ಇಪ್ಪತ್ತನೆಯ ಶತಮಾನದ ಈಚೆಗೆ ಒಂದು ದೇಶ ಮುಂದುವರಿಯಲು ಬಹಳ ಮುಖ್ಯವಾಗಿ ಬೇಕಾದ ಏರ್ಪಾಡು ಏನು ಅನ್ನುವ ಪ್ರಶ್ನೆಯನ್ನು ಯಾರೇ ಕೇಳಿ ಕೊಂಡರೂ ಸಿಗುವ ಉತ್ತರ ‘ಶಿಕ್ಷಣ’. ಯಾವ ದೇಶ ಶಿಕ್ಷಣಕ್ಕೆ ಒತ್ತು ಕೊಟ್ಟಿದೆಯೋ ತನ್ನ ಜಿಡಿಪಿಯಲ್ಲಿ ಕಡಿಮೆಯೆಂದರೂ ಶೇ 5ರಷ್ಟು ಪಾಲನ್ನು ಶಿಕ್ಷಣಕ್ಕಾಗಿ ಮುಡಿಪಿಟ್ಟಿದೆಯೋ ಅಲ್ಲಿ ಶಿಕ್ಷಣದಲ್ಲಿ ದೊಡ್ಡ ಮಟ್ಟದ ಪ್ರಗತಿ ಮತ್ತು ಆ ಪ್ರಗತಿಯ ಬಲದಿಂದ ದೇಶದ ಅರ್ಥವ್ಯವಸ್ಥೆಯನ್ನೂ ಜನರ ಜೀವನಮಟ್ಟವನ್ನೂ ಮೇಲಕ್ಕೆತ್ತುವ ಕೆಲಸಗಳಾಗಿವೆ ಎಂಬುದನ್ನು ಕಾಣಬಹುದು.

ಬರೀ ಹಣವೊಂದಿದ್ದರೆ ಸಾಲದು, ಕಲಿಕೆಯ ಕುರಿತು ದೇಶವೊಂದರ ನೋಟ ಹೇಗಿದೆ ಅನ್ನುವುದೂ ಅಷ್ಟೇ ಮುಖ್ಯ. ಶಿಕ್ಷಣದಲ್ಲಿ ಅಪಾರ ಪ್ರಗತಿ ಸಾಧಿಸಿರುವ ನಾಡುಗಳ ನಡುವಿನ ಹೋಲಿಕೆಯಲ್ಲಿ ಯಾವತ್ತಿಗೂ ಮುಂಚೂಣಿಯಲ್ಲಿ ಬರುವ ಫಿನ್ಲ್ಯಾಂಡ್ ಅನ್ನುವ ಪುಟಾಣಿ ದೇಶದಿಂದ ಭಾರತವೂ ಸೇರಿದಂತೆ ವಿಶ್ವದ ಎಲ್ಲ ದೇಶಗಳೂ ಕಲಿಯುವುದು ಬಹಳಷ್ಟಿದೆ.

