭಿಕ್ಕು – ಆರೋಗ್ಯಕರ ಆಹಾರ ಯೋಜನೆ’ಯ ನಿರ್ವಹಣೆ ಮಾಡುತ್ತಿದ್ದಾರೆ. ‘ಥಾಯ್ ಹೆಲ್ತ್ ಪ್ರಮೋಷನ್ ಫೌಂಡೇಷನ್’ ಎನ್ನುವ ಸ್ವಾಯತ್ತ ಸರ್ಕಾರಿ ಸಂಸ್ಥೆ ಈ ಯೋಜನೆಗೆ ಹಣಕಾಸಿನ ನೆರವು ನೀಡುತ್ತಿದೆ. ಪೌಷ್ಟಿಕ ಆಹಾರ ಮತ್ತು ದೈಹಿಕ ದೃಢತೆಯ ಬಗ್ಗೆ ಮಾಹಿತಿ ನೀಡಿ ಭಿಕ್ಕುಗಳ ಜೀವನಶೈಲಿಯನ್ನು ಉತ್ತಮಪಡಿಸುವುದು ಈ ಯೋಜನೆಯ ಉದ್ದೇಶ. ಪ್ರಾಯೋಗಿಕವಾಗಿ ಈ ಯೋಜನೆಯ ಅಡಿ 2016ರಲ್ಲಿ 82 ಭಿಕ್ಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಪ್ರಾಯೋಗಿಕ ಕೆಲಸದ ಪರಿಣಾಮವಾಗಿ ಅವರಲ್ಲಿ ಕೊಬ್ಬಿನ ಅಂಶ ಕಡಿಮೆ ಆಯಿತು, ದೇಹದ ತೂಕ ಕೂಡ ತಗ್ಗಿತು.

ಈ ಯೋಜನೆಯ ಅಂಗವಾಗಿ ಈಗ, ಬೌದ್ಧ ಭಿಕ್ಕುಗಳಿಗೆ ನೀಡಲು ಆರೋಗ್ಯಕರ ಹಾಗೂ ಕಡಿಮೆ ಖರ್ಚಿನ ಆಹಾರ ಸಿದ್ಧಪಡಿಸುವುದು ಹೇಗೆ ಎಂಬ ಪಾಕ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ. ಪಾಲಿಷ್ ಮಾಡದ ಅಕ್ಕಿ ಬಳಸಿ ಅನ್ನ ಮಾಡುವುದು, ಅದಕ್ಕೆ ತುಸು ಪ್ರೊಟೀನ್ ಅಂಶ ಸೇರಿಸುವುದು, ಆಹಾರದಲ್ಲಿ ತರಕಾರಿ ಹೆಚ್ಚೆಚ್ಚು ಇರುವಂತೆ ನೋಡಿಕೊಳ್ಳುವುದು ಇಲ್ಲಿನ ಕೆಲವು ಸಲಹೆಗಳಲ್ಲಿ ಸೇರಿದೆ. (ಥಾಯ್ಲೆಂಡಿನ ಸಾಂಪ್ರದಾಯಿಕ ಅಡುಗೆಯಲ್ಲಿ ಹೆಚ್ಚೆಚ್ಚು ತರಕಾರಿಗಳು, ಒಂಚೂರು ಮಾಂಸ ಅಥವಾ ಮೀನು ಇರುತ್ತದೆ. ಆದರೆ, ಆಧುನಿಕ ಅಡುಗೆಯಲ್ಲಿ ಕೊಬ್ಬಿನ ಅಂಶ ಮತ್ತು ಸಕ್ಕರೆಯ ಅಂಶ ಹೆಚ್ಚಿರುತ್ತದೆ.)

