ಶಿಕ್ಷಣ, ಹಾಸ್ಟೆಲ್ ಅಂತ ಮನೆಯಿಂದ ದೂರವಿರುವ ಮಕ್ಕಳ ದುಗುಡ ಒಂದು ಕಡೆಯಾದರೆ, ಅವರನ್ನು ಬಿಟ್ಟು ಮನೆಯಲ್ಲಿರುವ ಪೋಷಕರ ತಲ್ಲಣಗಳು ಬೇರೆಯದೇ ಆಗಿರುತ್ತವೆ. ಪರಸ್ಪರ ಪ್ರೀತಿ, ವಿಶ್ವಾಸ, ನಂಬುಗೆ ಇವೇ ಈ ಎರಡು ಕವಲುಗಳನ್ನು ಬೆಸೆಯುವ ಬೆಸುಗೆ. ಇದರ ಸುತ್ತ ಹೆಣೆದಿರುವ ಒಳನೋಟವೊಂದು ಇಲ್ಲಿದೆ.

‘ಹೆಂಗಿರೂದು... ಹುಟ್ಟಿದಾಗಿಂದ ಒಮ್ಮೆನೂ ಬಿಟ್ಟಿಲ್ಲ... ರಿಸಲ್ಟ್ ಬಂದಾಗ, ಎಂಟ್ರೆನ್ಸ್ ಬರಿಯೂ ಮುಂದ ಏನೂ ಅನಿಸ್ತಿರಲಿಲ್ಲ. ಕೋರ್ಸು, ಕಾಲೇಜು ಆಯ್ಕೆ ಮಾಡು ಮುಂದನೂ ಏನೂ ಅನಿಸಿರಲಿಲ್ಲ... ಆದ್ರ ದೂರದ ಕಾಲೇಜಿಗೆ ಬಿಡಬೇಕಾದಾಗ... ಎದಿ ಧಡಧಡ ಅಂತದ...ಎದಿಗೂಡಿನಾಗೊಂದು ನೆನಪುಗಳ ಮಾಲ್ ಗಾಡಿ ಓಡಿದ್ಹಂಗ ರೈಲಿನ ಸದ್ದು ಬರ್ತದ’

ಹೇಳುತ್ತ ಹೇಳುತ್ತಲೇ ಕಣ್ಣೀರಾಗುತ್ತಿದ್ದರು ಶಿವಗೀತಾ.. ಮತ್ತೆ ಕಂಗಳಲ್ಲಿ ಮಿಂಚೂ ಬರ್ತಿತ್ತು.

‘ಕಳ್ಳುಬಳ್ಳಿ ಆಸ್ಪತ್ರೆಯೊಳಗ ಕತ್ತರಿಸಿದ್ದು ಗೊತ್ತಾಗೂದಿಲ್ಲ. ಮನಿಬಿಟ್ಟು ಸಾಲೀಗೆ ಹೋಗುಮುಂದ, ಊರುಬಿಟ್ಟು ಕಾಲೇಜಿಗೆ ಬ್ಯಾರೆ ಊರಿಗೆ ಹೋಗೂಮುಂದ ಕರಳುಬಳ್ಳಿ ಕತ್ತರಿಸಿದಂಗ ಆಗ್ತದ...’

ಬೀದರ್‌ನಲ್ಲಿರುವ ಶೀಲಾ ಹೇಳುತ್ತಿದ್ದರು. ಮಗಳೂ ಮೊದಲ ಸಲ ಡೆಂಟಲ್ ಕೋರ್ಸಿಗೆಂದು ಬೆಂಗಳೂರಿನ ಬಸ್ ಹತ್ತಿದ್ದಳು. ಅಮ್ಮ ನೋಡದ ಊರದು. ಆತಂಕದ ಕಾರ್ಮೋಡ ಸದಾ ಅವರ ಕಣ್ರೆಪ್ಪೆ ಮೇಲೆ ಮನೆ ಮಾಡಿತ್ತು.