ಭೂಮಿಯ ಉತ್ತರ ಧ್ರುವದ ಹತ್ತಿರಕ್ಕೆ ಇರುವ, ವರ್ಷದ ಅರ್ಧಕ್ಕೂ ಹೆಚ್ಚು ಕಾಲ ಹಿಮದಿಂದ ಮುಚ್ಚಿರುವ ಫಿನ್ಲ್ಯಾಂಡಿನಲ್ಲಿ 55 ಲಕ್ಷ ಜನಸಂಖ್ಯೆಯಿದೆ. ದೊಡ್ಡ ಪ್ರಮಾಣದ ಕಾಡಿನಿಂದ ಮರಮುಟ್ಟು ರಫ್ತು ಮಾಡುವುದೇ ಶತಮಾನಗಳ ಕಾಲ ಅದರ ವರಮಾನದ ಮುಖ್ಯ ಮೂಲವಾಗಿತ್ತು. ನಾನೂರು ವರ್ಷ ಸ್ವೀಡನ್ ಮತ್ತು ರಷ್ಯಾದ ದಾಳಿಕೋರರ ಹಾವಳಿಯಲ್ಲಿ ಕಾಲ್ಚೆಂಡಿ ನಂತೆ ಬಳಲಿದ್ದ ನಾಡೊಂದು ಇಂದು ಶಿಕ್ಷಣ, ಹೊಸತನ್ನು ಕಂಡುಹಿಡಿಯುವುದು, ವ್ಯಾಪಾರ, ತಂತ್ರಜ್ಞಾನ, ಆರೋಗ್ಯ, ಲಿಂಗ ಸಮಾನತೆಯಿಂದ ಹಿಡಿದು ಕೊನೆಗೆ ಅತ್ಯಂತ ಸಂತಸದಿಂದಿರುವ ನಾಡು ಅನ್ನುವವರೆಗೆ ಹಲವು ಸಾಧನೆಯ ಗರಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಅದರ ಎಲ್ಲ ಸಾಧನೆಗಳ ಮೂಲದಲ್ಲಿ ಇರುವುದು ಒಂದು ಗಟ್ಟಿಯಾದ, ಎಲ್ಲರಿಗೂ ತಲುಪು ವಂತಹ, ಅದ್ಭುತ ಗುಣಮಟ್ಟದ, ಉಚಿತವಾದ, ಫಿನ್ನಿಶ್ ನುಡಿಯಲ್ಲಿನ ಕಲಿಕೆಯ ವ್ಯವಸ್ಥೆ.

ಇದು ಹೇಗೆ ಸಾಧ್ಯವಾಯಿತು? ಸ್ಪರ್ಧೆಯೇ ಶಿಕ್ಷಣದ ಉದ್ದೇಶ ಅಂತಾಗಿರುವ ಇಂದಿನ ಜಗತ್ತಿನಲ್ಲಿ, ಸ್ಪರ್ಧೆ ಅನ್ನುವ ಪದವನ್ನೇ ತನ್ನ ಶಿಕ್ಷಣದ ಕುರಿತ ನೋಟದಿಂದ ಹೊರಗಿರಿಸಿರುವ ಫಿನ್ಲ್ಯಾಂಡ್ ಹೇಗೆ ಜಗತ್ತಿನ ಸಾಟಿಯಿಲ್ಲದ ಕಲಿಕೆಯ ಏರ್ಪಾಡೊಂದನ್ನು ಕಟ್ಟಿ ಕೊಂಡಿತು?- ಈ ಪ್ರಶ್ನೆಗಳಿಗೆ ಉತ್ತರ ಅರಸಿ ಇಂದು ಜಗತ್ತಿನ ಹಲವು ದೇಶಗಳ ಶಿಕ್ಷಣ ತಜ್ಞರು ಫಿನ್ಲ್ಯಾಂಡಿಗೆ ಅಧ್ಯಯನಕ್ಕೆ ಹೋಗುತ್ತಿದ್ದಾರೆ.

ಈ ಬದಲಾವಣೆ ಹೇಗೆ ಸಾಧ್ಯವಾಯಿತು ಎಂದು ವಿವರಿಸಲು ಫಿನ್ಲ್ಯಾಂಡಿನ ಶಿಕ್ಷಣ ತಜ್ಞ ಡಾ. ಪಾಸಿ ಸ್ಯಾಲ್ಬರ್ಗ್ ‘ಫಿನ್ನಿಶ್ ಲೆಸನ್ಸ್’ ಅನ್ನುವ ಮೂರು ಭಾಗಗಳ ಪುಸ್ತಕವನ್ನು ಬರೆದಿದ್ದಾರೆ. ಅಲ್ಲಿ ಜಗತ್ತಿನ ಬಹುತೇಕ ದೇಶಗಳು ಪಾಲಿಸುತ್ತಿರುವ, ಸ್ಪರ್ಧೆಯನ್ನೇ ಕೇಂದ್ರವಾಗಿ ಇಟ್ಟುಕೊಂಡಿರುವ ‘ಗ್ಲೋಬಲ್ ಎಜುಕೇಶನ್ ರಿಫಾರ್ಮ್ಸ್ ಮೂವ್ಮೆಂಟ್’ (GERM) ಎದುರು ಫಿನ್ನಿಶ್ ಮಾದರಿ ಹೇಗೆ ಬೇರೆಯಾಗಿದೆ, ಯಶಸ್ವಿಯಾಗಿದೆ ಅನ್ನುವುದನ್ನು ತೆರೆದಿಟ್ಟಿದ್ದಾರೆ. ಅವರ ವಾದ ಸರಣಿ ಏನು?