ಭಿಕ್ಕುಗಳು ಪ್ರತಿದಿನ ತಾವು ಮಾಡುವ ದೈಹಿಕ ಕೆಲಸಗಳು ಯಾವುವು ಎಂಬುದನ್ನು ಬರೆದಿಡಬೇಕು ಎಂದು ಈ ಯೋಜನೆ ಹೇಳುತ್ತದೆ. ಬೌದ್ಧ ದೇವಾಲಯಗಳ ಸುತ್ತ ದಿನವೊಂದಕ್ಕೆ ಕನಿಷ್ಠ 40 ನಿಮಿಷ ನಡೆಯುವುದು ಕೂಡ ಭಿಕ್ಕುಗಳ ಜೀವನ ಕ್ರಮದಲ್ಲಿ ಸುಧಾರಣೆಗೆ ಕಾರಣವಾಗುತ್ತದೆ. ತಾವು ಸಡಿಲವಾದ ಉಡುಪು ಧರಿಸುವ ಕಾರಣ ದೇಹದ ತೂಕ ಹೆಚ್ಚಾಗುತ್ತಿರುವುದು ತಮಗೆ ಗೊತ್ತೇ ಆಗಲಿಲ್ಲ ಎಂದು ಭಿಕ್ಕುಗಳು ಈ ಯೋಜನೆಯ ಭಾಗವಾಗಿದ್ದ ಸಂಶೋಧಕರಲ್ಲಿ ಹೇಳಿದ್ದರು.

ಆರೋಗ್ಯಕರ ವ್ಯಕ್ತಿಯ ಸೊಂಟದ ಸುತ್ತಳಕೆ ಎಷ್ಟಿರಬೇಕು ಎಂಬುದನ್ನು ತಿಳಿಸುವ ಬೆಲ್ಟೊಂದನ್ನು ಜಾಂಗ್ಜಿತ್ ಮತ್ತು ಅವರ ತಂಡ ಸಿದ್ಧಪಡಿಸಿದೆ. ಭಿಕ್ಕುಗಳ ಹೊಟ್ಟೆಯ ಗಾತ್ರವನ್ನು ತಿಳಿಸುವ ಅಳತೆ ಪಟ್ಟಿಯೊಂದನ್ನು ಕೂಡ ಅವರ ತಂಡ ಸಿದ್ಧಪಡಿಸಿದೆ. ಶೇಕಡ 90ರಷ್ಟಕ್ಕಿಂತ ಹೆಚ್ಚಿನವರು ಬೌದ್ಧರೇ ಆಗಿರುವ ಥಾಯ್ಲೆಂಡಿನಲ್ಲಿ ಬೌದ್ಧ ಭಿಕ್ಕುಗಳನ್ನು ‘ಸರಳ ಜೀವಿ’ಗಳು, ಸಾಮಾನ್ಯರಿಗೆ ಸಾಕ್ಷಾತ್ಕಾರದೆಡೆಗೆ ಸಾಗುವ ದಾರಿ ತೋರುವವರು ಎಂದು ಗೌರವದಿಂದ ಕಾಣಲಾಗುತ್ತದೆ.

‘ಕಾರ್ಯಸಾಧುವಾದ ಪರಿಹಾರಗಳನ್ನು, ಭಿಕ್ಕುಗಳ ಆತ್ಮಗೌರವಕ್ಕೆ ಕುಂದು ತರದಂತಹ ಮಾರ್ಗೋಪಾಯಗಳನ್ನು ನಾವು ಅಭಿವೃದ್ಧಿಪಡಿಸಬೇಕು. ನಾವು ಸಿದ್ಧಪಡಿಸಿದ ಬೆಲ್ಟ್ ಬಳಸಿ ತಮ್ಮ ಸೊಂಟ ಎಷ್ಟು ದಪ್ಪಗಾಗಿದೆ ಎಂಬುದನ್ನುಭಿಕ್ಕುಗಳು ಪರೀಕ್ಷಿಸಿ, ತೂಕ ಇಳಿಸಿಕೊಳ್ಳಬೇಕು ಎಂದು ಹೇಳುವುದನ್ನು ಕೇಳಿದರೆ ಎದೆ ತುಂಬಿಬರುತ್ತದೆ’ ಎನ್ನುತ್ತಾರೆ ಜಾಂಗ್ಜಿತ್.