ಓದು, ಶಿಕ್ಷಣ, ಸ್ವಾವಲಂಬನೆ, ಶಿಸ್ತು, ಭದ್ರ ಭವಿಷ್ಯ, ಹದಿಹರೆಯದಲ್ಲಿ ಗುರುಗಳ ಮಾರ್ಗದರ್ಶನ ಇರಲಿ, ಅವರ ನಿಗರಾಣಿಯಲ್ಲಿ ಬೆಳೆಯಲಿ... ಹೀಗೆ ಹತ್ತು ಹಲವು ಕನಸು, ಅಪೇಕ್ಷೆ ಮತ್ತು ನಿರೀಕ್ಷೆಗಳಿಂದಲೇ ಮಕ್ಕಳನ್ನು ತಮ್ಮ ಗೂಡಿನಿಂದಾಚೆ ತಳ್ಳಲು ಹೆತ್ತವರು ಸಿದ್ಧರಾಗುತ್ತಾರೆ. ಆಕ್ಷೇಪಗಳಿದ್ದರೂ ಸ್ವಾತಂತ್ರ್ಯದ ಕನಸಿನೊಂದಿಗೆ ಅಪ್ಪನ ಸೆಕ್ಯುರ್ಡ್ ಮಾತುಗಳಾಚೆ, ಅಮ್ಮನ ಕಣ್ಗಾವಲಿನಿಂದಾಚೆ ಹೋಗಲು ಹಾತೊರೆಯುವ ಮಕ್ಕಳು ಮುಂಗಾರು ಮಳೆಯೊಂದಿಗೆ ಹೊರಟೇ ಬಿಡುತ್ತಾರೆ.

ಮೊದಲೆರಡು ದಿನ, ಹಾಸ್ಟೆಲ್ ರೂಮು ಹೊಂದಿಸಿಕೊಂಡ ಬಗೆ, ರೂಮ್‌ಮೆಟ್, ಅವರ ಉಡುಗೆ, ಆಹಾರ, ಅವರ ಹೆತ್ತವರ ಬಗ್ಗೆ ಮಾತಾಡುವವರು, ನಾಲ್ಕಾರು ದಿನಗಳ ನಂತರ ದೂರುಪಟ್ಟಿ ಸಿದ್ಧವಾಗಿರುತ್ತದೆ.

‘ನಂಗ ಬ್ಯಾಡಂದ್ರೂ ಉಪ್ಪಿಟ್ಟೇ ಮಾಡ್ತಾರ ಇಲ್ಲಿ, ಬೆಳಿಗ್ಗೆ ಅವಲಕ್ಕಿ ತಿನ್ನಾಕ ಒಲ್ಲೆಯಾಗಿತ್ತು. ಮಧ್ಯಾಹ್ನನೂ ಬದನಿಕಾಯಿ ಮಾಡಿದ್ರು, ಎರಡೂ ನಾನು ತಿನ್ನೂವು ಅಲ್ಲವೇ ಅಲ್ಲ..’ ಮಗಳ ದೂರು. ‘ಮತ್ತ ಉಪಾಸಿದ್ದಿ’ – ಅಮ್ಮನ ಆತಂಕ. ‘ಇಲ್ಲಾ.. ರಸ ಸವರಿಕೊಂಡು ತಿಂದೆ..’ ಹೊಂದಾಣಿಕೆಯ ಮೊದಲ ಪಾಠಗಳು ಆರಂಭವಾಗುವುದೇ ಹೀಗೆ.

‘ಅಮ್ಮಾ.. ಟವಲ್ ವಾಸನಿ ಬರಾತಿತ್ತು... ಇವೊತ್ತು ತಿಳೀತು.. ನೀ ಯಾಕ ಟವಲ್ ಒಣಗಿ ಹಾಕಾಕ ಬೈತಿದ್ದಿ ಅಂತ.. ಸೋಪು ಮುಟ್ಟಾಕ ಆಗಲಾರದಷ್ಟು ಒದ್ದಿಮುದ್ದಿ ಆಗಿತ್ತಮ್ಮ.. ಬಚ್ಚಲು ಮನಿಗೆ ಹೋದಾಗಲೆಲ್ಲ ಸಿಡುಕಿ, ಸೋಪಿನ ಡಬ್ಬಿ ಕಟ್ಟಿಯಿಂದ ತಗದಿಡ್ತಿದ್ದಿ ನೀನು.. ತಟ್ಟಿಯೊಳಗ ಮುಸರಿ ಬಿಡಬ್ಯಾಡಂತ ಯಾಕ ಹೇಳ್ತಿದ್ದಿ ಅನ್ನೂದು ಈಗ ತೊಳಿಯೂ ಮುಂದ ಗೊತ್ತಾಯ್ತು.. ‘ – ಒಂದೊಂದೇ ಪ್ರಶ್ನೆಗಳೂ ಅವರನ್ನ ಸ್ವಾವಲಂಬಿಯಾಗುವುದರಲ್ಲಿ ಅಂಬೆಗಾಲಿಡುವುದರಿಂದ ನಿಲ್ಲುವಂತೆ ಮಾಡುತ್ತಿರುತ್ತದೆ.