* ಸ್ಪರ್ಧೆಯ ಬದಲು ಸಹಕಾರ: ಜಗತ್ತಿನ ಯಾವುದೇ ದೇಶದ ಶಿಕ್ಷಣ ಸಚಿವರನ್ನು ‘ನಿಮ್ಮ ಗುರಿ ಏನು’ ಎಂದು ಕೇಳಿದರೆ, ‘ಶಿಕ್ಷಣದಲ್ಲಿ ಜಗತ್ತಿಗೆ ನಂಬರ್ ಒನ್’ ಆಗು ವುದು ಅನ್ನಬಹುದು. ಆದರೆ ಫಿನ್ಲ್ಯಾಂಡ್ ಎಂದಿಗೂ ಇದಕ್ಕೆ ಈಡಾಗಿಲ್ಲ. ಒಬ್ಬರಿಗಿಂತ ಒಬ್ಬರು ಮುಂದೆ ಹೋಗುವ ಸ್ಪರ್ಧೆ ಶಿಕ್ಷಣದ ಉದ್ದೇಶವಲ್ಲ, ಬದಲಿಗೆ ಎಲ್ಲ ತರಹದ ಹಿನ್ನೆಲೆಯಿಂದ ಬಂದ ಮಕ್ಕಳಿಗೂ ಸಮಾನವಾದ ಅವಕಾಶವನ್ನು ಕಲ್ಪಿಸುವ, ಅವರೆಲ್ಲರೂ ಜೊತೆಗೂಡಿ, ಒತ್ತಡವಿಲ್ಲದೆ ಕಲಿಯುವಂತಹ ಉಚಿತ ವಾದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಫಿನ್ನಿಶ್ ನುಡಿ ಯಲ್ಲಿ ಕಟ್ಟಿಕೊಂಡಿದ್ದು ಫಿನ್ಲ್ಯಾಂಡಿನ ಹೆಗ್ಗಳಿಕೆ. ಇಲ್ಲಿ ಯಾವುದೇ ಶಾಲೆ, ಶಿಕ್ಷಕರು ಮತ್ತು ಮಕ್ಕಳ ನಡುವೆ ಹೋಲಿಕೆ ಮಾಡಲು ಅವಕಾಶವಿಲ್ಲ.

