ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಮುಗಿದಿವೆ. ಇಲ್ಲಿಗೆ ಸಂವಿಧಾನದ 370ನೇ ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ತರುವಾಯ ನಡೆದ ಮೊದಲ ಚುನಾವಣೆ ಇದು. ವಿಶೇಷ ಸ್ಥಾನದ ಕಾರಣಕ್ಕಾಗಿ ಈ ಕಣಿವೆ ನಾಡಿನಲ್ಲಿ 1996ರವರೆಗೆ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯೇ ಇರಲಿಲ್ಲ. ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಬಂದಿದ್ದು 2023ರಲ್ಲಿ, ವಿಶೇಷ ಸ್ಥಾನಮಾನ ರದ್ದುಗೊಂಡ ನಂತರ ಎಂಬುದು ಗಮನಾರ್ಹ.

ಮೊದಲಿಗೆ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯ ಪ್ರಸ್ತಾಪ ಬಂದಾಗ, ಆಗ ಕಾನೂನು ಸಚಿವರಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು, ಕಾಶ್ಮೀರದ ಅಂದಿನ ನಾಯಕ ಶೇಖ್ ಅಬ್ದುಲ್ಲಾ ಅವರ ಕುರಿತು ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ‘ಹೇ ಅಬ್ದುಲ್ಲಾ, ನಿಮ್ಮ ಕಾಶ್ಮೀರದ ಗಡಿಯನ್ನು ಕಾಯಲು ಭಾರತದ ಸೈನ್ಯ ಬೇಕು, ನಿಮಗೆ ರಸ್ತೆ, ರೈಲು ಸೌಲಭ್ಯ ಒದಗಿಸಲು ಭಾರತ ಬೇಕು, ಭಾರತ ನಿಮಗೆ ಉಣ್ಣಲು ಅಕ್ಕಿ, ಗೋಧಿ, ಕಾಳುಕಡಿ ಪೂರೈಸಬೇಕು. ಆದರೆ ನಿಮಗೆ ಭಾರತದ ಸಂವಿಧಾನ ಮಾತ್ರ ಬೇಡ. ಕಾನೂನು ಮಂತ್ರಿಯಾಗಿ ನಾನಿದನ್ನು ಒಪ್ಪಲಾರೆ. ಭಾರತದ ಹಿತಾಸಕ್ತಿಗೆ ದ್ರೋಹ ಮಾಡಲಾರೆ’ (ಪುಸ್ತಕ: ಡಾ. ಬಿ.ಆರ್.ಅಂಬೇಡ್ಕರ್– ಫ್ರೇಮಿಂಗ್ ಆಫ್ ಇಂಡಿಯನ್ ಕಾನ್ಸ್ಟಿಟ್ಯೂಷನ್– ಎಸ್.ಎನ್.ಬುಸಿ). ಆದರೆ ದೇಶದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಈ ವಿಷಯದಲ್ಲಿ ಅಬ್ದುಲ್ಲಾ ಅವರ ಜೊತೆಗಿದ್ದರು. ಆಗ ‘ಏಕ್ ದೇಶ್ ಮೇ ದೋ ಪ್ರಧಾನ್, ದೋ ವಿಧಾನ್, ದೋ ನಿಷಾನ್ ನಹೀ ಚಲೇಗಾ’ ಎಂಬ ಘೋಷಣೆಯೊಂದಿಗೆ ‘ಶ್ರೀನಗರ್ ಚಲೊ’ಗೆ ಕರೆ ಕೊಟ್ಟವರು ಜನಸಂಘದ ಅಂದಿನ ಅಧ್ಯಕ್ಷ ಶ್ಯಾಮಪ್ರಸಾದ್ ಮುಖರ್ಜಿ.

ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ರಾಷ್ಟ್ರಧ್ವಜದೊಂದಿಗೆ ತಮ್ಮನ್ನು ಜಮ್ಮು ಮತ್ತು ಕಾಶ್ಮೀರದ ಪ್ರಧಾನಿ ಎಂದೇ ಶೇಖ್ ಅಬ್ದುಲ್ಲಾ ಘೋಷಿಸಿಕೊಂಡಿದ್ದರು. ಇದನ್ನು ಪ್ರತಿಭಟಿಸಲು ಬೆಂಬಲಿಗರೊಂದಿಗೆ ತೆರಳಿದ್ದ ಮುಖರ್ಜಿ ಅವರನ್ನು 1952ರ ಮೇ 11ರಂದು ಬಂಧಿಸಿ ಶ್ರೀನಗರದ ಸೆರೆಮನೆಗೆ ದೂಡಲಾಯಿತು. ಜೂನ್ 23ರಂದು ಮುಖರ್ಜಿ ಅವರು ಸೆರೆಮನೆಯಲ್ಲೇ ಅನುಮಾನಾಸ್ಪದವಾಗಿ ಅಸುನೀಗಿದರು. ಸಂವಿಧಾನದ ಉಳಿವಿಗಾಗಿ ಪ್ರಾಣ ಕೊಟ್ಟ ಮೊದಲ ನಾಯಕ ಮುಖರ್ಜಿ.

ತಾತ್ಕಾಲಿಕ ಎಂದು ಜಾರಿಗೆ ಬಂದಿದ್ದ ವ್ಯವಸ್ಥೆಯೊಂದು ಕೊನೆಗೊಳ್ಳಲು ಏಳು ದಶಕಗಳೇ ಬೇಕಾಯಿತು. ವಿಶೇಷ ಸ್ಥಾನಮಾನದ ರದ್ದತಿಯಿಂದಾಗಿ ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಬಾಬಾಸಾಹೇಬರ ಸಂವಿಧಾನ ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಿದೆ. ಆ ಮೂಲಕ ಮೀಸಲಾತಿಯೂ ಜೀವ ಪಡೆದಿದೆ. ಹಾಗಾಗಿ, ಈ ನಾಡಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳಲ್ಲಿನ ಚುನಾವಣೆಯ ಆಗುಹೋಗುಗಳು ಮಹತ್ವ ಪಡೆದಿವೆ.

ಕಾಶ್ಮೀರ ಪ್ರದೇಶದಲ್ಲಿ ಶೇ 97ರಷ್ಟು ಮುಸ್ಲಿಮರಿದ್ದರೆ, ಜಮ್ಮು ಪ್ರದೇಶದಲ್ಲಿ ಶೇ 66ರಷ್ಟು ಹಿಂದೂಗಳು, ಶೇ 30ರಷ್ಟು ಮುಸ್ಲಿಮರಿದ್ದಾರೆ. ಈ ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆಯ ಪ್ರಮಾಣ ಶೇ 7.54ರಷ್ಟು, ಪರಿಶಿಷ್ಟ ಪಂಗಡಗಳದ್ದು ಶೇ 10.39ರಷ್ಟು. ಪರಿಶಿಷ್ಟ ಜಾತಿಯ ಒಟ್ಟು 7 ಮೀಸಲು ಕ್ಷೇತ್ರಗಳಿವೆ. ಈ ಏಳೂ ಕ್ಷೇತ್ರಗಳು ಹಿಂದೂ ಬಾಹುಳ್ಯದ ಜಮ್ಮು ಪ್ರದೇಶದಲ್ಲಿಯೇ ಬರುತ್ತವೆ. ಇಲ್ಲಿನ ಪರಿಶಿಷ್ಟ ಜಾತಿಗಳಲ್ಲಿ ಮೇಘವಾಲ್, ಚಮ್ಮಾರ್, ಬಾಲ್ಮೀಕಿ, ಬಟ್ವಾಲ್, ಡೋಮ್, ಬರ್ವಾಲ್, ಗರ್ಡಿ ಸಮುದಾಯಗಳು ಬರುತ್ತವೆ.