ಎಲ್ಲವಕ್ಕೂ ಕಿವಿಯಾಗಿ..ಅಷ್ಟೇ

ಓದು ಅಥವಾ ಉದ್ಯೋಗಕ್ಕಾಗಿ ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸುವ ಎಲ್ಲ ಪೋಷಕರು ಇಂಥ ಸಂದರ್ಭವನ್ನು ಎದುರಿಸುತ್ತಾರೆ. ಆದರೆ, ಇಂಥ ಸಂದರ್ಭದಲ್ಲಿ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಸುಮ್ನೆ, ಅವರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡರೆ ಸಾಕು. ಇಂಥ ಸನ್ನಿವೇಶಗಳಿಂದ ಪ್ರತಿಸಲವೂ ಮಕ್ಕಳು ಒಂದೊಂದು ಪಾಠವನ್ನು ಕಲೀತಿರ್ತಾರೆ.

ಮಕ್ಕಳ ಜವಾಬ್ದಾರಿ ಹೊತ್ತ ಶಿಕ್ಷಣ ಸಂಸ್ಥೆಗಳೂ ತಮ್ಮ ಪ್ರತಿಷ್ಠೆಗೆ ಕುಂದಾಗದಂತೆ ಅವರ ಕಾಳಜಿ ತೊಗೊಳ್ತಾರೆ ಎನ್ನುವ ನಂಬಿಕೆ ಇರಬೇಕು. ಆ ವಿಶ್ವಾಸ ಬೆಳೆಯಲು ಆಗಾಗ ಮಕ್ಕಳ ಉಪನ್ಯಾಸ ಕರೊಂದಿಗೆ ಮಾತನಾಡಬೇಕು. ದೂರ ಇರುವ ಮಕ್ಕಳಿಗೆ ದೂರದೆಯೇ ಅವರ ಪ್ರಯತ್ನಗಳನ್ನು ಶ್ಲಾಘಿಸಬೇಕು.

ಮನೆಯ ವಾತಾವರಣದಿಂದ ಆಚೆ ಹೋದ ಮಕ್ಕಳಿಗೆ ಅವರನ್ನು ಕೇಳಿಸಿ ಕೊಳ್ಳುವ ಕಿವಿಗಳಿವೆ ಎಂಬ ನಂಬಿಕೆ ಹುಟ್ಟುವಂತಾ ಗಬೇಕು ಆಗ ಮಕ್ಕಳಿಗೆ ರೆಕ್ಕೆ ಬಂದಿದ್ದರೂ ಕಾಲು ಮನೆಯೊಳಗೇ ನೆಲೆ ಊರಿರುತ್ತವೆ.