* ಸರಿಪಡಿಸುವುದಕ್ಕಿಂತ ತಡೆಗಟ್ಟುವುದೇ ಮೇಲು: ಜಗತ್ತಿನಾದ್ಯಂತ ಸರ್ಕಾರಗಳು ಶಿಕ್ಷಣಕ್ಕೆ ಮೀಸಲಿಡುವ ಹಣದ ಹೆಚ್ಚಿನ ಪಾಲು ಹಿರಿಯ ಪ್ರಾಥಮಿಕ ಮತ್ತು ಅದಕ್ಕಿಂತ ಮೇಲಿನ ಮಟ್ಟದ ಕಲಿಕೆಯತ್ತ ಹರಿಯುತ್ತದೆ. ಆದರೆ ಫಿನ್ಲ್ಯಾಂಡಿನಲ್ಲಿ ಮಕ್ಕಳು ಶಾಲೆಗೆ ಕಾಲಿರಿಸುವ ಮೊದಲಿನ 2-7 ವಯಸ್ಸಿನ ಅವಧಿಯ ಕಲಿಕೆಗೆ ಹೆಚ್ಚಿನ ಸಂಪನ್ಮೂಲ ಕೊಡಲಾಗುತ್ತದೆ. ಪ್ರೀ-ನರ್ಸರಿ ಹಂತದಲ್ಲಿ ಆಟವಾಡುತ್ತ ಕಲಿಯುವ ಮಕ್ಕಳಲ್ಲಿ ಯಾವ ಮಗುವಿಗೆ ವಿಶೇಷ ಗಮನ ಬೇಕು ಅನ್ನುವುದನ್ನು ಆರಂಭಿಕ ಹಂತದಲ್ಲೇ ಕಂಡುಕೊಂಡು, ಮಕ್ಕಳ ಕಲಿಕೆಯ ಸವಾಲುಗಳನ್ನು ಬಗೆಹರಿಸುವ ಮೂಲಕ ಹಿರಿಯ ಪ್ರಾಥಮಿಕ ಹಂತಕ್ಕೆ ಬರುವ ಹೊತ್ತಿಗೆ ಹೆಚ್ಚಿನ ಮಕ್ಕಳು ಕಲಿಕೆಯ ಒಂದೇ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳುವ ಏರ್ಪಾಡು ಅಲ್ಲಿದೆ. ಆಮೇಲೆ ಸರಿಪಡಿಸುವುದಕ್ಕಿಂತ ಮೊದಲೇ ತಡೆಗಟ್ಟುವುದು ಮೇಲು ಅನ್ನುವ ನಂಬಿಕೆ ಇದರ ಹಿಂದಿದೆ.

* ಶಾಲೆಗೆ ಮಕ್ಕಳು ಸಜ್ಜಾಗುವುದಲ್ಲ, ಮಕ್ಕಳಿಗಾಗಿ ಶಾಲೆ ಸಜ್ಜಾಗಬೇಕು: ಒಂದು ಶಿಷ್ಟ ವ್ಯವಸ್ಥೆಯನ್ನು ಕಟ್ಟಿ, ಎಲ್ಲ ಮಕ್ಕಳು ಒಂದೇ ರೀತಿ, ಒಂದೇ ಬಗೆಯ ವಿಷಯ ಗಳನ್ನು ಕಲಿಯಬೇಕು ಅನ್ನುವ ವ್ಯವಸ್ಥೆಯ ಬದಲಿಗೆ ದೇಶದ ಮಟ್ಟದಲ್ಲಿ ಒಂದು ಕಲಿಕೆಯ ಚೌಕಟ್ಟನ್ನು ಕಂಡು ಕೊಂಡು, ಅದರಡಿ ಪ್ರತಿಯೊಂದು ಮಗುವಿನ ಅಗತ್ಯಕ್ಕೂ ತಕ್ಕಂತೆ ತಮ್ಮದೇ ಪಠ್ಯಕ್ರಮ ರೂಪಿಸಿಕೊಳ್ಳುವಷ್ಟು
ಸ್ವಾಯತ್ತೆಯನ್ನು ಶಿಕ್ಷಕರಿಗೆ ನೀಡುವ ವಿಕೇಂದ್ರೀಕೃತ ವ್ಯವಸ್ಥೆ ಇಲ್ಲಿದೆ. ಪರೀಕ್ಷೆಗಳಲ್ಲಿ ಶಾಲೆಯ ಸಾಧನೆ ಆಧರಿಸಿದ ಹೊಣೆಗಾರಿಕೆಯ ಬದಲು, ಶಿಕ್ಷಕರ ಮೇಲೆ ನಂಬಿಕೆಯನ್ನಿರಿಸುವ ಹೊಣೆಗಾರಿಕೆಯ ವ್ಯವಸ್ಥೆ ಇಲ್ಲಿದೆ. ಮಕ್ಕಳನ್ನು ಪರೀಕ್ಷೆಯ ಕುಲುಮೆಯಲ್ಲಿ ಸದಾ ಬೇಯಿಸುವ ಬದಲಿಗೆ ಶಿಕ್ಷಕರ ಆಯ್ಕೆ ಮತ್ತು ತರಬೇತಿಗೆ ಅತ್ಯಂತ ಕಠಿಣ ಕಟ್ಟಲೆಯ ಏರ್ಪಾಡು ಇದೆ. ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಸಂಬಳ ಇಲ್ಲಿನ ಶಿಕ್ಷಕರಿಗಿದೆ. ಸಹಜವಾಗಿಯೇ ಶಾಲೆ ಮತ್ತು ಮಕ್ಕಳನ್ನು ಅತಿಯಾಗಿ ಪ್ರೀತಿಸುವ ಸಮರ್ಥ ಶಿಕ್ಷಕರ ಪಡೆಯೊಂದನ್ನು ಕಟ್ಟಿಕೊಳ್ಳುವಲ್ಲಿ ಫಿನ್ಲ್ಯಾಂಡ್ ಯಶಸ್ವಿಯಾಗಿದೆ. ಶಿಕ್ಷಕರ ಬಗ್ಗೆ ಅಪಾರವಾದ ಗೌರವ ಮತ್ತು ನಂಬಿಕೆ ಫಿನ್ನಿಶ್ ಸಮಾಜದಲ್ಲಿದೆ.