2014ರ ಚುನಾವಣೆಯಲ್ಲಿ ಬಿಜೆಪಿ ಈ ಏಳೂ ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಸಲವೂ ಅದು ಏಳೂ ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. 2014ಕ್ಕೆ ಹೋಲಿಸಿದರೆ ಈ ಸಲ ಬಿಜೆಪಿಯನ್ನು ಪ್ರತಿನಿಧಿಸಿದ್ದ ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳ ಗೆಲುವಿನ ಅಂತರ ಏರಿದೆ. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಶೇ 50ರಿಂದ ಶೇ 65ರವರೆಗೆ ಮತ ಪಡೆದಿದ್ದಾರೆ. ಮೊದಲೆಲ್ಲ ಜಮ್ಮು ಪ್ರದೇಶದ ಮೇಲೆ ಕಾಂಗ್ರೆಸ್ಸಿಗೆ ಒಂದಿಷ್ಟು ಹಿಡಿತವಿತ್ತು. ಈ ಸಲ ಕಾಂಗ್ರೆಸ್ ಪಕ್ಷವು ನ್ಯಾಷನಲ್ ಕಾನ್ಫರೆನ್ಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು. ನಾಡಿಗೆ ಪುನಃ ವಿಶೇಷ ಸ್ಥಾನಮಾನ ದೊರಕಿಸಿಕೊಡುವ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಇದು, ಕಾಂಗ್ರೆಸ್ಸಿಗೆ ಮುಳುವಾಯಿತು.

1996ರಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿಗೆ ಮೀಸಲಾತಿ ಜಾರಿಗೆ ಬಂದು ಚುನಾವಣೆ ನಡೆದಾಗ ಬಿಎಸ್ಪಿ ಎರಡು ಸ್ಥಾನಗಳನ್ನು ಗೆದ್ದಿತ್ತು. ಅನೇಕ ರಾಜ್ಯಗಳಲ್ಲಿ ಆಗಿರುವಂತೆ ಇಲ್ಲಿಯೂ ಬಿಎಸ್ಪಿ ಹೋಳಾಗಿ ಹೋಗಿದೆ. ಎರಡೂ ಬಣಗಳ ಮತ ಗಳಿಕೆ ಪ್ರಮಾಣ ಮೂರಂಕಿ ದಾಟಿಲ್ಲ. ನ್ಯಾಷನಲ್ ಪ್ಯಾಂಥರ್ಸ್ 2002, 2008ರಲ್ಲಿ ತಲಾ ಒಂದು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈಗ ಪ್ಯಾಂಥರ್ಸ್ನಲ್ಲಿಯೂ ಬಣ ರಾಜಕಾರಣ. ಆದರೂ ಮತಗಳಿಕೆಯಲ್ಲಿ ಅದು ಬಿಎಸ್ಪಿಗಿಂತ ಮೇಲು. ಐತಿಹಾಸಿಕ ಕಾರಣಗಳಿಗಾಗಿ ಉಂಟಾಗಿರುವ ಮತೀಯ ಧ್ರುವೀಕರಣದ ಪರಿಣಾಮವು ಉಳಿದ ಹಿಂದೂಗಳಂತೆ ದಲಿತರ ನಡುವೆಯೂ ದಟ್ಟವಾಗಿಯೇ ಇದೆ. ಈ ಅಂಶ ಎಲ್ಲ ಏಳು ಕ್ಷೇತ್ರಗಳು ಸತತವಾಗಿ ಎರಡು ಸಲ ಬಿಜೆಪಿಯ ಪಾಲಾಗುವುದರ ಹಿಂದೆ ಕೆಲಸ ಮಾಡಿದೆ.