ಪರಸ್ಪರ ಪ್ರೀತಿ–ನಂಬಿಕೆ ಇರಲಿ

ಹಾಸ್ಟೆಲ್‌ನಲ್ಲಿ ಪ್ರವೇಶ ಸಿಗದಿದ್ದಲ್ಲಿ..? ಸಂಬಂಧಿಕರ ಮನೆಗೆ ಬಿಡಬೇಕೆ? ಅವರಿಗೆ ಅದು ಹೊರೆಯಾಗದೆ? ಮಗು ಅವರ ಮನೆಯಲ್ಲಿ ಹೊರಗಿನವಳು ಅಂತನಿಸದಂತೆ ನೋಡಿಕೊಳ್ಳುವರೆ? ಮಗುವಿಗೆ ಸ್ವಾತಂತ್ರ್ಯ ಇರುತ್ತದೆಯೇ? ಮಗುವಿನ ಓರೆಕೋರೆಗಳನ್ನು ತಿದ್ದದೆ ಸಂಬಂಧಿಕರಲ್ಲಿ ಆಡಿಕೊಂಡರೆ... ಮಗುವನ್ನು ಹೀಯಾಳಿಸಿದರೆ, ಜರೆದರೆ, ಹೀಗಳೆದರೆ.. ಹೀಗೆ ಹಲವಾರು ‘ರೆ’ ಗಳು ಆತಂಕದ ಬೀಜವನ್ನೇ ಬಿತ್ತಿರುತ್ತವೆ. ಆದರೂ ಪರಸ್ಪರ ಪ್ರೀತಿ ನಂಬಿಕೆಯ ಆಧಾರದ ಮೇಲೆ ಈ ಮಹತ್ತರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಪ್ರತ್ಯೇಕ ರೂಮು ಮಾಡುವುದಾದರೆ ಅಡುಗೆ ಮನೆ ಇರಬೇಕೆ? ಮೆಸ್‌ಗೆ ಹೋಗಬೇಕೆ? ಬಿಸಿಲಿದ್ದರೆ, ಮಳೆಯಿದ್ದರೆ ಹೋಗಿ ಬರಲು ಆಗದಿದ್ದರೆ ಡಬ್ಬಿವಾಲಗಾಗಳಿಗೆ ಹೇಳಬೇಕೆ? ಯಾರಾದರೂ ಅಡುಗೆಯವರಿಗೆ ಇಡಬೇಕೆಂದರೆ ಮನೆಯಲ್ಲಿ ಪಾಲು ಹಾಕಬೇಕು. ಎರಡು ಅಡುಗೆ ಮನೆಗೆ ಬೇಕಾಗುವಷ್ಟು ಸಾಮಗ್ರಿ ಬೇಕು. ದಿನಸಿ ತರಬೇಕು. ಇವನ್ನೆಲ್ಲ ನಿಭಾಯಿಸೋರು ಯಾರು? ಇಂಥ ಹಲವಾರು ಆತಂಕಗಳ ನಡುವೆ ಒಂದು ತೀರ್ಮಾನ ಕೈಗೊಂಡರೂ, ಅದಾಗಿದ್ದರೆ.. ಇದಾಗಿದ್ದರೆ ಎಂಬ ‘ರೆ’ಗಳ ಅನುಮಾನಗಳು, ಆತಂಕಗಳೂ ಕೊನೆಯಿಲ್ಲದಂತೆ ಕಾಡುತ್ತವೆ.

ಕರೆ ಮಾಡಿ.. ಮಾತಾಡಿ..

ಮಕ್ಕಳನ್ನು ಓದಲೆಂದು ಮನೆಯಿಂದಾಚೆ ಕಳುಹಿಸಿದ ನಂತರ ಒಂದಷ್ಟು ದಿನ ಮನೆಯಿಡೀ ಖಾಲಿಖಾಲಿ. ಉಣ್ಣಲು, ತಿನ್ನಲು ಮನಸ್ಸಿರುವುದಿಲ್ಲ. ಅವರಿಗಿಷ್ಟದ ಊಟ ತಿಂಡಿಯನ್ನಂತೂ ಮಾಡಲು ಹೋಗುವುದೇ ಇಲ್ಲ. ಆಕಸ್ಮಿಕವಾಗಿ ಮಾಡಿದರೂ ಕೆನ್ನೆಯಿಂದ ನಾಕಾರು ಹನಿ ಕಣ್ಣೀರಿಳಿದ ನಂತರ, ಊಟವೇ ಸೇರದು. ಮಕ್ಕಳು ಕಾಲ್ ಮಾಡಿದಾಗಲೇ ಸಮಾಧಾನ.

ಈ ಮೊದಲ ದಿನಗಳು ಪಾಲಕರಿಗೂ, ಮಕ್ಕಳಿಗೂ ಒತ್ತಡದ ದಿನಗಳು. ಪ್ರತಿ ದಿನವೂ ಕಾಲ್ ಮಾಡುವುದರಿಂದ, ಕನೆಕ್ಟ್ ಆಗಿರುವುದರಿಂದ ಈ ಒತ್ತಡವನ್ನು ನಿರ್ವಹಿಸಬಹುದು. ಹೀಗೆ ಹೊರಗೆ ಕಳುಹಿಸಿದ್ದು ಅವರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಎಂಬುದು ಮಕ್ಕಳಿಗೆ ಮನವರಿಕೆ ಆಗಿರಬೇಕು.