* ಆಯ್ಕೆಯ ಬದಲು ಸಮಾನ ಅವಕಾಶ: ಯಾವ ದೇಶ ಶಿಕ್ಷಣವನ್ನು ಸ್ಪರ್ಧೆಯನ್ನಾಗಿ ನೋಡುತ್ತದೋ ಅಲ್ಲೆಲ್ಲ ಸಹಜವಾಗಿಯೇ ಗುಣಮಟ್ಟದ ಹೆಸರಿನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಪದರಗಳನ್ನು ಕಾಣಬಹುದು. ಭಾರತದಲ್ಲಿ ಸಿಬಿಎಸ್ಇ, ಐಸಿಎಸ್ಇ, ರಾಜ್ಯ ಪಠ್ಯಕ್ರಮ ಹೀಗೆ ಹಲವು ಪದರಗಳು ಆಯ್ಕೆಯಂತೆ ಕಂಡರೂ ಆಳದಲ್ಲಿ ಅವೆಲ್ಲವೂ ಶಿಕ್ಷಣದಲ್ಲಿ ತಾರತಮ್ಯದ ಬೇರೆ ಬೇರೆ ಪದರಗಳನ್ನು ಕಟ್ಟಿವೆ. ಫಿನ್ಲ್ಯಾಂಡಿನಲ್ಲಿ ಪ್ರಾಥಮಿಕ ಹಂತದಲ್ಲಿ ಹೆಚ್ಚಿನ ಆಯ್ಕೆಗಳಿಲ್ಲ. ಬಹುತೇಕ ಮಕ್ಕಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲೇ ತಮ್ಮ ಕಲಿಕೆ ಪಡೆಯುತ್ತವೆ. ಆದರೆ ಶಾಲೆಯ ಒಳಗೆ ಏನು ಕಲಿಯಬೇಕು ಅನ್ನುವುದರಲ್ಲಿ ಮಕ್ಕಳಿಗೆ ಹಲವು ಆಯ್ಕೆಗಳಿವೆ! ಕಲಿಕೆಯಲ್ಲಿ ಅಸಮಾನತೆ ಇದ್ದಷ್ಟೂ ಸಮಾಜದಲ್ಲೂ ಅಸಮಾನತೆ ಇರುತ್ತದೆ ಮತ್ತು ಅಂತಹ ಸಮಾಜ ಎಂದಿಗೂ ಒಂದುಗೂಡಿ ಏಳಿಗೆ ಹೊಂದುವುದಿಲ್ಲ ಅನ್ನುವ ನಂಬಿಕೆ ಇಲ್ಲಿದೆ.