ಭಿಕ್ಕುಗಳಲ್ಲಿ ಸ್ಥೂಲಕಾಯದ ಸಮಸ್ಯೆ ಹೆಚ್ಚುತ್ತಿರುವುದು ಥಾಯ್ಲೆಂಡಿಗೆ ಮಾತ್ರ ಸೀಮಿತವಾಗಿದ್ದಲ್ಲ. ಇವರಿಗೆ ದಾನವಾಗಿ ಕೊಡುವ ಆಹಾರದಲ್ಲಿ ಏನಿರಬೇಕು ಎಂಬ ಬಗ್ಗೆ ಶ್ರೀಲಂಕಾ ಸರ್ಕಾರ ತಜ್ಞರ ಜೊತೆ ಸಮಾಲೋಚನೆ ನಡೆಸಿ 2012ರಲ್ಲಿ ಮಾರ್ಗಸೂಚಿ ಹೊರಡಿಸಿತ್ತು. ಥಾಯ್ಲೆಂಡಿನ ಭಿಕ್ಕುಗಳ ಪರಿಷತ್ತು ಡಿಸೆಂಬರ್ನಲ್ಲಿ ಕೆಲವು ಶಿಫಾರಸುಗಳನ್ನು ಮಾಡಿತ್ತು. ಭಿಕ್ಕುಗಳ ಆಹಾರ ಕ್ರಮ ಹೇಗಿರಬೇಕು, ಅವರು ಯಾವೆಲ್ಲಾ ವ್ಯಾಯಾಮಗಳನ್ನು ಮಾಡಬೇಕು, ಅವರಿಗೆ ದಾನವಾಗಿ ಆಹಾರ ನೀಡುವವರು ಅನುಸರಿಸಬೇಕಿರುವ ಕ್ರಮಗಳು ಯಾವುವು ಎಂಬುದೆಲ್ಲ ಆ ಶಿಫಾರಸಿನಲ್ಲಿ ಇದ್ದವು. ಭಿಕ್ಕುಗಳು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಬೇಕು, ಆರೋಗ್ಯಕರ ಜೀವನಕ್ರಮದ ಬಗ್ಗೆ ತಮ್ಮ ಸಹವರ್ತಿಗಳ ಬಳಿ ಹಾಗೂ ಬೌದ್ಧಧರ್ಮೀಯರಲ್ಲಿ ಹೇಳಬೇಕು ಎಂದೂ ಪರಿಷತ್ತು ತಿಳಿಸಿತ್ತು.

‘ತಾವು ಸೇವಿಸುತ್ತಿರುವ ಆಹಾರ ಯಾವುದು, ಎಷ್ಟು ಸೇವಿಸುತ್ತಿದ್ದೇವೆ ಎಂಬ ಬಗ್ಗೆ ಭಿಕ್ಕುಗಳಿಗೆ ತಿಳಿವಳಿಕೆ ಇರಬೇಕು’ ಎನ್ನುತ್ತಾರೆ ಫ್ರಾ ಮಹಾ ಬೂಂಚುವಾಯ್ ದೂಜಾಯ್. ಇವರು ಥಾಯ್ಲೆಂಡ್ನ ಉತ್ತರ ಭಾಗದಲ್ಲಿರುವ ಚಿಯಾಂಗ್ ಮಾಯ್ ಬೌದ್ಧ ಕಾಲೇಜಿನ ಮಾಜಿ ನಿರ್ದೇಶಕರು. ಶಿಫಾರಸುಗಳನ್ನು ರೂಪಿಸುವಲ್ಲಿ ಇವರ ಪಾತ್ರವೂ ಇದೆ. ‘ನಾವು ಆರೋಗ್ಯವಂತರಾಗಿ ಇದ್ದಾಗ ಜನರ ಸೇವೆಯನ್ನು ಹೆಚ್ಚು ಉತ್ತಮವಾಗಿ ಮಾಡಬಹುದು ಎಂಬುದು ಬುದ್ಧನ ಉಪದೇಶಗಳಲ್ಲಿ ಒಂದು’ ಎಂದರು ಅವರು.

ದಿ ನ್ಯೂಯಾರ್ಕ್ ಟೈಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.