ಇನ್ನೈದು ವರ್ಷಗಳ ನಂತರ ಮಕ್ಕಳ ಸಾಫಲ್ಯದ ಕನಸು ಕಾಣಬೇಕು. ಅವು ನಮ್ಮಲ್ಲಿ ಒಂದು ವಿಶ್ವಾಸವನ್ನು ಮೂಡಿಸುತ್ತವೆ. ಮಾಸದ ನಗೆ ಮುಖದ ಮೇಲೆ ಮೂಡುತ್ತದೆ. ಇದೇ ಶಾಂತ ಮನಸು, ಮನಸ್ಥಿತಿ ಮಕ್ಕಳಿಗೂ ಸಕಾರಾತ್ಮಕ ಭಾವನೆಗಳನ್ನೇ ದಾಟಿಸುತ್ತದೆ.

ಬದುಕಿನಲ್ಲಿ ಯಾವುದೇ ಪ್ರಾಯಶ್ಚಿತ್ತವಿಲ್ಲದಂಥ ನಿರ್ಧಾರ ಇದಾಗಿತ್ತು ಎಂಬ ಹೆಮ್ಮೆ ಪಾಲಕರದ್ದಾದರೆ, ಬದುಕಿನಲ್ಲಿ ಸದಾ ನೆನೆಯುವಂಥ ನೆನಪುಗಳನ್ನೇ ಬುತ್ತಿಕಟ್ಟಿಕೊಂಡ ಗರಿಮೆ ಮಕ್ಕಳದ್ದಾಗಿರುತ್ತದೆ.

ಪೋಷಕರು ಮಾಡಬೇಕಾದದ್ದು..

* ಪಾಲಕರು ಮನೆಯಿಂದ ದೂರಿವಿರುವ ಮಕ್ಕಳ ಪ್ರತಿ ಬೆಳವಣಿಗೆಯನ್ನು ಶ್ಲಾಘಿಸುತ್ತಿರಿ. ಬೆಳಿಗ್ಗೆ ಬೇಗನೆ ಏಳದ ಮಗು, ಬೇಗ ಎದ್ದ ಬಗ್ಗೆ ಹೇಳಿದಾಗ ಹೊಗಳಬೇಕು. ಬೆಳಿಗ್ಗೆ ಏಳುವುದರ ಉಪಯೋಗಗಳನ್ನು ತಿಳಿಹೇಳಬೇಕು. ಅದನ್ನು ಬಿಟ್ಟು, ಒಳ್ಳೆದಾಯ್ತು, ಈಗ ಏಳಬೇಕಾಯ್ತಲ್ಲ, ತಿಳೀತಾ... ಅಂತೆಲ್ಲ ಕುಹಕವಾಡಿದರೆ ಮಕ್ಕಳ ಮನಸಿನಲ್ಲಿ ಹೊರಗಿದ್ದು ಓದುವುದು ದ್ವೇಷದ, ಪ್ರತೀಕಾರದ ಕೆಲಸ ಎಂಬಂಥ ಭಾವ ಮೊಳೆಯುವುದು. ಅಂಥ ಸುಧಾರಣೆಗಳ ಬಗ್ಗೆಯೇ ಅಸಡ್ಡೆ ಮೂಡಬಹುದು.

* ಬಹುತೇಕ ಪಾಲಕರು, ಮಕ್ಕಳನ್ನು ಬಿಟ್ಟು ಬರುವಾಗ ದುಃಖದ ಮೂಟೆಯೊಂದನ್ನು ಹೊತ್ತು, ಹೊರಲಾರದ ಭಾರ ಹೊತ್ತಂತೆ ಅಳುತ್ತ ಮರಳುತ್ತಾರೆ. ಭಾವೋದ್ವೇಗವನ್ನು ಸಂಯಮದಿಂದ ತಡೆಯಬೇಕು.ಇಲ್ಲದಿದ್ದಲ್ಲಿ ಮಕ್ಕಳೂ ದುಗುಡದಲ್ಲಿ ಸಮಯ ಕಳೆಯುತ್ತಾರೆ.

