ಹಳೆ ಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿಹೋಗಲಿ, ಬರಲಿ ವಿಜ್ಞಾನ ಬುದ್ಧಿ...

...ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ ವಿಜ್ಞಾನ ದೀವಿಗೆಯ ಹಿಡಿಯಬನ್ನಿ!

- ಕುವೆಂಪು

ನಮ್ಮ ದೇಶದ ವಿಜ್ಞಾನಿಯೊಬ್ಬರಿಗೆ ನೊಬೆಲ್ ಪುರಸ್ಕಾರ ಬಂದು ಹತ್ತತ್ತಿರ ನೂರು ವರ್ಷಗಳಾಗುತ್ತಿವೆ. ನಮ್ಮ ಇನ್ನೊಬ್ಬ ವಿಜ್ಞಾನಿಗೆ ಯಾಕೆ ಅದನ್ನು ಪಡೆಯಲು ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ನಮ್ಮ ವಿದ್ಯಾರ್ಥಿ
ಗಳಿಂದ ಪದೇಪದೇ ಎದುರಾಗುತ್ತದೆ. ವಿಜ್ಞಾನದ ಪಾಠ ಮಾಡುವ ಮೇಷ್ಟ್ರುಗಳಿಗೆ ಈ ಪ್ರಶ್ನೆಗೆ ಸರಾಗವಾಗಿ ಉತ್ತರಿಸಲು ಆಗುವುದಿಲ್ಲ. ಆದರೆ ‘ನಾವು ಮಾಡುವ ವೈಜ್ಞಾನಿಕ ಸಂಶೋಧನೆಗಳಿಗೆ ಆರ್ಥಿಕ ಅನುದಾನ ಸಾಲದು’, ‘ಉಪಕರಣಗಳ ಗುಣಮಟ್ಟ ಸಾಲದು’ ಎಂಬ ಸಿದ್ಧ ಉತ್ತರಗಳು ವಿಜ್ಞಾನಿಗಳ ಬಳಿ ಇವೆ. ಹಿಂದಿನ ಎರಡು ದಶಕಗಳಿಂದಲೂ ವಿಜ್ಞಾನ ಕ್ಷೇತ್ರಕ್ಕೆ ನೀಡುತ್ತಿರುವ ಹಣಕಾಸಿನ ನೆರವು ಕಡಿಮೆ ಎಂಬ ಮಾತು ನಿಜ.

ಹಣವಿದ್ದರಷ್ಟೇ ಸಂಶೋಧನೆ ಎಂದು ವಿಜ್ಞಾನಿಗಳು ಇಲ್ಲಿ ಪ್ರತಿಪಾದಿಸುತ್ತಿಲ್ಲ. ಆದರೆ ವೈಜ್ಞಾನಿಕ ಸಂಶೋಧನೆ
ಗಳಿಗೆ ನಾವು ಮೀಸಲಿಡುವ ಹಣ ಇತರ ಸುಧಾರಿತ ದೇಶಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಹಿಂದಿನ ಹಲವಾರು ವರ್ಷಗಳಿಂದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ 0.6ರಿಂದ 0.8ರಷ್ಟನ್ನು ಮಾತ್ರ ಸಂಶೋಧನೆಗೆ ಬಳಸಲಾಗುತ್ತಿದೆ. ಇಸ್ರೇಲ್ನವರು ಜಿಡಿಪಿಯ ಶೇ 4.9ರಷ್ಟು ಬಳಸುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳೆರಡಕ್ಕೂ ಸೇರಿ ನಾವು ಖರ್ಚು ಮಾಡುವ ಹಣ ಬರೀ ₹ 1.2 ಲಕ್ಷ ಕೋಟಿಯಾದರೆ, ಅಮೆರಿಕ ನಮ್ಮ ಮೊತ್ತದ 120 ಪಟ್ಟು ಖರ್ಚು ಮಾಡುತ್ತದೆ.