ಈ ಸಲದ ಚುನಾವಣೆಯ ಇನ್ನೊಂದು ಮಹತ್ವದ ಸಂಗತಿಯೆಂದರೆ, ಪರಿಶಿಷ್ಟ ಪಂಗಡದ ಮೀಸಲಾತಿ ಜಾರಿಗೆ ಬಂದು ಮೊದಲ ಬಾರಿಗೆ ಬುಡಕಟ್ಟು ಸಮುದಾಯದ 9 ಜನಪ್ರತಿನಿಧಿಗಳು ವಿಧಾನಸಭೆ ಪ್ರವೇಶಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಶಿಷ್ಟ ಪಂಗಡ ಎಂದರೆ ಗುಜ್ಜರ್, ಬಕರ್ವಾಲ್, ಪಹಾರಿ, ಪೊತ್ವಾರಿ, ಗಡ್ಡಿ, ಸಿಪ್ಪಿ ಸಮುದಾಯಗಳು. ಇವೆಲ್ಲವೂ ಮುಸ್ಲಿಂ ಬುಡಕಟ್ಟುಗಳು. ರಜೌರಿ, ಪೂಂಛ್ ಸೇರಿದಂತೆ ಕಾಶ್ಮೀರದ ಗುಡ್ಡಗಾಡು ಪ್ರದೇಶದಲ್ಲಿ ಈ ಸಮುದಾಯಗಳ ಜನಸಾಂದ್ರತೆ ಹೆಚ್ಚು. ಇಲ್ಲಿಯ ಪರಿಶಿಷ್ಟ ಪಂಗಡಗಳ 9 ಮೀಸಲು ಕ್ಷೇತ್ರಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಆರರಲ್ಲಿ ಗೆದ್ದರೆ, ಒಂದು ಕಾಂಗ್ರೆಸ್, ಎರಡು ಪಕ್ಷೇತರರ ಪಾಲಾಗಿವೆ.

ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರಗಳಲ್ಲಿ ಬಿಜೆಪಿಯು ಒಂಬತ್ತರಲ್ಲಿ ಐದು ಕಡೆ ಎರಡನೇ ಸ್ಥಾನ ಗಳಿಸಿದೆ. ಒಂದು ಕಡೆ ಬಿಜೆಪಿಯ ಫಕೀರ್ ಮೊಹ್ಮದ್ ಖಾನ್ ಅವರು 900 ಮತಗಳಿಂದ ಸೋತಿದ್ದಾರೆ. ಇಡೀ ರಾಜ್ಯದಲ್ಲಿ 26 ಮುಸ್ಲಿಂ ಅಭ್ಯರ್ಥಿಗಳು ಬಿಜೆಪಿಯಿಂದ ಸ್ಪರ್ಧಿಸಿದ್ದರೂ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಲ್ಲಿನ ಮತಗಳಿಕೆಯ ಪ್ರಮಾಣವು ಬಿಜೆಪಿಗೆ ಹೊಸ ಒಳದಾರಿಗಳು ನಿರ್ಮಾಣವಾಗಿರುವುದನ್ನು ತೋರಿಸುತ್ತದೆ.

ಈಗಲೂ ಜಮ್ಮು ಮತ್ತು ಕಾಶ್ಮೀರದ ಆಡಳಿತದ ಚುಕ್ಕಾಣಿ ಹಿಡಿಯುವುದರಲ್ಲಿ ಮುಸ್ಲಿಂ ಕುಟುಂಬಗಳದ್ದೇ ಪ್ರಾಬಲ್ಯ. 1967ರವರೆಗಿನ ಮೊದಲ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಶೇ 50ಕ್ಕೂ ಹೆಚ್ಚು ಶಾಸಕರು ಅವಿರೋಧವಾಗಿಯೇ ಆಯ್ಕೆಯಾಗುತ್ತಿದ್ದರು. ಪರಿಶಿಷ್ಟ ಜಾತಿಯ ಜೊತೆಗೆ ಪರಿಶಿಷ್ಟ ಪಂಗಡದ ಬುಡಕಟ್ಟು ಜನರ ಪ್ರತಿನಿಧಿಗಳು ಶಾಸಕಾಂಗ ಪ್ರವೇಶಿಸಿರುವುದು ಭಾರತದ ಸಂವಿಧಾನಕ್ಕೆ ಗೌರವ ತಂದುಕೊಟ್ಟಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು, ಮಹಿಳೆಯರಿಗೆ ರಾಜಕೀಯ ಮೀಸಲಾತಿಯೂ ಸೇರಿದಂತೆ ಹಲವು ಉಪಕ್ರಮಗಳು ಜಮ್ಮು ಕಾಶ್ಮೀರದ ಜನರಿಗೂ ದಕ್ಕಲಿವೆ. ಇದೊಂದು ಐತಿಹಾಸಿಕ ಮುನ್ನಡೆಯೇ ಸರಿ.

ಲೇಖಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.