* ‘ಇಲ್ಲಿ ಏನೇನೂ ಸರಿ ಇಲ್ಲ. ನೀ ಬರದಿದ್ದರೆ ನಾನೇ ಓಡಿ ಬರ್ತೀನಿ...’– ಇಂಥ ಕರೆಗಳಿಗೆ ಸಮಾಧಾನದಿಂದ ಉತ್ತರಿಸಿ. ಅಷ್ಟೇ ಸಮಾಧಾನದಿಂದ ಸಮಸ್ಯೆ ಅರ್ಥ ಮಾಡಿಕೊಳ್ಳಿ. ಮಕ್ಕಳಿಗೆ ತಾವೇ ಪರಿಹಾರ ಕಂಡುಕೊಳ್ಳುವಂತೆ ಪ್ರೇರೇಪಿಸಿ.

ಮಕ್ಕಳು ಮಾಡಬೇಕಿರುವುದು..

* ಅಪ್ಪ ಅಮ್ಮನಿಗೆ ದೂರವಾಣಿ ಕರೆ ಮಾಡಿ ದೂರುವ ಮೊದಲು ಶಿಕ್ಷಕರೊಂದಿಗೆ ಸಮಾಲೋಚಿಸಿ.

* ಕೆಲವೊಮ್ಮೆ ಮಾತನಾಡುವುದರಿಂದಲೇ ಪರಿಹಾರ ಸರಳವಾಗಿ, ಸುಲಭವಾಗಿ ಸಿಗುತ್ತವೆ.

* ಕೆಲವು ಸಮಸ್ಯೆಗಳೇ ಆಗಿರುವುದಿಲ್ಲ. ನಮ್ಮ ಅಸಮಾಧಾನ, ನಮ್ಮ ಅಹಂಕಾರದಿಂದಲೂ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿರುತ್ತೇವೆ.

* ಹೊತ್ತು ಕಳೆಯುವುದು ಕಷ್ಟವಾದಾಗಲೆಲ್ಲ ಪುಸ್ತಕ ಮತ್ತು ಸಂಗೀತದ ಮೊರೆ ಹೋಗಿ

* ಹೊತ್ತು ಸಿಗದಷ್ಟು ಓದುವ, ಬರೆಯುವ ಕೆಲಸಗಳಿದ್ದಲ್ಲಿ ಸಂಗೀತ ಕೇಳುತ್ತ ಅಭ್ಯಾಸ ಮಾಡಿ

* ಓದುವುದು ಹೆಚ್ಚಾಯಿತೆಂದು ಹೆಚ್ಚು ಮಲಗಬೇಡಿ. ಬೆಳಗಿನ ಹೊತ್ತು ಕಡ್ಡಾಯವಾಗಿ ಲಘುವ್ಯಾಯಾಮ ಅಭ್ಯಾಸ ಮಾಡಿಕೊಳ್ಳಿ. ಇದು ಬೇಸರ ಮತ್ತು ಒತ್ತಡ ಸೃಷ್ಟಿಸದಂಥ ಚಿಕಿತ್ಸಕ ಕೆಲಸಗಳಾಗಿವೆ.

* ಬದುಕು ಶಿಸ್ತಿಗೆ ಒಳಪಡಲಿ ಎಂದೇ ನೀವು ಈ ವ್ಯವಸ್ಥೆಯ ಭಾಗವಾಗಿರುತ್ತೀರಿ. ಇಲ್ಲಿಯೂ ಮನೆಯಂತೆಯೇ ಸೋಮಾರಿಗಳಾಗಲು ಬಯಸಿದರೆ, ಹಟಮಾರಿಗಳಾಗಲು ಬಯಸಿದರೆ ಎಲ್ಲಿಯೂ ಸಲ್ಲದವರಾಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಕಷ್ಟಪಟ್ಟಷ್ಟೂ ಬದುಕನ್ನು ಆನಂದಿಸುವುದು ಕಲಿಯಬಹುದು ಎಂಬುದು ನೆನಪಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.