ನಮ್ಮಲ್ಲಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಬರೀ 262 ಜನ ಸಂಶೋಧಕರಿದ್ದರೆ, ಕೊರಿಯಾ 8,714, ಇಸ್ರೇಲ್ 8,342, ಸ್ವೀಡನ್ 7,930, ಡೆನ್ಮಾರ್ಕ್ 7,692, ಸಿಂಗಪುರದಲ್ಲಿ 7,887 ಮಂದಿ ಸಂಶೋಧಕರಿದ್ದಾರೆ. ಸಂಶೋಧನೆಗಳಲ್ಲಿ ನಾವೀನ್ಯ ರೂಢಿಸಿಕೊಂಡಿರುವ ವಿಶ್ವದ ಮೊದಲ ಐವತ್ತು ದೇಶಗಳ ಪಟ್ಟಿಯಲ್ಲಿ ನಾವು (46ನೇ) ಕಳಪೆ ಸ್ಥಾನದಲ್ಲಿದ್ದೇವೆ. ಹಿಂದಿನ ಒಂದು ದಶಕದಲ್ಲಿ ಮುನ್ನೂರು ಹೊಸ ವಿಶ್ವವಿದ್ಯಾಲಯಗಳು ತಲೆ ಎತ್ತಿವೆ. ವಿಜ್ಞಾನಕ್ಕೆ ಸಂಬಂಧಿಸಿದ ಸಂಸ್ಥೆಗಳ ಸಂಖ್ಯೆಯಲ್ಲಿ ವೃದ್ಧಿಯಾಗಿದೆ. ಆದರೆ ಸಂಶೋಧನೆಗೆ ನೀಡುವ ಹಣ ಹೆಚ್ಚಾಗಿಲ್ಲ.

ನ್ಯಾಷನಲ್ ರಿಸರ್ಚ್ ಫೌಂಡೇಷನ್ ಬಿಲ್– 2023ರ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ನಡೆಯುವ ಉನ್ನತ ಸಂಶೋಧನೆಗಳಿಗೆ ಒತ್ತು ನೀಡಲು ₹ 50,000 ಕೋಟಿ ಮೀಸಲಿಡುವುದಾಗಿ ಘೋಷಿಸಲಾಗಿದೆ. ಖರ್ಚು ಮಾಡಲಾಗುವ ಹಣದಲ್ಲಿ ₹ 36,000 ಕೋಟಿ ಖಾಸಗಿ ವಲಯಗಳಿಂದ ಬರಬೇಕಿದೆ. ಅಮೆರಿಕ, ಇಸ್ರೇಲ್, ಚೀನಾದಲ್ಲಿ ಸಂಶೋಧನೆಗೆ ಖರ್ಚು ಮಾಡುವ ಒಟ್ಟು ಹಣದ ಶೇ 70ರಷ್ಟನ್ನು ಖಾಸಗಿ ಕ್ಷೇತ್ರವೇ ಭರಿಸುತ್ತದೆ. ನಮ್ಮಲ್ಲಿ ಅದರ ಪ್ರಮಾಣ ಬರೀ ಶೇ 36ರಷ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಂಶೋಧನೆಗೆ ಹಣ ಪಡೆಯುವುದು ಅಷ್ಟು ಸುಲಭವಲ್ಲ ಎನ್ನುವ ವಿಜ್ಞಾನಿಗಳು, ಉಪಕರಣ, ಸಲಕರಣೆ ಕೊಳ್ಳಲು ಬೇಕಾಗುವ ಹಣ ನಮಗೆ ಬರುವುದು ಅರ್ಧವರ್ಷ ಕಳೆದ ನಂತರವೇ ಎಂದು ದೂರುತ್ತಾರೆ.