* ಲಿಂಗ ಸಮಾನತೆ ಮತ್ತು ಮಕ್ಕಳಸ್ನೇಹಿ ನೀತಿ: ದೇಶದ ಏಳಿಗೆಯಲ್ಲಿ ಹೆಣ್ಣುಮಕ್ಕಳ ಕೊಡುಗೆಯೂ ಸರಿ ಸಮಾನವಾಗಿ ಬರಬೇಕೆಂದರೆ ಶಿಕ್ಷಣದ ನೀತಿಯಲ್ಲಿ ಲಿಂಗಸಮಾನತೆಗೆ ಬದ್ಧತೆ ಇರಬೇಕು ಮತ್ತು ಇಂತಹ ಬದ್ಧತೆ ಶಾಲೆಯಲ್ಲಿದ್ದರೆ ಅದು ಮುಂದೆ ಸಮಾಜದಲ್ಲೂ ಕಾಣುತ್ತದೆ ಅನ್ನುವ ನಂಬಿಕೆ ಇದೆ. ಶಾಲೆಯ ಎಲ್ಲ ಮಕ್ಕಳಿಗೂ ಉಚಿತ ಬಿಸಿಯೂಟದ ವ್ಯವಸ್ಥೆ ಇದೆ.

ಫಿನ್ಲ್ಯಾಂಡಿನಂತಹ ಸಣ್ಣ ದೇಶದಲ್ಲಿ ಇದೆಲ್ಲ ಸಾಧ್ಯವಾಗಬಹುದು, ಇತರೆಡೆ ಕಷ್ಟ ಅನ್ನುವ ಅಭಿಪ್ರಾಯ ಯಾರಲ್ಲಾದರೂ ಇದ್ದರೆ ಅದಕ್ಕೆ ಸ್ಯಾಲ್ಬರ್ಗ್ ಅವರಲ್ಲಿ ಉತ್ತರವಿದೆ. ಅವರ ಪ್ರಕಾರ, ಶಿಕ್ಷಕರು, ಶಾಲೆ ಮತ್ತು ಮಕ್ಕಳ ಅಗತ್ಯವನ್ನು ಅರ್ಥ ಮಾಡಿಕೊಳ್ಳುವುದು ಒಂದು ವಿಜ್ಞಾನ. ಅದನ್ನು ಅರಿತು ನೀತಿಗಳನ್ನು ರೂಪಿಸಿಕೊಂಡರೆ ಎಂತಹ ದೊಡ್ಡ ದೇಶದಲ್ಲೂ ಶಿಕ್ಷಣದ ಕ್ರಾಂತಿಯನ್ನು ಮಾಡಬಹುದು. ಅಲ್ಲಿ ನಡೆಸಲಾದ ಸರ್ವೆಯೊಂದರ ಪ್ರಕಾರ, ಸ್ವಾತಂತ್ರ್ಯ ಪಡೆದ ನೂರು ವರ್ಷಗಳಲ್ಲಿ ಶಿಕ್ಷಣ ದಲ್ಲಿ ಫಿನ್ಲ್ಯಾಂಡ್ ಮಾಡಿರುವ ಸಾಧನೆ ಎಲ್ಲಕ್ಕೂ ಮಿಗಿ ಲಾದದ್ದು ಅನ್ನುವ ಅಭಿಪ್ರಾಯವನ್ನು ಶೇ 75ರಷ್ಟು ಫಿನ್ನಿಶ್ ಜನರು ಹೊಂದಿದ್ದಾರೆ. ನಮ್ಮ ದೇಶದಲ್ಲಿ ಸಾರ್ವ ಜನಿಕ ಶಿಕ್ಷಣದ ಬಗ್ಗೆ ಜನರಿಗಿರುವ ಅನಿಸಿಕೆ ಇದಕ್ಕೆ ಎಷ್ಟು ತದ್ವಿರುದ್ಧವಾಗಿದೆ!

ಹೊಸ ಶಿಕ್ಷಣ ನೀತಿ ಜಾರಿಗೆ ಬರುತ್ತಿರುವ ಈ ಹೊತ್ತಿನಲ್ಲಿ, ಫಿನ್ಲ್ಯಾಂಡಿನ ಅನುಭವಗಳನ್ನು ತಿಳಿಯುವ ಮನಸ್ಸನ್ನು ನಮ್ಮನ್ನಾಳುವವರು ಮಾಡಿಯಾರೇ?

ವಸಂತ ಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.