ಮೇಲಾಗಿ, ಬೇಕಾದ ಉಪಕರಣಗಳನ್ನು ಸರ್ಕಾರಿ ಸ್ವಾಮ್ಯದ ಇ-ಮಾರ್ಕೆಟ್ ತಾಣದಿಂದಲೇ ಪಡೆಯಬೇಕೆಂಬ ನಿಯಮವಿದೆ. 20 ದಿನಗಳೊಳಗಾಗಿ ಅಲ್ಲಿಂದ ಪ್ರತಿಕ್ರಿಯೆ ಬಂದರೆ ಅದರ ಗುಣಮಟ್ಟ ಹೇಗಾದರೂ ಇರಲಿ ಅಲ್ಲಿಂದಲೇ ಕೊಳ್ಳಬೇಕು ಎಂಬ ನಿಯಮ ನಮ್ಮ ಸಂಶೋಧನೆಗಳಿಗೆ ದೊಡ್ಡ ಅಡ್ಡಿಯುಂಟು ಮಾಡಲಿದೆ ಎಂಬುದು ವಿಜ್ಞಾನಿಗಳ ಅಭಿಮತ. ನಮ್ಮ ಉಪಕರಣಗಳ ಗುಣಮಟ್ಟ ಕಡಿಮೆ ಮತ್ತು ಅವು ಬರುವುದು ವಿಳಂಬವಾದಷ್ಟೂ ಸಂಶೋಧನೆ ಕುಂಟುತ್ತದೆ. ಅಲ್ಲದೆ 100ಕ್ಕೆ ಏಳು ಸಂಶೋಧನೆಗಳಿಗೆ ಮಾತ್ರ ಅನುದಾನ ಸಿಗುತ್ತಿದೆ. ಕೃಷಿ ಸಂಶೋಧನೆ, ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ (ಸಿಎಸ್ಐಆರ್), ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ಬಯೊಟೆಕ್ನಾಲಜಿ, ಮೈನಿಂಗ್, ವೈದ್ಯಕೀಯಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ವರ್ಷದಿಂದ ವರ್ಷಕ್ಕೆ ಸಿಗುವ ಅನುದಾನ ಕಡಿಮೆಯಾಗುತ್ತಿದೆ.

ಇದರ ಜೊತೆಗೆ ವಿಜ್ಞಾನಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ಸಂಶೋಧನೆಯ ಗುರಿಗಳೇನು ಎಂಬುದನ್ನು ಅನುದಾನ ನೀಡುವ ಸಂಸ್ಥೆಗೆ ತಿಳಿಸುತ್ತಿರಬೇಕು. ವಿಜ್ಞಾನವನ್ನು ಜನರ ಹತ್ತಿರ ತೆಗೆದುಕೊಂಡು ಹೋಗಲು ಕೇಂದ್ರ ಸರ್ಕಾರವು ವೈಜ್ಞಾನಿಕ ಸಾಮಾಜಿಕ ಜವಾಬ್ದಾರಿ (ಸೈಂಟಿಫಿಕ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ-ಎಸ್ಎಸ್ಆರ್) ಹೆಸರಿನಲ್ಲಿ ಮಾರ್ಗಸೂಚಿಗಳನ್ನು 2022ರಲ್ಲಿ ಬಿಡುಗಡೆ ಮಾಡಿದೆ. ವಿಜ್ಞಾನಿಗಳು ಇನ್ನು ಮುಂದೆ ತಮ್ಮ ವೈಜ್ಞಾನಿಕ ಅಧ್ಯಯನ, ಸಂಶೋಧನೆಗಳ ಜೊತೆ ಜನಪ್ರಿಯ ವಿಜ್ಞಾನ ಲೇಖನಗಳನ್ನು ಬರೆಯಬೇಕಿದೆ. ಶಾಲೆ– ಕಾಲೇಜುಗಳಲ್ಲಿ ವೈಜ್ಞಾನಿಕ ವಿಷಯಗಳ ಕುರಿತು ಭಾಷಣ ಮಾಡಬೇಕಿದೆ. ವಿಜ್ಞಾನವನ್ನು ಜನಪ್ರಿಯಗೊಳಿಸಲು ವರ್ಷದಲ್ಲಿ ಹತ್ತು ದಿನ ಜನರ ಮಧ್ಯೆ ಇದ್ದು ಅವರ ಬೇಡಿಕೆ, ಪ್ರಶ್ನೆ, ಕಷ್ಟಗಳೇನು ಎಂಬುದನ್ನು ಅರಿಯಬೇಕು ಎಂದು ಎಸ್ಎಸ್ಆರ್ ಹೇಳಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿಯ ಜೊತೆಗೆ ಸಮಾಜ ಮತ್ತು ವೈಜ್ಞಾನಿಕ ರಂಗದ ನಡುವೆ ಗಟ್ಟಿಯಾದ ಸಂಬಂಧ ಏರ್ಪಡುವಂತೆ ಮಾಡುವ ಉದ್ದೇಶದಿಂದ ಎಸ್ಎಸ್ಆರ್ ಅನ್ನು ಜಾರಿಗೊಳಿಸಲಾಗಿದೆ. ಸಂಶೋಧನೆಗಳ ಫಲವನ್ನು ಸಾಮಾಜಿಕ ಏಳಿಗೆಗೆ ಬಳಸಬೇಕೆನ್ನುವ ನಮ್ಮ ಆಡಳಿತ ನೀತಿಯು ಸಮಾಜದ ನಿರೀಕ್ಷೆಯಂತೆ ಕೆಲಸ ನಡೆಯುತ್ತಿಲ್ಲ ಎಂಬುದನ್ನು ಮನಗಂಡು ಈ ನೀತಿ ರೂಪಿಸಿದೆ. ಜನರ ತೆರಿಗೆ ಹಣದಿಂದ ಸಂಬಳ, ಸಂಶೋಧನೆಗೆ ಬೇಕಾದ ಸವಲತ್ತು ಪಡೆಯುವ ವಿಜ್ಞಾನಿಗಳಲ್ಲಿ ಉತ್ತರದಾಯಿತ್ವ ಇರಬೇಕು ಎಂಬ ಆಶಯವೇ ಈ ನೀತಿಯ ಹಿಂದಿನ ಚಿಂತನೆಯಾಗಿದೆ.

ಇದು ಸ್ವಯಂಪ್ರೇರಿತವಾಗಿ ನಡೆಯಬೇಕೆನ್ನುವುದು ಇಷ್ಟು ದಿನಗಳ ಆಶಯವಾಗಿತ್ತು. ಯಾವಾಗ ವಿಜ್ಞಾನಿಗಳು ತಮ್ಮ ಸಂಶೋಧನೆ, ಅಧ್ಯಯನಗಳನ್ನೇ ಮಾಡಿಕೊಂಡು ಸಾಮಾಜಿಕ ಮುಖ್ಯವಾಹಿನಿಯಿಂದ ದೂರ ಉಳಿದರೋ ಆಗ ಸಮಸ್ಯೆ ಶುರುವಾಯಿತು. ಈ ನೀತಿಯ ಮೂಲ ಉದ್ದೇಶ ಸಾಮಾಜಿಕ ರಂಗ– ವಿಜ್ಞಾನ ಮತ್ತು ವಿಜ್ಞಾನದ ಇತರ ವಿಭಾಗಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿ ಪರಸ್ಪರರ ನಡುವಿನ ನಂಬಿಕೆ, ಪಾಲುದಾರಿಕೆ ಮತ್ತು ಜವಾಬ್ದಾರಿಗಳ ಅನುಷ್ಠಾನದ ವೇಗ ಹೆಚ್ಚಿಸಿ ಸಾಮಾಜಿಕ ಗುರಿಗಳನ್ನು ಸಾಧಿಸುವುದಾಗಿದೆ. ಈಗಿನ ಸರ್ಕಾರದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ್ ಮಿಷನ್ ಮತ್ತು ವಿಶೇಷಾಭಿವೃದ್ಧಿ ಸಾಧಿಸಬಯಸುವ ಜಿಲ್ಲೆಗಳ ಯೋಜನೆಗಳಿಗೆ ಶಕ್ತಿ ನೀಡಲು ಈ ನೀತಿ ನೆರವಾಗಬೇಕಿದೆ.

ಇಂದಿನ ದಿನಗಳ ಬಹುಪಾಲು ಸಂಶೋಧನೆಗಳು ಅಕಡೆಮಿಕ್ ಸ್ವರೂಪ ಪಡೆದಿದ್ದು, ಸಮಾಜದ ಉಪಯೋಗಕ್ಕೆ ಬರುತ್ತಿಲ್ಲ. ವಿಶ್ವವಿದ್ಯಾಲಯ ಮತ್ತು ಖಾಸಗಿ ಸಂಶೋಧನಾ ಲ್ಯಾಬ್ಗಳಲ್ಲಿ ಆಯಾ ವಿದ್ಯಾರ್ಥಿ– ಅಧ್ಯಾಪಕರ ಅವಶ್ಯಕತೆ ಮತ್ತು ಆಸಕ್ತಿಗನುಗುಣವಾಗಿ ಸಂಶೋಧನೆಗಳು ನಡೆಯುತ್ತಿವೆ. ಇದುವರೆಗೂ ಚಾಲ್ತಿಯಲ್ಲಿದ್ದ ‘ಲ್ಯಾಬ್ ಟು ಲ್ಯಾಂಡ್’ (ಪ್ರಯೋಗಾಲಯದಿಂದ ಜನರಿಗೆ) ವಿಧಾನದ ಬದಲು ‘ಲ್ಯಾಂಡ್ ಟು ಲ್ಯಾಬ್’ (ಜನರಿಂದ ಪ್ರಯೋಗಾಲಯಕ್ಕೆ) ಎಂಬ ಹೊಸ ಕ್ರಮ ಜಾರಿಗೆ ಬರಲಿದೆ. ಅಂದರೆ, ಜನ ತಮಗೇನು ಬೇಕು ಎಂಬುದನ್ನು ಸ್ಥಳೀಯ ವಿಜ್ಞಾನ ಕೇಂದ್ರಗಳಿಗೆ ತಿಳಿಸುತ್ತಾರೆ. ಅದನ್ನು ಪರಿಗಣಿಸಿ ಸಂಶೋಧನೆ ನಡೆಯಬೇಕಿದೆ.

ಇದುವರೆಗೂ ಸಾರ್ವಜನಿಕರ ಹಣದಿಂದ ನಡೆಯು
ತ್ತಿದ್ದ ವಿಜ್ಞಾನ ಸಂಶೋಧನೆಗಳು ಈಗ ಖಾಸಗಿಯವರು ನೀಡುವ ಹಣಕ್ಕೆ ಕಾಯಬೇಕಿದೆ. ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್) ಮತ್ತು ಸಂಶೋಧನೆಗೆ ಹಣ ಎರಡನ್ನೂ ನಿಭಾಯಿಸುವ ಅನಿವಾರ್ಯಕ್ಕೆ ಸಿಲುಕುವ ಖಾಸಗಿ ಕಂಪನಿಗಳು ತಮಗೆ ಬೇಕಾದ ಸಂಶೋಧನೆ ಮತ್ತು ಸಂಸ್ಥೆಗಳಿಗೆ ಮಾತ್ರ ಅನುದಾನ ನೀಡುವ ಸ್ವಾತಂತ್ರ್ಯ ಪಡೆದಿವೆ. ಆಗ ನೈಜ ಅವಶ್ಯಕತೆ ಇರುವ ಸಂಸ್ಥೆಗಳಿಗೆ ಅನುದಾನ ಸಿಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇರುವುದಿಲ್ಲ.

ಸಂಶೋಧನೆಗೆ ಹಣ ಹೊಂದಿಸುವುದು ಹೇಗೆ ಎಂಬ ಗೊಂದಲದಲ್ಲೇ ಇರುವ ನಾವು, ಜನರ ಬಳಿಗೆ ಹೋಗಿ ಮಾಡುವುದಾದರೂ ಏನು ಎನ್ನುವ ಪ್ರಶ್ನೆ ವಿಜ್ಞಾನಿಗಳದ್ದು. ವೈಜ್ಞಾನಿಕ ಸಂಶೋಧನೆಯನ್ನು ಕಟ್ಟಡ ಅಥವಾ ಸೇತುವೆ ನಿರ್ಮಿಸುವ ಯೋಜನೆ ಎಂಬಂತೆ ಪರಿಗಣಿಸುತ್ತಿರುವ ಅಧಿಕಾರಿಶಾಹಿಯು ದೇಶದ ಸಂಶೋಧನಾ ಪ್ರವೃತ್ತಿಯನ್ನು ಕೊಲ್ಲುತ್ತಿದೆ ಎಂಬ ಅಭಿಪ್ರಾಯ ವಿಜ್ಞಾನ ವಲಯದಲ್ಲಿದೆ. ಸಂಶೋಧನೆಗೆ ಬೇಕಾದ ಅನುದಾನ ಹೆಚ್ಚಿಸಿ, ಸಮಯಕ್ಕೆ ಸರಿಯಾಗಿ ಸಲಕರಣೆ ಮತ್ತು ಪ್ರಯೋಗಾಲಯ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಮಾತ್ರ ಅಂದುಕೊಂಡ ಸಾಧನೆ ಸಾಧ್ಯ. ಇಲ್ಲದಿದ್ದರೆ, ಈ ಲೇಖನದ ಆರಂಭದಲ್ಲಿ ಎತ್ತಿದ ಪ್ರಶ್ನೆ ಪುನರಾವರ್ತನೆ ಆಗುತ್ತಲೇ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.